ಬೆಂಗಳೂರು: ಜನಾರ್ದನ ರೆಡ್ಡಿ (Janardana Reddy) ವಿರುದ್ಧ ದಾಖಲಾಗಿದ್ದ ಬೇನಾಮಿ ಆಸ್ತಿ ಸಂಪಾದನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಮುಕ್ತಾಯಗೊಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೇನಾಮಿ ಆಸ್ತಿ ವ್ಯವಹಾರ ಕಾಯಿದೆ 1988ರ ಸೆಕ್ಷನ್ 3ರ ಪ್ರಕಾರ ಅಡಿ ಜನಾರ್ದನ ರೆಡ್ಡಿ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಇ ಚಂದ್ರಕಲಾ ಅವರು ಪ್ರತ್ಯೇಕ ಆದೇಶಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಬಾರ್ ಎಂಡ್ ಬೆಂಚ್ ವೆಬ್ಸೈಟ್ ವರದಿ ಮಾಡಿದೆ.
ಯಾಕೆ ಪ್ರಕರಣ ಮುಕ್ತಾಯ?
“ಬೇನಾಮಿ ಆಸ್ತಿ ವ್ಯವಹಾರ ಕಾಯಿದೆ-2016 ಜಾರಿಗೆ ಬರುವುದಕ್ಕೂ ಮುನ್ನ ನಡೆಸಲಾದ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಕ್ರಿಮಿನಲ್ ಪ್ರಾಸಿಕ್ಯೂಷನ್ ಮುಂದುವರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ, ಎಲ್ಲಾ ರೀತಿಯ ಜಪ್ತಿ ಮತ್ತು ಪ್ರಾಸಿಕ್ಯೂಷನ್ಗಳು ವಜಾಗೊಳ್ಳಲಿವೆ. ಹಾಲಿ ಪ್ರಕರಣದಲ್ಲಿ ಆರೋಪಿತ ವರ್ಗಾವಣೆಯು 2009ರ ಡಿಸೆಂಬರ್ನಲ್ಲಿ ನಡೆದಿದೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.
ಏನು ಕೇಸಿದು?
ಗಣಪತಿ ಡೀಲ್ಕಾಮ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಜನಾರ್ದನ್ ರೆಡ್ಡಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿ ರೆಡ್ಡಿ ಪರ ವಕೀಲರು ಮೆಮೊ ಸಲ್ಲಿಸಿದ್ದರು. ರೆಡ್ಡಿ ವಿರುದ್ಧ ಬೇನಾಮಿ ಆಸ್ತಿ ವ್ಯವಹಾರ ಕಾಯಿದೆ ಸೆಕ್ಷನ್ 3(2)ರ ಅಡಿ ನಾಲ್ಕು ಪ್ರಕರಣ ದಾಖಲಿಸಲಾಗಿತ್ತು.
ಯಾವ ತಿದ್ದುಪಡಿಯಿಂದ ಸಿಕ್ಕಿದ ಬಿಡುಗಡೆ?
ಬೇನಾಮಿ ವ್ಯವಹಾರ (ನಿಷೇಧ) ಕಾಯಿದೆ 1988 ಮತ್ತು 2016ರ ತಿದ್ದುಪಡಿ ಕಾಯಿದೆಯ ಹಲವು ನಿಯಮಾವಳಿಗಳನ್ನು ಅಸಾಂವಿಧಾನಿಕ ಎಂದು 2022ರ ಆಗಸ್ಟ್ನಲ್ಲಿ ರದ್ದುಗೊಳಿಸಿತ್ತು. 2016ರ ತಿದ್ದುಪಡಿ ಕಾಯಿದೆಯ ಸೆಕ್ಷನ್ 5 ದಂಡನಾತ್ಮಕ ಸ್ವರೂಪ ಹೊಂದಿದ್ದು, ಅದನ್ನು ಭವಿಷ್ಯವರ್ತಿಯಾಗಿ ಮಾತ್ರ ಅನ್ವಯಿಸಬಹುದೇ ಹೊರತು ಪೂರ್ವಾನ್ವಯವಾಗುವ ರೀತಿಯಲ್ಲಿ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.
ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು 2016ರ ಕಾಯಿದೆ ಜಾರಿಗೆ ಬರುವ ಮೊದಲು ಅಂದರೆ ಅಕ್ಟೋಬರ್ 25, 2016 ರ ಮೊದಲಿನ ವಹಿವಾಟುಗಳಿಗೆ ಕ್ರಿಮಿನಲ್ ಮೊಕದ್ದಮೆ ಅಥವಾ ಮುಟ್ಟುಗೋಲು ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತಿಲ್ಲ ಅಥವಾ ಮುಂದುವರಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದ್ದರಿಂದ, ಅಕ್ಟೋಬರ್ 2016ರ ಮೊದಲಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಪ್ರಾರಂಭಿಸಲಾದ ಎಲ್ಲಾ ಕಾನೂನು ಕ್ರಮಗಳು ಅಥವಾ ಜಪ್ತಿ ಪ್ರಕ್ರಿಯೆಗಳನ್ನು ನ್ಯಾಯಾಲಯವು ರದ್ದುಗೊಳಿಸಿತ್ತು.
ಇದನ್ನೂ ಓದಿ | Karnataka Elections | ರೊಚ್ಚಿಗೆದ್ದ ರೆಡ್ಡಿ ಮನವೊಲಿಸಲು ಸ್ನೇಹ ಮಂತ್ರ ಪಠಿಸಿದ ಶ್ರೀರಾಮುಲು