Site icon Vistara News

ರೈತರನ್ನು ಆಕರ್ಷಿಸುತ್ತಿರುವ ಹೊಸ ಬೆಳೆ ಡ್ರ್ಯಾಗನ್‌ ಫ್ರೂಟ್‌

ಡ್ರ್ಯಾಗನ್‌ ಫ್ರೂಟ್‌

ಕೆಲವೊಮ್ಮೆ ದಿಕ್ಕು ತಪ್ಪಿಬೇರೆ ದಾರಿಯಲ್ಲಿ ಸಾಗಿದಾಗ ಜೀವನದ ದಿಕ್ಕೇ ಬದಲಾಗುವ ಸಾಧ್ಯತೆ ಇರುತ್ತದೆ! ಇದಕ್ಕೆ ಉದಾಹರಣೆ ಎಂದರೆ ಪಂಜಾಬ್‌ನ ಯುವ ರೈತ ಅಮನ್‌ದೀಪ್‌ ಸಿಂಗ್‌ ಸರಾವೊ.

23 ವರ್ಷದ  ಯುವ ರೈತ ಅಮನ್‌ದೀಪ್‌ ಸಿಂಗ್‌ ಗೆಳೆಯರೊಂದಿಗೆ ಗುಜರಾತ್‌ ಪ್ರವಾಸ ಕೈಗೊಂಡಿದ್ದರು. ಅವರಿದ್ದ ಕಾರು ಹೋಗಬೇಕಾದ ದಾರಿಬಿಟ್ಟು ಬೇರೆ ದಾರಿ ಹಿಡಿದಿತ್ತು. ಹೀಗೆ ದಿಕ್ಕು ತಪ್ಪಿ ಸಾಗುತ್ತಿದ್ದ ಅಮನ್‌ದೀಪ್‌ಗೆ  ರಸ್ತೆ ಬದಿಯಲ್ಲಿ ಬೆಳೆಯಲಾಗಿದ್ದ ಕಳ್ಳಿ ರೀತಿಯ ಗಿಡ ಕಣ್ಣಿಗೆ ಬಿತ್ತು. ಅದರಲ್ಲಿನ ಗುಲಾಬಿ ಬಣ್ಣದ ಹಣ್ಣುಗಳು ಆಕರ್ಷಿಸಿದವು.  ʼಏನಿರ ಬಹುದು ಇದು?ʼ ಎಂಬ ಕುತೂಹಲ. ಕಾರು ನಿಲ್ಲಿಸಿ ಕೆಳಗಿಳಿದು ನೋಡಿದರು, ಗೊತ್ತಾಗಲಿಲ್ಲ. ಪಂಜಾಬ್‌ನಲ್ಲಿ ಅವರು ಈ ರೀತಿಯ ಬೆಳೆ ನೋಡಿರಲಿಲ್ಲ. ಕೊನೆಗೆ ಅದನ್ನು ಬೆಳೆಯುತ್ತಿದ್ದ ರೈತರನ್ನೇ ಕೇಳಿದರು. ಆಗ ಅವರು ಹೇಳಿದ್ದು, ʼಇದು ಡ್ರ್ಯಾಗನ್‌ ಫ್ರೂಟ್‌ʼ!

ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುವ ಅಮೆರಿಕ ಮೂಲದ ಈ ಹಣ್ಣು ಅಮನ್‌ ದೀಪ್‌ ಅವರ ಜೀವನದ ದಿಕ್ಕನೇ ಬದಲಾಯಿಸುತ್ತದೆ ಎಂದು ಅಂದು ಅವರೂ ಯೋಚಿಸಿರಲಿಲ್ಲ!

