ಕೋಲ್ಕೊತಾ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಕೆ. ಎಲ್ ರಾಹುಲ್ (KL Rahul) ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಕಳೆದ 10 ಟೆಸ್ಟ್ಗಳಲ್ಲಿ ಅವರು ಗರಿಷ್ಠ 25 ರನ್ ಬಾರಿಸಿಲ್ಲ. ಹೀಗಾಗಿ ಭಾರತ ತಂಡದಿಂದ ಅವರನ್ನು ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಹಿರಿಯ ಕ್ರಿಕೆಟಿಗರೂ ಅವರ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಅದೇ ಸಾಲಿಗೆ ಸೇರಿಕೊಂಡಿದ್ದು, ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ಭಾರತ ತಂಡದ ಪರ ಸ್ಕೋರ್ ಮಾಡಿಲ್ಲ ಎಂದರೆ ಟೀಕೆಗಳನ್ನು ಎದುರಿಸಲೇಬೇಕು. ಇದಕ್ಕೆ ಕೆ. ಎಲ್ ರಾಹುಲ್ ಕೂಡ ಹೊರತಲ್ಲ. ಈ ಹಿಂದೆಯೂ ಸಾಕಷ್ಟು ಆಟಗಾರರು ಉತ್ತಮ ಪ್ರದರ್ಶನದ ನೀಡದ ಹಿನ್ನೆಲೆಯಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ ಎಂಬುದು ಸೌರವ್ ಗಂಗೂಲಕ ಪಿಟಿಐಗೆ ಸಂದರ್ಶನ ನೀಡುತ್ತಾ ಅಭಿಪ್ರಾಯಪಟ್ಟಿದ್ದಾರೆ.
ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಟೀಮ್ ಮ್ಯಾನೇಜ್ಮೆಂಟ್ ಒಬ್ಬ ಆಟಗಾರ ಅತ್ಯಗತ್ಯ ಎಂದು ಅನಿಸಿದರೆ ಅವರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಯಾಕಂದರೆ ದಿನದಂತ್ಯಕ್ಕೆ ಆ ಆಟಗಾರ ಉತ್ತಮ ಪ್ರದರ್ಶನ ನೀಡುವುದೇ ಪ್ರಮುಖವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ರಾಜಕೀಯಕ್ಕೆ ಕಾಲಿಡ್ತಾರಾ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ?
ರಾಹುಲ್ ಈ ಹಿಂದೆ ಹಲವಾರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರಬಹುದು. ಆದರೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವರಿಂದ ರನ್ ಹರಿದುಬರಲೇಬೇಕು. ಭಾರತ ತಂಡದಲ್ಲಿ ರನ್ ಗಳಿಕೆಗೆ ಒಂದು ಮಾನದಂಡ ಇರುತ್ತದೆ. ಅದನ್ನು ಪೂರೈಸಲೇಬೇಕು ಎಂಬುದಾಗಿ ಗಂಗೂಲಿ ಹೇಳಿದ್ದಾರೆ.