ಹ್ಯಾಮಿಲ್ಟನ್ : ನ್ಯೂಜಿಲೆಂಡ್ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ಭಾನವಾರ ಬೆಳಗ್ಗೆ ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ ೭ ಗಂಟೆಗೆ ಪಂದ್ಯ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ಒಳಗಾಗಿರುವ ಭಾರತ ತಂಡಕ್ಕೆ ಈ ಪಂದ್ಯದ ಗೆಲುವು ಅನಿವಾರ್ಯ. ಗೆದ್ದರೆ ಮಾತ್ರ ಸರಣಿ ಜೀವಂತವಾಗಿರಲಿದೆ. ಹೀಗಾಗಿ ಉತ್ತಮ ರಣತಂತ್ರದೊಂದಿಗೆ ಕಣಕ್ಕೆ ಇಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ನಾಯಕ ಶಿಖರ್ ಧವನ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ಗಂಭೀರ ಯೋಚನೆ ನಡೆಸಬೇಕಾಗಿದೆ. ಏತನ್ಮಧ್ಯೆ, ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಮಾಜಿ ಕೋಚ್ ರವಿ ಶಾಸ್ತ್ರಿ ವಿಶೇಷ ಎಚ್ಚರಿಕೆಯನ್ನು ನೀಡಿದ್ದಾರೆ. ನನ್ನ ಮಾತನ್ನು ಪಾಲಿಸಿದರೆ ಮಾತ್ರ ಗೆಲುವು ಸಾಧ್ಯ ಎಂದು ಹೇಳಿಕೊಂಡಿದ್ದಾರೆ.
ಭಾರತ ತಂಡ ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲಲು ಬೌಲಿಂಗ್ ವಿಭಾಗವೇ ಕಾರಣ ಎಂದು ಹೇಳಲಾಗುತ್ತಿದೆ. ಹೇಗೆಂದರೆ, ಆ ಪಂದ್ಯದಲ್ಲಿ ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಯಜ್ವೇಂದ್ರ ಚಹಲ್ ಸೇರಿ ಐವರು ಬೌಲರುಗಳು ಮಾತ್ರ ಇದ್ದರು. ಇದರಿಂದ ಎದುರಾಳಿ ತಂಡದ ಬೌಲರ್‌ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಿಲ್ಲ ಎಂದು ವಿಮರ್ಶೆ ಮಾಡಲಾಗಿದೆ.
೩೦೭ ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಆತಿಥೇಯ ನ್ಯೂಜಿಲೆಂಡ್ ತಂಡ ೨೦ ಓವರ್‌ಗಳಲ್ಲಿ ೮೦ ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ವೇಗಿ ಉಮ್ರಾನ್ ಮಲಿಕ್ ಎರಡು ವಿಕೆಟ್ ಕಬಳಿಸಿದ್ದರು. ಆ ಬಳಿಕ ಟಾಮ್ ಲೇಥಮ್ ಹಾಗೂ ಕೇನ್ ವಿಲಿಯಮ್ಸನ್ ಜೋಡಿ ಅಜೇಯ ೨೨೧ ರನ್‌ಗಳ ಜತೆಯಾಟ ನೀಡುವ ಮೂಲಕ ಭಾರತದ ಸೋಲಿಗೆ ಷರಾ ಬರೆದರು. ಭಾರತ ತಂಡಕ್ಕೆ ಆರಂಭಿಕ ಮುನ್ನಡೆಯುನ್ನು ಸದ್ಬಳಕೆ ಮಾಡಲು ಅಲ್ಲಿ ಸಾಧ್ಯವಾಗಿರಲಿಲ್ಲ. ಅದಕ್ಕೆ ಹೆಚ್ಚುವರಿ ಬೌಲರ್‌ಗಳು ಇಲ್ಲದಿರುವುದೇ ಕಾರಣವಾಗಿದೆ. ದೀಪಕ್ ಹೂಡ, ದೀಪಕ್ ಚಾಹರ್, ಕುಲ್ದೀಪ್ ಯಾದವ್ ಭಾರತದ ಬೆಂಚ್ ಸ್ಟ್ರೆಂಥ್ ಆಗಿದ್ದರೂ ಅವರನ್ನೂ ಬಳಸಿಕೊಂಡಿಲ್ಲ ಎಂಬುದೇ ನಾಯಕ ಧವನ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ಮೇಲಿರುವ ಅರೋಪ.
ಆರು ಅಥವಾ ಏಳು ಬೌಲಿಂಗ್ ಆಯ್ಕೆಯಿರಲಿ
ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡ ಆರು ಅಥವಾ ಏಳು ಬೌಲರ್‌ಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂಬುದಾಗಿ ರವಿ ಶಾಸ್ತ್ರಿ ಹೇಳಿದ್ದಾರೆ. ನ್ಯೂಜಿಲೆಂಡ್ ಪಿಚ್‌ನಲ್ಲಿ ಹಾಗೂ ಅಲ್ಲಿನ ಬ್ಯಾಟರ್‌ಗಳ ಬ್ಯಾಟಿಂಗ್ ವೈಖರಿಗೆ ಪೂರಕವಾಗಿ ಆರು ಅಥವಾ ಏಳು ಬೌಲರ್‌ಗಳು ಇಲ್ಲದೇ ಹೋದರೆ ನಿಯಂತ್ರಣ ಮಾಡುವುದು ಕಷ್ಟ ಎಂಬುದು ಶಾಸ್ತ್ರಿ ಅವರ ಅಭಿಪ್ರಾಯವಾಗಿದೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಶುಕ್ರವಾರ ಭಾರತ ತಂಡ ಪಂದ್ಯ ಸೋತ ತಕ್ಷಣ ಇದೇ ಮಾತನ್ನು ಹೇಳಿದ್ದರು.
ಇದನ್ನೂ ಓದಿ | Team India | ಟೀಮ್ ಇಂಡಿಯಾ ವಿಶ್ವದ ಅತ್ಯಂತ ಕಳಪೆ ಸೀಮಿತ ಓವರ್‌ಗಳ ತಂಡ ಎನ್ನುತ್ತಾರೆ ವಾನ್; ಕಾರಣ ಇಲ್ಲಿದೆ