Site icon Vistara News

Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Arecanut Import

ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳ್ಳ ದಾರಿಯಲ್ಲಿ ಅಡಿಕೆ ಆಮದು (Arecanut Import) ಆಗುತ್ತಿರುವುದು ಒಂದೋ ಎರಡೋ ಪ್ರಕರಣ ಅಲ್ಲ. ಕೆಲವು ವರ್ಷಗಳಿಂದ ಅನೇಕ ಪ್ರಕರಣಗಳು ಸುದ್ದಿ ಆಗುತ್ತಲೇ ಇವೆ. ಸುದ್ದಿ ಆಗುವುದು ಬೆಳಕಿಗೆ ಬಂದ ಪ್ರಕರಣಗಳು ಮಾತ್ರ! ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಕ್ರಮ ಅಡಿಕೆ ಭಾರತದ ಒಳಗೆ ಬಂದು ಉದುರುತ್ತಿದೆ! ಹಸಿ ಅಡಿಕೆ ಹೆಸರಿನಲ್ಲಿ ಫೇಕ್ ದರದ ಬಿಲ್ ಮಾಡಿ, ನಾಮಕಾವಸ್ತೆ ಆಮದು ಸುಂಕ ಕಟ್ಟಿ, ಅಡಿಕೆ ಭ್ರಷ್ಟ (Illegal transportation of arecanut) ಆಮದುದಾರರ ಮೂಲಕ ಗುಟ್ಕಾ ಕಂಪನಿಗಳಿಗೆ ಬಂದು ಸೇರುತ್ತಿವೆ.

ಸಾಗರದ ಮೂಲಕ 40 feet ಕಂಟೈನರ್‌ಗಳ ಮೂಲಕ ನೇರ ಪೋರ್ಟಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ. ಆಮದು ಆದ ಕೆಲವು ಕಳ್ಳ ಅಡಿಕೆ ಸೀಜ್ ಆಗುತ್ತದೆ. ಅವು ಮಾತ್ರ ಸುದ್ದಿ ಆಗುತ್ತದೆ. ಹೀಗೆ ಸಿಕ್ಕಿ ಹಾಕಿಕೊಂಡ ಅಡಿಕೆ ಮಾತ್ರ ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜ್ ಹಾಕಲಾಗುತ್ತದೆ. ಇಲ್ಲಿಯ ವರ್ತಕರು ಅದನ್ನು ಕಡಿಮೆ ಬೆಲೆಗೆ ಹರಾಜು ಹಿಡಿಯುತ್ತಾರಂತೆ. ಇದಲ್ಲದೆ ಈಶಾನ್ಯ ರಾಜ್ಯಗಳ ಗಡಿಯಿಂದಲೂ ರಾಜಾರೋಷವಾಗಿ ಅಡಿಕೆ ಕಳ್ಳಸಾಗಾಣಿಯಾಗಿ ಬರುತ್ತಿದೆ ಎಂದು ಅಲ್ಲಿನ ಮುಖ್ಯ ಮಂತ್ರಿಗಳೇ ಕೇಂದ್ರಕ್ಕೆ ಮಾಹಿತಿ ಕೊಡುತ್ತಿದ್ದಾರೆ.

ಇದನ್ನೂ ಓದಿ: Arecanut Insurance : ಮೆಣಸು, ಅಡಿಕೆಗೆ ವಿಮೆ ಪ್ರೀಮಿಯಂ ಕಟ್ಟಲು ಜು.31 ಕೊನೆಯ ದಿನ

ಭೂತಾನ್‌ನಿಂದ ಬರುತ್ತಿದೆ ಸಾವಿರಾರು ಟನ್ ಹಸಿ ಅಡಿಕೆ!

