Site icon Vistara News

Areca Nut : ಭಾರೀ ಪ್ರಮಾಣದ ಅಡಿಕೆ ತಿರಸ್ಕೃತವಾಗಿದ್ದು ನಿಜವೇ? ಅಸಲಿ ಸಂಗತಿ ಏನು? ಇದರ ಪರಿಣಾಮವೇನು?

Arecanut Is it true that a large quantity of arecanut was rejected?

ಅರವಿಂದ ಸಿಗದಾಳ್, ಮೇಲುಕೊಪ್ಪ

ಖಾಸಗಿ ವರ್ತಕರೊಬ್ಬರ 77 ಲೋಡ್ ಅಡಿಕೆ (Areca Nut) ತಿರಸ್ಕೃತಗೊಂಡು, ₹.55,000ಕ್ಕೆ ಕೊಂಡಿದ್ದನ್ನು ಅಲ್ಲಿ ₹.47,000ಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ ಎಂಬ ಸುದ್ದಿ ಈಗ ಇನ್ನೂ ವ್ಯಾಪಿಸಿದ್ದು, ಕ್ವಾಲಿಟಿ ತಿರಸ್ಕ್ರೃತ ಅಡಿಕೆ ಸುದ್ದಿಯ ತಾಯಿ ಬೇರುಗಳು APMC (Agricultural Produce Market Committee)ಯ ಅಂಗಳದಿಂದ ಹೊರಗಡೆ ಇದೆ ಎಂದು ಹೇಳಲಾಗುತ್ತಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕ್ವಾಲಿಟಿ ತಿರಸ್ಕ್ರೃತ ಅಡಿಕೆ ಸುದ್ದಿಯ ವೃಕ್ಷದ ಸುತ್ತ ಅಗೆದು ಬುಡ ಬಿಡಿಸಿ ಬೇರು ಮಟ್ಟದ ವಿಶ್ಲೇಷಣೆ (Root cause analysis) ಮಾಡಲು ಹೊರಟರೆ, ಮತ್ತಷ್ಟು ಅನುಮಾನದ ‘ಬೇರು ಹುಳಗಳು’!

ಮೂರ್ನಾಲ್ಕು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಸಂಚಲನ ಸೃಷ್ಟಿಸಿದ ಕಳಪೆ ಅಡಿಕೆ ಮಿಶ್ರಣ, ತಿರಸ್ಕ್ರೃತ, ದರ ಇಳಿತ, ರೈತರ ಆತಂಕಗಳು ಮಾಧ್ಯಮ, ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆಯಾಗುತ್ತಿವೆ. ಖಾಸಗಿ ವರ್ತಕರೊಬ್ಬರ 77 ಲೋಡ್ ಅಡಿಕೆ ತಿರಸ್ಕೃತಗೊಂಡು, ₹.55,000ಕ್ಕೆ ಕೊಂಡಿದ್ದನ್ನು ಅಲ್ಲಿ ₹.47,000 ಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ ಎಂಬ ಸುದ್ದಿ ಪ್ರಕಟವಾದಾಗ, ಅನುಮಾನದ ಪ್ರಶ್ನೆಗಳು ಅಡಿಕೆ ರೈತರ ವಾಟ್ಸಪ್, ಫೇಸ್‌ಬುಕ್ ಗುಂಪುಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದವು.

