Site icon Vistara News

Plastic Mulching: ವಿಸ್ತಾರ ಗ್ರಾಮ ದನಿ: ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ ಬಳಕೆಯ ಸೈಡ್‌ ಎಫೆಕ್ಟ್‌ ಎಷ್ಟೊಂದು!

Plastic Mulching
-ಅರವಿಂದ ಸಿಗದಾಳ್, ಮೇಲುಕೊಪ್ಪ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ) ಬಗ್ಗೆ ಚರ್ಚೆ (plastic mulching) ನಡೆಯುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್ ಬಳಕೆಯೂ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಅನುಕೂಲ ಮತ್ತು ತೊಂದರೆ ಎರಡೂ ಇವೆ. ಈ ಹಿನ್ನೆಲೆಯಲ್ಲಿ ಚರ್ಚೆಗೆ ಪೂರಕವಾಗಿ ಒಂದಿಷ್ಟು ಸಂಗ್ರಹಿತ ವಿಷಯಗಳು ಇಲ್ಲಿ ಕೊಟ್ಟಿದ್ದೇನೆ.

ಪ್ಲಾಸ್ಟಿಕ್ ಮಲ್ಚಿಂಗ್ ಅನುಕೂಲಗಳು

  1. ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಅದನ್ನು ಹೆಚ್ಚು ಕಾಲ ಕಾಯ್ದುಕೊಳ್ಳುತ್ತದೆ.
  2. ತೇವಾಂಶ ಮತ್ತು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ.
  3. ಸಸ್ಯ ಪೋಷಕಾಂಶಗಳ ನಷ್ಟವನ್ನು ಮಿತಿಗೊಳಿಸುತ್ತದೆ, ಇಳುವರಿ ಹೆಚ್ಚಾಗುತ್ತದೆ.
  4. ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಅನುಕೂಲ.
  5. ಕಳೆಗಳ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಕಳೆಗಳು ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಸೂರ್ಯನ ಬೆಳಕನ್ನು ಪಡೆಯುವುದನ್ನು ಪ್ಲಾಸ್ಟಿಕ್ ಮಲ್ಚಿಂಗ್ ತಡೆಯುತ್ತದೆ.

ತೊಂದರೆಗಳು ಸಾಕಷ್ಟಿವೆ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಎಷ್ಟು ಅನುಕೂಲಗಳಿವೆಯೋ ಅದಕ್ಕಿಂತ ಹತ್ತು ಪಟ್ಟು, ನೂರು ಪಟ್ಟು ತೊಂದರೆಗಳಿವೆ. ಅನುಕೂಲಗಳು ತಕ್ಷಣಕ್ಕೆ ಸಿಗುವಂತವುಗಳಾದರೆ, ತೊಂದರೆಗಳು ದೀರ್ಘಕಾಲಿಕ.
ಪ್ಲಾಸ್ಟಿಕ್ ಸವಕಳಿಯಾಗುವುದಕ್ಕೆ, ನಾಶವಾಗುವುದಕ್ಕೆ ಶತಮಾನಗಳೇಬೇಕು. ಆದರೆ, ಭೂಮಿಗೆ ತಾಗಿಸಿದ ದಿನದಿಂದಲೇ ನಿಧಾನವಾಗಿ ಸವಕಳಿಯ ಕ್ರಿಯೆ ಆರಂಭವಾಗುತ್ತದೆ. ವಿಭಜನೆಗೊಂಡ ಪ್ಲಾಸ್ಟಿಕ್‌ನ ಕಣಗಳು ಮಣ್ಣಿನ ಫಲವತ್ತತೆಗೆ ಭಯಾನಕ ವಿಷವೇ ಸರಿ. ಸ್ನಾನದ ಮನೆಯಲ್ಲಿ ಸೋಪಿನ ಒಂದು ಸಣ್ಣ ಹನಿ ತೇವವಿದ್ದ ಜಾಗದಲ್ಲಿ ಬಿದ್ದಾಗ ಹೇಗೆ ವಿಸ್ತರಿಸುತ್ತದೋ, ಅದೇ ರೀತಿ ಪ್ಲಾಸ್ಟಿಕ್‌ನ ಕಣಗಳು ಭೂಮಿಯಲ್ಲಿ ಬಿದ್ದಾಗ ಮಣ್ಣಿನಲ್ಲಿ ಅದು ವಿಸ್ತರಿಸುತ್ತಾ… ಮಣ್ಣು ವಿಷವಾಗುತ್ತಾ ಹೋಗುತ್ತದೆ. ಹೌದು, ಈ ಕ್ರಿಯೆ ತುಂಬ ನಿಧಾನವಾದ ಗತಿಯಲ್ಲಿ ನೆಡೆಯುವುದು. ಒಂದು ರೀತಿಯಲ್ಲಿ ಸ್ಲೋ ಪಾಯಿಸನ್. ಕೆಲವು ಸಮಯದವರೆಗೆ ಇರುವೆ, ಏಡಿ, ಎರೆಹುಳುಗಳು ಮತ್ತು ಅನೇಕ ಸೂಕ್ಷ್ಮ ಜೀವಿಗಳು ಈ ಪ್ಲಾಸ್ಟಿಕ್‌ನ್ನು ಆಶ್ರಯವಾಗಿಸಿಕೊಂಡು ಬದುಕಬಹುದು. ಆದರೆ ಯಾವಾಗ ಪ್ಲಾಸ್ಟಿಕ್‌ನ ಸವಕಳಿ ನಿಧಾನವಾಗಿ ಹೆಚ್ಚಾಗುತ್ತದೋ… ಆಗ ಯಾವ ಜೀವ ಜಂತುಗಳೂ, ಸೂಕ್ಷ್ಮ ಜೀವಿಗಳೂ ಅಲ್ಲಿ ಬದುಕಲಾರವು. ಪೆಟ್ರೋಲಿಯಂ ಪ್ರಾಡಕ್ಟ್‌ನ ಉತ್ಪನ್ನವಾದ ಪ್ಲಾಸ್ಟಿಕ್ ರಾಸಾಯನಿಕ ಕಣಗಳು ಮಣ್ಣಿನ ಫಲವತ್ತತೆಯನ್ನು ಶಾಶ್ವತವಾಗಿ ನಾಶಮಾಡುತ್ತದೆ. ಮಣ್ಣನ್ನು ಬರಡಾಗಿಸುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ಮಲ್ಚಿಂಗ್ ತೊಂದರೆಗಳು ಹಲವಾರಿವೆ.

