Site icon Vistara News

Ranji Trophy Final: ಶತಕ ಸಿಡಿಸಿ 900+ ರನ್‌ಗಳ ಎಲೈಟ್‌ ಗುಂಪು ಸೇರಿದ ಮುಂಬೈ ತಂಡದ ಸರ್ಫರಾಜ್‌ ಖಾನ್‌

ranji trophy Final

ಬೆಂಗಳೂರು: ಎಮ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ Ranji Trophy Final ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟರ್‌ ಸರ್ಫರಾಜ್‌ ಖಾನ್‌ ಶತಕ ಬಾರಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಹಾಲಿ ಆವೃತ್ತಿಯಲ್ಲಿ ಒಟ್ಟಾರೆ ೯೦೦ಕ್ಕೂ ಅಧಿಕ ರನ್‌ ಬಾರಿಸಿರುವ ಅವರು ಎರಡು ಆವೃತ್ತಿಗಳಲ್ಲಿ ೯೦೦+ ರನ್‌ ಬಾರಿಸಿದ ಮೂರನೇ ಆಟಗಾರ ಎಂಬ ಖ್ಯಾತಿ ಗಳಿಸಿಕೊಂಡರು.

೨೦೨೧-೨೨ ಆವೃತ್ತಿಯ Ranji Trophy Final ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡಿದ್ದು, ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮುಂಬಯಿ ತಂಡ ಗುರುವಾರ 127.4 ಓವರ್‌ಗಳಲ್ಲಿ ೩೭೪ ರನ್‌ಗಳಿಗೆ ಆಲ್‌ಔಟ್‌ ಆಗಿದೆ. ಮೊದಲ ದಿನದ ಆಟ ಮುಕ್ತಾಯಗೊಂಡಾಗ ೫ ವಿಕೆಟ್‌ ನಷ್ಟಕ್ಕೆ ೨೪೮ ರನ್‌ ಬಾರಿಸಿದ್ದ ಮುಂಬಯಿ ಎರಡನೇ ದಿನ ಆ ಮೊತ್ತಕ್ಕೆ ೧೨೬ ರನ್‌ಗಳನ್ನು ಸೇರಿಸಿತು. ಏತನ್ಮಧ್ಯೆ, ಬುಧವಾರ ಅರ್ಧ ಶತಕ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಸರ್ಫರಾಜ್‌ ಖಾನ್‌ ೧೯೦ ಎಸೆತಗಳನ್ನು ಎದುರಿಸಿ ೧೨ ಫೋರ್‌ಗಳೊಂದಿಗೆ ೧೩೪ ಬಾರಿಸಿದರು. ಈ ಮೂಲಕ ಅವರು ಹಾಲಿ ಆವೃತ್ತಿಯಲ್ಲಿ ಒಟ್ಟಾರೆ ೯೧೮ ರನ್‌ಗಳನ್ನು ಕಲೆಹಾಕಿದರು. ಇದರಲ್ಲಿ ೪ ಶತಕಗಳು, ೨ ಅರ್ಧ ಶತಕಗಳು ಸೇರಿಕೊಂಡಿವೆ. ಗರಿಷ್ಠ ಸ್ಕೋರ್‌ ೨೭೫ ರನ್‌ಗಳು. ಫೈನಲ್‌ ಪಂದ್ಯದ ಇನ್ನೊಂದು ಇನಿಂಗ್ಸ್‌ನಲ್ಲಿ ಅವರು ೮೨ ರನ್‌ಗಳನ್ನು ಬಾರಿಸಿದರೆ ೧೦೦೦ ಕ್ಲಬ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.

ಎರಡನೇ ಬಾರಿ ೯೦೦+

ಯುವ ಬ್ಯಾಟ್ಸ್‌ಮನ್‌ ಸರ್ಫರಾಜ್‌ ಖಾನ್‌ ಅವರು ೨೦೧೯-೨೦ನೇ ಋತುವಿನಲ್ಲೂ ಒಟ್ಟಾರೆ ೯೦೦ಕ್ಕೂ ಅಧಿಕ ರನ್‌ ಬಾರಿಸಿದ್ದರು. ಆ ಅವೃತ್ತಿಯಲ್ಲಿ ಅವರು ೬ ಪಂದ್ಯಗಳ ೯ ಇನಿಂಗ್ಸ್‌ಗಳಲ್ಲಿ ೯೨೬ ರನ್‌ ಕ್ರೋಡೀಕರಣ ಮಾಡಿದ್ದರು. ಒಂದು ತ್ರಿಶತಕ (೩೦೧), ೩ ಶತಕ ಹಾಗೂ ೨ ಅರ್ಧ ಶತಕಗಳನ್ನು ಅವರು ಬಾರಿಸಿದ್ದರು. ಇದರೊಂದಿಗೆ ಅವರು ಮುಂಬೈ ತಂಡದ ಆಟಗಾರರೇ ಆಗಿದ್ದ ಅಜಯ್‌ ಶರ್ಮ ಹಾಗೂ ವಾಸಿಮ್‌ ಜಾಫರ್‌ ಅವರ ಸಾಲಿಗೆ ಸೇರಿದ್ದಾರೆ.

