ಬರ್ಮಿಂಗ್ಹ್ಯಾಮ್: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರ ಸ್ಫೋಟಕ ಶತಕ (೧೪೬ ರನ್, ೧೧೧ ಎಸೆತ, ೧೯ ಫೋರ್, ೪ ಸಿಕ್ಸರ್) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಸಮಯೋಚಿತ ಅರ್ಧಶತಕದ (೮೩ ರನ್, ೧೬೩ ಎಸೆತ, ೧೦ ಫೋರ್) ನೆರವು ಪಡೆದ Team India ಇಂಗ್ಲೆಂಡ್ ವಿರುದ್ಧ ಮರು ನಿಗದಿಯಾಗಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಗೌರವ ಕಾಪಾಡಿಕೊಂಡಿದೆ. ಇದು ಭಾರತ ತಂಡದ ಪರ ಟೆಸ್ಟ್ ಮಾದರಿಯಲ್ಲಿ (೨೨೨ ರನ್) ಆರನೇ ವಿಕೆಟ್ಗೆ ಗರಿಷ್ಠ ರನ್ಗಳ ಜತೆಯಾಟವೂ ಹೌದು.
ಶುಕ್ರವಾರದ ದಿನದಾಟದ ಅಂತ್ಯಕ್ಕೆ ಭಾರತ ತಂಡ ೭೩ ಓವರ್ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೩೩೮ ರನ್ ಬಾರಿಸಿದ್ದು, ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಸವಾಲೊಡ್ಡುವ ಮುನ್ಸೂಚನೆ ನೀಡಿದೆ.
ಆರಂಭಿಕರ ವೈಫಲ್ಯ
ಕಾಯಂ ನಾಯಕ ರೋಹಿತ್ ಶರ್ಮ ಅವರ ಅಲಭ್ಯತೆಯಲ್ಲಿ ಬುಮ್ರಾ ನೇತೃತ್ವದಲ್ಲಿ ಆಡುತ್ತಿರುವ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆಯಿತು. ಆದರೆ, ಆರಂಭಿಕ ಬ್ಯಾಟ್ಸ್ಮನ್ಗಳ ವೈಫಲ್ಯದೊಂದಿಗೆ ಮೊದಲ ದಿನದಲ್ಲೇ ನಿರಾಸೆಯ ಪ್ರದರ್ಶನ ನೀಡಿತು.
ರೋಹಿತ್ ಅಲಭ್ಯತೆಯಲ್ಲಿ ಆರಂಭಿಕರಾಗಿ ಬಡ್ತಿ ಪಡೆದ ಚೇತೇಶ್ವರ್ ಪೂಜಾರ ೧೩ ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ೧೭ ರನ್ಗಳಿಗೆ ಔಟಾದರು. ಹೀಗಾಗಿ ೨೭ ರನ್ಗಳಿಗೆ ಭಾರತದ ಮೊದಲ ವಿಕೆಟ್ ಉರುಳಿದರೆ, ೪೬ ರನ್ಗಳಿಗೆ ಎರಡನೇ ವಿಕೆಟ್ ಪತನಗೊಂಡಿತು. ಇವರಿಬ್ಬರ ವಿಕೆಟ್ಗಳನ್ನು ಇಂಗ್ಲೆಂಡ್ನ ಅನುಭವಿ ವೇಗಿ ಆಂಡರ್ಸನ್ ಕಿತ್ತರು. ಮೂರನೆಯವರಾಗಿ ಆಡಲು ಬಂದ ಹನುಮ ವಿಹಾರಿ ೨೦ ರನ್ ಬಾರಿಸಿ ವಿಶ್ವಾಸ ಮೂಡಿಸಿದರೂ ಮ್ಯಾಥ್ಯೂ ಪಾಟ್ಸ್ ಎಸೆತಕ್ಕೆ ಎಲ್ಬಿಡಬ್ಲ್ಯೂ ಆಗಿ ನಿರಾಸೆಯಿಂದ ಹೊರ ನಡೆದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಜೋಪಾನವಾಗಿ ಆಡಿ ರನ್ ಗಳಿಸಲು ಯತ್ನಿಸಿದರೂ ಅವರೂ ಪಾಟ್ಸ್ ಎಸೆತಕ್ಕೆ ಬೌಲ್ಡ್ ಆಗಿ ೧೧ ರನ್ಗಳಿಗೆ ತಮ್ಮ ಆಟ ಕೊನೆಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಕಾಪಾಡಬಲ್ಲರು ಎಂಬ ವಿಶ್ವಾಸದೊಂದಿಗೆ ಸ್ಥಾನ ನೀಡಲಾಗಿದ್ದ ಶ್ರೇಯಸ್ ಅಯ್ಯರ್ ಕೂಡ ೧೫ ರನ್ಗಳಿಗೆ ಔಟಾಗಿ ಡಗ್ಔಟ್ ಕಡೆ ನಡೆದರು.
