ನವ ದೆಹಲಿ: ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಭಾನುವಾರ (ಆಗಸ್ಟ್ 28) ಮಧ್ಯಾಹ್ನ 3.30ಕ್ಕೆ ಸಭೆ ಕರೆದಿದೆ. ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡುವ ಸಲುವಾಗಿ ಈ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗಿದೆ. ಚಿಕಿತ್ಸೆಗಾಗಿ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ್ದು, ಅವರೊಂದಿಗೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಹೋಗಿದ್ದಾರೆ. ಹೀಗಾಗಿ ಕಾರ್ಯಕಾರಿ ಸಮಿತಿ ಸಭೆ ವರ್ಚ್ಯುವಲ್ ಆಗಿ ನಡೆಯಲಿದೆ.
2019ರಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ಮೇಲೆ ಸೋನಿಯಾ ಗಾಂಧಿ ಹಂಗಾಮಿಯಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರು. ನೂತನ ಅಧ್ಯಕ್ಷರ ನೇಮಕ ಆಗುವವರೆಗೆ ತಾವು ಇದೇ ಹುದ್ದೆಯಲ್ಲಿ ಮುಂದುವರಿಯುವುದಾಗಿ ಹೇಳಿದ್ದರು. ಆದರೆ ಮೂರು ವರ್ಷವಾದರೂ ಹೊಸ ಅಧ್ಯಕ್ಷರ ನೇಮಕ ಆಗಲಿಲ್ಲ. ಕಾಂಗ್ರೆಸ್ಗೆ ನೂತನ ಅಧ್ಯಕ್ಷರ ನೇಮಕ ಮತ್ತು ಇತರ ಸಾಂಸ್ಥಿಕ ಹುದ್ದೆಗಳ ನೇಮಕಾತಿ ಸಂಬಂಧ ಚುನಾವಣೆಯನ್ನು 2022ರ ಆಗಸ್ಟ್ 21ರಿಂದ ಸೆಪ್ಟೆಂಬರ್ 2ರೊಳಗೆ ನಡೆಸಲಾಗುವುದು ಎಂದು ಕಾಂಗ್ರೆಸ್ ಹೇಳಿತ್ತು. ಕಾಂಗ್ರೆಸ್ನಲ್ಲಿ ಈಗ ಹಲವು ಸಾಂಸ್ಥಿಕ ಹುದ್ದೆಗಳ ಮರು ನೇಮಕಾತಿಗಳೆಲ್ಲ ನಡೆದಿದ್ದರೂ, ಅಧ್ಯಕ್ಷರ ಆಯ್ಕೆ ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಜಿ 23 ನಾಯಕರ ಸಭೆ
ಗುಲಾಂ ನಬಿ ಆಜಾದ್ ರಾಜೀನಾಮೆ ಬೆನ್ನಲ್ಲೇ, ಇಂದು ಕಾಂಗ್ರೆಸ್ನ ಜಿ 23 ನಾಯಕರು ಆಜಾದ್ ಮನೆಯಲ್ಲಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಜಿ 23 ನಾಯಕರೆಲ್ಲ ಸೇರಿ ಕಳೆದ ವರ್ಷ ಸೋನಿಯಾ ಗಾಂಧಿಗೆ ಪತ್ರ ಬರೆದು, ಪಕ್ಷದ ನಾಯಕತ್ವ ಬದಲಾವಣೆ, ತಳಮಟ್ಟದ ಸಂಘಟನೆ ಆಗಬೇಕು ಎಂದು ಆಗ್ರಹಿಸಿದ್ದರು. ಈ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಪ್ರಮುಖರು. ಆಗಸ್ಟ್ 26ರಂದು ಅವರು ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ನೂತನ ರಾಜಕೀಯ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Congress Party | ಕಿರಿಯರಿಗೆ ಬೆಲೆಯಿಲ್ಲ, ಹಿರಿಯರಿಗೆ ನೆಲೆಯಿಲ್ಲ; ಯಾರಿಗೆ ಸಲ್ಲುವ ಪಕ್ಷವಾಗಿ ಉಳೀತು ಕಾಂಗ್ರೆಸ್?