Site icon Vistara News

ಸಾವಯವ ಜೇನುತುಪ್ಪ ಮಾರಿ ಗೆದ್ದ ಉತ್ತರ ಪ್ರದೇಶದ ಜೇನು ಕೃಷಿಕ ನಿಮಿತ್‌ ಸಿಂಗ್‌

National Beekeeping & Honey Mission (NBHM)

ಆಗಸ್ಟ್‌ ತಿಂಗಳ ʻಮನ್‌ ಕಿ ಬಾತ್‌ʼ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಜೇನುಸಾಕಣೆ ಮತ್ತು ಮಧು ಮಿಷನ್‌ ಬಗ್ಗೆ ಮಾತನಾಡುತ್ತಾ ಕೆಲವು ಪ್ರಗತಿಪರ ಜೇನು ಕೃಷಿಕರ ಹೆಸರು ಹೇಳಿದ್ದರು. ಆ ಪಟ್ಟಿಯಲ್ಲಿ ಇದ್ದ ಪ್ರಮುಖ ಹೆಸರೆಂದರೆ ಉತ್ತರ ಪ್ರದೇಶದ ನಿಮಿತ್‌ ಸಿಂಗ್‌ ಅವರದ್ದು. ಸಾಮಾಜಿಕ ಬದಲಾವಣೆಗಳಿಗೂ ಕಾರಣರಾಗಿರುವ ನಿಮಿತ್‌ ಸಿಂಗ್‌ ಸಾಧನೆ ಬಹಳ ದೊಡ್ಡದು. ಅವರ ಈ ಶ್ರಮವನ್ನು ಪ್ರಧಾನಿ ಮೋದಿ ಕೂಡ ಗುರುತಿಸಿದ್ದಾರೆ.

ಎಂಜಿನಿಯರಿಂಗ್‌ ಪದವೀಧರರಾಗಿರುವ ನಿಮಿತ್‌, ತಮ್ಮ ತಂದೆಯ ಸಲಹೆಯ ಮೇರೆಗೆ ಜೇನು ಕೃಷಿಯನ್ನು ಆರಂಭಿಸಿದವರು. ಇದಕ್ಕೂ ಮೊದಲು ದೇಶದ ಉದ್ದಗಲಕ್ಕೂ ಸಂಚರಿಸಿ, ಜೇನು ಕೃಷಿಯ ಹಲವಾರು ಮಗ್ಗುಲುಗಳನ್ನು ಶೋಧಿಸಿದರು. ೨೦೧೩ರಲ್ಲಿ ಸಾವಯವ ಪದ್ಧತಿಯಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡು, ಲಖನೌದಲ್ಲಿ ʻಮಧುಮಖ್ಖಿವಾಲಾʼ ಎಂಬ ಉದ್ದಿಮೆಯನ್ನು ಸ್ಥಾಪಿಸಿದರು.

ಆದರೆ ಆರಂಭದ ದಿನಗಳು ಸುಗಮವಾಗಿ ಇರಲಿಲ್ಲ. ಜೇನು ತುಪ್ಪದ ಹೆಸರಿನಲ್ಲಿ ಕಲಬೆರಕೆಯ ಮಾಲು ಮಾರುಕಟ್ಟೆಯಲ್ಲಿ ಬೇಕಾದಷ್ಟು ಲಭ್ಯವಿರುವುದರಿಂದ, ಇವರ ಸಾವಯವ ಜೇನುತುಪ್ಪವನ್ನು ಮಾರಾಟ ಮಾಡುವುದು ಕಷ್ಟವಾಗಿತ್ತು. ಮೊದಲೆರಡು ವರ್ಷಗಳು ಹಿನ್ನಡೆ ಅನುಭವಿಸಿದ ಮೇಲೆ, ಉತ್ಪಾದನೆ ಮತ್ತು ಮಾರಾಟವನ್ನು ಒಂದಕ್ಕೊಂದು ಪ್ರತ್ಯೇಕಿಸುವ ನಿರ್ಧಾರಕ್ಕೆ ನಿಮಿತ್‌ ಬಂದರು.

