ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿಯ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ನಾಲ್ವರು ಪೊಲೀಸರನ್ನು ಜಿಲ್ಲಾ ರಕ್ಷಣಾಧಿಕಾರಿ ಅರುಣಾಂಗ್ಷು ಗಿರಿ ಅಮಾನತು ಮಾಡಿದ್ದಾರೆ.
ಕನಕಗಿರಿ ಪೊಲೀಸ್ ಠಾಣೆಯ ಪಿಎಸ್ಐ ಪರಸಪ್ಪ ಭಜಂತ್ರಿ, ಎಎಸ್ಐ ಮಂಜುನಾಥ, ಮುಖ್ಯಪೇದೆ ಹನುಮಂತಪ್ಪ ಹಾಗೂ ಸಂಗಪ್ಪ ಅಮಾನತುಗೊಂಡವರು. ವಿಚಾರಣಾಧಿಕಾರಿಗಳ ಶಿಫಾರಸಿನ ಹಿನ್ನೆಲೆ ಈ ಕ್ರಮ ತೆಗೆದು ಕೊಳ್ಳಲಾಗಿದೆ.
ನಡೆದಿದ್ದೇನು?
ಹುಲಿಹೈದರ ಗ್ರಾಮದಲ್ಲಿ ಆಗಸ್ಟ್ 11ರಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಇಬ್ಬರು ಮೃತಪಟ್ಟಿದ್ದರು. ಎರಡೂ ಗುಂಪುಗಳು ದೂರು-ಪ್ರತಿದೂರು ನೀಡಿದ್ದವು. ಒಟ್ಟು 58 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ನಾಯಕ ಮತ್ತು ಮುಸ್ಲಿಂ ಸಮಾಜದ ನಡುವೆ ಘರ್ಷಣೆ ನಡೆದಿದ್ದು, ಇದು ಅತಿರೇಕಕ್ಕೆ ತಿರುಗಿತ್ತು. ನಿಷೃಧಾಜ್ಞೆ ಜಾರಿಗೊಳಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಲಾಗಿತ್ತು.
ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯದ ಕುರಿತು ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಲು ಗಂಗಾವತಿ ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯಲ್ಲಿ ಈ ಪೊಲೀಸ್ ಅಧಿಕಾರಿಗಳು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ವಹಿಸಿರುವುದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಈಗ ಅವರುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ| ಕೊಪ್ಪಳದಲ್ಲಿ ಗುಂಪುಗಳ ಮಾರಾಮಾರಿ: 25ಕ್ಕೂ ಅಧಿಕ ಜನ ಪೊಲೀಸರ ವಶಕ್ಕೆ