2022-23 ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಗಡುವು ಮುಕ್ತಾಯವಾಗಲು ಕೆಲ ದಿನಗಳಷ್ಟೇ ಬಾಕಿ ಇದೆ. ಜುಲೈ 31 ಕೊನೆಯ ದಿನವಾಗಿದೆ. (ITR filing) ಹಾಗಾದರೆ ಏನಿದು ಐಟಿಆರ್? ಅವುಗಳಲ್ಲಿ ಎಷ್ಟು ವಿಧಗಳು ಇವೆ? ಯಾರಿಗೆ ಯಾವುದು ಸೂಕ್ತ ಎನ್ನುತ್ತೀರಾ? ಇಲ್ಲಿದೆ ವಿವರ.
ಆದಾಯ ತೆರಿಗೆ ರಿಟರ್ನ್ (Income Tax Return -ITR) ಎನ್ನುವುದು ತೆರಿಗೆದಾರರು ತಮ್ಮ ಆದಾಯ ಮತ್ತು ತೆರಿಗೆ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ವಿವರ. ಆದಾಯ ತೆರಿಗೆ ಇಲಾಖೆಯು 7 ವಿಧದ ಐಟಿಆರ್ ಫಾರ್ಮ್‌ಗಳನ್ನು ಬಿಡುಗಡೆಗೊಳಿಸಿದೆ. ಐಟಿಆರ್ -1, ಐಟಿಆರ್-2, ಐಟಿಆರ್-3, ಐಟಿಆರ್-4, ಐಟಿಆರ್-5, ಐಟಿಆರ್-6 ಮತ್ತು ಐಟಿಆರ್-7. ನಿಗದಿತ ದಿನಾಂಕಕ್ಕೆ ಮುನ್ನ ತೆರಿಗೆದಾರರು ಐಟಿಆರ್ ಸಲ್ಲಿಸಬೇಕು. ವೈಯಕ್ತಿಕ ತೆರಿಗೆದಾರರು, ಎಚ್‌ಯುಎಫ್, ಕಂಪನಿ ಇತ್ಯಾದಿಯವರು ಆದಾಯ ತೆರಿಗೆ ವಿವರ ಸಲ್ಲಿಸಬೇಕು.
ಐಟಿಆರ್ ಯಾಕೆ ಫೈಲ್ ಮಾಡಬೇಕು?
ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ರಿಫಂಡ್ ಪಡೆಯಲು ಬಯಸುತ್ತಿದ್ದರೆ ಐಟಿಆರ್ ಸಲ್ಲಿಸಬೇಕು. ವಿದೇಶಿ ಮೂಲದ ಆಸ್ತಿಯಿಂದ ಆದಾಯ ಗಳಿಸಿದ್ದರೆ, ವೀಸಾ ಅಥವಾ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರೆ, ಕಂಪನಿ ಅಥವಾ ಸಂಸ್ಥೆಯನ್ನು ಹೊಂದಿದ್ದರೆ, ಬಿಸಿನೆಸ್, ಪ್ರೊಫೆಶನ್‌ನಲ್ಲಿ ಕ್ಯಾಪಿಟಲ್ ಗೇನ್ಸ್ ಅಡಿಯಲ್ಲಿ ನಷ್ಟ ಆಗಿದ್ದರೆ ಐಟಿಆರ್ ಸಲ್ಲಿಸಬೇಕು.
ಯಾರಿಗೆ ಐಟಿಆರ್ ಕಡ್ಡಾಯ?