ʻʻಆರಂಭಿಕ ಹಿನ್ನಡೆಯ ನಂತರ, ಬೇರೆ ಬೇರೆ ರಾಜ್ಯಗಳಿಂದ ಜೇನು ಕೃಷಿಕರನ್ನು ನಮ್ಮ ಉದ್ದಿಮೆಯತ್ತ ಸೆಳೆಯಲು ನಿರ್ಧರಿಸಿದ್ದೆವು. ಜೇನು ಪೆಟ್ಟಿಗೆ ಸೇರಿದಂತೆ, ಜೇನು ಕೃಷಿಗೆ ಬೇಕಾದಂಥ ಸಕಲ ಸಲಕರಣೆಗಳನ್ನೂ ನಾವೇ ಅವರಿಗೆ ಒದಗಿಸಿ, ಅಗತ್ಯ ತರಬೇತಿಯನ್ನೂ ನೀಡಲಾರಂಭಿಸಿದೆವು. ಆನಂತರ ಅವರಲ್ಲಿಂದ ಬಂದ ಮಧುವನ್ನು ಬಾರಾಬಂಕಿಯಲ್ಲಿರುವ ನಮ್ಮ ಉದ್ದಿಮೆಯ ಘಟಕಕ್ಕೆ ತಂದು, ಸೋಸಿ, ಬಾಟಲಿ ತುಂಬುತ್ತಿದ್ದೆವು. ಇಂದು ಬೇರೆ ಬೇರೆ ರಾಜ್ಯಗಳ ೫೦೦ಕ್ಕೂ ಹೆಚ್ಚಿನ ಜೇನು ಕೃಷಿಕರು ನಮ್ಮೊಂದಿಗೆ ಕೈಗೂಡಿಸಿದ್ದಾರೆ. ಈಗ ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಜೇನುತುಪ್ಪ ದೊರೆಯುತ್ತದೆʼʼ ಎಂದು ನಿಮಿತ್‌ ಹೇಳಿದ್ದಾರೆ.

National Beekeeping & Honey Mission (NBHM)

ʻʻಜೇನು ಕೃಷಿಯಲ್ಲಿ ಅನುಭವ ಇರುವ ರೈತರು ನಮ್ಮೊಂದಿಗೆ ಕೈಜೋಡಿಸಲು ಹಿಂದೇಟು ಹಾಕಿದ್ದರಿಂದ, ಹೊಸ ಮತ್ತು ಅನನುಭವಿ ಕೃಷಿಕರನ್ನು ಸಂಪರ್ಕಿಸಿದೆವು. ಇದಕ್ಕೆ ಅಗತ್ಯ ಸಲಕರಣೆ, ತರಬೇತಿಯನ್ನೂ ನೀಡಿದೆವು. ಮಾತ್ರವಲ್ಲ, ಅವರು ಉತ್ಪಾದಿಸಿದ ಮಧುವಿನಲ್ಲಿ ಶೇ. ೨೦ರಷ್ಟನ್ನು ಅವರೇ ಮಾರಬೇಕು. ಅಂದರೆ ೧೦೦ ಬಾಟಲಿ ಜೇನುತುಪ್ಪವನ್ನು ರೈತನೊಬ್ಬ ಉತ್ಪಾದಿಸಿದರೆ, ೨೦ ಬಾಟಲಿಯನ್ನು ಅವರೇ ಮಾರಬೇಕು ಎಂಬ ನಿಯಮ ರೂಪಿಸಿದೆವು. ಇದರಿಂದ ಜೇನುತುಪ್ಪದ ಗುಣಮಟ್ಟ ಕಾಪಾಡಿಕೊಳ್ಳುವುದು ಸಾಧ್ಯವಾಯಿತುʼʼ ಎಂದು ತಮ್ಮ ಯಶಸ್ವೀ ಕಾರ್ಯತಂತ್ರದ ಬಗ್ಗೆ ಅವರು ವಿವರಿಸಿದ್ದಾರೆ.