೧. ಈ ಖಾಸಗಿ ವರ್ತಕರು ಯಾರು?
೨. ಅಷ್ಟೊಂದು (77 ಲೋಡ್) ಕಳಪೆ ಅಡಿಕೆ ಅಂತ ತಿರಸ್ಕಾರ ಆಗಲು ಆ ದೊಡ್ಡ ವರ್ತಕರೇ ಕಾರಣವಾ?
೩. ಆ ವರ್ತಕರಿಗೆ ಅಡಿಕೆ ಕೊಟ್ಟವರು ಯಾರು? ಚೇಣಿದಾರರು? ದೊಡ್ಡ ರೈತರು? ಕಳಪೆಗೆ ಅವರುಗಳು ಕಾರಣವಾ?
೪. ಆ ಖಾಸಗೀ ವರ್ತಕರೇ ವಾಸ್ತವಾಂಶವನ್ನು ಪ್ರಕಟಿಸಿದರೆ, ಅವರಲ್ಲಿ ಅಡಿಕೆ ಹಾಕುವ, ಹಾಕಿರುವ ರೈತರಿಗೆ ಅನುಕೂಲವಾಗುತ್ತದೆ ಅಲ್ಲವಾ?
೫. ಒಬ್ಬ ಖಾಸಗೀ ವರ್ತಕರ 77 ಲೋಡ್‌ಗಳು ಕಳಪೆ ಅಡಿಕೆ ಎಂದು ತಿರಸ್ಕಾರ ಆಗಿರುವುದರಿಂದ, ಇನ್ನು ಮುಂದೆ ಎಲ್ಲಾ ಖಾಸಗೀ ವರ್ತಕರ ಮಂಡಿಗೆ ಅಡಿಕೆ ಆವಕ ಕಮ್ಮಿಯಾಗಬಹುದಲ್ಲವಾ? ಈ ಬಗ್ಗೆ ಖಾಸಗೀ ವರ್ತಕರು ಒಟ್ಟಾಗಿ ಸತ್ಯಾಂಶವನ್ನು ಬಹಿರಂಗಗೊಳಿಸಿ, ಡ್ಯಾಮೇಜ್ ಕಂಟ್ರೂಲ್ ಮಾಡ್ತಾರಾ? ಇಲ್ಲಾಂದ್ರೆ, ಅಡಿಕೆ ಬೆಳೆಗಾರರು ಈಗಾಗಲೆ ಮಂಡಿಗಳಲ್ಲಿ ಸ್ಟಾಕ್ ಇರುವ ತಮ್ಮ ಅಡಿಕೆಯನ್ನು ಹಿಂಪಡೆಯುವ ದಾರಿ ಹಿಡಿಯಬಹುದು ಅಲ್ವಾ?
೬. 77 ಲೋಡ್ ಅಡಿಕೆ ತಿರಸ್ಕಾರವಾಗಿ, ನಂತರ ಕಡಿಮೆ ದರಕ್ಕೆ ಡೀಲ್ ಆದಾಗ ಆದ ನಷ್ಟವನ್ನು ವರ್ತಕರೇ ಭರಿಸುತ್ತಾರಾ? ಅಥವಾ ಅವರಲ್ಲಿ ಅಡಿಕೆ ಹಾಕುವ ರೈತರ ಮೇಲೆ ಹಾಕುತ್ತಾರಾ?
೭. 77 ಲೋಡ್ ಅಡಿಕೆ ತಿರಸ್ಕಾರವಾದಾಗ, ಅದರ ಕ್ವಾಲಿಟಿ ಚಕ್ ಮಾಡುವ ಪ್ರಯತ್ನ ಮಾಡಿದ್ದಾರಾ?
೮. ತಿರಸ್ಕಾರವಾದ 77 ಲೋಡ್ ಅಡಿಕೆಯ ಒಟ್ಟು ತೂಕ ಎಷ್ಟು? ನಷ್ಟವಾದ ಮೌಲ್ಯ ಎಷ್ಟು?
