ಲಂಡನ್: ಇಂಗೆಂಡ್ ತಂಡದ ವಿರುದ್ಧ ನಡೆಯಲಿರುವ ಟಿ೨೦ ಸರಣಿಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ practice Match ಭಾರತ ತಂಡದ ಪಾಲಾಗಿದೆ. ದಿನೇಶ್ ಕಾರ್ತಿಕ್ ನೇತೃತ್ವದಲ್ಲಿ ನಡೆದ ಪಂದ್ಯದಲ್ಲಿ ಡರ್ಬಿಶೈರ್ ತಂಡದ ವಿರುದ್ಧ ಭಾರತ 7 ವಿಕೆಟ್‌ಗಳ ಅಮೋಘ ಜಯ ದಾಖಲಿಸಿದೆ.
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಬಾರಿಸಿ ಮಿಂಚಿದ್ದ ದೀಪಕ್ ಹೂಡಾ ಈ ಪಂದ್ಯದಲ್ಲೂ ೩೭ ಎಸೆತಗಳಲ್ಲಿ ೫ ಫೋರ್ ೨ ಸಿಕ್ಸರ್‌ಗಳ ನೆರವಿನಿಂದ ೫೯ ರನ್ ಚಚ್ಚಿದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಬಿಶೈರ್ ತಂಡ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೫೦ ರನ್ ಕಲೆ ಹಾಕಿತು. ಭಾರತದ ಬೌಲಿಂಗ್ ಪರ ಅರ್ಶ್‌ದೀಪ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಹಾಗೂ ವೆಂಕಟೇಶ್ ಅಯ್ಯರ್ ತಲಾ ಒಂದು ವಿಕೆಟ್ ಕಬಳಿಸಿದರು.
ಋತುರಾಜ್ ಮತ್ತೆ ಫೇಲ್
ಬಳಿಕ ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ೩ ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಈ ಮೂಲಕ ಅವರ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರಿಯಿತು. ಬಳಿಕ ಬ್ಯಾಟ್ ಮಾಡಲು ಬಂದ ಹೂಡಾ ಜತೆ ಸೇರಿದ ಸ್ಯಾಮ್ಸನ್ ವೇಗದಲ್ಲಿ ರನ್ ಗಳಿಸಲು ಆರಂಭಿಸಿದರು. ಸಂಜು ೩೦ ಎಸೆತಗಳಲ್ಲಿ ೩೮ ರನ್ ಬಾರಿಸಿದರೆ, ಹೂಡಾ ಅರ್ಧ ಶತಕ ಬಾರಿಸಿದರು. ಸೂರ್ಯಕುಮಾರ್ ಯಾದವ್ ೨೨ ಎಸೆತಗಳಲ್ಲಿ ೩೬ ರನ್ ಬಾರಿಸಿದರೆ ದಿನೇಶ್ ಕಾರ್ತಿಕ್ ಅಜೇಯ ೭ ರನ್ ಬಾರಿಸಿದರು.
ಕಾರ್ತಿಕ್ ನಾಯಕ
ಐರ್ಲೆಂಡ್ ವಿರುದ್ಧದ ಸರಣಿಗೆ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಾಂಡ್ಯಗೆ ಅಭ್ಯಾಸ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ದಿನೇಶ್ ಕಾರ್ತಿಕ್ ನಾಯಕತ್ವ ವಹಿಸಿಕೊಂಡಿದ್ದರು. ಜುಲೈ ೩ರಂದು ನಾರ್ತಾಂಪ್ಟನ್‌ಶೈರ್ ತಂಡದ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯ ನಡೆಯಲಿದ್ದು, ಅದಕ್ಕೂ ದಿನೇಶ್ ಕಾರ್ತಿಕ್ ನಾಯಕತ್ವ ವಹಿಸಲಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ಕ್ರಿಕೆಟ್ ಟೀಮ್‌ಗೆ ನೂತನ ನಾಯಕನನ್ನು ಆಯ್ಕೆ ಮಾಡಿದ ECB, ಯಾರವರು?