ಇದೆಲ್ಲದರ ಜೊತೆಗೆ ಮುಖ್ಯವಾದ ಸಾಮಾಜಿಕ ಬದಲಾವಣೆಯೊಂದಕ್ಕೂ ನಿಮಿತ್‌ ಕಾರಣರಾಗಿದ್ದಾರೆ. ಸಮೀಪದ ಚೈನ್‌ಪುರ್ವಾ ಗ್ರಾಮವೀಗ ಜೇನು ಮೇಣದಿಂದ ಹಣತೆ ತಯಾರಿಸುವ ದೊಡ್ಡ ಕೇಂದ್ರವಾಗಿ ಬೆಳೆಯುತ್ತಿದೆ. ಮೊದಲಿಗೆ ಅಕ್ರಮ ಮದ್ಯ ತಯಾರಿಕೆ ಕುಖ್ಯಾತವಾಗಿದ್ದ ಈ ಗ್ರಾಮ ಈಗ ದೊಡ್ಡಮಟ್ಟದಲ್ಲಿ ಬದಲಾವಣೆಗೆ ತೆರೆದುಕೊಂಡಿದೆ. ಇಲ್ಲಿನ ಹೆಂಗಸರು ಮತ್ತು ಯುವಕರು ಜೇನುಮೇಣದ ಹಣತೆ ತಯಾರಿಕೆಯಲ್ಲಿ ಹಣ ಕಾಣುತ್ತಿದ್ದಾರೆ. ಬಾರಾಬಂಕಿ ಜಿಲ್ಲಾಡಳಿತ ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ʻಮಿಷನ್‌ ಕಾಯಕಲ್ಪʼ ಎಂಬ ಉಪಕ್ರಮದ ಅಡಿಯಲ್ಲಿ, ತಯಾರಿಕೆ ಆರಂಭಿಸಿದ ಮೊದಲ ವರ್ಷದಲ್ಲೇ ಸುಮಾರು ೧೨ ಲಕ್ಷ ಹಣತೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗಿದೆ.

ʻʻಈ ಗ್ರಾಮದ ಸುತ್ತಲೂ ನದಿ ಹರಿಯುತ್ತದೆ. ಹಾಗಾಗಿ ಅದನ್ನು ದಾಟಿ ವ್ಯಾಪಾರ-ವಹಿವಾಟು ನಡೆಸಲು ಗ್ರಾಮಸ್ಥರು ಉತ್ಸಾಹ ತೋರಿರಲಿಲ್ಲ. ಆದರೆ ಈಗ ʻಮಧುಮಖ್ಖಿವಾಲಾʼ ಸಂಸ್ಥೆಯ ಮೂಲಕ ನಾವೇ ಅವರಿಗೆ ಕಚ್ಚಾ ವಸ್ತುಗಳನ್ನು ನೀಡಿ, ಸಿದ್ಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ಗ್ರಾಮದ ಯುವಕರಿಗೂ ಮಾರಾಟದಲ್ಲಿ ತರಬೇತಿ ನೀಡಿದ್ದೇವೆ. ಅವರೀಗ ಅಕ್ರಮ ಕೆಲಸಗಳನ್ನೆಲ್ಲಾ ಬಿಟ್ಟು ಪ್ರೀತಿಯಿಂದ ದುಡಿಯುತ್ತಿದ್ದಾರೆʼʼ ಎಂದು ನಿಮಿತ್‌ ಹೆಮ್ಮೆಯಿಂದ ಹೇಳುತ್ತಾರೆ.

ʻʻಜೇನ್ನೊಣಗಳ ಸಂರಕ್ಷಣೆ ನನ್ನ ಮುಖ್ಯ ಉದ್ದೇಶಗಳಲ್ಲಿ ಒಂದು. ಭೂಮಿಯ ಮೇಲಿನ ಕಡೆಯ ಜೇನ್ನೊಣ ಮರೆಯಾಯಿತೆಂದರೆ ಭೂಮಿಗೇ ಅವಸಾನ ಎಂದರ್ಥ. ಅವುಗಳಿಗೆ ಹಾನಿ ಮಾಡದಂತೆ ಮಧುವನ್ನು ಮಾತ್ರ ತೆಗೆದು ಹಾಗೆಯೇ ಬಿಟ್ಟರೆ, ಅವು ಮತ್ತೆ ಜೇನುತುಪ್ಪವನ್ನು ಉತ್ಪಾದನೆ ಮಾಡುತ್ತವೆ. ಮಾತ್ರವಲ್ಲ, ಸಾವಿರಾರು ಹೂವುಗಳಿಗೆ ಪರಾಗಸ್ಪರ್ಶ ಮಾಡಿ ಫಲವತ್ತತೆಗೆ ಕಾರಣವಾಗುತ್ತವೆʼʼ ಎಂಬುದು ನಿಮಿತ್‌ ಅವರ ತಿಳುವಳಿಕೆಯ ಮಾತು.