೯. ತಿರಸ್ಕಾರವಾದ 77 ಲೋಡ್‌ ವಾಪಸ್ ಬಂದಿಲ್ಲ, ಅಲ್ಲೇ ಕಡಿಮೆ ದರಕ್ಕೆ ಮರು ವ್ಯಾಪಾರ ಆಗಿದೆ ಅಂತಾದರೆ, ಅಷ್ಟೊಂದು ದೊಡ್ಡ ಮೊತ್ತದ ಮೇಲಿನ ಜಿಎಸ್‌ಟಿಯೂ ವ್ಯತ್ಯಾಸ ಆಗಿ, ಸರಕಾರಕ್ಕೆ ಜಿಎಸ್‌ಟಿಯೂ ಕಮ್ಮಿ ಆಗಿದೆಯಾ?
೧೦. ಹಾಗೆ ಗಮ್ಯ ತಲುಪಿದ ಅಡಿಕೆಗೆ ದರ ವ್ಯತ್ಯಾಸ ಮಾಡಲು ಅವಕಾಶ, ಜಿಎಸ್‌ಟಿ ಬದಲಿಸಲು ಅವಕಾಶ ಇದೆಯಾ? ಇದ್ದರೆ, ಮುಂದಿನ ದಿನಗಳಲ್ಲಿ ಉತ್ತಮ ಗುಣ ಮಟ್ಟದ ಅಡಿಕೆಗೂ ಕಳಪೆ ಅಡಿಕೆಯ ಕತೆ ಹೇಳಿ ಹೊಸ ‘ವಿಶಿಷ್ಟ ವ್ಯವಹಾರಕ್ಕೆ’ ಇದು ನಾಂದಿ ಆಗಬಹುದಾ? ಹೊಸ ವಿಶಿಷ್ಟ ವ್ಯವಹಾರದಲ್ಲಿ ಕೋಟಿ ಕೋಟಿ ಹಣ ಕಪ್ಪು ಬಣ್ಣಕ್ಕೆ ತಿರುಗಬಹುದಾ?
೧೧. ರೈತರು ಮುಸುಕಿನ ಕೈ ವ್ಯಾಪಾರಸ್ಥರಿಗೆ ಕೊಟ್ಟ ಗುಣಮಟ್ಟದ ಅಡಿಕೆಯನ್ನು ಬಳಸಿ, ಖಾಸಗೀ ವರ್ತಕರು ಕಳಪೆ ಅಡಿಕೆ ಮಿಶ್ರಣದ ಹಣ ವೃದ್ದಿಸುವ ಆಟ ಆಡುತ್ತಿರಬಹುದಾ? ಅಧಿಕೃತ ಬಿಲ್ ಮೂಲಕ ವ್ಯವಹರಿಸುವ ವರ್ತಕರಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅಡಿಕೆ ಕೊಡದೆ, ರೈತರೂ ಪರೋಕ್ಷವಾಗಿ ‘ಗುಣಮಟ್ಟದ ಮತ್ತು ಕಳಪೆ’ ಮಿಶ್ರಣದ ಸಮಸ್ಯೆಗೆ ಕಾರಣವಾಗುತ್ತಿದ್ದಾರಾ?
ಅಗೆದಷ್ಟೂ ಅನುಮಾನಗಳು, ಶಂಕೆಗಳು ಹುಟ್ಟಿಕೊಳ್ಳುತ್ತಿವೆ. ಒಂದು ಕಾಲದಲ್ಲಿ ಅಡಿಕೆ ನಂಬಿಕೆಯ ಪ್ರಮಾಣ ಮಾಡುವ ಮಾಧ್ಯಮವಾಗಿತ್ತು. ಅಡಿಕೆಯನ್ನು ಕೈಯಲ್ಲಿ ಹಿಡಿದು ಮಾತು ಕೊಟ್ರೆ ಮತ್ತೆ ಬೇರೆ ಸ್ಟ್ಯಾಂಪ್ ಪೇಪರ್ ಅಗ್ರಿಮೆಂಟ್ ಬೇಕಿರಲಿಲ್ಲ. ಅಡಿಕೆ ಇಟ್ಟ ಹರಿವಾಣದ ತಾಂಬೂಲ ಬದಲಾಯಿಸಿಕೊಂಡರೆ ಅದೇ ಒಪ್ಪಿತ ಅಗ್ರಿಮೆಂಟ್! ಈಗ ಅಂತಹ ಅಡಿಕೆಗೇ ಮಾನ ಹೋಗಿದೆ, ಹೋಗುತ್ತಿದೆ!