ಗುಜರಾತ್‌ ಪ್ರವಾಸದ ಸಂದರ್ಭದಲ್ಲಿ ಅವರು ಈ ಹಣ್ಣು ಬೆಳೆಯುವ ಇನ್ನಷ್ಟು ರೈತರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು.  ಯೂಟ್ಯೂಬ್‌, ಸಾಮಾಜಿಕ ಜಾಲತಾಣಗಳನ್ನು ಜಾಲಾಡಿ, ಈ ಹಣ್ಣಿನ ಬೆಳೆಯುವುದು ಹೇಗೆಂದು ತಿಳಿದುಕೊಂಡರು. ಭಾರತದಲ್ಲಿ ಹಾಗೂ ನಮ್ಮ ನೆರೆ-ಹೊರೆ ದೇಶಗಳಲ್ಲಿ ಆರೋಗ್ಯಕ್ಕೆ ಅತ್ಯುಪಯುಕ್ತವಾದ ಈ ಹಣ್ಣು ಬೆಳೆಯಲಾಗುತ್ತಿದೆ. ಇದು ಬರಡುನಾಡಿನಲ್ಲಿ ಬೆಳೆಯಬಹುದಾದ ʼಬಂಗಾರʼ ಎಂಬುದು ಅವರಿಗೆ ಮನದಟ್ಟಾಗಿತ್ತು. ಮಾರುಕಟ್ಟೆಯಲ್ಲಿ ವಿಚಾರಿಸಿದರು, ಒಂದು ಕೆಜಿ ಡ್ರ್ಯಾಗನ್‌ ಫ್ರೂಟ್‌ಗೆ 200 ರಿಂದ 300  ರೂ. ಬೆಲೆಯಿದೆ ಎಂದು ಗೊತ್ತಾಯಿತು.

ಡ್ರ್ಯಾಗನ್‌ ಫ್ರೂಟ್‌ ಗಿಡ

ಮಹಾರಾಷ್ಟ್ರ, ಹೈದರಾಬಾದ್‌ ನಲ್ಲಿಯೂ ಇದನ್ನು ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಕಲೆ ಹಾಕಿದರು. ಕುತೂಹಲಕ್ಕೆ ಆರಂಭವಾದ ಹೊಸ ಬೆಳೆಯ ಕುರಿತ ಅವರ ಹುಡುಕಾಟ ಕೊನೆಗೆ “ ನಾವೇಕೆ ಈ ಬೆಳೆ ಬೆಳೆಯಬಾರದು” ಎಂಬ ಪ್ರಶ್ನೆ ಹುಟ್ಟಲು ಕಾರಣವಾಯಿತು. ಪಂಜಾಬ್‌ನಲ್ಲಿದ್ದ ತಮ್ಮ 2 ಎಕರೆ ಹೊಲದಲ್ಲಿ ಪ್ರಯೋಗ ಆರಂಭಿಸಿಯೇ ಬಿಟ್ಟರು. ಬೆಳೆ ಬಿತ್ತಿದ ಮಾತ್ರಕ್ಕೆ ಫಸಲು ಬರಲು ಅದೇನು ಸಾಂಪ್ರದಾಯಿಕ ಬೆಳೆಯಾಗಿರಲಿಲ್ಲ.

ನೀರೋ, ಗೊಬ್ಬರವೋ, ಹವಮಾನವೋ ಹೆಚ್ಚು ಕಡಿಮೆಯಾಗಿ ಡ್ರ್ಯಾಗನ್‌ ಫ್ರೂಟ್‌ ಗಿಡ ಮೇಲೇಳಲೇ ಇಲ್ಲ. ಆದರೆ ಅಮನ್‌ದೀಪ್‌ ಸಿಂಗ್‌ ನಿರಾಶರಾಗಿ ಕೈಕಟ್ಟಿ ಕೂರಲಿಲ್ಲ. ಕಾರಣ ಹುಡುಕಲು ಮತ್ತೆ ಈ ಬೆಳೆ ಬೆಳೆಯುತ್ತಿದ್ದವರನ್ನು ಸಂಪರ್ಕಿಸಿದರು, ನೀವೇಷ್ಟು ಗೊಬ್ಬರ ಹಾಕುತ್ತೀರಿ, ಎಷ್ಟು ನೀರು ಒದಗಿಸುತ್ತೀರಿ ಎಂದೆಲ್ಲಾ ಕೇಳಿ ತಿಳಿದುಕೊಂಡರು ಒಂದಲ್ಲ, ಎರಡಲ್ಲ, ಮೂರು ವರ್ಷಗಳಾದ ನಂತರ ಡ್ರ್ಯಾಗನ್‌ ಫ್ರೂಟ್‌ ಅವರ ಕೈ ಹಿಡಿಯಿತು. ʼʼನಮ್ಮಲ್ಲಿ ಜಾಸ್ತಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೆವು. ಕೊನೆಗೆ ಈ ಬೆಳೆ ಬೆಳೆಯುತ್ತಿದ್ದ ರೈತರ ಸಲಹೆಯಂತೆ ಸಾವಯವ ಪದ್ಧತಿಯನ್ನುಅಳವಡಿಸಿಕೊಂಡು ಗೆದ್ದೆʼʼ ಎನ್ನುತ್ತಾರೆ ಅಮನ್‌ದೀಪ್‌ ಸಿಂಗ್‌.

