Site icon Vistara News

Team India | ರಾಹುಲ್‌ ಫಾರ್ಮ್‌ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದ ಮಾಜಿ ಆಲ್‌ರೌಂಡರ್‌

K L Rahul

ಮುಂಬಯಿ : ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ತಂಡದ (Team India) ನಾಯಕ ಕೆ. ಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಫಾರ್ಮ್‌ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಅವರು ಶ್ರೇಷ್ಠ ದರ್ಜೆಯ ಬ್ಯಾಟರ್. ಮತ್ತೆ ರನ್‌ ಗಳಿಸಲು ಆರಂಭಿಸಲಿದ್ದಾರೆ ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್‌ ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯದಲ್ಲಿ ಅವರು ಒಂದು ರನ್‌ಗೆ ಔಟಾದ ಹಿನ್ನೆಲೆಯಲ್ಲಿ ಕನ್ನಡಿಗ ಕ್ರಿಕೆಟಿಗಿನ ಆಟದ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಕೈಫ್‌, ಅಂಥ ಆತಂಕ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ರಾಹುಲ್‌ ಆರು ತಿಂಗಳ ಕಾಲ ಕ್ರಿಕೆಟ್‌ ತಂಡದಿಂದ ದೂರ ಉಳಿದಿದ್ದರು. ಬಳಿಕ ಅವರು ತಂಡ ಸೇರಿದ್ದು ನಾಯಕತ್ವ ನೀಡಲಾಗಿತ್ತು. ಮೊದಲ ಪಂದ್ಯದಲ್ಲಿ ಅವರು ಆರಂಭಿಕರಾಗಿ ಆಡಲು ಇಳಿದಿರಲಿಲ್ಲ. ಶಿಖರ್‌ ಧವನ್‌ ಹಾಗೂ ಶುಬ್ಮನ್ ಗಿಲ್‌ ಅರ್ಧ ಶತಕಗಳನ್ನು ಬಾರಿಸು ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟ್‌ ಹಿಡಿದು ಇಳಿದ ಅವರು ರನ್‌ ಗಳಿಸಲು ಪರದಾಡಿದ್ದರು. ಒಟ್ಟು ಐದು ಎಸೆತಗಳನ್ನು ಎದುರಿಸಿದ್ದ ಅವರು ೧ ರನ್‌ಗೆ ಎಲ್‌ಬಿಡಬ್ಲ್ಯು ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ್ದರು. ಭಾರತ ತಂಡದ ಕೇವಲ ೯ ಎಸೆತ ಎದುರಿಸುವಲ್ಲಿ ಅವರು ವಿಕೆಟ್ ಒಪ್ಪಿಸಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ದುರ್ಬಲ ತಂಡದ ವಿರುದ್ಧ ರನ್ ಗಳಿಸಲು ಸಾಧ್ಯವಾಗದ ರಾಹುಲ್‌ ಫಾರ್ಮ್‌ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ ಕೈಪ್‌, ಇವೆಲ್ಲ ಮಾಮೂಲು ಎಂದು ಹೇಳಿದ್ದಾರೆ.

ಏನೆಂದರು ಕೈಫ್‌ ?

ದೀರ್ಘ ಕಾಲ ಕ್ರಿಕೆಟ್‌ನಿಂದ ದೂರ ಉಳಿದು ಮತ್ತೆ ಆಡಲು ಶುರುಮಾಡಿದಾಗ ಇವೆಲ್ಲ ನಡೆಯುತ್ತದೆ. ರಾಹುಲ್‌ ಉತ್ತಮ ಎಸೆತಕ್ಕೆ ಎಲ್‌ಬಿಡಬ್ಲ್ಯು ಆಗಿದ್ದಾರೆ. ಹೊಸ ಚೆಂಡಿನಲ್ಲಿ ಆ ರೀತಿ ಅಗುತ್ತದೆ. ಅವರೊಬ್ಬ ವಿಶ್ವ ದರ್ಜೆಯ ಬ್ಯಾಟರ್‌. ಯಾವುದೇ ಕ್ಷಣದಲ್ಲಿ ಫಾರ್ಮ್‌ಗೆ ಮರಳಬಹುದು ಎಂದು ಹೇಳಿದರು.

ರಾಹುಲ್‌ ಅವರು ಗಾಯಗೊಳ್ಳುವ ಮೊದಲು ಉತ್ತಮ ಫಾರ್ಮ್‌ನಲ್ಲಿದ್ದರು. ಐಪಿಎಲ್‌ನ ಎಲ್ಲ ಪಂದ್ಯಗಳಲ್ಲಿಯೂ ಸ್ಕೋರ್‌ ಬಾರಿಸಿದ್ದರು. ಮುಂಬಯಿ ಇಂಡಿಯನ್ಸ್‌ ವಿರುದ್ಧ ಶತಕ ಬಾರಿಸಿದ್ದರು. ಟೆಸ್ಟ್‌, ಏಕದಿನ , ಟಿ೨೦ ಸೇರಿ ಎಲ್ಲ ಮಾದರಿಯಲ್ಲಿ ಶತಕ ಬಾರಿಸಿದ ಅಟಗಾರ. ಅವರು ಫಾರ್ಮ್‌ಗೆ ಮರಳುವುದು ಖಚಿತ ಎಂದು ಕೈಫ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಸೋಮವಾರ ಆತಿಥೇಯ ಜಿಂಬಾಬ್ವೆ ತಂಡವನ್ನು ಮೂರನೇ ಹಾಗೂ ಕೊನೇ ಏಕ ದಿನ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ರಾಹುಲ್‌ಗೆ ಉತ್ತಮ ರೀತಿಯಲ್ಲಿ ಬ್ಯಾಟ್‌ ಮಾಡಿ ಫಾರ್ಮ್‌ ಕಂಡುಕೊಳ್ಳುವ ಅವಕಾಶಗಳಿವೆ. ಅಲ್ಲದೆ, ಮುಂದಿನ ಏಷ್ಯಾ ಕಪ್‌ಗೆ ರಾಹುಲ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಯುಎಇ ಸ್ಟೇಡಿಯಮ್‌ಗಳಲ್ಲಿ ನಡೆಯುವ ಟೂರ್ನಿಯಲ್ಲಿಯೂ ರಾಹುಲ್‌ಗೆ ರನ್‌ ಗಳಿಸಲು ಅವಕಾಶಗಳಿವೆ.

ಇದನ್ನೂ ಓದಿ | IND vs ZIM ODI | ಓಪನಿಂಗ್‌ ಬ್ಯಾಟ್ ಮಾಡಲು ಯಾಕೆ ಹೋದ್ರಿ? ಕೆ. ಎಲ್‌ ರಾಹುಲ್‌ಗೆ ನೆಟ್ಟಿಗರ ತರಾಟೆ

Exit mobile version