Site icon Vistara News

IPL | ಸಿಎಸ್‌ಕೆ ಮತ್ತು ಜಡೇಜಾ ನಡುವಿನ ಮುನಿಸು ಕೊನೆಯಾಗುವುದೆಂದು? ಇನ್ನೂ ಮೂಡಿಲ್ಲ ಒಮ್ಮತ

ipl

ಮುಂಬಯಿ : ಇಂಡಿಯನ್‌ ಪ್ರೀಮಿಯರ್ ಲೀಗ್‌ನ (IPL) ೧೫ನೇ ಆವೃತ್ತಿಯಲ್ಲಿ ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಸೃಷ್ಟಿಯಾಗಿದ್ದ ಮುನಿಸು ಕೊನೆಯಾಗುವಂತೆ ಕಾಣುತ್ತಿಲ್ಲ. ಒಂದೇ ಕುಟುಂಬದಂತೆ ಇದ್ದ ಸಿಎಸ್‌ಕೆ ತಂಡದಲ್ಲಿ ಇಂಥ ಪರಿಸ್ಥಿತಿ ಯಾಕೆ ಸೃಷ್ಟಿಯಾಯಿತು ಎಂಬುದೇ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ. ಅಂತೆಯೇ ಜಡ್ಡು ಮತ್ತು ಸಿಎಸ್‌ಕೆ ನಡುವಿನ ಸಂಬಂಧ ಸರಿಹೋಗಿಲಿ ಎಂಬುದೇ ಚೆನ್ನೈ ತಂಡದ ಅಭಿಮಾನಿಗಳ ಆಶಯ.

ಐಪಿಎಲ್‌ ಟೂರ್ನಿ ಇರಲಿ, ಇಲ್ಲದೇ ಇರಲಿ, ಸಿಎಸ್‌ಕೆ ತಂಡದ ಮ್ಯಾನೇಜ್ಮೆಂಟ್‌ ತಮ್ಮ ಆಟಗಾರರ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತದೆ. ಆದರೆ, ಜಡೇಜಾ ವಿಚಾರದಲ್ಲಿ ಅದು ಸುಳ್ಳಾಗಿದೆ. ಒಂದು ಬಾರಿ ಅವರು ಟೂರ್ನಿಯ ಅರ್ಧದಲ್ಲಿ ತಂಡದಿಂದ ಹೊರಗೆ ಕಾಲಿಟ್ಟ ಬಳಿಕ ಸಂಪರ್ಕವೇ ಸಾಧಿಸಿಲ್ಲ. ಹೀಗಾಗಿ ಅವರ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿದೆ ಎನ್ನಲಾಗಿದೆ.

ಯಾಕೆ ಮುನಿಸು?

೨೦೨೨ನೇ ಆವೃತ್ತಿಯ ಐಪಿಎಲ್‌ ಆರಂಭದಲ್ಲಿ ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಅಯ್ಕೆ ಮಾಡಲಾಗಿತ್ತು. ಆದರೆ, ಅವರ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ನಿರಂತರವಾಗಿ ಸೋಲು ಕಂಡಿತ್ತು. ಜತೆಗೆ ಜಡೇಜಾ ಅವರ ಪ್ರದರ್ಶನವೂ ಕಳೆಗುಂದಿತ್ತು. ಬಳಿಕ ಸಿಎಸ್‌ಕೆ ಮ್ಯಾನೆಜ್ಮೆಂಟ್‌ ಅವರನ್ನು ನಾಯಕ ಸ್ಥಾನದಿಂದ ಕೆಳಕ್ಕಿಳಿಸಿ ಮಹೇಂದ್ರ ಸಿಂಗ್‌ ಧೋನಿಗೆ ಮತ್ತೆ ಪಟ್ಟ ಕಟ್ಟಿತ್ತು. ಏತನ್ಮಧ್ಯೆ, ರವೀಂದ್ರ ಜಡೇಜಾ ಗಾಯದ ಕಾರಣ ಮುಂದೊಡ್ಡಿ ತಂಡದ ಬಿಟ್ಟು ಹೊರಗೆ ಹೋಗಿದ್ದರು. ಅದೂ ಅಲ್ಲದೆ, ಸಿಎಸ್‌ ನಾಯಕ ಎಂಬ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಡಿಲೀಟ್‌ ಮಾಡಿದ್ದರು. ಕೆಲವು ದಿನಗಳ ಹಿಂದೆ ಉಳಿದಿದ್ದ ಕೊನೇ ಪೋಸ್ಟ್‌ ಅನ್ನೂ ಕಿತ್ತು ಹಾಕಿದ್ದರು. ಹೀಗಾಗಿ ಜಡೇಜಾ ಹಾಗೂ ಸಿಎಸ್‌ಕೆ ಸಂಬಂಧ ಸರಿ ಹೋಗುವುದು ಕಷ್ಟ ಎಂದು ಹೇಳಲಾಗಿತ್ತು. ಅದೀಗ ದಿಟವಾಗುವ ಲಕ್ಷಣ ಕಂಡು ಬರುತ್ತಿದ್ದು, ಮ್ಯಾನೇಜ್ಮೆಂಟ್‌ ಜಡೇಜಾ ಅವರ ಜತೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಯಶಸ್ವಿ ಆಟಗಾರ

ರವಿಂದ್ರ ಜಡೇಜಾ ೨೦೧೨ರಲ್ಲಿ ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದರು. ಅಲ್ಲಿಂದ ಸುಮಾರು ೯ ವರ್ಷಗಳ ಕಾಲ ಆ ತಂಡದ ಕಾಯಂ ಸದಸ್ಯರಾಗಿ ಉಳಿದಿದ್ದರು. ಧೋನಿಯ ಸಲಹೆಯಂತೆ ಸಿಎಸ್‌ಕೆ ತಂಡದಲ್ಲಿ ಸಮರ್ಥ ಆಲ್‌ರೌಂಡರ್‌ ಪಾತ್ರ ವಹಿಸುತ್ತಿದ್ದ ಜಡಜಾ ಅವರನ್ನು ಹಿಂದಿನ ಆವೃತ್ತಿಯ ಹರಾಜಿಗೆ ಮೊದಲು ತಂಡದಲ್ಲಿ ಉಳಿಸಿಕೊಂಡಿದ್ದರು. ಬಳಿಕ ತಂಡದ ನಾಯಕತ್ವವನ್ನೇ ವಹಿಸಿದ್ದರು. ಆದರೆ, ಒಂದು ಬಾರಿ ಪ್ರದರ್ಶನ ಪಾತಾಳಕ್ಕೆ ಇಳಿದ ಕೂಡಲೆ ಮ್ಯಾನೇಜ್ಮೆಂಟ್ ಹಾಗೂ ಆಲ್‌ರೌಂಡರ್‌ ನಡುವೆ ಮನಸ್ತಾಪ ಸೃಷ್ಟಿಯಾಯಿತು ಎನ್ನಲಾಗಿದೆ.

ಇಷ್ಟೆಲ್ಲ ಊಹಾಪೋಹಗಳ ನಡುವೆ ಚೆನ್ನೈ ಸೂಪರ್ ಕಿಂಗ್ಸ್‌ ಮಾಲೀಕರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಎಲ್ಲವೂ ಸರಿಯಿದೆ. ಸಂದೇಹಗಳಿಗೆ ಎಡೆಯಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ | CSK ಕುರಿತ ಪೋಸ್ಟ್‌ಗಳನ್ನು ಜಡೇಜಾ ಡಿಲೀಟ್‌ ಮಾಡಿದ್ದು ಯಾಕಿರಬಹುದು?

Exit mobile version