ಅಡಿಕೆ ಮಿಕ್ಸಿಂಗ್ ಭೂತದಿಂದ ಅಡಿಕೆ ರೈತರ ತಲೆಮೇಲೆ ಮತ್ತೊಂದು ತೂಗುಕತ್ತಿ:

ಕಳಪೆ ಅಡಿಕೆ ಮತ್ತು ತಿರಸ್ಕ್ರೃತ 77 ಲೋಡ್ ಅಡಿಕೆ ವಿಚಾರದ ಬಗ್ಗೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಮೂಲದಿಂದ ಒಂದಿಷ್ಟು ಮಾಹಿತಿ ಸಿಕ್ಕಿದ್ದು, ಕಳಪೆ ಎಂದು ತಿರಸ್ಕ್ರೃತಗೊಂಡ 77 ಲೋಡ್ ಅಡಿಕೆ ಶಿವಮೊಗ್ಗ APMC ಯದಲ್ಲ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಅಡಿಕೆ ವರ್ತಕರ ಸಂಘದವರು ಹೇಳಿದ್ದೇನು?:

ಈಗ ಎರಡು ಮೂರು ದಿನಗಳಿಂದ ಎಲ್ಲ ಪತ್ರಿಕೆಗಳಲ್ಲೂ ಕಳಪೆ ಗುಣಮಟ್ಟದ ಅಡಿಕೆ ತಿರಸ್ಕಾರ ಅನ್ನುವುದು ದೊಡ್ಡ ಸುದ್ದಿಯಾಗಿದೆ. ಅಡಿಕೆ ವ್ಯಾಪಾರದ ವಿಚಾರವಾಗಿ ಕೆಲವೊಂದು ಪ್ರಶ್ನೆಗಳನ್ನು ಎತ್ತಲಾಗಿದೆ. ಮೊದಲನೆಯದಾಗಿ ಯಾರೋ ಒಬ್ಬ ವರ್ತಕರ 77 ಲೋಡ್ ಅಡಿಕೆ ರಿಜೆಕ್ಟ್ ಆಗಿದೆ ಅನ್ನುವುದು ವಿಚಾರ, ನಮ್ಮ ಗಮನಕ್ಕೆ ಬಂದ ಹಾಗೆ ಶಿವಮೊಗ್ಗ APMC ಒಳಗೆ ವ್ಯಾಪಾರ ಮಾಡುವ ಯಾವ ಒಬ್ಬ ವ್ಯಾಪರಸ್ಥರ ಅಡಿಕೆ ಕೂಡ ಇಷ್ಟೊಂದು ಪ್ರಮಾಣದಲ್ಲಿ ರಿಜೆಕ್ಟ್ ಆಗಿಲ್ಲ.

ಈಗ ಅಡಿಕೆ ವ್ಯಾಪಾರ ಬರೀ ಶಿವಮೊಗ್ಗ ಮಾರುಕಟ್ಟೆಯ ವ್ಯಾಪಾರವಾಗಿ ಉಳಿದಿಲ್ಲ, ಶಿವಮೊಗ್ಗ APMC ಒಳಗಡೆಯಿಂದ ದಿನಕ್ಕೆ 10 ಲೋಡ್ ಅಡಿಕೆ ಉತ್ತರ ಭಾರತಕ್ಕೆ ಲೋಡ್ ಆದರೆ ಅದರ ಹತ್ತು ಪಟ್ಟು ಅಂದರೆ 100 ಲೋಡ್‌ಗಿಂತ ಜಾಸ್ತಿ ಅಡಿಕೆ APMC ಹೊರಗಡೆಯಿಂದ ಲೋಡ್ ಆಗುತ್ತದೆ. ಶಿವಮೊಗ್ಗ ಸುತ್ತ ಮುತ್ತ ಪ್ರತಿ ಹಳ್ಳಿಗಳಲ್ಲೂ ದಿನಕ್ಕೆ ಎರಡು ಮೂರು ಲೋಡ್ ಕಳಿಸುವ ಸಾಮರ್ಥ್ಯ ವಿರುವ ತುಂಬಾ ವ್ಯಾಪಾರಸ್ಥರಿದ್ದಾರೆ. ಪ್ರತಿದಿನ 10 ಲೋಡ್ ಅಡಿಕೆಯನ್ನು ಕಳಿಸುವ ವ್ಯಾಪಾರಸ್ಥರು ಕೂಡ ಇದ್ದಾರೆ.

ಒಂದು ಲೋಡ್ ಅಡಿಕೆ ಅಂದರೆ 24500 kg, ಇವತ್ತಿನ ಮಾರುಕಟ್ಟೆ ಧಾರಣೆಯಲ್ಲಿ ಒಂದು ಲೋಡ್‌ನ ಅಡಿಕೆಯ ಬೆಲೆ ಒಂದು ಕೋಟಿಗೂ ಅಧಿಕವಾಗುತ್ತದೆ. ಒಂದು ಲೋಡ್ ಅಡಿಕೆ ಶಿವಮೊಗ್ಗದಿಂದ ದಿಲ್ಲಿ, ಅಹಮದಾಬಾದ್ ತಲುಪಲು ₹.1,50,000 ಲಾರಿ ಬಾಡಿಗೆ ಆಗುತ್ತದೆ. ವಾಪಸ್ ತರಿಸಿದರೆ ಒಟ್ಟು ಮೂರು ಲಕ್ಷ ಆಗುತ್ತದೆ. ಹಾಗಾಗಿ ಯಾವ ವ್ಯಾಪಾರಸ್ಥರು ಕೂಡ ರಿಜೆಕ್ಟ್ ಆದರೆ ಮಾಲನ್ನು ವಾಪಸ್ ತರಿಸುವುದಿಲ್ಲ. ಒಂದು ಕ್ವಿಂಟಲ್‌ಗೆ ಒಂದು ಸಾವಿರ ಕಡಿಮೆಗೆ ಮಾರಿದರೂ ಬಾಡಿಗೆಗಿಂತ ಅದೇ ಲಾಭ ಅಂತ ಅಲ್ಲೇ ಮಾರಲು ಟ್ರೈ ಮಾಡ್ತಾರೆ.

