ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಭಾಷಣ ಮಾಡುವಾಗ ಸಾಮಾನ್ಯವಾಗಿ ಟೆಲಿಪ್ರಾಂಪ್ಟರ್ ಬಳಸುತ್ತಾರೆ. ಆದರೆ, ಸ್ವಾತಂತ್ರ್ಯ ದಿನದ (Independence Day) ಹಿನ್ನೆಲೆಯಲ್ಲಿ ಅವರು ಕೆಂಪು ಕೋಟೆ ಮೇಲೆ ನಿಂತು ಭಾಷಣ ಮಾಡುವಾಗ ಈ ಬಾರಿ ಟೆಲಿಪ್ರಾಂಪ್ಟರ್ ಬಳಸದಿರುವುದು ವಿಶೇಷವಾಗಿದೆ.
ಕೆಂಪುಕೋಟೆಗೆ ಆಗಮಿಸಿ, ಧ್ವಜಾರೋಹಣ ನೆರವೇರಿಸಿದ ಬಳಿಕ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದರು. ಭಾಷಣಕ್ಕಾಗಿ ಅವರು ಟೆಲಿಪ್ರಾಂಪ್ಟರ್ ಬಳಸದೆ, ಹಾಳೆಗಳಲ್ಲಿ ಬರೆದುಕೊಂಡು ಬಂದಿದ್ದ ನೋಟ್ಸ್‌ಗಳತ್ತ ಆಗಾಗ ಕಣ್ಣುಹಾಯಿಸುತ್ತಲೇ ೮೨ ನಿಮಿಷ ನಿರರ್ಗಳವಾಗಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ದೇಶದ ಏಳಿಗೆಗೆ ಶ್ರಮಿಸಿದ ಎಲ್ಲ ಮಹನೀಯರ ಹೆಸರುಗಳನ್ನು, ಸರಕಾರದ ಯೋಜನೆಗಳನ್ನು, ಮುಂಬರುವ ವರ್ಷಗಳಲ್ಲಿ ಸರಕಾರ, ದೇಶದ ಗುರಿ ಏನು ಎಂಬುದನ್ನು ನೋಟ್ಸ್ ನೋಡಿಯೇ ಪ್ರಸ್ತಾಪಿಸಿದರು.
ಮೂಲಗಳ ಪ್ರಕಾರ, ಮೋದಿ ಅವರು ಇಡೀ ಭಾಷಣ ಬರೆದುಕೊಂಡು ಬರದೆ, ಕೇವಲ ಪ್ರಮುಖ ಅಂಶಗಳನ್ನಷ್ಟೇ ನೋಡಿ ಭಾಷಣ ಮುಗಿಸಿದರು. ಪ್ರಮುಖ ಅಂಶಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನಷ್ಟೇ ಬರೆದುಕೊಂಡು ಬಂದಿದ್ದ ಅವರು ಸುಮಾರು ಒಂದೂವರೆ ಗಂಟೆ ಮಾತನಾಡಿದರು ಎಂದು ತಿಳಿದುಬಂದಿದೆ. ಹಾಗೆಯೇ, ಅವರು ಈ ಬಾರಿಯೂ ಬುಲೆಟ್‌ಪ್ರೂಫ್ ಗ್ಲಾಸ್ ಬಾಕ್ಸ್ ಇಲ್ಲದೆ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಮೋದಿ ಅವರು ೨೦೧೪ರಿಂದಲೂ ಬುಲೆಟ್‌ಪ್ರೂಫ್ ಶೀಲ್ಡ್ ಬಳಸುತ್ತಿಲ್ಲ. ಆದರೆ, ಈ ಬಾರಿ ಬಳಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ: Independence Day | ಶ್ವೇತ ವರ್ಣದ ಪೇಟಾ, ನೀಲಿ ಕೋಟ್‌ನಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