ದೇಶಿ ಕ್ರಿಕೆಟ್‌ನ ರಾಜ ಎಂದೇ ಕರೆಯಲಾಗುವ ರಣಜಿ ಟ್ರೋಫಿಯ ೮೮ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ೯೦೦+ ಬಾರಿಸಿದ ಮೊದಲ ಅಟಗಾರ ಅಜಯ್‌ ಶರ್ಮ. ಅವರು ೧೯೯೧-೯೨ರ ಋತುವಿನಲ್ಲಿ ೯೯೩ ರನ್‌ ಗಳಿಸಿದ್ದರು. ಅಂತೆಯೇ ಅವರು ೧೯೯೬-೯೭ರ ಋತುವಿನಲ್ಲಿ ೧೦೩೩ ರನ್‌ ತಮ್ಮದಾಗಿಸಿಕೊಂಡಿದ್ದರು.

ದಾಖಲೆಯ ಪಟ್ಟಿಯ ಎರಡನೇ ಆಟಗಾರ ವಾಸಿಮ್‌ ಜಾಫರ್‌. ಅವರು ೨೦೦೮-೦೯ರ ಸಾಲಿನಲ್ಲಿ ೧೨೬೦ ರನ್‌ ಬಾರಿಸಿದ್ದರು. ಅಲ್ಲದೆ ಅವರು ವೃತ್ತಿ ಕ್ರಿಕೆಟ್‌ನ ಕೊನೆಯಲ್ಲಿ ವಿದರ್ಭ ತಂಡದ ಪರ ಆಡಿದ್ದರು. ಆ ತಂಡದ ಪರವಾಗಿಯೂ ೨೦೨೦ರ ಋತುವಿನಲ್ಲಿ ೧೦೩೭ ರನ್‌ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಅವರು ಎರಡು ಬಾರಿ ೧೦೦೦+ ರನ್‌ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಯನ್ನೂ ಹೊಂದಿದ್ದಾರೆ.

೧೦೦೦ ರನ್‌ಗೆ ಅವಕಾಶ

ಫೈನಲ್‌ ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿ ಇದೆ. ಮಧ್ಯ ಪ್ರದೇಶ ತಂಡ ಬ್ಯಾಟಿಂಗ್‌ ಆರಂಭಿಸಿದ್ದು, ೬ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ೧೩ ರನ್‌ ಬಾರಿಸಿದೆ. ಒಂದು ವೇಳೆ ಮಧ್ಯ ಪ್ರದೇಶ ತಂಡ ಆಲ್‌ಔಟ್‌ ಅಗಿ ಮುಂಬೈ ಮತ್ತೆ ಬ್ಯಾಟಿಂಗ್‌ ಮಾಡಿದರೆ ಸರ್ಫರಾಜ್‌ ಖಾನ್‌ಗೆ ೧೦೦೦ ರನ್‌ ಕ್ಲಬ್‌ಗೆ ಸೇರುವ ಅವಕಾಶ ಲಭಿಸಲಿದೆ. ಶ್ರೇಯಸ್‌ ಅಯ್ಯರ್‌ (೧೩೨೧), ವಾಸಿಮ್‌ ಜಾಫರ್‌ (೧೨೬೦), ಅಜಿಂಕ್ಯ ರಹಾನೆ (೧೦೮೯), ರುಸಿ ಮೋದಿ (೧೦೦೮) ಮುಂಬೈ ತಂಡದ ಪರ ಒಂದೇ ಋತುವಿನಲ್ಲಿ ೧೦೦೦ಕ್ಕೂ ಅಧಿಕ ರನ್‌ ಬಾರಿಸಿದ ಆಟಗಾರರು.

ಆನಂದ ಬಾಷ್ಪ

ಶತಕ ಬಾರಿಸುತ್ತಿದ್ದಂತೆ ಸರ್ಫರಾಜ್‌ ಖಾನ್‌ ಸಂಭ್ರಮದ ಜತೆಗೆ ಆನಂದ ಬಾಷ್ಪ ಸುರಿಸಿದರು. ಕಳೆದ ಹಲವು ಆವೃತ್ತಿಗಳಲ್ಲಿ ಮುಂಬಯಿ ತಂಡದ ಬ್ಯಾಟಿಂಗ್‌ ಆಧಾರ ಸ್ತಂಭವಾಗಿರುವ ಅವರು ಶತಕದ ಮೂಲಕ ಅದನ್ನು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.

ಭಾರತ ತಂಡದಲ್ಲಿ ಚಾನ್ಸ್‌ ಕೊಡಿ

ಸರ್ಫರಾಜ್‌ ಖಾನ್‌ ಎಲೈಟ್‌ ಗುಂಪಿಗೆ ಸೇರುತ್ತಿದ್ದಂತೆ ಅವರನ್ನು ಭಾರತ ತಂಡಕ್ಕೆ ಸೇರಿಸುವಂತೆ ನೆಟ್ಟಿಗರು ಒತ್ತಾಯ ಮಾಡಲು ಆರಂಭಿಸಿದ್ದಾರೆ. ಎರಡೆರಡು ಬಾರಿ ೯೦೦+ ರನ್‌ ಬಾರಿಸಿದ ಅವರನ್ನು ಟೀಮ್‌ ಇಂಡಿಯಾಕ್ಕೆ ಸೇರಿಸುವಂತೆ ಅಭಿಯಾನ ಆರಂಭಿಸಿದ್ದಾರೆ

ಇದನ್ನೂ ಓದಿ| ಯಶಸ್ವಿ ಜೈಸ್ವಾಲ್‌ ಅರ್ಧ ಶತಕ (half century): ಮುಂಬಯಿಗೆ 248 ರನ್‌

Exit mobile version