ಈಗ ಅವರು 12 ರೀತಿಯ ಡ್ರ್ಯಾಗನ್‌ ಫ್ರೂಟ್‌ ಬೆಳೆಯುತ್ತಿದ್ದಾರೆ. ಎಕರೆಗೆ ಏನಿಲ್ಲವೆಂದರೂ ನಾಲ್ಕು ಲಕ್ಷ ರೂ. ಲಾಭ ಬರುತ್ತಿದೆ. ಮುಂದೆ ಡ್ರ್ಯಾಗನ್‌ ಫ್ರೂಟ್‌ ಗಿಡ ದೊಡ್ಡದಾದ ಮೇಲೆ ಲಾಭ ಇನ್ನಷ್ಟು ಹೆಚ್ಚಬಹುದು ಎನ್ನುತ್ತಾರೆ ಅವರು. ಸೋಲುಗಳು ಎದುರಾದರೂ ಈ ಹಣ್ಣನ್ನು ಬೆಳೆಯಲೇಬೇಕೆಂಬ ಚಲ ಅವರನ್ನು ಕೊನೆಗೂ ಗೆಲ್ಲಿಸಿದೆ.

ಏನಿದು ಡ್ರ್ಯಾಗನ್‌ ಫ್ರೂಟ್‌?

ಡ್ರ್ಯಾಗನ್‌ ಫ್ರೂಟ್‌ ಎಂದ ಕೂಡಲೇ ಎಲ್ಲರೂ ಇದು ಚೀನಾದ ಹಣ್ಣಿರಬೇಕೆಂದು ಕೊಳ್ಳುತ್ತಾರೆ. ಆದರೆ ಖಂಡಿತಾ ಇದಕ್ಕೂ ಚೀನಾಕ್ಕೂ ಸಂಬಂಧವಿಲ್ಲ. ಚೀನಿಯರ ಕಾಲ್ಪನಿಕ, ಬೆಂಕಿಯನ್ನುಗುಳುವ ಪ್ರಾಣಿ ಡ್ರ್ಯಾಗನ್‌ನಂತೆ ಇದು ಕೂಡ ಆಕರ್ಷಣೀಯವಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಹೆಚ್ಚಾಗಿ ಮೆಕ್ಸಿಕೋ, ವಿಯೆಟ್ನಾಂ, ಥೈಲ್ಯಾಂಡ್ ದೇಶಗಳಲ್ಲಿ ಬೆಳೆದು ರಫ್ತು ಮಾಡಲಾಗುತ್ತದೆ. ಗುಲಾಬಿ ಬಣ್ಣದ ಈ ಹಣ್ಣು ಬಿಳಿ ಮತ್ತು ಕಪ್ಪು ಬೀಜಗಳನ್ನು ಹೊಂದಿರುತ್ತದೆ. ಹಸಿರು ಎಲೆಗಳ ನಡುವಿನ ಈ ಹಣ್ಣು ಎಲ್ಲರನ್ನೂ ಆಕರ್ಷಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ  ಈ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಒಂದು ಹಣ್ಣಿನಲ್ಲಿ 1.2 ಗ್ರಾಂ ಪ್ರೋಟಿನ್‌ ಇರುತ್ತದೆ. ಜತೆಗೆ 3 ಗ್ರಾಂ ಫೈಬರ್‌, ವಿಟಮಿನ್‌ ಸಿ, ಕಬ್ಬಿಣ, ಮ್ಯಾಗ್ನೀಷಿಯಂ ಅನ್ನು ಹೊಂದಿರುತ್ತದೆ.  ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಗ್ಯಾಸ್ಟ್ರಿಕ್‌, ಅಜೀರ್ಣತೆ  ಸೇರಿದಂತೆ ಹಲವು ಕಾಯಿಲೆಗಳಿಗೆ ಈ ಹಣ್ಣು ರಾಮ ಬಾಣವಾಗಿದೆ. ಅಲ್ಲದೆ ಇದರ ಸಿಪ್ಪೆ  ಚರ್ಮ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿರುತ್ತದೆ. ಸಾಮಾನ್ಯವಾಗಿ ಎಲ್ಲ ಸೂಪರ್‌ ಮಾರುಕಟ್ಟೆಯಲ್ಲಿ ಸ್ವಲ್ಪ ಹುಳಿ ಮತ್ತು ಸಿಹಿಯನ್ನು ಹೊಂದಿರುವ ಈ ಹಣ್ಣು ದೊರೆಯುತ್ತದೆ.

