Site icon Vistara News

Book Excerpt: ಮೈ ನಡುಗಿಸಿದ ಯೂರಿಯಾ ಪ್ರಕರಣ

book excerpt

ವೃತ್ತಿಯಲ್ಲಿ ಪ್ರಾಣಿವೈದ್ಯರಾಗಿರುವ ಡಾ.ಗವಿಸ್ವಾಮಿ ಎನ್.‌ ಅವರು ಬರೆದ ಕೃತಿ ʼಪ್ರಾಣಿಗಳೇ ಗುಣದಲಿ ಮೇಲು.ʼ ಗ್ರಾಮೀಣ ಪ್ರದೇಶದ ಪಶುವೈದ್ಯರೊಬ್ಬರ ಅನುಭವದ ಹಿನ್ನೆಲೆಯಲ್ಲಿ ಮೂಡಿಬಂದ ಈ ಕೃತಿಯಲ್ಲಿ ವಿಡಂಬನೆ, ತಿಳಿಹಾಸ್ಯ, ಅಸಹಾಯಕತೆ, ರೋಚಕತೆ ಎಲ್ಲವೂ ಬೆರೆತಿವೆ. ಈ ಕೃತಿಯಿಂದ ಆಯ್ದ ಭಾಗ ಇಲ್ಲಿದೆ.

ಆಸ್ಪತ್ರೆಯಲ್ಲಿದ್ದಾಗ ಒಂದು ಕರೆ ಬಂತು. “ನಮ್ ದನ್ಗಳು ಯೂರಿಯಾ ನೀರು ಕುಡುಬುಟ್ಟು ಒದ್ದಾಡ್ತಾ ಅವೆ, ಒಸಿ ಬ್ಯಾಗ್ನೆ ಬನ್ನಿ ಸಾ” ಅತ್ತಲಿಂದ ಹೆಂಗಸಿನ ಗದ್ಗದಿತ ದನಿ ಕೇಳಿ ಬಂತು. ನಾನು ತಡಬಡಾಯಿಸಿಕೊಂಡು, ನನ್ನ ಔಷಧಿ ಚೀಲಕ್ಕೆ ಇದ್ದಬದ್ದ ಸಲೈನ್ ಬಾಟಲಿಗಳನ್ನೆಲ್ಲ ತುಂಬಿಕೊಂಡು ಆಸ್ಪತ್ರೆಯಿಂದ ಹೊರಟೆ.

ದಾರಿಯಲ್ಲಿ ದಿನಸಿ ಅಂಗಡಿಯಲ್ಲಿ ವಿನೆಗಾರ್ ಸೀಸೆಗಳನ್ನು ಖರೀದಿಸಿ, ತುಂಬಿದ ಬಸುರಿಯಂತಿದ್ದ ಔಷಧಿ ಚೀಲದ ಮೇಲೆ ಇಟ್ಟುಕೊಂಡು ವೇಗವಾಗಿ ಬೈಕನ್ನು ಚಲಾಯಿಸಿದೆ. ಊರನ್ನು ದಾಟಿದ ನಂತರ, ಕಾಡಂಚಿನ ದುರ್ಗಮ ಹಾದಿಯಲ್ಲಿ ಪ್ರಯಾಣಿಸಿ ಘಟನಾ ಸ್ಥಳಕ್ಕೆ ತಲುಪಬೇಕಾಗಿತ್ತು. ಎರಡು ಕಿ.ಮೀ. ಉದ್ದದ ಕೊರಕಲು ಓಣಿಯಲ್ಲಿ ಅನಿವಾರ್ಯವಾಗಿ ನನ್ನ ಬೈಕಿನ ವೇಗಕ್ಕೆ ಕಡಿವಾಣ ಬಿದ್ದಿತು.

ಆಗ ನಾನು ಕೆಲಸಕ್ಕೆ ಸೇರಿ ಎರಡುಮೂರು ವರ್ಷಗಳಾಗಿದ್ದವು ಅಷ್ಟೇ. ಆ ಸ್ಥಳ ತಲುಪಿದಾಗ ಕಂಡ ಘನಘೋರ ದೃಶ್ಯ ನನ್ನನ್ನು ಈಗಲೂ ಬೆಚ್ಚಿ ಬೀಳಿಸುತ್ತದೆ.

ಇನ್ನಷ್ಟು ಓದಿಗೆ: Book Excerpt: ಅವನ ನೋಟ ಕಲೆಗೆ ಮೆಚ್ಚುಗೆಯೋ, ನನ್ನ ಮೇಲಿನ ಪ್ರೀತಿಯೋ?

