Site icon Vistara News

Leopard attack | ಓಂಕಾರ ಹಿಲ್ಸ್‌ ಹಿಂಭಾಗದಲ್ಲಿರುವ ಜಾಗ ನಟ ರಕ್ಷಿತ್‌ ಶೆಟ್ಟಿಗೆ ಸೇರಿದ್ದು; ಚಿರತೆ ಸೆರೆ ಕಾರ್ಯಕ್ಕೆ ಚುರುಕು

leopard in turahalli ರಕ್ಷಿತ್‌ ಶೆಟ್ಟಿ ಕೆಂಗೇರಿ

ಬೆಂಗಳೂರು: ತುರಹಳ್ಳಿ ಕಾಡಿನ ಸುತ್ತಮುತ್ತ ಚಿರತೆ ಸಂಚಾರ, ದಾಳಿಯು (Leopard attack) ಹೆಚ್ಚಾಗಿದ್ದು, ಜನತೆಯಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಓಂಕಾರ ಹಿಲ್ಸ್ ಹಿಂಭಾಗದಲ್ಲಿನ ಅರಣ್ಯ ಪ್ರದೇಶದ ಸಮೀಪವೇ ಇರುವ ಜಾಗವೊಂದರ ಕಾಂಪೌಂಡ್‌ ಮೇಲೆ ಶುಕ್ರವಾರ ರಾತ್ರಿ ಚಿರತೆಯೊಂದು ಹಾದುಹೋಗಿತ್ತು. ಇದು ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರಿಗೆ ಸೇರಿದ ಜಾಗವೆಂದು ಗೊತ್ತಾಗಿದೆ.

ಚಿರತೆಯು ಕಾಂಪೌಂಡ್‌ ಮೇಲೆ ಹಾದುಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ದೃಶ್ಯಾವಳಿಯ ಆಧಾರದ ಮೇಲೆ ಚಿರತೆ ಸೆರೆ ಕಾರ್ಯಾಚರಣೆಯನ್ನೂ ಪ್ರಾರಂಭಿಸಲಾಗಿದೆ. ಚಿರತೆಯ ಹೆಜ್ಜೆ ಗುರುತಿನ ಜಾಡನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟವನ್ನು ನಡೆಸಿದ್ದಾರೆ. ಈ ಜಾಗದಲ್ಲಿ ಅರಣ್ಯ ಇಲಾಖೆಯವರು ರಾತ್ರಿ ಬಂದೂಕು ಹಿಡಿದು ಸಂಚರಿಸಿದ್ದಾರೆ.

ಚಿರತೆ ಸಂಚಾರ ಮೊಬೈಲ್‌ನಲ್ಲಿ ಸೆರೆ
ತುರಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಮಾಡುತ್ತಿರುವುದು ಆತಂಕವನ್ನು ಉಂಟು ಮಾಡಿರುವ ಬೆನ್ನಲ್ಲೇ, ಬಿಜಿಎಸ್ ಕಾಲೇಜಿನ ಹಿಂಭಾಗ ಚಿರತೆ ಸಂಚರಿಸಿದೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸ್ಥಳೀಯರ ಮೊಬೈಲ್‌ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಜಿಂಕೆ ಮೇಲೆ ದಾಳಿ ನಡೆಸಿದ್ದ ಚಿರತೆ ಇದೂ ಎಂದೇ ಹೇಳಲಾಗುತ್ತಿದೆ. ಆದರೆ, ಇದು ಹಳೇ ವಿಡಿಯೊ ಎಂಬ ಮಾತುಗಳೂ ಹರಿದಾಡುತ್ತಿದ್ದು, ಇತ್ತೀಚೆಗೆ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆಯ ವಿಡಿಯೊ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

ಇದನ್ನೂ ಓದಿ | Leopard attack | ಬೆಂಗಳೂರು ತುರಹಳ್ಳಿ ಕಡೆ 4 ಚಿರತೆ ಇಲ್ಲವೇ ಇಲ್ಲ; ಚಿರತೆ ವಾಸಕ್ಕೆ ತುರಹಳ್ಳಿ ಅರಣ್ಯ ಯೋಗ್ಯವಲ್ಲ: ಡಿಆರ್‌ಎಫ್‌ಒ

