Site icon Vistara News

ʼಎನ್‌ಸಿಪಿ, ಕಾಂಗ್ರೆಸ್‌ಗಳೇ ನಮಗೆ ನಿಜವಾದ ವಿರೋಧ ಪಕ್ಷಗಳಾಗಿದ್ದವುʼ; ಸಿಎಂ ಠಾಕ್ರೆಗೆ ಶಿವಸೇನೆ ಶಾಸಕನ ಪತ್ರ

Shindhe Camp

ಮುಂಬೈ: ಜೂ.20ರಿಂದ ಪ್ರಾರಂಭವಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು (Maharashtra Political Crisis) ದಿನದಿನವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಂಡಾಯ ಎದ್ದಿರುವ ಏಕನಾಥ್‌ ಶಿಂಧೆ ಬಣವನ್ನು ಸೇರುವ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಕೆಲವು ಸ್ವತಂತ್ರ ಶಾಸಕರೂ ಕೂಡ ಈ ಗುಂಪಿಗೆ ಸೇರುತ್ತಿದ್ದಾರೆ. ಏಕನಾಥ್‌ ಶಿಂಧೆಯವರೊಂದಿಗೆ ಶಿವಸೇನೆ ಸಚಿವರು, ಶಾಸಕರು ಗುವಾಹಟಿ ರೆಸಾರ್ಟ್‌ನಲ್ಲಿರುವ ಫೋಟೋ-ವಿಡಿಯೋಗಳೂ ಕೂಡ ವೈರಲ್‌ ಆಗುತ್ತಿವೆ. ಈ ಮಧ್ಯೆ ಶಿವಸೇನೆಯ ಬಂಡಾಯ ಶಾಸಕ ಸಂಜಯ್‌ ಶಿರ್ಸತ್‌, ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ನಾಯಕ ಉದ್ಧವ್‌ ಠಾಕ್ರೆಯವರಿಗೆ ಬರೆದ ಒಂದು ಭಾವನಾತ್ಮಕ ಪತ್ರವನ್ನು ಇಂದು ಏಕನಾಥ್‌ ಶಿಂಧೆ ಶೇರ್‌ ಮಾಡಿಕೊಂಡಿದ್ದಾರೆ.

ಶಿವಸೇನೆ ನೇತೃತ್ವದಲ್ಲೇ ಮೈತ್ರಿ ಮಾಡಿಕೊಳ್ಳಲಾಯಿತು. ಶಿವಸೇನೆಯವರೇ ಮುಖ್ಯಮಂತ್ರಿಯೂ ಇದ್ದರು. ಹಾಗಿದ್ದಾಗ್ಯೂ ನಾವೆಲ್ಲ ನಿರ್ಲಕ್ಷ್ಯಕ್ಕೆ ಒಳಗಾದೆವು ಎಂದು ಸಂಜಯ್‌ ಶಿರ್ಸತ್‌ ಬರೆದಿದ್ದಾರೆ. ʼಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಶಿವಸೇನೆಯ ಉದ್ಧವ್‌ ಠಾಕ್ರೆಯವರೇ ಮುಖ್ಯಮಂತ್ರಿಯಾಗಿದ್ದರು. ಆದರೆ ನಮ್ಮಂಥ ಶಾಸಕರಿಗೆ ಅವರ ವರ್ಷಾ ಬಂಗಲೆ ಪ್ರವೇಶಕ್ಕೆ ಅವಕಾಶವೇ ಇರಲಿಲ್ಲ. ನಾವು ಸಿಎಂ ಭೇಟಿಯಾಗಬೇಕು ಎಂದರೆ ಅವರ ಸುತ್ತಲಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮುಖಂಡರು ಒಪ್ಪಬೇಕಿತ್ತು. ನಾವು ಸಿಎಂ ಭೇಟಿಯಾಗಬೇಕೋ, ಬೇಡವೋ ಎಂಬುದನ್ನು ಅವರೇ ನಿರ್ಧಾರ ಮಾಡುತ್ತಿದ್ದರು. ಇದರಿಂದಾಗಿ ನಮಗೆ ತುಂಬ ಅವಮಾನ ಆಗಿದೆ. ಪ್ರತಿಸಲ ಸಿಎಂ ಭೇಟಿಗೆ ಹೋದಾಗಲೂ ಇದೇ ರೀತಿ ಮುಜುಗರ ಅನುಭವಿಸಬೇಕಾಗುತ್ತಿತ್ತು. ಮಹಾರಾಷ್ಟ್ರದಲ್ಲಿ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎನ್‌ಸಿಪಿ-ಕಾಂಗ್ರೆಸ್‌ಗಳೇ ನಮಗೆ ನಿಜವಾದ ವಿರೋಧ ಪಕ್ಷಗಳಾಗಿದ್ದವುʼ ಎಂದು ಪತ್ರದಲ್ಲಿ ಬರೆದಿದ್ದಾರೆ.

ʼನಮ್ಮಂಥ ಶಿವಸೈನಿಕರ ಪಾಲಿಗೆ ಹಿಂದುತ್ವ, ರಾಮಮಂದಿರಗಳೆಲ್ಲ ಅತ್ಯಂತ ಮಹತ್ವದ ವಿಚಾರಗಳು. ಆದರೆ ಅಯೋಧ್ಯೆಗೆ ಆದಿತ್ಯ ಠಾಕ್ರೆ ಭೇಟಿ ನೀಡಿದಾಗ ನಮಗೆ ಅಲ್ಲಿಗೆ ಹೋಗಲು ನಮ್ಮದೇ ಪಕ್ಷ ಶಿವಸೇನೆ ಅನುಮತಿ ಕೊಡಲಿಲ್ಲ. ಇದೆಲ್ಲ ನಮಗೆ ನೋವುಂಟು ಮಾಡಿದೆʼ ಎಂದು ಶಾಸಕ ಸಂಜಯ್‌ ಶಿರ್ಸತ್‌ ಪತ್ರದಲ್ಲಿ ಬರೆದಿದ್ದಾರೆ. ಇದನ್ನವರು ತುಂಬ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೀಗ ಏಕನಾಥ್‌ ಶಿಂಧೆ ವೈರಲ್‌ ಮಾಡಿದ್ದಾರೆ. ಸದ್ಯ ಶಿಂಧೆಯವರೊಟ್ಟಿಗೆ ೩೪ ಶಿವಸೇನೆ ಶಾಸಕರು ಮತ್ತು ಎಂಟು ಸ್ವತಂತ್ರ ಶಾಸಕರು ಸೇರಿ ೪೨ ಶಾಸಕರು ಇದ್ದಾರೆ. ಯಾವ ಹೊತ್ತಿನಲ್ಲೂ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನವಾಗುವ ಸನ್ನಿವೇಶ ಅಲ್ಲಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್‌ ಶಿಂಧೆ ಯಾರು?

Exit mobile version