ಒಂದು ಎಕರೆಯಷ್ಟು ಅಗಲದ ಕೂಳೆ (ಆಗಷ್ಟೇ ಫಸಲು ತೆಗಿದಿದ್ದ ಜಮೀನಿನಲ್ಲಿ ಮೂರು ರಾಸುಗಳು ಕಾಲು ಬಡಿದುಕೊಂಡು ಒದ್ದಾಡುತ್ತಿದ್ದವು. ಮೂರು ಜಾನುವಾರುಗಳೂ ಮೂರು ದಿಕ್ಕಿನಲ್ಲಿ ಬಿದ್ದಿದ್ದವು. ಜಾನುವಾರುಗಳ ಮಾಲೀಕಳ ಆಕ್ರಂದನ ನನ್ನನ್ನು ನಡುಗಿಸಿತು. ಆಕೆ ಜಮೀನಿನಲ್ಲಿ ಮಣ್ಣನ್ನು ಎತ್ತಿ ತಲೆಗೆ ಹುಯ್ದುಕೊಂಡು, ಗಂಟಲು ಹರಿದುಕೊಂಡು ಕಿರುಚುತ್ತಿದ್ದಳು. ಇನ್ನೇನು ಸಾಯುವುದರಲ್ಲಿದ್ದ ಹಸು-ಕರುಗಳ ಮೇಲೆ ಬಿದ್ದು ಗೋಳಾಡುತ್ತಿದ್ದಳು. ನನ್ನೆದುರಿಗೆ ಬಿದ್ದು ಒರಳಾಡುತ್ತಾ, ಹಸುಕರುಗಳನ್ನು ಉಳಿಸುವಂತೆ ಅಂಗಲಾಚುತ್ತಿದ್ದಳು.

ನನಗೆ ಆಕೆಯನ್ನು ಸಮಾಧಾನಪಡಿಸುವುದೇ ದೊಡ್ಡ ಸವಾಲಾಗಿತ್ತು. ನನ್ನ ಪರಿಸ್ಥಿತಿಯನ್ನು ನೆನೆದು ದುಃಖವಾಯಿತು. ಯಾಕಾದರೂ ಇಂತಹ ಸನ್ನಿವೇಶಕ್ಕೆ ಸಿಲುಕಿಕೊಂಡೆನೋ ಎಂದು ಮರುಗಿದೆ. ಆದರೆ ಕರ್ತವ್ಯ ಪ್ರಜ್ಞೆ ನನ್ನನ್ನು ಧೃತಿಗೆಡಲು ಬಿಡಲಿಲ್ಲ. ಆಕೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಂತೆ ಅಲ್ಲಿ ನೆರೆದಿದ್ದ ಒಂದಿಬ್ಬರು ಹೆಂಗಸರಿಗೆ ವಿನಂತಿಸಿದೆ. ಇಲ್ಲಿಂದಲ್ಲಿಗೆ ಧೂಳೆಬ್ಬಿಸಿಕೊಂಡು ಹುಚ್ಚು ಹಿಡಿದವಳಂತೆ ಓಡಾಡುತ್ತಿದ್ದಳು. ಆ ವಿಶಾಲ ಜಮೀನಿನಲ್ಲಿ ಆಕೆಯನ್ನು ಹಿಡಿಯುವುದೇ ಕಷ್ಟವಾಗಿತ್ತು. ಅಲ್ಲಿಂದಿಲ್ಲಿಗೆ, ಕೊನೆಗೂ ಅವರು ಆಕೆಯನ್ನು ಕಂಟ್ರೋಲಿಗೆ ತೆಗೆದುಕೊಂಡು ಸಮಾಧಾನಿಸತೊಡಗಿದರು.

ನಾನು ಮುಳ್ಳು ಗಿಡಗಳ ನಡುವೆ ರಭಸದಿಂದ ಓಡಾಡುತ್ತಾ ಮೂರೂ ರಾಸುಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದೆ. ಒಂದು ನಡುಮಟ್ಟದ ಹೋರಿ ಕರು ತೀವ್ರ ಚಿಂತಾಜನಕವಾಗಿ ಒದ್ದಾಡುತ್ತಿತ್ತು. ಇನ್ನೊಂದು ಕಡಸಿನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿ ಇರಲಿಲ್ಲ . ಅದರ ಹೊಟ್ಟೆ ಪಿಪಾಯಿಯಂತೆ ಉಬ್ಬರಿಸಿಕೊಂಡಿತ್ತು. ದೂರದ ಮೂಲೆಯಲ್ಲಿ ಇನ್ನೊಂದು ಹಸು ನಾಲ್ಕೂ ಕಾಲುಗಳನ್ನು ಚಾಚಿಕೊಂಡು ಬಿದ್ದಿತ್ತು. ತೀವ್ರವಾಗಿ ಏದುಸಿರು ಬಿಡುತ್ತಿತ್ತು. ಅದರ ಪರಿಸ್ಥಿತಿಯೂ ಗಂಭೀರವಾಗಿತ್ತು.