ಯಾವ ಪಾನ್ ಮಸಾಲಾ ಕಂಪನಿಯವರೂ ಕೂಡ ಅಡ್ವಾನ್ಸ್ ಕೊಟ್ಟು ಅಡಿಕೆ ತರಿಸುವುದಿಲ್ಲ. ನಮ್ಮ ಅಡಿಕೆ ಹೋದ ಮೇಲೆನೇ ದುಡ್ಡು ಕೊಡೋದು. ಹಾಗಾಗಿ ಅವರು ಎಷ್ಟು ಕಟ್ ಮಾಡುತ್ತಾರೋ ಮಾಡಿಸಿಕೊಂಡು ಮಾರಲೇ ಬೇಕು ಅದು ಅನಿವಾರ್ಯ. ಆದರೆ ಇಷ್ಟೊಂದು ವ್ಯತ್ಯಾಸ, ಅಂದರೆ 55000 ರೂಪಾಯಿಗಳ ಅಡಿಕೆಯನ್ನು 47000 ರೂ.ಗೆ ಮಾರಿದರು ಅಂತ ಕೇಳ್ತಾ ಇರೋದು ಇದೇ ಮೊದಲು. ಇದರ ಸತ್ಯಾಸತ್ಯತೆ ಗೊತ್ತಿಲ್ಲ. ಯಾಕಂದ್ರೆ ಅಷ್ಟು ಡಿಫರೆನ್ಸ್ ಅಂದ್ರೆ ಒಂದು ಲೋಡ್‌ಗೆ ಇಪ್ಪತ್ತು ಲಕ್ಷ ಆಗುತ್ತದೆ, 77 ಲೋಡ್ ಅಂದ್ರೆ 15 ಕೋಟಿಗೂ ಅಧಿಕ! ಒಂದು ವರ್ಷ ಇಷ್ಟೊಂದು ಹಣ ಕಳೆದುಕೊಂಡರೆ ಎಷ್ಟೇ ದೊಡ್ಡ ವ್ಯಾಪಾರಿಯಾದರೂ ಉಳಿಯೋದು ಕಷ್ಟ!

ಇನ್ನು ಗುಣಮಟ್ಟದ ವಿಚಾರಕ್ಕೆ ಬಂದರೆ, ಬಹುಶಃ ಅಡಿಕೆ ಬಿಟ್ಟರೆ ಪ್ರಪಂಚದ ಯಾವುದೇ ಬೆಳೆಯಲ್ಲೂ ಕೂಡ ಇಷ್ಟೊಂದು ಪ್ರಮಾಣದ ಗುಣಮಟ್ಟಕ್ಕೆ ಅನುಗುಣವಾಗಿ ಇಷ್ಟೊಂದು ದರ ವ್ಯತ್ಯಾಸ ಇರುವ ಇನ್ನೊಂದು ಬೆಳೆ ಇರಲಾರದು. ಒಂದೇ ಮರದಲ್ಲಿ ಬಿಡುವ ಅಡಿಕೆ, ಅದನ್ನು ಯಾವ ಹಂತದಲ್ಲಿ ಮರದಿಂದ ಕೊಯ್ದು ಪ್ರೋಸೆಸ್ ಮಾಡುತ್ತೇವೆ ಅನ್ನುವುದರ ಮೇಲೆ ಅದರ ಬೆಲೆ ನಿರ್ಧಾರ ಆಗುತ್ತದೆ.

