ಮುಂಬಯಿ: ಕಳೆದ ವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Stock market) 6 ದಿನಗಳ ವಹಿವಾಟಿನಲ್ಲಿ ಒಟ್ಟು 8.30 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್‌ಇ ಸೆನ್ಸೆಕ್ಸ್ ಕಳೆದ ವಾರ 1855 ಅಂಕ ಕುಸಿದಿತ್ತು. ಸತತ ಆರು ದಿನ ಸೂಚ್ಯಂಕ ಮುಗ್ಗರಿಸಿತ್ತು. ಈ ಅವಧಿಯಲ್ಲಿ ಬಿಎಸ್‌ಇ ನೋಂದಾಯಿತ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 8.30 ಲಕ್ಷ ಕೋಟಿ ರೂ. ಕುಸಿತವಾಗಿದೆ.
ದೇಶೀಯ ಷೇರು ಮಾರುಕಟ್ಟೆಯಲ್ಲಿ ಸದ್ಯ ಹೂಡಿಕೆದಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಜೀಯೊಜಿತ್ ಫೈನಾನ್ಷಿಯಲ್ ಸರ್ವೀಸ್‌ನ ಮುಖ್ಯಸ್ಥ ವಿನೀತ್ ನಾಯರ್ ತಿಳಿಸಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕೂಡ ಕಳೆದ ವಾರ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರು. 1417 ಕೋಟಿ ರೂ. ಮೌಲ್ಯದ ಷೇರುಗಳನ್ನು ಗುರುವಾರ ಮಾರಿದ್ದರು.
ಅಮೆರಿಕದಲ್ಲಿ ಫೆಡರಲ್ ರಿಸರ್ವ್‌ನಿಂದ ಬಡ್ಡಿ ದರ ಏರಿಕೆ ಸಾಧ್ಯತೆ, ಜಾಗತಿಕ ಹಣದುಬ್ಬರದ ಅನಿಶ್ಚಿತತೆ ಹೂಡಿಕೆದಾರರನ್ನು ತಲ್ಲಣಗೊಳಿಸಿದೆ. ಆಟೊಮೊಬೈಲ್, ರಿಯಾಲ್ಟಿ, ಎಫ್‌ಎಂಸಿಜಿ ವಲಯದ ಷೇರುಗಳು ಕಳೆದ ವಾರ ಇಳಿಕೆ ದಾಖಲಿಸಿತ್ತು. ಏಷ್ಯನ್ ಪೇಂಟ್ಸ್, ಬಜಾಜ್ ಫಿನ್ ಸರ್ವ್, ಪವರ್ ಗ್ರಿಡ್ ಇಂಡಸಟ್‌ರೀಸ್ ಷೇರುಗಳು ಲಾಭ ಗಳಿಸಿವೆ.