Site icon Vistara News

Helicopter landing | ಮೂರು ಕಡೆ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿ ಆತಂಕ ಸೃಷ್ಟಿಸಿದ ಹೆಲಿಕಾಪ್ಟರ್‌: ನಡೆದಿದ್ದೇನು?

lamding

ಕಾರವಾರ: ಕಾರವಾರ ನಗರದಲ್ಲಿ ಹೆಲಿಕಾಪ್ಟರ್‌ ಒಂದು ಮೂರು ಕಡೆ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ನಗರದ ಮಾಲಾದೇವಿ ಮೈದಾನ, ಡಿಸಿ ಕಚೇರಿ ಎದುರಿನ ಫ್ಲೈಓವರ್ ಹಾಗೂ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹೆಲಿಕಾಪ್ಟರ್‌ನ್ನು ಲ್ಯಾಂಡ್ ಮಾಡಲು ಯತ್ನಿಸಿದ್ದು ಇದು ಕೆಲಕಾಲ ಆತಂಕಕ್ಕೆ ಕಾರಣವಾಯಿತು.

ನಗರದ ಮೇಲ್ಭಾಗದಲ್ಲಿ ಕೆಲಕಾಲ ಹಾರಾಟ ನಡೆಸಿದ ಹೆಲಿಕಾಪ್ಟರ್ ಮೊದಲು ನಗರದ ಮಾಲಾ ದೇವಿ ಮೈದಾನದಲ್ಲಿ ತೀರಾ ಕೆಳಗೆ ಹಾರಾಟ ನಡೆಸುವ ಮೂಲಕ ಲ್ಯಾಂಡ್ ಆಗಲು ಯತ್ನಿಸಿತ್ತು. ಈ ವೇಳೆ ಮೈದಾನದ ಸಮೀಪದಲ್ಲಿದ್ದ ಜನರು ಆತಂಕಗೊಂಡಿದ್ದು ಹೆಲಿಕಾಪ್ಟರ್ ಸಮಸ್ಯೆಯಾಗಿ ಇಳಿಯಲು ಯತ್ನಿಸುತ್ತಿರುವಂತೆ ಭಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ಹೆಲಿಕಾಪ್ಟರ್ ಕಂಡು ಮೈದಾನದಿಂದ ದೂರಕ್ಕೆ ಓಡಿದರು. ಆಗ ಕೆಳಗೆ ಬಂದಿದ್ದ ಹೆಲಿಕಾಪ್ಟರ್ ಮತ್ತೆ ಮೇಲಕ್ಕೆ ಹಾರಿ ವಾಪಸ್ ತೆರಳಿದೆ.

ಇದಾದ ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿದ ಹೆಲಿಕಾಪ್ಟರ್ ಇಲ್ಲಿ ಹೆದ್ದಾರಿಗೆ ನೂತನವಾಗಿ ನಿರ್ಮಿಸಲಾಗಿರುವ ಫ್ಲೈಓವರ್ ಮೇಲೆ ಲ್ಯಾಂಡ್ ಆಗಲು ಪ್ರಯತ್ನಿಸಿದೆ. ಆದರೆ ಅಲ್ಲಿಯೂ ಸಹ ಹೆಲಿಕಾಪ್ಟರ್ ಇಳಿಸದೇ ಮತ್ತೆ ಮೇಲಕ್ಕೆ ಹಾರಿತು. ಅಲ್ಲಿಯೇ ಸಮೀಪದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆ ಎದುರು ಲ್ಯಾಂಡ್ ಆಗಲು ಮುಂದಾಗಿದೆ. ಈ ವೇಳೆ ಕಡಲತೀರದಲ್ಲಿದ್ದ ಜನರು ಏಕಾಏಕಿ ಹೆಲಿಕಾಪ್ಟರ್ ಇಳಿಸಲು ಮುಂದಾಗಿದ್ದನ್ನ ಕಂಡು ಆತಂಕಗೊಂಡಿದ್ದಾರೆ. ಆದರೆ ಇಲ್ಲಿಯೂ ಸಹ ಹೆಲಿಕಾಪ್ಟರ್ ಲ್ಯಾಂಡ್ ಮಾಡಿಲ್ಲವಾಗಿದ್ದು ಮತ್ತೆ ಮೇಲಕ್ಕೆ ಹಾರಿಸಿಕೊಂಡು ತೆರಳಿದ್ದಾರೆ.

ಹೆಲಿಕಾಪ್ಟರ್ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದು, ಏನು ನಡೆಯುತ್ತಿದೆ ಎನ್ನುವುದು ತಿಳಿಯದೇ ಗಾಬರಿಗೊಂಡರು. ರಸ್ತೆ, ಕಡಲತೀರದಲ್ಲಿ ನಿಂತವರೆಲ್ಲ ಮೊಬೈಲ್ ಹಿಡಿದು ಫೋಟೋ, ವೀಡಿಯೋ ತೆಗೆದುಕೊಂಡಿದ್ದು ವೇಳೆ ಹೆಲಿಕಾಪ್ಟರ್ ಮತ್ತೆ ಕಣ್ಮರೆಯಾಗಿದೆ.

ಈ‌ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನ ಸಂಪರ್ಕಿಸಿದಾಗ, ಇದೊಂದು ಪ್ರಾಯೋಗಿಕ ಹಾರಾಟ ಎಂದು ತಿಳಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂಬ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದು, ಅಂಕೋಲಾದ ಹಟ್ಟಿಕೇರಿ, ಕಾರವಾರದ ನಗರ ಭಾಗದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Exit mobile version