ಬೆಂಗಳೂರು: ಸಿನಿ ಅಖಾಡದಲ್ಲಿ ಛಾಪು ಮೂಡಿಸಿರುವ ಕೆಲವೇ ಕೆಲವು ನಟಿಯರ ಪೈಕಿ ಸಮಂತಾ ಕೂಡ ಒಬ್ಬರು. ಆದರೆ, ಕಳೆದ ಕೆಲವು ವರ್ಷಗಳಿಂದ ನಟಿ ಸಮಂತಾ ರುತ್ ಪ್ರಭು ಒಲ್ಲದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ನಟಿ ವಿಚ್ಛೇದನ ಪಡೆಯುವ ಸುದ್ದಿಯೂ ಸದ್ದು ಮಾಡಿತ್ತು, ಇದೀಗ ಸಮಂತಾ ಅವರ ಅನಾರೋಗ್ಯದ (Samantha Health) ವದಂತಿ ಅಭಿಮಾನಿಗಳಲ್ಲಿ ಭಾರಿ ಆತಂಕ ಸೃಷ್ಟಿಮಾಡಿದೆ.
ಟಾಲಿವುಡ್, ಕಾಲಿವುಡ್ ಸೇರಿದಂತೆ ಬಾಲಿವುಡ್ ಅಂಗಳದಲ್ಲೂ ನಟಿ ಸಮಂತಾ ಹೆಸರು ರಾರಾಜಿಸುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ನಟಿ ಸಮಂತಾ ಅವರ ಸಾಲು ಸಾಲು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿವೆ. ಆದರೆ ಈಗ ಬೇರೆಯದ್ದೇ ವಿಚಾರಕ್ಕೆ ಸಮಂತಾ ಮುನ್ನೆಲೆಗೆ ಬಂದಿದ್ದು, ಭೀಕರ ಚರ್ಮರೋಗದಿಂದ ಅವರು ಬಳಲುತ್ತಿದ್ದಾರೆಂಬ ಸುದ್ದಿ ಹರಡಿದೆ. ಈ ಕುರಿತು ಸಮಂತಾ ಅವರ ಮ್ಯಾನೇಜರ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಆತಂಕ ಬೇಡ..!
ಸಮಂತಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 2 ಸಿನಿಮಾಗಳು ಸದ್ಯ ರಿಲೀಸ್ಗೆ ರೆಡಿಯಾಗಿವೆ. ಯಶೋದಾ & ಶಾಕುಂತಲಂ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈ ಹೊತ್ತಲ್ಲೇ ಸಮಂತಾ ಆರೋಗ್ಯದ ಬಗ್ಗೆ ವದಂತಿ ದಟ್ಟವಾಗಿದೆ. ಮತ್ತೊಂದ್ಕಡೆ ಸಾರ್ವಜನಿಕವಾಗಿ ನಟಿ ಕಾಣಿಸಿಕೊಂಡಿಲ್ಲ ಹಾಗೂ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಆದರೆ ವದಂತಿಗೆ ಉತ್ತರ ನೀಡಿರುವ ಸಮಂತಾ ಮ್ಯಾನೇಜರ್ ಮಹೇಂದ್ರ, ‘ಇದು ಬರೀ ಗಾಸಿಪ್’ ಎಂದಿದ್ದಾರೆ.
‘ಪುಷ್ಪ: ದಿ ರೈಸ್’ ಸಿನಿಮಾದಲ್ಲಿ ಸಮಂತಾ ಹಾಡೊಂದಕ್ಕೆ ಹೆಜ್ಜೆಹಾಕಿ ಸದ್ದು ಮಾಡಿದ್ದರು. ‘ಹೂ ಅಂತೀಯಾ ಮಾವ’ ಹಾಡು ಪ್ರತಿಯೊಬ್ಬ ಅಭಿಮಾನಿಯ ಬಾಯಲ್ಲೂ ಓಡಾಡಿತ್ತು. ಇದಾದ ಬಳಿಕ ಸಮಂತಾ ಅವರ ಶಾಕುಂತಲಂ ಚಿತ್ರದ ಪೋಸ್ಟರ್ ಸದ್ದು ಮಾಡಿತ್ತು. ಆದರೆ, ಈ ಮಧ್ಯೆ ಅವರ ಅನಾರೋಗ್ಯ ವಿಚಾರ ಕೂಡ ಚರ್ಚೆಗೆ ಈಡಾಗಿದ್ದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.
ಇದನ್ನೂ ಓದಿ: Avatar Re Release | ಬಾಕ್ಸ್ ಆಫೀಸ್ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್ -1’