514.26 ಎಕರೆ ಅರಣ್ಯ ಜಾಗ
ತುರಹಳ್ಳಿ ಅರಣ್ಯ ಪ್ರದೇಶವು ಸುಮಾರು 514.26 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಸೋಂಪುರ, ಶ್ರೀನಿವಾಸಪುರ, ಆರ್.ಆರ್. ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿ ಪ್ರದೇಶಗಳನ್ನು ಅರಣ್ಯ ವ್ಯಾಪ್ತಿಯು ಒಳಗೊಂಡಿದೆ. ಹೀಗಾಗಿ ಈ ಅರಣ್ಯ ಸುತ್ತಮುತ್ತಲಿನ ಎಲ್ಲ ಸ್ಥಳೀಯರಿಗೂ ಚಿರತೆ ಭಯ ಕಾಡುತ್ತಿದೆ.

ಈಗಾಗಲೇ ಶ್ರೀನಿವಾಸಪುರದಲ್ಲಿ ಎರಡು ಬಾರಿ ಚಿರತೆ ದಾಳಿ ನಡೆಸಿದೆ. ಈ ಭಾಗಗಳಲ್ಲಿ ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆ ಹೆಚ್ಚಿರುವ ಕಾರಣ ಅವುಗಳನ್ನು ಬೇಟೆಯಾಡಲು ಕಾರಣವಾಗಿದೆ. ಹೀಗಾಗಿ ಸಾಕಣೆದಾರರು ಭಯಗೊಂಡಿದ್ದಾರೆ.

4 ಚಿರತೆ ಇಲ್ಲವೇ ಇಲ್ಲ; ಡಿಆರ್‌ಎಫ್‌ಒ
ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ೪ ಚಿರತೆಗಳು ಇಲ್ಲವೇ ಇಲ್ಲ, ಕಾಣಿಸಿಕೊಂಡಿದ್ದು ಒಂದು ಚಿರತೆ ಇದ್ದ ಕುರುಹು ಇದೆಯಷ್ಟೇ. ತುರಹಳ್ಳಿ ಅರಣ್ಯ ಪ್ರದೇಶವು ಚಿರತೆ ವಾಸಕ್ಕೆ ಸೂಕ್ತವಲ್ಲ. ಚಿರತೆಯು ಆ ಭಾಗದಿಂದ ಹೊರಟು ಹೋಗಿರುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಚಿರತೆ ಅಲ್ಲಿಯೇ ಇರುವ ಕುರಿತು ಕುರುಹುಗಳು ಸಿಕ್ಕಿಲ್ಲ. ಆದರೂ ಎಂದಿನಂತೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಮೊನ್ನೆ ಕಾಣಿಸಿಕೊಂಡ ಚಿರತೆ ಪುನಃ ಬನ್ನೇರುಘಟ್ಟಕ್ಕೆ ವಾಪಸ್ ಆಗಿರಬಹುದು ಎಂದು ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ರವಿ ಹೇಳಿದರು.

ಸದ್ಯ ಖಾಸಗಿಯವರಿಗೆ ಸೇರಿದ ಜಾಗಗಳಲ್ಲಿ ಒಂದು ಬೋನ್ ಇಡಲಾಗಿದೆ. ಜನ ಆತಂಕಪಡುವ ಅಗತ್ಯವಿಲ್ಲ. ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಚಿರತೆ ಹೋಗಿರುವ ಮಾಹಿತಿ ಇದೆ. ಆದರೂ ಜನರ ಹಿತದೃಷ್ಟಿಯಿಂದ ಶೋಧ ಕಾರ್ಯವನ್ನು ನಾವು ಮುಂದುವರಿಸುತ್ತೇವೆ ಎಂದು ರವಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ | Leopard attack | ಬೆಂಗಳೂರಲ್ಲಿ ಇನ್ನೂ ಸೆರೆಸಿಗದ ಚಿರತೆ; ಅರಣ್ಯ ಇಲಾಖೆ ಸಿಬ್ಬಂದಿ ಹೈ ಅಲರ್ಟ್‌, ಜನತೆಗೆ ಕಾಡಿದ ಜೀವಭಯ

Exit mobile version