ಪಂತ್, ಜಡೇಜಾ ಜತೆಯಾಟ
೯೮ ರನ್ಗಳಿಗೆ ೫ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿದ್ದ ಭಾರತ ತಂಡ ೨೦೦ ರನ್ಗಳಿಗೆ ಆಲ್ಔಟ್ ಆಗುತ್ತದೆ ಎಂಬ ಎದುರಾಳಿ ತಂಡದ ನಿರೀಕ್ಷೆ ಸುಳ್ಳು ಮಾಡಿರುವುದು ಪಂತ್ ಹಾಗೂ ಜಡೇಜಾ ಜೋಡಿ. ಪಂತ್ ಸ್ಫೋಟಕ ಇನಿಂಗ್ಸ್ ಕಟ್ಟುತ್ತಾ ಹೋದರೆ, ಜಡೇಜಾ ತಾಳ್ಮೆಯಿಂದ ಆಂಗ್ಲರ ಬೌಲಿಂಗ್ ಪಡೆಯನ್ನು ಎದುರಿಸಿದರು. ಈ ಜೋಡಿ ಆರನೇ ವಿಕೆಟ್ಗೆ ೨೨೨ ರನ್ ಪೇರಿಸುವ ಮೂಲಕ ಪ್ರವಾಸಿ ಭಾರತ ತಂಡದ ಮರ್ಯಾದೆ ಕಾಪಾಡುವ ಜತೆಗೆ ಎದುರಾಳಿ ತಂಡದ ಬೌಲರ್ಗಳ ಉತ್ಸಾಹಕ್ಕೆ ತಣ್ಣೀರೆರಚಿದರು.
ರಿಷಭ್ ಪಂತ್ ಫೋರ್, ಸಿಕ್ಸರ್ಗಳ ಮೂಲಕ ರನ್ ಗಳಿಸುತ್ತಲೇ ಸಾಗಿ ೮೯ ಎಸೆತಗಳಲ್ಲಿ ಶತಕ ಬಾರಿಸಿ ಈ ಹಿಂದೆ ೨೦೦೬ರಲ್ಲಿ ಭಾರತ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಸೃಷ್ಟಿಸಿದ್ದ ದಾಖಲೆ ಮುರಿದರು. ಧೋನಿ ಪಾಕ್ ವಿರುದ್ಧ ೯೩ ಎಸೆತಗಳಲ್ಲಿ ಶತಕ ಬಾರಿಸಿ ಭಾರತ ಪರ ಟೆಸ್ಟ್ನಲ್ಲಿ ವೇಗದ ಶತಕ ಬಾರಿಸಿದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಶತಕ ಬಾರಿಸಿದ ಬಳಿಕ ರನ್ ಗತಿಗೆ ಇನ್ನಷ್ಟು ಇಂಬು ಕೊಟ್ಟ ಅವರು ೧೧೧ ಎಸೆತಗಳಲ್ಲಿ ೧೪೬ ರನ್ ಬಾರಿಸಿ ರೂಟ್ ಬೌಲಿಂಗ್ನಲ್ಲಿ ಕ್ರಾವ್ಲಿಗೆ ಕ್ಯಾಚಿತ್ತು ಔಟಾದರು.
ಪಂತ್ಗೆ ಜತೆಯಾದ ರವೀಂದ್ರ ಜಡೇಜಾ ಕೂಡ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ಸಂಯಮದ ಪ್ರದರ್ಶನ ನೀಡಿದ ಅವರು ಕುಸಿತ ಕಂಡಿದ್ದ ಭಾರತ ತಂಡವನ್ನು ಕಾಪಾಡಿದರಲ್ಲದೆ, ಎರಡನೇ ದಿನಕ್ಕೂ ಬ್ಯಾಟಿಂಗ್ ಕಾಯ್ದುಕೊಂಡರು. ಪಂತ್ ವಿಕೆಟ್ ಪತನಗೊಂಡ ಬಳಿಕ ಬ್ಯಾಟ್ ಹಿಡಿದು ಬಂದ ಶಾರ್ದುಲ್ ಠಾಕೂರ್ ೧ ರನ್ಗೆ ವಾಪಸಾದರು. ಮೊಹಮ್ಮದ್ ಶಮಿ ೧೧ ಎಸೆತಗಳನ್ನು ಎದುರಿಸಿ ರನ್ ಗಳಿಸದೇ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್: ೭೩ ಓವರ್ಗಳಲ್ಲಿ ೭ ವಿಕೆಟ್ಗೆ ೩೩೮ ( ರಿಷಭ್ ಪಂತ್ ೧೪೬, ರವಿಂದ್ರ ಜಡೇಜಾ ೮೩ ನಾಟೌಟ್, ಶುಬ್ಮನ್ ಗಿಲ್ ೧೭, ಚೇತೇಶ್ವರ್ ಪೂಜಾರ ೧೩, ಹನುಮ ವಿಹಾರಿ ೨೦, ವಿರಾಟ್ ಕೊಹ್ಲಿ ೧೧, ಶ್ರೇಯಸ್ ಅಯ್ಯರ್ ೧೫).
ಬೌಲಿಂಗ್ : (ಜೇಮ್ಸ್ ಆಂಡರ್ಸನ್ ೫೨ಕ್ಕೆ ೩, ಮ್ಯಾಥ್ಯೂ ಪಾಟ್ಸ್ ೮೫ಕ್ಕೆ೨, ಬೆನ್ ಸ್ಟೋಕ್ಸ್ ೩೪ಕ್ಕೆ೧, ಜೋ ರೂಟ್ ೨೩ಕ್ಕೆ೧)
ಇದನ್ನೂ ಓದಿ: Team India ಪ್ರಕಟ: ಇಂಗ್ಲೆಂಡ್ ಟೆಸ್ಟ್ಗಿಲ್ಲ ರೋಹಿತ್