ವಯೋಮಿತಿ | ತೆರಿಗೆ ವಿನಾಯಿತಿಯ ಮಿತಿ |
60 ವರ್ಷಕ್ಕಿಂತ ಕೆಳಗಿನ ವಯಸ್ಸು | 2.5 ಲಕ್ಷ ರೂ. |
60 ವರ್ಷ ಮೇಲ್ಪಟ್ಟು, ಆದರೆ 80ಕ್ಕಿಂತ ಕಡಿಮೆ ವಯಸ್ಸು | 3.00 ಲಕ್ಷ ರೂ. |
80 ವರ್ಷ ಮೇಲ್ಪಟ್ಟು | 5.0 ಲಕ್ಷ ರೂ. |
ನಿಮ್ಮ ಆದಾಯ ವಿನಾಯಿತಿಯ ಮಿತಿಯೊಳಗೆ ಇದ್ದರೂ, ಕೆಳಕಂಡ ಸಂದರ್ಭಗಳಲ್ಲಿ ಐಟಿಆರ್ ಕಡ್ಡಾಯವಾಗಿ ಫೈಲ್ ಮಾಡಬೇಕು.
ಇದನ್ನೂ ಓದಿ: ITR Filing: ನಕಲಿ ಮನೆ ಬಾಡಿಗೆ ರಸೀದಿ ದಾಖಲೆ ನೀಡಿದರೆ ಹುಷಾರ್! ಐಟಿ ನೋಟೀಸ್ ಬರುತ್ತೆ
ನಿಮ್ಮ ಕರೆಂಟ್ ಬ್ಯಾಂಕ್ ಖಾತೆಗೆ (current bank account) 1 ಕೋಟಿ ರೂ.ಗಿಂತಲೂ ಹೆಚ್ಚು ಠೇವಣಿ ಜಮೆ ಮಾಡಿದ್ದರೆ, ಒಂದು ಬ್ಯಾಂಕ್‌ನಲ್ಲಿ ಒಂದಕ್ಕಿಂತ ಹೆಚ್ಚು ಕರೆಂಟ್ ಅಕೌಂಟ್ ಹೊಂದಿದ್ದರೆ ಐಟಿಆರ್ ಫೈಲಿಂಗ್ ಕಡ್ಡಾಯ.
ಬ್ಯಾಂಕ್ ಉಳಿತಾಯ ಖಾತೆಗೆ (savings bank account) ನೀವು ನಿಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ಗೆ 50 ಲಕ್ಷ ರೂ.ಗಿಂತ ಹೆಚ್ಚು ಮೊತ್ತವನ್ನು ಠೇವಣಿ ಇಟ್ಟಿದ್ದರೆ ಐಟಿಆರ್ ಫೈಲ್ ಮಾಡಬೇಕು. ವಿದೇಶ ಪ್ರವಾಸಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದರೆ, ವಾರ್ಷಿಕ ಒಟ್ಟು ವಿದ್ಯುತ್ ಬಿಲ್ 1 ಲಕ್ಷ ರೂ.ಗಿಂತ ಹೆಚ್ಚು ಬಂದಿದ್ದರೆ, ಈ ಹಿಂದಿನ ವರ್ಷದಲ್ಲಿ ಟಿಡಿಎಸ್ 25,000 ರೂ.ಗಿಂತ ಹೆಚ್ಚು ಕಡಿತವಾಗಿದ್ದರೆ, ಹಿರಿಯ ನಾಗರಿಕರಿಗೆ 50,000 ರೂ. ಗಿಂತ ಹೆಚ್ಚು ಟಿಡಿಎಸ್ ಕಡಿತವಾಗಿದ್ದರೆ ಐಟಿಆರ್ ಫೈಲ್ ಮಾಡಬೇಕು. ನೀವು ಬಿಸಿನೆಸ್‌ಮ್ಯಾನ್ ಆಗಿದ್ದು ವಾರ್ಷಿಕ ವಹಿವಾಟು 60 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ ಐಟಿಆರ್ ಫೈಲಿಂಗ್ (capital gains) ಮಾಡಬೇಕು. ವೃತ್ತಿಪರ ಆದಾಯ 10 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ ಐಟಿಆರ್ ಫೈಲಿಂಗ್ ಮಾಡಬೇಕು.