ಹಸ ಆದ್ರೆ 75,000, ಬೆಟ್ಟೆ ಆದ್ರೆ 55000, ರಾಶಿ ಇಡಿ ಆದ್ರೆ 48000, ಗೊರಬಲು ಆದ್ರೆ 30000 (ಈಗಿನ ಗರಿಷ್ಟ ದರದಲ್ಲಿ). ಈಗ ಸಮಸ್ಯೆ ಆಗಿರುವುದು ಇದರಲ್ಲೇ. ಈಗ ತುಂಬಾ ಜನರ ಮನೆಯಲ್ಲಿ ಗೊರಬಲನ್ನು ಪಾಲಿಷ್ ಮಾಡುವ ಅಥವಾ ಉಜ್ಜುವ ಮೆಷಿನ್ ಇದೆ. ಅದರಲ್ಲಿ ಗೊರಬಲನ್ನು ಉಜ್ಜಿ, ನಯಸ್ ಮಾಡಿ, ಬೇಯಿಸಿ ರಾಶಿ ಇಡೀ ಜೊತೆಗೆ ಕಳಿಸ್ತಾ ಇದಾರೆ. ಅದು ಬರಿ ಕಣ್ಣಿನಲ್ಲಿ ಅಷ್ಟೊಂದು ವ್ಯತ್ಯಾಸ ಕಾಣೋದಿಲ್ಲ, ಆದರೆ ಅದನ್ನ ಕಟ್ ಮಾಡಿ ನೋಡಿದರೆ ಒಳಗಡೆ ಬಿಳಿ ಇರುತ್ತದೆ. ಅದನ್ನ white cutting ಅಂತಾರೆ. ರಾಶಿ ಇಡಿ ಆದ್ರೆ brown ಅಥವಾ ಚಾಕೋಲೇಟ್ ಥರ cutting ಬರುತ್ತದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವಾಗ ಪ್ರತಿಯೊಂದು ಚೀಲವನ್ನು ಕೂಡ ಪರೀಕ್ಷೆ ಮಾಡಿ ಕಳಿಸುವುದು ಸುಲಭವಲ್ಲ. ಆದರೆ ಉತ್ತರ ಭಾರತದ manufacturer ಅಲ್ಲಿ ಒಟ್ಟಾರೆಯಾಗಿ ಒಂದು ಲೋಡ್‌‌ಯಿಂದ ಒಂದು ಹತ್ತು ಚೀಲ ತಗೊಂಡು ಪ್ರತಿ ಚೀಲದಲ್ಲೂ ಕಡಿಮೆ ಅಂದರೂ ಐದು kg ಅಡಿಕೆಯನ್ನು ಕಟ್ ಮಾಡುತ್ತಾರೆ. ಅವರಿಗೆ ಇಷ್ಟು ಶೇಕಡಾವಾರುಗಿಂತ ಜಾಸ್ತಿ white cutting ಬಂದ್ರೆ ಲೋಡ್‌‌ಅನ್ನೇ ರಿಜೆಕ್ಟ್ ಮಾಡುತ್ತಾರೆ. ಈಗ ಆಗಿರುವ ಸಮಸ್ಯೆ ಇದು. manufacturer ಯಾಕೆ 30,000 ರೂಪಾಯಿಯ ಅಡಿಕೆಯನ್ನು 50,000 ಕೊಟ್ಟು ಖರೀದಿ ಮಾಡ್ತಾರೆ? ಅದಕ್ಕೆ ರಿಜೆಕ್ಷನ್ ಜಾಸ್ತಿ ಆಗಿದೆ. ಇಷ್ಟು ಮೇಲ್ನೋಟದ ವಿಚಾರ.

ಈ ಸುದ್ದಿಗೆ ಮೂಲ ಕಾರಣ ಏನು?

ಇದೆಲ್ಲ ಇಷ್ಟು ಸುದ್ದಿಯಾಗಲು ಕಾರಣ ಮೊನ್ನೆ ಮ್ಯಾಮ್‌ಕೋಸ್‌ನವರು ಅವರ 35,000ಕ್ಕೂ ಹೆಚ್ಚು ಸದಸ್ಯರಿಗೆ ಕಳಿಸಿರುವ ಪತ್ರ. ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ, ತಮ್ಮ ಸಂಸ್ಥೆಗೆ ಬರುವ ರೈತರ ಅಡಿಕೆಯನ್ನು ಮಾತ್ರ ಖರೀದಿ ಮಾಡುತ್ತ ಇದ್ದರೂ ಕ್ವಾಲಿಟಿ ಮೇಂಟೈನ್ ಮಾಡೋಕೆ ಆಗ್ತಾ ಇಲ್ಲ ಅಂದರೆ? ಇದು ಎಷ್ಟು ದೊಡ್ಡ ಸಮಸ್ಯೆ ಅಂತ ಊಹಿಸಬಹುದು.