ಪ್ಲಾಸ್ಟಿಕ್ ಮಲ್ಚಿಂಗ್ ಅನಾನುಕೂಲಗಳು

ಪ್ಲಾಸ್ಟಿಕ್ ಮಲ್ಚ್ ಮಣ್ಣನ್ನು ಪರಿಣಾಮಕಾರಿಯಾಗಿ ಬೆಚ್ಚಗಾಗಿಸುತ್ತದೆ, ಮಣ್ಣಿನ ತಾಪಮಾನವನ್ನು ಬದಲಾಯಿಸುವುದು ಎಲ್ಲಾ ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಬೆಳೆಗಳು ಮಣ್ಣಿನ ತಾಪಮಾನಕ್ಕೆ ಸಾಕಷ್ಟು ಸಂವೇದನಾಶೀಲವಾಗಿರುತ್ತವೆ ಆದ್ದರಿಂದ ಮಣ್ಣಿನ ಬೆಚ್ಚಗಾಗುವಿಕೆಯೂ ಅನೈಸರ್ಗಿಕವಾದಾಗ ಅದೂ ಅಪಾಯಕಾರಿಯೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಪೆಟ್ರೋಲಿಯಂ-ಆಧಾರಿತ ವಸ್ತುಗಳಿಂದ ಪಡೆಯಲಾಗಿದೆ, ಇದು ಉತ್ಪಾದನೆಗೆ ದುಬಾರಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಕಾರಕವಾಗಿದೆ.

ಸೂರ್ಯನ ಬೆಳಕು-ಶಾಖ, ಗಾಳಿ, ನೀರು ಅಥವಾ ಇನ್ಯಾವುದೋ ಕಾಸ್ಮಿಕ್ ಎನರ್ಜಿಗಳಿಂದ ಮಣ್ಣಿನಲ್ಲಿ ಸಹಜವಾಗಿ ನೆಡೆಯುವ “ವಿಧಿ’ವತ್ತಾದ ರಾಸಾಯನಿಕ ಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದ ಕಡಿಮೆ ಆಗಬಹುದು ಅಥವಾ ತಟಸ್ಥವಾಗಬಹುದು ಮತ್ತು ಪರಿಣಾಮವಾಗಿ ಮಣ್ಣಿನ ಮೇಲೆ ದೀರ್ಘಕಾಲದ ಅಪಾಯ ಉಂಟಾಗಬಹುದು. ಮಣ್ಣಿನ ಸಹಜ ಸಂವೇದನಾಶೀಲತೆ ಅಥವಾ ನೈಸರ್ಗಿಕವಾಗಿ ಮಣ್ಣಿನಲ್ಲಿ ನೆಡೆಯುವ ಸಹಜವಾದ ರಾಸಾಯನಿಕ ಪ್ರಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದಾಗಿ ಅತಿ ವೇಗವನ್ನು ಪಡೆದು ವಿಪರೀತವಾಗಿ ಋಣಾತ್ಮಕ ಪರಿಣಾಮ ಉಂಟಾಗಬಹುದು.