ಏನಿದು ಕೇಂದ್ರ ಸರ್ಕರದ ಯೋಜನೆ?
ರಾಷ್ಟ್ರೀಯ ಜೇನುಕೃಷಿ ಮತ್ತು ಮಧು ಮಿಷನ್‌  (National Beekeeping and Honey Mission- NBHM) ಕೇಂದ್ರ ಸರ್ಕಾರದ ಒಂದು ಯೋಜನೆ. ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರ 2020 ರಲ್ಲಿ ಈ ಯೋಜನೆಯನ್ನು ಘೋಷಿಸಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಡಿಯಲ್ಲಿ ರಾಷ್ಟ್ರೀಯ ಜೇನುನೊಣ ಮಂಡಳಿ (ಎನ್‌ಬಿಬಿ) ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದು 2023 ರವರೆಗೆ ಜಾರಿಯಲ್ಲಿರುವ ( 3 ವರ್ಷಗಳ ಕಾಲ) ಯೋಜನೆಯಾಗಿದೆ. ಕೃಷಿ ಮತ್ತು ಕೃಷಿಯೇತರ ಕುಟುಂಬಗಳಿಗೆ ಆದಾಯ ಒದಗಿಸುವುದು ಮತ್ತು ಉದ್ಯೋಗವನ್ನು ಸೃಷ್ಟಿಸುವುದು, ಜೇನುಸಾಕಣೆ ಉದ್ಯಮವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಮೂಲಕ ತೋಟಗಾರಿಕೆ/ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ದೇಶದಲ್ಲಿ ʻಸಿಹಿ ಕ್ರಾಂತಿʼ ಮಾಡುವ ಉದ್ದೇಶದಿಂದ, ʻರಾಷ್ಟ್ರೀಯ ಜೇನುಕೃಷಿ ಮತ್ತು ಮಧು ಮಿಷನ್‌ʼ ಎಂಬ ಹೊಸ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ವೈಜ್ಞಾನಿಕವಾಗಿ ಜೇನು ಕೃಷಿ ನಡೆಸುವುದಕ್ಕೆ ಪ್ರೋತ್ಸಾಹ ನೀಡಿದೆ. ಈ ಬಗ್ಗೆ ವಿವರಿಸುವಾಗ ಪ್ರಧಾನಮಂತ್ರಿ ಮೋದಿ ಅವರು, ನಿಮಿತ್‌ ಹೆಸರು ಉಲ್ಲೇಖಿಸಿದ್ದರು. ಕಳೆದ ೯ ವರ್ಷಗಳಿಂದ ಸುಸ್ಥಿರವಾಗಿ ಜೇನು ಕೃಷಿಯ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ನಿಮಿತ್‌ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶ ಸರಕಾರ ಮತ್ತು ಬಾರಾಬಂಕಿ ಜಿಲ್ಲಾಡಳಿತ ಸಹ ಇವರ ಸಾಧನೆಯನ್ನು ಪುರಸ್ಕರಿಸಿವೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಶಿರಸಿಯ ʻಮಧುʼಕೇಶ್ವರ್‌ ಹೆಗಡೆ ಅವರ ಹೆಸರನ್ನೂ ಪ್ರಸ್ತಾಪಿಸಿದ್ದರು. ಸರಕಾರದಿಂದ ಸಬ್ಸಿಡಿ ಪಡೆದು ೫೦ ಜೇನುಗೂಡುಗಳನ್ನು ತಂದಿಟ್ಟುಕೊಂಡಿದ್ದ ಇವರು ಈಗ ೮೦೦ ಜೇನು ಕುಟುಂಬಗಳನ್ನು ಸಾಕುತ್ತಿದ್ದಾರೆ. ಟನ್‌ಗಟ್ಟಲೆ ಜೇನನ್ನು ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ| ಮಧುವಿನಿಂದಲೇ ಬದುಕು ಕಟ್ಟುವ ಮಧುಕೇಶ್ವರ್‌ ಹೆಗಡೆ: ಮೋದಿ ಹೇಳಿದ ಈ ಸಾಹಸಿ ʻಜೇನುʼಗಾರ ಯಾರು?

Exit mobile version