ನಮ್ಮ ಅಡಿಕೆ ವ್ಯವಹಾರದ ಇಂಡಸ್ಟ್ರಿ ಎಷ್ಟು ಅಗಾಧವಾಗಿದೆ ಅಂದರೆ ದೇಶದಲ್ಲಿ ನಡೆಯುವ IPL, WORLDCUP ಅಂಥದ್ದನ್ನೇ ನಮ್ಮ ಒಂದೆರಡು PAN MASALA ಕಂಪನಿಗಳು ಪ್ರಾಯೋಜಿಸುತ್ತವೆ ಅಂದ್ರೆ, ದೊಡ್ಡ ದೊಡ್ಡ bolywood starsಗಳನ್ನ ತಮ್ಮ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತವೆ!

ಅಡಿಕೆ ಮಂಡಿಗೆ ಕಳಿಸಿ ಮಾರೋದಕ್ಕಿಂತ, ಮನೆ ಬಾಗಿಲಲ್ಲೇ ಕೊಟ್ಟರೆ ಒಂದು ಸಾವಿರ ಜಾಸ್ತಿ ಕೊಟ್ಟು ತಗೊಂಡು ಹೋಗ್ತಾರೆ ಅಂತಾರೆ ರೈತರು. APMC ಒಳಗೆ ಅಡಿಕೆ ಮಾರಾಟ ಆದರೆ ಬಂದು ಖರೀದಿ ಮಾಡುವವರು ಒಂದು ಕ್ವಿಂಟಲ್ ಗೆ 50000ಕ್ಕೆ ಖರೀದಿ ಮಾಡಿದ್ರೆ ಅವರಿಗೆ 2500 GST ಸೇರಿ 52500 ಆಗುತ್ತದೆ. ಅದಕ್ಕಿಂತ ಮನೆ ಬಾಗಿಲಲ್ಲೇ 51000ಕ್ಕೆ ಖರೀದಿ ಮಾಡ್ತಾರೆ ಅಷ್ಟೇ.

ನಮ್ಮ ಮಲೆನಾಡಿನ ಬೆಳೆಗಳಲ್ಲಿ ರೈತರಿಗೆ ಅಡಿಕೆಗೆ ಇರುವಷ್ಟು ವ್ಯವಸ್ಥಿತ ಮಾರುಕಟ್ಟೆ ಬೇರೆ ಯಾವ ಬೆಳೆಗಳಿಗೂ ಇಲ್ಲ. ಅಡಿಕೆಗೆ ಸಿಗುವಷ್ಟು ಖಾಸಗಿ ಸಾಲ ಸೌಲಭ್ಯಗಳು ಕೂಡ ಯಾವ ಬೆಳೆಗಳಿಗೂ ಇಲ್ಲ. ರೈತರು ಹಣದ ಅವಶ್ಯಕತೆಗಾಗಿ ಅಡಿಕೆ ಮಾರುವ ಅವಶ್ಯಕತೆ ಇಲ್ಲ. ಸಹಕಾರ ಸಂಘಗಳಲ್ಲಿ ಅಥವಾ ಖಾಸಗಿ ಮಂಡಿಗಳಲ್ಲಿ ಅಡಿಕೆ ಮೇಲೆ ಸಾಲ ಸೌಲಭ್ಯದ ವ್ಯವಸ್ಥೆ ಇದೆ. ಆಮೇಲೆ ದಲ್ಲಾಳಿ ಮಂಡಿಯಿಂದ ವರ್ತಕರು ಅಡಿಕೆ ಖರೀದಿಸಿದರೆ, ನಾಳೆ ಅದರಲ್ಲಿ ಕ್ವಾಲಿಟಿ ವ್ಯತ್ಯಾಸ ಬಂದಲ್ಲಿ, ಅದು ಯಾವ ಮಂಡಿ ಯಲ್ಲಿ ಖರೀದಿಸಿದ್ದು, ಯಾವ ರೈತನದ್ದು ಅನ್ನುವ ಎಲ್ಲಾ ಮಾಹಿತಿ ದೊರೆಯುತ್ತದೆ. ಸರಿ ಪಡಿಸಿಕೊಳ್ಳಲು ಅವಕಾಶ ಇರುತ್ತದೆ. ಆದ್ರೆ ಈಗ 90 ಪರ್ಸೆಂಟ್ ಅಡಿಕೆ ವ್ಯವಹಾರ ಮಾರುಕಟ್ಟೆ ಹೊರಗಡೆ ಹಳ್ಳಿಯಲ್ಲೇ ನಡೆಯುತ್ತದೆ. ಮಾರಾಟದ ನಂತರ, ಮಾರಿದವರು ಯಾರು ಅಂತಾನು ಗೊತ್ತಿಲ್ಲ, ಖರೀದಿ ಮಾಡಿದವರು ಯಾರು ಅಂತಾನು ಗೊತ್ತಿರೋದಿಲ್ಲ. ಯಾವುದೇ ವ್ಯವಹಾರವಾದರೂ ಒಂದು systematic wayನಲ್ಲಿ ನಡೆದರೆ ಆ ಉದ್ಯಮದ ಬೆಳವಣಿಗೆಗೆ ಒಳ್ಳೆಯದು.