ಮಲ್ಷಿಂಗ್ ಮಾಡುವ ಪ್ಲಾಸ್ಟಿಕ್ ವೇಸ್ಟ್‌ಗಳು ಮರು ಬಳಕೆ ಮಾಡಲು ಸೂಕ್ತವಲ್ಲದ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ 3-4 ವರ್ಷಗಳ ನಂತರ ಮರುಬಳಕೆಯಾಗದ ಒಂದು ಬೃಹತ್ ತ್ಯಾಜ್ಯವಾಗುವ ಈ ಪ್ಲಾಸ್ಟಿಕ್ ಭೂಮಿಗೆ ಒಂದು ಶಾಶ್ವತ ಅಪಾಯಕಾರಿ ವಸ್ತು. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ನ್ನು ಕೃಷಿಯಲ್ಲಿ ಬಳಸುವುದು ಪ್ರಪಂಚದ-ಪರಿಸರದ ದೃಷ್ಟಿಯಿಂದ ಒಳ್ಳೆಯದಲ್ಲ. ಬಳಸಿ, ತ್ಯಾಜ್ಯವಾದ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡುವುದು ಕಷ್ಟ.

ಮಣ್ಣಿಗೆ ಹೆಚ್ಚಿನ ಆರ್ದ್ರತೆಯು ಯಾವಾಗಲೂ ಉತ್ತಮವಲ್ಲ, ಮತ್ತು ಅತಿಯಾದ ಆರ್ದ್ರತೆಯು ಭಯಾನಕ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ತೇವಾಂಶವು ನೀರು ಮತ್ತು ಬೆಳೆಗಳನ್ನು ಮುಳುಗಿಸಬಹುದು.
ಆರ್ದ್ರ ಬೆಳವಣಿಗೆಯ ಪರಿಸ್ಥಿತಿಗಳು ಮಾಲಿನ್ಯ ಮತ್ತು ರೋಗಕ್ಕೆ ಕಾರಣವಾಗಬಹುದು. ಅಡಿಕೆ ತೋಟದಲ್ಲಿನ ಕೊಳೆ, ಎಲೆಚುಕ್ಕಿ ಇತ್ಯಾದಿಗಳ ಫಂಗಸ್‌ಗಳ ಉತ್ಪತ್ತಿಗೂ ಪ್ಲಾಸ್ಟಿಕ್ ಮಲ್ಚಿಂಗ್ ಕಾರಣವಾಗಬಹುದು.

ಮಲ್ಚಿಂಗ್ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣ, ದೀರ್ಘಬಾಳಿಕೆಗಳಿಗಾಗಿ ಬಳಸುವ ಕೆಮಿಕಲ್‌ಗಳು ಮಣ್ಣಿಗೆ ವಿಷಕಾರಿಗಳಾಗಿರಬಹುದು. ಜತೆಗೆ ಗೊಬ್ಬರವಾಗಿ ಬಳಸುತ್ತಿರುವ, ಪೆಸ್ಟಿಸೈಡ್, ಇನ್ಸೆಕ್ಟಿಸೈಡ್, ಫಂಗಿಸೈಡ್ ಕೆಮಿಕಲ್‌ಗಳೊಂದಿಗೆ ಮಲ್ಚಿಂಗ್ ಪ್ಲಾಸ್ಟಿಕ್ ಕೆಮಿಕಲ್‌ಗಳು ಸೇರಿ ಗದ್ದೆ ತೋಟಗಳು ಮತ್ತಷ್ಟು ಮಾಲಿನ್ಯವಾಗಬಹುದು. ಪರೋಕ್ಷವಾಗಿ ತಿನ್ನುವ ಆಹಾರ ಪದಾರ್ಥಗಳು ಮತ್ತಷ್ಟು ವಿಷವಾಗಬಹುದು.

ಪ್ಲಾಸ್ಟಿಕ್ ಮಲ್ಚಿಂಗ್ ಸಾವಯವ ಪದ್ದತಿಗೆ ವಿರುದ್ದವಾದ ಕ್ರಮ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಇರುವೆ, ಚಿಕ್ಳಿಯಿರುವೆ, ಏಡಿ, ಎರೆಹುಳುಗಳಿಗೆ ದೀರ್ಘಾವದಿಯಲ್ಲಿ ಅಪಾಯಕಾರಿ ಆಗಬಹುದು. ಮಣ್ಣಿನ ಅಗತ್ಯ ಸೂಕ್ಷ್ಮ ಜೀವಿಗಳೂ ನಾಶವಾಗಬಹುದು.