ಚೇಣಿ ವಹಿಸಿಕೊಂಡವರು ಅಡಿಕೆ ಕೊನೆಯನ್ನು ಊರಿನಿಂದ ಊರಿಗೆ ಸಾಗಿಸುವಷ್ಟೇ ಸರಳವಾಗಿ ವರ್ತಕರು ಶ್ರೀಲಂಕದಿಂದ ಅಕ್ರಮ ಕಳಪೆ ಸಿದ್ದ ಅಡಿಕೆಯನ್ನು ದೇಶದ ಕಸ್ಟಮ್ ಚಕ್ ಪೋಸ್ಟ್‌ನ್ನು ‘ಮಾಂತ್ರಿಕ’ ಮೋಡಿಯಲ್ಲಿ ಮೌನವಾಗಿಸಿ ಕದ್ದು ತರುತ್ತಾರೆ! ಅಡಿಕೆಯನ್ನು ಬೆಳೆಯದ ಅರಬ್ ದೇಶಗಳಿಂದ ಅಕ್ರಮವಾಗಿ ಭಾರತದ ಹರಿವಾಣಕ್ಕೆ ತಂದು ಸುರಿಯಲಾಗುತ್ತದೆ. ನೇಪಾಳ, ಬಾಂಗ್ಲಾ, ಇಂಡೋನೇಷಿಯಾ, ಯುಎಇ (UAE) ಗಳಿಂದ ಅಕ್ರಮ ಅಡಿಕೆ ಬಂದ ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ.

ಇಷ್ಟಾದರೂ ರಾಜ್ಯದ ಕೇಂದ್ರ ಸಂಸದರಾಗಲಿ, ರಾಜ್ಯದ ಶಾಸಕ-ಸಚಿವರುಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಬಾಯಿ ಬಿಡುವುದಿಲ್ಲ. ಅಡಿಕೆ ದರ ಕುಸಿಯುತ್ತಿದ್ದರೂ, ಅಡಿಕೆ ಬೆಳೆವ ಜಿಲ್ಲೆಗಳ ಜನಪ್ರತಿನಿಧಿಗಳದು ಮೌನ ಬಂಗಾರ! ಅಡಿಕೆ ಕೊಳೆ ರೋಗಕ್ಕೆ ಔಷಧಿ ಹೊಡೆದಂತೆ, ಅಕ್ರಮ ಅಡಿಕೆ ಆಮದು ರೋಗಕ್ಕೆ ನಿಯಮಿತವಾಗಿ ಸರಕಾರಕ್ಕೆ ಆಗ್ರಹ/ಮನವಿಗಳ ಔಷಧಿ ಹೊಡೆಯುತ್ತಿರಬೇಕು! ಅಕ್ರಮ ಅಡಿಕೆ ಆಮದು ರೋಗದ ವಿರುದ್ಧ ‘ನಿಯಂತ್ರಣಕ್ಕಾಗಿ’ ಕ್ಯಾಂಪ್ಕೋ, ಮ್ಯಾಮ್‌ಕೋಸ್, ಬೆಳೆಗಾರರ ಸಂಘಟನೆಗಳು ಆಗಾಗ ಮನವಿಯೊಂದಿಗೆ ಒತ್ತಾಯದ ಜತೆಗೆ ಬೋರ್ಡೋ ಸ್ಪ್ರೇ ಮಾಡುತ್ತಿರುತ್ತವೆ.

ಅಕ್ರಮದಿಂದಾಗಿಯೇ ಇಳಿಯಿತು ದರ

ಕಳೆದ ಎರಡು ತಿಂಗಳಲ್ಲಿ ರಾಶಿ ಇಡಿ ಅಡಿಕೆ ಅಕ್ರಮ ಆಮದು ರೋಗದ ಪರಿಣಾಮ ಕ್ವಿಂಟಾಲ್‌ಗೆ 5,000 ರೂ. ಇಳಿಕೆ ಕಂಡಿದೆ. ಅಕ್ರಮ ಆಮದು ರೋಗ ಬಂದು ಸ್ಥಳೀಯ ಅಡಿಕೆ ದರ ಕುಸಿದರೂ ಜನ ಪ್ರತಿನಿಧಿಗಳು ಬಹುಶಃ ಯಾವುದೋ ಸ್ವಾದಿಷ್ಟಭರಿತ ‘ತಾಂಬೂಲ’ ಸೇವನೆಯಿಂದ ಮಾತಾಡಲಾರದ ಪರಿಸ್ಥಿತಿಯಲ್ಲಿರಬಹುದು! ಅಡಿಕೆ ಆಕ್ರಮ ಆಮದು ರೋಗ ನಿಯಂತ್ರಣಕ್ಕೆ ಪೂರಕ ‘ವಾತಾವರಣ’ ನಿರ್ಮಾಣ ಆದೀತಾ ಎಂದು ಅಡಿಕೆ ಬೆಳೆಗಾರರು ಕಾಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version