APMC ಅಡಿಕೆ ವರ್ತಕರ ಸಂಘದಿಂದ ಸಿಕ್ಕ ಮಾಹಿತಿಯಲ್ಲಿ ಅಡಿಕೆ ವ್ಯಾಪಾರದ ಹಿಂದಿನ ಒಂದಿಷ್ಟು ಚಿತ್ರಣಗಳು ಸಿಗುತ್ತವಾದರೂ, ಸಿಸ್ಟಮ್ಯಾಟಿಕ್ ಆಗಿ ನಡೆದ, ಕತ್ತಲೆಯಲ್ಲೇ ನೆಡೆಯುವ ಹೆಚ್ಚಿನ ಅಡಿಕೆ ವ್ಯವಹಾರದಲ್ಲಿ ಇಡೀ ಅಡಿಕೆ ವ್ಯಾಪಾರದ ಕರಾಳ ಮುಖ ಅಡಗಿರುವುದು.

ಅಡಿಕೆ ಧಾರಣೆಯ ಏರಿಳಿತ, GST ಕಳ್ಳತನ, ಫಾರಮ್ ಹೌಸ್ ಅಡಿಕೆ ರಹಸ್ಯ, ಕಳಪೆ ಅಡಿಕೆ, ಮಿಕ್ಸಿಂಗ್ ಮೋಸ, ಅಕ್ರಮ ಆಮದು, ಕಳ್ಳ ಸಾಗಾಣಿಕೆ…. ಇತ್ಯಾದಿಗಳು ಇರುವುದು ಅಡಿಕೆಯ ಆ ಕರಾಳ ಮಾರುಕಟ್ಟೆ ಒಳಗಡೆ. ಆ ಕರಾಳ ಅಡಿಕೆ ಮಾರುಕಟ್ಟೆಯಲ್ಲಿ ಬೆಂದು ಒಣಗಿದ ಒಂದಿಷ್ಟು ‘ಕಪ್ಪು’ ಅಡಿಕೆ ಅಗ್ರಿಕಲ್ಚರಲ್ ಪ್ರೊಡ್ಯುಸ್ ಮಾರ್ಕೇಟ್ ಕಮಿಟಿಯ (APMC) ಒಳಗೂ ರೈತರ ಹೆಸರಿನಲ್ಲೇ ಬರುತ್ತಿರುವುದೂ ಸತ್ಯ. APMC ಒಳಗಿನ ನೇರ ಸಿಸ್ಟಮ್ಯಾಟಿಕ್ ವ್ಯವಹಾರದಲ್ಲಿ ನಡೆದ ವ್ಯಾಪಾರದ ನಾಲ್ಕಾರು ಲೋಡ್ ಅಡಿಕೆಯೂ ಕಳಪೆ ಅಡಿಕೆ ಅಂತ ನಿರ್ಣಯವಾಗಿ REJECTED ಅಂತ ರೆಡ್ ಲೇಬಲ್ ಅಂಟಿಸಿಕೊಂಡು ತಿರಸ್ಕೃತವಾಗಿದೆ. ಇದರ ಪರಿಣಾಮವಾಗಿ ಧಾರಣೆಯ ಬಿಸಿ ಕಂಪನ ಮತ್ತು ಕಳಪೆ ಅಪವಾದ APMC ಒಳಗಿನ ಅಡಿಕೆಗೂ ತಟ್ಟಿದೆ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version