ಮುಂಬಯಿ : ಕಳೆದ ಕೆಲವು ತಿಂಗಳಲ್ಲಿ ಭಾರತ ತಂಡ (Team india) ಏಳು ನಾಯಕರನ್ನು ಕಂಡಿದೆ. ಕಾಯಂ ನಾಯಕ ರೋಹಿತ್ ಶರ್ಮ, ಕೆ. ಎಲ್ ರಾಹುಲ್. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಶಿಖರ್ ಧವನ್, ಜಸ್‌ಪ್ರಿತ್ ಬಮ್ರಾ ಹಾಗೂ ಹಿಂದಿನ ಕಾಯುಂ ನಾಯಕ ವಿರಾಟ್ ಕೊಹ್ಲಿ. ಕ್ರಿಕೆಟ್ ಅಭಿಮಾನಿಗಳನೇಕರು ಈ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ. ಆಗಾಗ ನಾಯಕನನ್ನು ಬದಲಾಯಿಸುವುದು ಒಳ್ಳೆಯ ಕ್ರಮವಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದನ್ನು ಸಮರ್ಥಿಸಿಕೊಂಡಿದ್ದು, ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅನಿವಾರ್ಯ ಎಂದು ಹೇಳಿದ್ದಾರೆ.
ಆಟಗಾರರು ಗಾಯದ ಸಮಸ್ಯೆಯಿಂದಾಗಿ ಆಗಾಗ ಬ್ರೇಕ್ ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಹೊರತುಪಡಿಸಿಯೂ ಅವರಿಗೆ ವಿಶ್ರಾಂತಿ ಅಗತ್ಯ. ಹೀಗಾಗಿ ಆಗಾಗ ನಾಯಕರನ್ನು ಬದಲಾಯಿಸಬೇಕು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
“”ರೋಹಿತ್ ಶರ್ಮ ಅವರು ಈಗ ಎಲ್ಲ ಮಾದರಿಯ ಕ್ರಿಕೆಟ್‌ನ ಭಾರತ ತಂಡಕ್ಕೆ ನಾಯಕರು. ಅವರು ಸಾಕಷ್ಟು ಪಂದ್ಯಗಳಲ್ಲಿ ಆಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಗಾಯಗಳಾದಾಗ ವಿಶ್ರಾಂತಿ ಅಗತ್ಯ. ಇಂಥ ವೇಳೆ ಬೇರೆ ನಾಯಕರನ್ನು ಆಯ್ಕೆ ಮಾಡಲೇಬೇಕು. ಇದು ಯುವ ಪ್ರತಿಭೆಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತವೆ,” ಎಂದು ಗಂಗೂಲಿ ಹೇಳಿದರು.
ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡದ ಬೆಂಚ್ ಸಾಮರ್ಥ್ಯ ಹೆಚ್ಚಿದೆ. ಸದ್ಯ ಭಾರತ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಮರ್ಥ್ಯ ಹೊಂದಿರುವ 30 ಆಟಗಾರರು ಇದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ರಾಜಕೀಯಕ್ಕೆ ಕಾಲಿಡ್ತಾರಾ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ?