ಆನೇಕಲ್: ಮೊಬೈಲ್ ಕಳ್ಳತನವಾದ ಬೇಸರದಿಂದ ಆನೇಕಲ್‌ನ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನೇಕಲ್ ತಾಲೂಕಿನ ಮುತ್ತಗಟ್ಟಿಯ ಸಮೀಪದ ಕುವೆಂಪು ನಗರದ ನಿವಾಸಿ, ತಮಿಳುನಾಡಿನ ಸೇಲಂ ಮೂಲದ ಕಾರ್ತಿಕ್ (೩೫) ಆತ್ಮಹತ್ಯೆ ಮಾಡಿಕೊಂಡವರು.
ಆಗಿದ್ದೇನು?
ಸೇಲಂ ಮೂಲದ ಕಾರ್ತಿಕ್ ಕುಟುಂಬ ನಾಲ್ಕು ತಿಂಗಳ ಹಿಂದೆ ಕೆಲಸ ಅರಸಿಕೊಂಡು ಆನೇಕಲ್‌ಗೆ ಬಂದಿತ್ತು. ಮಗ್ಗದ ಸೀರೆಗಳಿಗೆ ಕಲರ್ ಕಟ್ಟುವ ಕೆಲಸವನ್ನು ಕಾರ್ತಿಕ್ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಮನೆಯಲ್ಲಿದ್ದಾಗ ಕಾರ್ತಿಕ್‌ನ ಮೊಬೈಲ್ ಪುಟ್ಟ ಮಗುವಿನ ಕೈಲಿತ್ತು. ಕಾರ್ತಿಕ್‌ಗೆ ಗೊತ್ತಾಗದಂತೆ ಮಗು ಮೊಬೈಲನ್ನು ಹಿಡಿದುಕೊಂಡು ಹೊರಗೆ ಬಂದಿತ್ತು ಎನ್ನಲಾಗಿದೆ. ಈ ವೇಳೆ ಯಾರೋ ಅಪರಿಚಿತರು ಮಗುವಿನ ಕೈಗೆ ೧೦ ರೂ. ನೀಡಿ, ಅದರ ಕೈಯಲ್ಲಿದ್ದ ಮೊಬೈಲ್‌ನ್ನು ಎಗರಿಸಿದ್ದರು.
ಸ್ವಲ್ಪ ಹೊತ್ತಿನ ಬಳಿಕ ಕಾರ್ತಿಕ್ ಹೊರಗೆ ಬಂದು ನೋಡಿದರೆ ಮಗುವಿನ ಬಳಿ ಮೊಬೈಲ್ ಇಲ್ಲದ್ದನ್ನು ನೋಡಿ ಕಾರ್ತಿಕ್ ಗಾಬರಿಗೊಂಡ ಎನ್ನಲಾಗಿದೆ. ಈ ನಡುವೆ ಮೊದಲೇ ಸ್ವಲ್ಪ ಮದ್ಯ ಸೇವಿಸಿದ್ದ ಕಾರ್ತಿಕ್ ಮೊಬೈಲ್ ವಿಷಯದಲ್ಲಿ ತೀರಾ ಕಿರಿಕಿರಿ ಶುರು ಮಾಡಿದ್ದ. ಹೆಂಡತಿ ಜತೆಗೂ ಜಗಳ ಮಾಡಿದ್ದ. ಇದಾಗಿ ಸಂಜೆ ೪.೩೦ರ ಹೊತ್ತಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ತಿಕ್ ಶವ ಪತ್ತೆಯಾಗಿದೆ.
ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇವಲ ಒಂದು ಮೊಬೈಲ್‌ಗಾಗಿ ಒಂದು ಪ್ರಾಣವನ್ನೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಕಾರ್ತಿಕ್ ಮನಸು ದುರ್ಬಲವಾಯಿತೇ ಎಂಬುದೂ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ |Family suicide: ಆತ್ಮಹತ್ಯೆ ಮಾಡಿಕೊಂಡ ಮಹೇಶ್ ಮೇಲೆ ಕೊಲೆ ದೂರು, ಅಂಬರೀಷ್ ಅಭಿಮಾನಿಯ ಆಘಾತಕಾರಿ ಸಾವು