ಟೋಕಿಯೋ: ಇಂದು ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ಭಾಷಣ ಮಾಡುತ್ತಿದ್ದಾಗ ಗುಂಡೇಟು ತಿಂದ ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರಿಗೆ ಚಿಕಿತ್ಸೆ ಫಲಿಸಲಿಲ್ಲ. ಅವರನ್ನು ಘಟನಾ ಸ್ಥಳದಿಂದ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಆವಾಗಲೇ ಅವರು ಹೃದಯ ಸ್ತಂಭನದ ಸ್ಥಿತಿ ತಲುಪಿದ್ದರು. ತೀವ್ರ ರಕ್ತಸ್ರಾವದಿಂದ ಶಿಂಜೊ ಮೃತಪಟ್ಟಿದ್ದಾಗಿ ಆಸ್ಪತ್ರೆ ತಿಳಿಸಿದೆ. ಇನ್ನು ಶಿಂಜೊರಿಗೆ ಗುಂಡು ಹಾರಿಸಿದ ಮಾಜಿ ಯೋಧ ಯಮಗಾಮಿ ಟೆಟ್ಸುಯಾ (41)ನನ್ನು ಅಲ್ಲಿನ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ಮನೆಯನ್ನೂ ಶೋಧ ಮಾಡಿದ್ದು, ಅಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾಗಿ ಜಪಾನ್ ಮಾಧ್ಯಮ ಎನ್‌ಎಚ್‌ಕೆ ವರದಿ ಮಾಡಿದೆ.
ಹಂತಕ ಯಮಗಾಮಿ ಮಾಜಿ ಯೋಧ. ಆತ ಜಪಾನ್ ಕಡಲು ಸ್ವಯಂ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ. 2005ರಲ್ಲಿ ತನ್ನ ಹುದ್ದೆ ತೊರೆದಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಈತ ಒಂದು ಹೋಮ್ ಮೇಡ್ ಗನ್‌ನಲ್ಲಿ ಜಪಾನ್ ಮಾಜಿ ಪ್ರಧಾನಿಗೆ ಶೂಟ್ ಮಾಡಿದ್ದಾನೆ. ಶಿಂಜೊ ಅಬೆ ರಸ್ತೆ ಬದಿಯಲ್ಲಿ ನಿಂತು ಭಾಷಣ ಮಾಡುತ್ತಿದ್ದರೆ, ಈತ ಹಿಂಭಾಗದಿಂದ ಎರಡು ಬಾರಿ ಗುಂಡು ಹೊಡೆದಿದ್ದ. ಒಂದು ಗುಂಡು ಅಬೆಯ ಬೆನ್ನಿನ ಮೂಲಕ ಹೊಕ್ಕು ಎದೆಯಲ್ಲಿ ಸಿಲುಕಿತ್ತು. ಮತ್ತೊಂದು ಗುಂಡು ಕುತ್ತಿಗೆಗೆ ಬಿದ್ದಿತ್ತು. ಅದಾಗ ಸುಮಾರು ಐದು ತಾಸುಗಳ ಕಾಲ ನಾರಾ ಮೆಡಿಕಲ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಅಬೆ ಜೀವನ್ಮರಣ ಹೋರಾಟ ನಡೆಸಿದ್ದರು.
ರಾಜಕಾರಣಿಗಳಿಗೆ ಬಿಗಿ ಭದ್ರತೆ
ಜಪಾನ್ ಕಾಲಮಾನದ ಪ್ರಕಾರ 12.20ರ ಹೊತ್ತಿಗೆ ಶಿಂಜೊ ಅಬೆ ಮೃತಪಟ್ಟಿದ್ದಾಗಿ ನಾರಾ ಮೆಡಿಕಲ್ ಯೂನಿವರ್ಸಿಟಿ ಆಸ್ಪತ್ರೆ ಮಾಹಿತಿ ನೀಡಿದೆ. ಇವರು ಹೀಗೆ ರಸ್ತೆ ಮಧ್ಯೆ ಗುಂಡೇಟಿಗೆ ಬಲಿಯಾಗುತ್ತಿದ್ದಂತೆ, ಇತ್ತ ಜಪಾನ್ ಈಗಿನ ಪ್ರಧಾನಿ ಫ್ಯುಮಿಯೊ ಕಿಶಿದಾ ಎಚ್ಚೆತ್ತುಕೊಂಡಿದ್ದಾರೆ. ದೇಶದ ಪ್ರಮುಖ ರಾಜಕಾರಣಿಗಳು, ಸಂಪುಟದ ಸಚಿವರ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶಿಸಿದ್ದಾರೆ. ಅಬೆಯವರ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ಫ್ಯುಮಿಯೋ ಅವರು ನ್ಯಾಶನಲ್ ಪಬ್ಲಿಕ್ ಸೇಫ್ಟಿ ಕಮಿಷನ್ ಅಧ್ಯಕ್ಷ ನಿನೊಯು ಸಟೊಶಿ, ನ್ಯಾಯಾಂಗ ಸಚಿವ ಫುರುಕ್ವಾ ಯೊಶಿಹಿಸಾ ಮತ್ತು ಇತರ ಪ್ರಮುಖರೊಂದಿಗೆ ಸುಮಾರು 20 ನಿಮಿಷ ಪ್ರಮುಖ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ ಪ್ರಮುಖ ರಾಜಕಾರಣಿಗಳ ಭದ್ರತೆ ಹೆಚ್ಚಿಸುವ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಶಿಂಜೊ ಅಬೆ ಸಾವು ಸಂಭ್ರಮಿಸಿದ ಚೀನಾ ಪ್ರಜೆಗಳು; ಈಗಿನ ಪ್ರಧಾನಿ ಸರದಿ ಯಾವಾಗ ಎಂಬ ಪ್ರಶ್ನೆ