ಪಲ್ಲೆಕೆಲೆ: ಮೂರನೇ ಪಂದ್ಯದಲ್ಲೂ ಗೆಲುವು ಸಾಧಿಸಿದ ಭಾರತ ಮಹಿಳೆಯರ ತಂಡ, ಶ್ರೀಲಂಕಾ ಪ್ರವಾಸದಲ್ಲಿನ ಏಕದಿನ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು Whitewash ಮಾಡಿದೆ.
ಮೂರನೇ ಪಂದ್ಯದಲ್ಲಿ ಚಾಮಿರಾ ಅಟ್ಟಪಟ್ಟು ನಾಯಕತ್ವದ ಲಂಕಾ ತಂಡವನ್ನು ೩೯ ರನ್‌ಗಳಿಂದ ಮಣಿಸಿದ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿತು. ಈ ಮೂಲಕ ಈ ಪ್ರವಾಸದ ಆರು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತ ೫-೧ರ ಭರ್ಜರಿ ಮುನ್ನಡೆ ಗಳಿಸಿಕೊಂಡಿತು. ಮೂರು ಟಿ೨೦ ಪಂದ್ಯಗಳ ಸರಣಿಯಲ್ಲಿ ಭಾರತ ೨-೧ ಮುನ್ನಡೆ ಪಡೆದುಕೊಂಡಿದ್ದರೆ, ಏಕದಿನ ಪಂದ್ಯಗಳಲ್ಲಿ ೩-೦ ಮುನ್ನಡೆ ಪಡೆಯಿತು.
ಮಿಂಚಿದ ಹರ್ಮನ್‌ಪ್ರೀತ್
ಪಲ್ಲೆಕೆಲೆಯಲ್ಲಿ ಗುರುವಾರ ನಡೆದ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಭಾರತ ತಂಡ ನಿಗದಿತ ೫೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೨೫೫ ರನ್ ಬಾರಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಪ್ರದರ್ಶನ ನೀಡಿ ೭೫ ರನ್ ಬಾರಿಸಿದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ ೫೬ ರನ್ ಬಾರಿಸಿದರೆ, ಆರಂಭಿಕ ಬ್ಯಾಟರ್ ಶಫಾಲಿ ವರ್ಮ (೪೯) ಒಂದು ರನ್‌ಗಳ ಕೊರತೆಯಿಂದ ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಯಸ್ತಿಕಾ ಭಾಟಿಯಾ ೩೦ ರನ್ ಪೇರಿಸಿದರು.
ಗುರಿ ಬೆನ್ನಟ್ಟಿದ ಆತಿಥೇಯ ತಂಡ ಆಂಭದಲ್ಲೇ ಹಿನ್ನಡೆ ಅನುಭವಿಸಿತು. ೭ ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಲ್ಲದೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ಮೊನಚಿನ ದಾಳಿಗೆ ಕಂಗೆಟ್ಟು ೪೭.೩ ಓವರ್‌ಗಳಲ್ಲಿ ೨೧೬ ರನ್‌ಗಳಿಗೆ ಆಲ್‌ಔಟ್ ಆಯಿತು. ನಾಯಕಿ ಚಾಮರಿ ಅಟ್ಟಪಟ್ಟು (೪೪) ಹಾಗೂ ನೀಲಾಕ್ಷಿ ಡಿ ಸಿಲ್ವಾ ಅಜೇಯ ೪೮ ರನ್ ಬಾರಿಸಿ ಆತಿಥೇಯ ತಂಡಕ್ಕೆ ಆಧಾರವಾಗುವ ಯತ್ನ ನಡೆಸಿದರೂ, ಅದು ಭಾರತ ನೀಡಿದ್ದ ಸ್ಪರ್ಧಾತ್ಮಕ ಗುರಿ ಮೀರಲು ಸಾಧ್ಯವಾಗಲಿಲ್ಲ.
ಸ್ಕೋರ್ ವಿವರ
ಭಾರತ: ೫೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೨೫೫ (ಶಫಾಲಿ ವರ್ಮ ೪೯, ಯಸ್ತಿಕಾ ಭಾಟಿಯಾ ೩೦, ಹರ್ಮನ್‌ಪ್ರೀತ್ ಕೌರ್ ೭೫, ಪೂಜಾ ವಸ್ತ್ರಾಕರ್ ೫೬; ಇನೋಕಾ ರಣವೀರ ೨೨ಕ್ಕೆ೨, ರಶ್ಮಿ ಸಿಲ್ವಾ ೫೩ಕ್ಕೆ೨, ಚಾಮರಿ ಅಟ್ಟಪಟ್ಟು ೪೫ಕ್ಕೆ೨).
ಶ್ರೀಲಂಕಾ: ೪೭. ೩ ಓವರ್‌ಗಳಲ್ಲಿ ೨೧೬ (ಚಾಮರಿ ಅಟ್ಟಪಟ್ಟು ೪೪, ನೀಲಾಕ್ಷಿ ಡಿ ಸಿಲ್ವಾ ೪೮; ರಾಜೇಶ್ವರಿ ಗಾಯಕ್ವಾಡ್ ೩೬ಕ್ಕೆ೩, ಮೇಘನಾ ಸಿಂಗ್ ೩೨ಕ್ಕೆ೨).