ಸಾವಯವ ತ್ಯಾಜ್ಯಗಳು ಮಣ್ಣಿನ ಜೊತೆ ಬೆರೆಯುವುದಕ್ಕೆ, ಗೊಬ್ಬರವಾಗಿ ಮಣ್ಣಿನ ಜೊತೆ ಸಂಯೋಜನೆಗೊಳ್ಳುವುದಕ್ಕೆ, ಸಾವಯವ ತ್ಯಾಜ್ಯಗಳಲ್ಲಿನ ಕಾರ್ಬನ್, ಪೋಶಕಾಂಶಗಳು ಮಣ್ಣಿನಲ್ಲಿ ಮಿಳಿತವಾಗುವುದಕ್ಕೆ ಪ್ಲಾಸ್ಟಿಕ್ ಮಲ್ಚಿಂಗ್‌ನಲ್ಲಿರುವ ಕೆಮಿಕಲ್ ಮತ್ತು ನೀರು, ಗಾಳಿ ಮತ್ತು ಉಷ್ಣತೆಗಳನ್ನು ವ್ಯತ್ಯಾಸಗೊಳಿಸುವ ಶಕ್ತಿ ತಡೆ ಒಡ್ಡಬಹುದು.

ಪ್ಲಾಸ್ಟಿಕ್‌ ಕಡಿಮೆ ಮಾಡಲೇಬೇಕಿದೆ

ಹಾಗಾಗಿ ಪ್ಲಾಸ್ಟಿಕ್ ಬಗ್ಗೆ ನಾವು ಅಂತರ ಕಾಪಾಡಿಕೊಳ್ಳಬೇಕಾದ, ಜಾಗೃತಿಗೊಳ್ಳಬೇಕಾದ ಒಂದು ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪರಿಸರ, ಹವಾಮಾನ ವೈಪರೀತ್ಯ, ಪ್ರತೀ ಮನೆಯಲ್ಲೂ ಷೋಕೇಸ್‌ನ ಒಂದು ಭಾಗ ಪುಟ್ಟ ಮೆಡಿಕಲ್ ಶಾಪ್ ಆಗುತ್ತಿರುವ ಅನಿವಾರ್ಯತೆಯ ನಮ್ಮ ಅನಾರೋಗ್ಯಗಳನ್ನು ಗಮನಿಸುತ್ತ ಪ್ಲಾಸ್ಟಿಕ್ ಬಗ್ಗೆ, ಅದನ್ನು ನಮ್ಮ ಜೀವನದಲ್ಲಿ ಗ್ರಾಮ್ ಗಳಷ್ಟಾದರೂ ಕಮ್ಮಿ ಮಾಡುವ ಬಗ್ಗೆ ಯೋಚಿಸಬೇಕಾಗಿದೆ.:
ಪ್ಲಾಸ್ಟಿಕ್ ಅತಿ ಬಳಕೆಯಿಂದಾಗಿ ಹವಾಮಾನ ಬಿಕ್ಕಟ್ಟನ್ನು ಹೆಚ್ಚು ತೀವ್ರಗೊಳಿಸುತ್ತಿದ್ದೇವೆ. ಅಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಅವುಗಳ ತ್ಯಾಜ್ಯದಿಂದ ನಮ್ಮ ವಾತಾವರಣದಲ್ಲಿ ವಿಷದ ಸಾಂದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಪರಿಣಾಮ ನಿತ್ಯ ಅನಾರೋಗ್ಯರಾಗುತ್ತಿದ್ದೇವೆ, ಬೇಗನೆ ಸಾವಿನ ಕಡೆಗೆ ವಾಲುತ್ತಿದ್ದೇವೆ.
ಪ್ಲಾಸ್ಟಿಕ್ ಎಂಬ ‘ಭಸ್ಮಾಸುರ”ನ ಸುಡುವ ಕರವನ್ನು ನಮ್ಮ ತಲೆ ಮೇಲೆ ನಾವೇ ಇಟ್ಟುಕೊಳ್ಳುತ್ತಿದ್ದೇವೆ. ಆ ಭಸ್ಮಾಸುರ ಕರಗಳು ಪರಿಸರವನ್ನು, ನಮ್ಮನ್ನೂ ಸೇರಿದಂತೆ ಜೀವ ಸಂಕುಲಗಳ ಆರೋಗ್ಯವನ್ನು, ಆಯಸ್ಸನ್ನು ಸುಡುತ್ತಿವೆ. ಸುಡುವುದನ್ನು ತಡೆಯುವ ಯಾವ ಮಲ್ಚಿಂಗ್ ಹೊದಿಕೆಗಳೂ ನಮ್ಮ ತಲೆ ಮೇಲೆ ಇಲ್ಲ!

Exit mobile version