ನಮ್ಮಲ್ಲಿಯೂ ಬೆಳೆಯುತ್ತಾರೆ!

ಡ್ರ್ಯಾಗನ್‌ ಫ್ರೂಟ್‌ ರಾಜ್ಯದ ಮಟ್ಟಿಗೆ ಹೊಚ್ಚ ಹೊಸ ಬೆಳೆಯೇನೂ ಅಲ್ಲ. ಈಗಾಗಲೇ ಅಮನ್‌ದೀಪ್‌ ಸಿಂಗ್‌ರಂತೆ ರಾಜ್ಯ ಅನೇಕ ರೈತರು ಇದನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಗುಮ್ಮಕಲ್‌ ಗ್ರಾಮದ ರೈತ ರಾಮರೆಡ್ಡಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯ ರೈತ ರಾಜಶೇಖರ ದ್ರೋಣವಲ್ಲಿ ಸೇರಿದಂತೆ ಗದಗ, ದಾವಣಗೆರೆ, ತುಮಕೂರಿನಲ್ಲಿ ಅನೇಕ ರೈತರು ಈಗಾಗಲೇ ಗುಲಾಬಿ ಬಣ್ಣದ ಈ ಹಣ್ಣನ್ನು ಬೆಳೆಯುತ್ತಿದ್ದಾರೆ.

ಇದನ್ನೂ ಓದಿ | ಮಾವು ನೋಡಿದರೆ ಸಿಹಿ.. ಬೆಲೆ ಕೇಳಿದರೆ  ಕಹಿ..

ತುಮಕೂರಿನ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕಾ ಸಂಸ್ಥೆ (ಸಿಎಚ್‌ಇಎಸ್‌) ಡ್ರ್ಯಾಗನ್‌ ಫ್ರುಟ್‌ ಬೆಳೆಯಲು ರೈತರನ್ನು ಆಕರ್ಷಿಸುತ್ತಿದೆ. ಈ ಕೇಂದ್ರದಲ್ಲಿ 1 ಎಕರೆಯಲ್ಲಿ ಡ್ರ್ಯಾಗನ್‌ ಹಣ್ಣಿನ ಬೇಸಾಯದ ಸಂಶೋಧನೆ ನಡೆಸಲಾಗುತ್ತಿದ್ದು, ಪ್ರತಿ ವರ್ಷ ಕ್ಷೇತ್ರೋತ್ಸವ ನಡೆಸಿ ಈ ಹಣ್ಣಿನ ಬೆಳೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. (ಸಂಶೋಧನಾ ಕೇಂದ್ರದ ಮಾಹಿತಿಗೆ ವೆಬ್‌: https://www.iihr.res.in/)

ಮರಳು ಮಿಶ್ರಿತ, ಕಡಿಮೆ ನೀರಿರುವ ಮಣ್ಣಿನಲ್ಲಿ ಈ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಒಮ್ಮೆ ನಿಟ್ಟರೆ ಈ ಗಿಡ ಸುಮಾರು 20 ವರ್ಷ ಹಣ್ಣು ಬಿಡುತ್ತಿರುತ್ತದೆ.  ಉಷ್ಣವಲಯದ ಹವಾಮಾನಕ್ಕೆ 40-60 ಸೆಂ.ಮೀ ವಾರ್ಷಿಕ ಮಳೆಯೊಂದಿಗೆ ಬೆಳವಣಿಗೆಗೆ ಸೂಕ್ತವಾಗಿರುತ್ತದೆ. 20°C- 30°C ವರೆಗಿನ ತಾಪಮಾನವು ಬೆಳೆ ಬೆಳೆಯಲು ಉತ್ತಮವೆಂದು ಪರಿಗಣಿಸಲಾಗಿದೆ.

Exit mobile version