Site icon Vistara News

Leaf Spot Disease | ಅಡಿಕೆ ಎಲೆ ಚುಕ್ಕಿ ರೋಗದ ಕುರಿತು ಇಸ್ರೇಲ್‌ ವಿಜ್ಞಾನಿಗಳ ಜತೆ ಚರ್ಚಿಸಲಿರುವ ಸಚಿವ ಮುನಿರತ್ನ

Leaf Spot Disease ಅಡಿಕೆ ತೋಟ ರೋಗ

ಸುಳ್ಯ : ಅಡಿಕೆ ತೋಟವನ್ನು ಕಾಡುತ್ತಿರುವ ಎಲೆ ಚುಕ್ಕಿ ರೋಗದ (Leaf Spot Disease) ಬಗ್ಗೆ ಕೇಂದ್ರ ಸರ್ಕಾರ ನೇಮಿಸಿದ ತಜ್ಞರ ತಂಡ ಅಧ್ಯಯನ ನಡೆಸುತ್ತಿರುವಾಗಲೇ ಈ ರೋಗದ ಕುರಿತು ಇಸ್ರೇಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಲು ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ನಿರ್ಧರಿಸಿದ್ದಾರೆ.

ಮುಂದಿನ ತಿಂಗಳು ಇಸ್ರೇಲ್ ಪ್ರವಾಸ ಕೈಗೊಳ್ಳಲಿರುವ ಅವರು ಅಲ್ಲಿನ ವಿಜ್ಞಾನಿಗಳೊಂದಿಗೆ ಈ ರೋಗದ ಬಗ್ಗೆ ಚರ್ಚಿಸುತ್ತೇನೆ. ಇದಕ್ಕಾಗಿ ರೋಗ ಪೀಡಿತ ಅಡಿಕೆ ಸೋಗೆ, ಮರದ ಮಾದರಿಗಳನ್ನು ಸಂಗ್ರಹಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಭಾನುವಾರ ಎಲೆಚುಕ್ಕಿ ರೋಗ ಬಾಧೆಯಿಂದ ಅಡಿಕೆ ತೋಟ ಸಂಪೂರ್ಣ ನಾಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ವಿವಿಧ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ ನಂತರ ಸಚಿವರು ಈ ಸೂಚನೆ ನೀಡಿದ್ದಾರೆ.

ಬಂದರು, ಮೀನುಗಾರಿಕೆ ಹಾಗು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅವರ ಜೊತೆಯಲ್ಲಿ ಸಚಿವ ಮುನಿರತ್ನ ಅವರು ವಿವಿಧ ತೋಟಗಳಿಗೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿದರು. ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿ ತೋಟ ನಾಶವಾಗಿರುವ ಕೃಷ್ಣ ಕಿಶೋರ್ ಅಡಿಕೆಹಿತ್ಲು, ವೆಂಕಟ್ರಮಣ‌ ಅಂಗಡಿಮಜಲು, ವಿಶ್ವಾಸ್ ಹಾಗು ವಶಿಷ್ಠ ಮಾಪಲತೋಟ ಅವರ ತೋಟಗಳನ್ನು ಸಚಿವರಿಬ್ಬರು ವೀಕ್ಷಿಸಿದರು.
ಹಳದಿ ರೋಗ, ಚುಕ್ಕಿ ಎಲೆ ಬಾದಿಸಿದ ಅಡಿಕೆ ಮರದ‌ ಸೋಗೆ, ಅಡಿಕೆಗಳನ್ನು ಪರಿಶೀಲಿಸಿ ಕೃಷಿಕರಿಂದ‌ ಮಾಹಿತಿ ಪಡೆದರು.

ಕಳೆದ ಹಲವು ವರ್ಷಗಳಿಂದ ಮರ್ಕಂಜ ಭಾಗದಲ್ಲಿ ಹಳದಿ ರೋಗ ಬಾದೆ, ಬೇರು ಹುಳ ಬಾದೆ ಇದೆ‌ ಕಾಣಿಸಿಕೊಂಡಿದೆ. ಇದೀಗ ಎಲೆ ಚುಕ್ಕಿ ರೋಗವು ವ್ಯಾಪಕವಾಗಿ‌ ಹಬ್ಬಿದೆ. ಹಳದಿ ಪೀಡಿತ ತೋಟಗಳಲ್ಲಿ ಎಲೆಚುಕ್ಕಿ ವೇಗವಾಗಿ ಹರಡುತ್ತಿದೆ. ಹಳದಿ ಎಲೆ ಪೀಡಿತ ತೋಟಗಳು ಕೆಲವು ವರ್ಷ ಫಸಲು ನೀಡುತ್ತವೆ. ಆದರೆ ಎಲೆ ಚುಕ್ಕಿ ಬಾದಿಸಿದ‌ ತೋಟಗಳು ಬಹಳ ಬೇಗ ನಾಶವಾಗುತ್ತಿದೆ ಎಂದು ಬೆಳೆಗಾರರು ಸಚಿವರಿಗೆ ವಿವರಿಸಿದರು.

ನಿರಂತರ ಸಂಶೋಧನೆ ನಡೆಸಿ‌ ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಸರಕಾರ‌ ಮಾಡುತ್ತದೆ ಎಂದು ಸಚಿವರು ಕೃಷಿಕರಿಗೆ‌ ಭರವಸೆ ನೀಡಿದರು. ಕೃಷಿಕರಿಗೆ ಹಳದಿ ರೋಗ ಹಾಗು ಎಲೆಚುಕ್ಕಿ ರೋಗದಿಂದ‌ ಬಹು ದೊಡ್ಡ ನಷ್ಟ ಆಗಿದೆ ಎಂದು ಸರಕಾರಕ್ಕೆ‌ ಮನವರಿಕೆ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ‌ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರಾ ಗುಂಡಿ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕದಿರೇ ಗೌಡ, ಮೈಸೂರು ವಿಭಾಗ ಜಂಟಿ ನಿರ್ದೇಶಕ ನಾಗರಾಜ್ ಎಂ, ಜಿಲ್ಲಾ ಉಪನಿರ್ದೇಶಕ ಹೆಚ್.ಆರ್.ನಾಯಕ್, ಮಂಗಳೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್.ಕೆ, ಸುಳ್ಯ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನ ಮತ್ತಿತರರು ಪಿ.ಕೆ.ಉಪಸ್ಥಿತರಿದ್ದರು.

ಇದನ್ನೂ ಓದಿ | ಅಡಿಕೆ ಎಲೆ ಚುಕ್ಕಿ ರೋಗ | ಮಲೆನಾಡ ರೋಗ ಪೀಡಿತ ತೋಟಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ

Exit mobile version