ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅಲ್ಲಿಂದಲೇ ಸಿಎಸ್‌ಕೆ ಕುರಿತು ತಾವು ಈ ಹಿಂದೆ ಪ್ರಕಟಿಸಿದ್ದ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಕ್ರಿಕೆಟ್ ಕಾರಿಡಾರ್‌ನೊಳಗೆ ಹೊಸ ಚರ್ಚೆಗೆ ವೇದಿಕೆ ಕಲ್ಪಿಸಿದೆ.
ಜಡೇಜಾ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದಾರೆ. ಅವರು ಮತ್ತು ಸಿಎಸ್‌ಕೆ ಮ್ಯಾನೇಜ್ಮೆಂಟ್ ನಡುವಿನ ಸಂಬಂಧ ಹಳಸಿ ಹೋಗಿದೆ ಎಂಬ ಮಾತುಗಳು ಮತ್ತೆ ಕೇಳಿ ಬರುತ್ತಿವೆ. ಜಡೇಜಾ ಅವರ ನಡೆಯನ್ನು ಗಮನಿಸಿದರೆ ಅದು ಹೌದು ಎಂದು ಅನಿಸಿದರೂ, ಈ ಚರ್ಚೆ ಐಪಿಎಲ್ ೧೫ನೇ ಆವೃತ್ತಿ ಮುಕ್ತಾಯಗೊಳ್ಳುವ ಮೊದಲೇ ಆರಂಭಗೊಂಡಿತ್ತು.
ಏನಾಗಿತ್ತು?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾಯಂ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಕಳೆದ ಆವೃತ್ತಿಯಲ್ಲಿ ಆರಂಭದಲ್ಲಿ ಹೊಣೆಗಾರಿಕೆಯನ್ನು ರವೀಂದ್ರ ಜಡೇಜಾ ಅವರ ಹೆಗಲಿಗೇರಿಸಿದ್ದರು. ಹೀಗಾಗಿ ಐಪಿಎಲ್ ೨೦೨೨ನ ಆರಂಭದಲ್ಲಿ ಜಡೇಜಾ ಅವರು ತಂಡವನ್ನು ಮುನ್ನಡೆಸಿದ್ದರು. ಏತನ್ಮಧ್ಯೆ, ಸಿಎಸ್‌ಕೆ ತಂಡ ಅರಂಭದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯಿಂದ ಒಂದು ಸ್ಥಾನ ಮೇಲೆ ನಿಂತಿತ್ತು. ಈ ನಡುವೆ ಏಕಾಏಕಿ ಜಡೇಜಾ ಅವರು ತಂಡದ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟಿದ್ದರು. ಮಹೇಂದ್ರ ಸಿಂಗ್ ಧೋನಿಯೇ ಮತ್ತೆ ತಂಡವನ್ನು ಮುನ್ನಡೆಸಿದ್ದರು. ಇದಾದ ಬಳಿಕ ಜಡೇಜಾ ಅವರು ತಾನು ಗಾಯಗೊಂಡಿದ್ದೇನೆ ಎಂದು ಹೇಳಿ ತಂಡದಿಂದ ಹೊರಕ್ಕೆ ಬಂದು ತವರಿಗೆ ವಾಪಸಾಗಿದ್ದರು. ಇದು ಕೂಡ ಸಂಶಯಕ್ಕೆ ಕಾರಣವಾಗಿತ್ತು.
ಏನೂ ಇಲ್ಲ ಎಂದಿದ್ದ ಸಿಇಓ
ತಂಡ ತೊರೆದ ತಕ್ಷಣ ರವೀಂದ್ರ ಜಡೇಜಾ ಸಿಎಸ್‌ಕೆಗೆ ಸಂಬಂಧಿಸಿದ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಈ ಕುರಿತು ಆ ವೇಳೆಯೇ ದೊಡ್ಡ ಮಟ್ಟದ ಚರ್ಚೆ ಆರಂಭಗೊಂಡು, ಜಡೇಜಾ ಹಾಗೂ ಸಿಎಸ್‌ಕೆ ನಡುವೆ ಸಂಬಂಧ ಸರಿಯಿಲ್ಲ ಎಂಬುದಾಗಿ ಹೇಳಲಾಗಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಓ ಕಾಶಿ ವಿಶ್ವನಾಥನ್ ಅವರು “ಅಂಥದ್ದೇನೂ ಸಮಸ್ಯೆ ಇಲ್ಲ. ಅವರು ಗಾಯದ ಸಮಸ್ಯೆಯಿಂದ ತಂಡ ತೊರೆದಿದ್ದಾರೆ,ʼʼ ಎಂದು ಹೇಳಿದ್ದರು.
ಈಗೇನಾಗಿದೆ?
ಮುಂದಿನ ಆವೃತ್ತಿಯ ಐಪಿಎಲ್‌ಗೆ ತಂಡ ಆಯ್ಕೆ ಮಾಡಲು ಫ್ರಾಂಚೈಸಿಗಳು ಈಗಿಂದಲೇ ಸಿದ್ಧತೆ ಆರಂಭಿಸಿವೆ. ಡಿಸೆಂಬರ್ ಅವಧಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿರುವ ಕಾರಣ ಯಾರನ್ನು ತೆಗೆದುಕೊಳ್ಳುವುದು ಹಾಗೂ ಇನ್ಯಾರನ್ನು ಬಿಡುಗಡೆ ಮಾಡುವುದು ಎಂಬ ಸಿದ್ಧತೆಗಳು ಆರಂಭಗೊಂಡಿವೆ. ಹೀಗಾಗಿ ಜಡೇಜಾ ಅವರು ಸಿಎಸ್‌ಕೆ ಜತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುವುದಕ್ಕೆ ಬಯಸಿದ್ದಾರೆ ಎಂಬುದು ಅವರ ನಡೆಯಿಂದ ಸಾಬೀತಾಗಿದೆ.
ಇನ್ನೂ ಇದೆ: PCB ಕಣ್ಣು ಕುಕ್ಕಿದ ಐಪಿಎಲ್ ಆದಾಯ, ತಕರಾರು ಎತ್ತಿದ ರಾಜಾ