Site icon Vistara News

Test Match: ಪತ್ರಕರ್ತನ ನೇರ ಪ್ರಶ್ನೆಗೆ ಪಂತ್‌ ಕೊಟ್ಟ ಖಡಕ್‌ ಉತ್ತರವೇನು?

test match

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ (Test Match) ಮೊದಲ ದಿನ ಉರಿಚೆಂಡಿನ ದಾಳಿ ನಡೆಸುತ್ತಿದ್ದ ಇಂಗ್ಲೆಂಡ್‌ನ ವೇಗಿಗಳಿಗೆ ಬ್ಯಾಟ್‌ ಮೂಲಕ ಉತ್ತರ ಕೊಟ್ಟು, ಸ್ಫೋಟಕ ಶತಕ ಬಾರಿಸಿದ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ದಿನದಾಟ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ಎದುರಾದ ಪ್ರಶ್ನೆಗಳಿಗೂ ಅಷ್ಟೇ ಖಡಕ್‌ ಉತ್ತರ ಕೊಟ್ಟಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ೯೮ ರನ್‌ಗಳಿಗೆ ೫ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಇಳಿದಿದ್ದ ರಿಷಭ್‌ ಪಂತ್‌ ಮೇಲುಗೈ ಸಾಧಿಸುತ್ತಿದ್ದ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದ್ದರು. ವೇಗದ ಬೌಲರ್‌ಗಳಿಗೆ ರಿವರ್ಸ್‌ ಸ್ವೀಪ್‌ ಸೇರಿದಂತೆ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್‌ ಮಾಡಿದ ಅವರು ೮೯ ಎಸೆತಗಳಿಗೆ ಶತಕ ಬಾರಿಸಿದ್ದರಲ್ಲದೆ, ೧೧೧ ಎಸೆತಗಳಲ್ಲಿ ೧೪೬ ರನ್‌ ಬಾರಿಸಿದ್ದರು. ಅವರ ಬ್ಯಾಟಿಂಗ್‌ ನೆರವಿನಿಂದ ಕುಸಿತದ ಹಾದಿಯಲ್ಲಿದ್ದ ಭಾರತ ತಂಡ ಚೇತರಿಸಿಕೊಂಡಿತ್ತು. ಇವರಿಗೆ ಉತ್ತಮ ನೆರವು ನೀಡಿದ್ದ ರವೀಂದ್ರ ಜಡೇಜಾ ಕೂಡ ೮೩ ರನ್‌ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರಿಬ್ಬರು ಆರನೇ ವಿಕೆಟ್‌ಗೆ ಕಲೆಹಾಕಿದ ೨೨೨ ರನ್‌ಗಳು ಭಾರತ ತಂಡದ ಮರ್ಯಾದೆ ಉಳಿಸಿತ್ತು.

ಪಂತ್‌ಗೆ ನೀಡಿದ ಉತ್ತರವೇನು?

ಭಾರತ ತಂಡದ ನಾಲ್ಕನೇ ವಿಕೆಟ್‌ ಉರುಳುತ್ತಿದ್ದಂತೆಯೇ ಪೂರ್ಣಪ್ರಮಾಣದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಇದ್ದ ಹೊರತಾಗಿಯೂ ರಿಷಭ್‌ ಪಂತ್‌ ಬ್ಯಾಟ್‌ ಮಾಡಲು ಕ್ರೀಸ್‌ಗೆ ಬಂದಿದ್ದರು. ಆರನೆಯವರಾಗಿ ಅಯ್ಯರ್‌ ಇಳಿದು ೧೫ ರನ್‌ಗಳಿಗೆ ಆಟ ಕೊನೆಗೊಳಿಸಿದ್ದರು. ಈ ಬಗ್ಗೆ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಇಂಗ್ಲಿಷ್‌ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪಂತ್‌ ಖಡಕ್‌ ಉತ್ತರಗಳನ್ನು ಕೊಟ್ಟಿದ್ದಾರೆ. ಆ ಸಂಭಾಷಣೆ ಇಂತಿದೆ.

ಪತ್ರಕರ್ತ: ನೀವು ೬ ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವವರಲ್ಲವೇ?

ಪಂತ್‌: ಹೌದು

ಪತ್ರಕರ್ತ: ನೀವು ಶ್ರೇಯಸ್‌ ಅಯ್ಯರ್‌ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿದಿರಾ?

ಪಂತ್‌: ಇಲ್ಲ

ಪತ್ರಕರ್ತ: ನೀವು ಯಾವಾಗಲೂ ಐದನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್‌ಗೆ ಇಳಿಯುತ್ತೀರಾ?

ಪಂತ್‌: ಹೌದು, ನಾನು ಐದನೇ ಕ್ರಮಾಂಕದಲ್ಲಿಯೇ ಇಳಿಯುತ್ತೇನೆ

ಮಳೆಯಿಂದ ಪಂದ್ಯ ಕುಂಠಿತ:

ಮೊದಲ ದಿನ ಪಂದ್ಯ ಆರಂಭಕ್ಕೆ ಮೊದಲು ಎಜ್‌ಬಾಸ್ಟನ್‌ನಲ್ಲಿ ಮಳೆ ಬಂದಿತ್ತು. ಹೀಗಾಗಿ ಮೊದಲ ದಿನ ಕೇವಲ ೭೩ ಓವರ್‌ಗಳ ಪಂದ್ಯ ಮಾತ್ರ ನಡೆದಿದೆ. ಆದಾಗ್ಯೂ ಭಾರತ ತಂಡ ವೇಗದಲ್ಲಿ ೩೩೮ ರನ್‌ ಗಳಿಸಿದೆ.

ಇದನ್ನೂ ಓದಿ Team India ಮರ್ಯಾದೆ ಕಾಪಾಡಿದ ಪಂತ್‌, ಜಡೇಜಾ

Exit mobile version