ಯಾವುದಕ್ಕೆ ಚಿಕಿತ್ಸೆ ನೀಡಬೇಕೆಂಬುದೇ ನನಗೆ ತೋಚಲಿಲ್ಲ. ಆ ಸಂದಿಗ್ಧ ಪರಿಸ್ಥಿತಿಯಲ್ಲಿ, ಹಾಲು ಕರೆಯುವ ಹಸುವನ್ನೇ ಮೊದಲು ಕಾಪಾಡಲು ಪ್ರಯತ್ನಿಸಲು ತೀರ್ಮಾನಿಸಿದೆ. ಇನ್ನೆರಡು ರಾಸುಗಳತ್ತ ತಿರುಗಿ ಮನದಲ್ಲೇ ಕ್ಷಮೆಯಾಚಿಸಿದೆ.

ಅಲ್ಲಿದ್ದ ಇಬ್ಬರು ಮೂವರು ರೈತರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಸುವಿನ ಕತ್ತನ್ನು ಮೇಲಕ್ಕೆ ಎತ್ತಿ ಹಿಡಿದುಕೊಂಡರು. ಅದಕ್ಕೆ ಸಲೈನ್ ಬಾಟಲಿಗಳನ್ನು ಜೋಡಿಸಿ ಜೀವರಕ್ಷಕ ಇಂಜೆಕ್ಷನ್ನುಗಳನ್ನು ನೀಡಿದೆ. ಹೊಟ್ಟೆಯ ಗಾಳಿ ತೆಗೆದು ಉಸಿರಾಟವನ್ನು ಸರಾಗಗೊಳಿಸಿದೆ. ಮತ್ತೆರಡರ ಪರಿಸ್ಥಿತಿ ಹೇಗಿದೆ ಎಂದು ನೋಡಲು ಅವುಗಳತ್ತ ಓಡಿದೆ. ಹೋರಿಕರು ಕೊನೆಯ ಸೆಕೆಂಡುಗಳನ್ನು ಎಣಿಸುತ್ತಿತ್ತು. ಅದರ ದೊಡ್ಡ ಜೀವ ಆಗಲೇ ಹೊರಟು ಹೋಗಿತ್ತು. ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಆಕೆಗೆ ಹೇಳಿದೆ.

ಹಸುವನ್ನಾದರೂ ಉಳಿಸಿ ಸಾ ಎಂದು ಅಂಗಲಾಚಿದಳು. ಆಕೆಯ ಕೆದರಿದ ತಲೆ, ಮುಖದ ಮೇಲಿನ ಧೂಳನ್ನು ನೋಡಿ ನನಗೆ ಭಯ ದುಃಖಗಳು ಒಟ್ಟಿಗೇ ಆವರಿಸಿದವು. ನಾನು ಇನ್ನೊಂದು ಕಡಸಿನತ್ತ ಓಡುತ್ತಿರುವಾಗಲೇ, ಹೋರಿ ಸತ್ತುಹೋಯ್ತು ಎಂದು ಯಾರೋ ಬೆನ್ನ ಹಿಂದೆ ಕೂಗಿದರು. ಆಗ ಆ ಕಡಸೂ ಕೂಡ ಹೆಚ್ಚಕಡಿಮೆ ಸಾವಿನ ದವಡೆಗೆ ಸಿಲುಕಿ ಆಗಿತ್ತು.

ಯೂರಿಯಾ ಜಾನುವಾರುಗಳನ್ನು ಯಾವ ರೀತಿ ತೀವ್ರ ವಿಷವಾಗಿ ಕೊಲ್ಲುತ್ತದೆ ಎಂಬುದನ್ನು ಓದಿ ತಿಳಿದುಕೊಂಡಿದ್ದೆ ಅಷ್ಟೇ. ಆದರೆ ಅಂದು ಆ ಬಟಾಬಯಲಿನ ಪ್ರಯೋಗ ಶಾಲೆಯಲ್ಲಿ ಅದರ ಘೋರ ರೂಪದ ದರ್ಶನ ಆಯಿತು.

