Site icon Vistara News

ಎಐಎಡಿಎಂಕೆ ದ್ವಿನಾಯಕತ್ವ ವಿವಾದ; ಪಳನಿಸ್ವಾಮಿ ಪ್ರಧಾನ ಕಾರ್ಯದರ್ಶಿ, ಬೆಂಬಲಿಗರಿಂದ ಬೀದಿ ಗಲಾಟೆ

AIADMK Tussle

ಚೆನ್ನೈ: ತಮಿಳುನಾಡಿನಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿಯವರನ್ನು ನೇಮಕ ಮಾಡಲಾಗಿದ್ದು, ಇತ್ತ, ಒ. ಪನ್ನೀರಸೆಲ್ವಂಗೆ ಹಿನ್ನಡೆಯಾಗಿದೆ. ಎಐಎಡಿಎಂಕೆ ಪಕ್ಷದ ನಾಯಕಿ ಜಯಲಲಿತಾ ಮೃತಪಟ್ಟ ಮೇಲೆ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಒ.ಪನ್ನೀರಸೆಲ್ವಮ್‌ ಇಬ್ಬರೂ ನಾಯಕತ್ವ ವಹಿಸಿಕೊಂಡಿದ್ದರು. ಪಳನಿಸ್ವಾಮಿ ಸಂಯೋಜಕರಾಗಿ ಮತ್ತು ಪನ್ನೀರಸೆಲ್ವಂ ಸಹ ಸಂಯೋಜಕರಾಗಿ ಇಲ್ಲಿಯವರೆಗೆ ಪಕ್ಷವನ್ನು ಮುನ್ನಡೆಸಿದ್ದರು. ಆದರೆ ಪಕ್ಷದಲ್ಲಿ ಅತ್ಯಂತ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪಳನಿಸ್ವಾಮಿ ಏಕನಾಯತ್ವದ ಬೇಡಿಕೆಯನ್ನು ಪಕ್ಷದ ಎದುರು ಇಟ್ಟಿದ್ದರು ಮತ್ತು ಅದಕ್ಕೆ ಹಿರಿಯ ನಾಯಕರ ಬೆಂಬಲವೂ ದೊರೆತಿತ್ತು. ಈ ಸಂಬಂಧ ಜೂನ್‌ ತಿಂಗಳಲ್ಲಿ ಒಂದು ಸಭೆ ಕೂಡ ನಡೆದಿತ್ತು. ಅಂದಿನ ಸಭೆಯಲ್ಲಿ ಒಂದು ಅಂತಿಮ ನಿರ್ಣಯ ಸಿಗದ ಕಾರಣ ಇಂದು (ಜುಲೈ 11) ಪಕ್ಷದ ಸಾಮಾನ್ಯ ಮಂಡಳಿ ಸಭೆ ನಿಗದಿಪಡಿಸಲಾಗಿತ್ತು.

ಆದರೆ ಪಕ್ಷದೊಳಗೆ ತಮಗೆ ಬೆಂಬಲ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದಿದ್ದ ಒ. ಪನ್ನೀರಸೆಲ್ವಂ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಜು.11ರ ಎಐಎಡಿಎಂಕೆ ಸಭೆಗೆ ತಡೆ ನೀಡುವಂತೆ ಕೋರಿದ್ದರು. ಅದರ ವಿಚಾರಣೆಯೂ ಇಂದೇ ಇತ್ತು. ಮುಂಜಾನೆಯೇ ತೀರ್ಪು ನೀಡಿದ ಮದ್ರಾಸ್‌ ಹೈಕೋರ್ಟ್‌, ʼನಾವು ಯಾವುದೇ ರಾಜಕೀಯ ಪಕ್ಷದ ಒಳಜಗಳದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲʼ ಎಂದು ಹೇಳಿ, ಪನ್ನೀರಸೆಲ್ವಂ ಅರ್ಜಿಯನ್ನು ವಜಾಗೊಳಿಸಿತ್ತು. ಕೋರ್ಟ್‌ ತೀರ್ಪು ಬರುತ್ತಿದ್ದಂತೆ ಇತ್ತ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಯಿತು. ಪಳನಿಸ್ವಾಮಿಯವರಿಗೆ ಬೆಂಬಲ ಜಾಸ್ತಿ ಇರುವುದರಿಂದ ಸಹಜವಾಗಿಯೇ ಅವರು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾದರು.

ಬೆಂಬಲಿಗರ ಘರ್ಷಣೆ
ಎಐಎಡಿಎಂಕೆಯಲ್ಲಿ ದ್ವಿನಾಯಕತ್ವ ರದ್ದು ಮಾಡಬೇಕು ಎಂಬ ಬೇಡಿಕೆ ಕೇಳಿಬಂದಾಗಿನಿಂದಲೂ ಇ.ಪಳನಿಸ್ವಾಮಿ (EPS) ಮತ್ತು ಒ.ಪನ್ನೀರಸೆಲ್ವಂ (OPS) ಬಣಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇಂದು ಕೂಡ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಚೇರಿ ಎದುರು ಇಬ್ಬರೂ ನಾಯಕರ ನಡುವೆ ಗಲಾಟೆ ನಡೆದಿದೆ. ಕುರ್ಚಿಗಳನ್ನೆಲ್ಲ ಕಿತ್ತೆಸೆದು, ಪರಸ್ಪರರಿಗೆ ಕಲ್ಲುಗಳನ್ನು ಎಸೆದುಕೊಂಡಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ದಿನೇಶ್‌ ಗುಂಡೂರಾವ್‌; ವಿಧಾನಸಭೆ ವಿಪಕ್ಷ ನಾಯಕನ ಸ್ಥಾನದಿಂದ ಮೈಕಲ್‌ ಲೋಬೋ ವಜಾ

Exit mobile version