ಆಕೆ ಅಂದು ರಾಸುಗಳನ್ನು ಮೇಯಿಸಿಕೊಂಡು ಊರಿಗೆ ವಾಪಸ್ ಆಗುತ್ತಿರುವಾಗ ಮಾಮೂಲಿನಂತೆ ಪಕ್ಕದ ಜಮೀನಿನಲ್ಲಿದ್ದ ನೀರಿನ ಡ್ರಮ್ಮಿನಲ್ಲಿ ಮೂರು ರಾಸುಗಳಿಗೂ ನೀರು ಕುಡಿಸಿದ್ದಳು. ಆಕೆಯ ದುರಾದೃಷ್ಟಕ್ಕೆ, ಜಮೀನಿನ ಮಾಲೀಕ ಪೈರುಗಳಿಗೆ ಡ್ರಿಪ್ ಮೂಲಕ ಸಿಂಪಡಿಸಲು ಡ್ರಮ್ಮಿಗೆ ಯೂರಿಯಾ ಬೆರೆಸಿದ್ದು ಆಕೆಗೆ ಗೊತ್ತಾಗಲಿಲ್ಲ. ಆ ಸಂದರ್ಭದಲ್ಲಿ ಆತ ಅಲ್ಲಿ ಇರಲಿಲ್ಲ. ರಾಸುಗಳೂ ಕೂಡ ರುಚಿಕರ ಯೂರಿಯಾ ನೀರನ್ನು ಚಪ್ಪರಿಸಿಕೊಂಡು ಕುಡಿದಿದ್ದವು.

ಇದನ್ನೂ ಓದಿ: Book Excerpt : ಯಕ್…!‌

ಯೂರಿಯಾ ಹಸುವಿನ ಹೊಟ್ಟೆಗೆ ಸೇರಿದ ತಕ್ಷಣವೇ ವಿಷಕಾರಿ ಅಮೋನಿಯಾ ಆಗಿ ಪರಿವರ್ತನೆಗೊಳ್ಳುತ್ತದೆ. ರಕ್ತನಾಳಗಳ ಮೂಲಕ ಅಂಗಾಂಗಗಳನ್ನು ವ್ಯಾಪಿಸಿ ನಂಜಾಗಿ ಕೊಲ್ಲುತ್ತದೆ. ಹಾಗಾಗಿ ಯಾವ ಪ್ರಮಾಣದಲ್ಲಿ ಯೂರಿಯಾ ಹಸುವಿನ ಹೊಟ್ಟೆಯನ್ನು ಸೇರಿದೆ ಹಾಗು ಅದರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಮೇಲೆ ಹಸುವಿನ ಅಳಿವು ಉಳಿವು ತೀರ್ಮಾನವಾಗುತ್ತದೆ. ಮೊದಲ ಇಪ್ಪತ್ತುಮೂವತ್ತು ನಿಮಿಷಗಳು ಮಹತ್ವದ ಅವಧಿ, ಆ ಘಳಿಗೆಯಲ್ಲಿ ನಾವು ಹೋರಾಡಿ ಹಸುವನ್ನು ಬದುಕಿಸಿಕೊಂಡರೆ ಅದೊಂದು ಪವಾಡವೇ ಸರಿ.

ಆ ಕಡಸಿಗೂ ಜೀವರಕ್ಷಕ ಔಷಧಿಗಳನ್ನು ಹಾಕುವ ವ್ಯರ್ಥ ಪ್ರಯತ್ನ ಮಾಡಿದೆ. ಅದೂ ಕೂಡ ಒಂದೆರಡು ನಿಮಿಷಗಳಲ್ಲಿ ತೇಲುಗಣ್ಣು ಮೇಲುಗಣ್ಣು ಮಾಡಿ ಕಾಲುಗಳನ್ನು ನೆಟ್ಟಗೆ ಚಾಚಿ ನನ್ನ ಹಸ್ತಗಳ ಮೇಲೆ ಅಸುನೀಗಿತು. ಬಿಸಿಲಿಗೆ ಒಣಗಿದ್ದ ನನ್ನ ಕಣ್ಣುಗಳು ಚೂರು ತೇವವಾಗಿ ಮತ್ತೆ ಒಣಗಿದವು. ಏತನ್ಮಧ್ಯೆ ನಿರಂತರ ಚಿಕಿತ್ಸೆಯ ಪರಿಣಾಮ ಆ ಹಸುವಿಗೆ ನಿಧಾನವಾಗಿ ಪ್ರಜ್ಞೆ ಬರತೊಡಗಿತು. ನಿಧಾನವಾಗಿ ಕತ್ತು ಎತ್ತಿತು. ಕತ್ತು ಸ್ವಾಧೀನಕ್ಕೆ ಬಂದಿತು.

ಇದೇ ಸೂಕ್ತ ಸಮಯವೆಂದು ವಿನೇಗಾರ್ ಕುಡಿಸಿದೆ. ಬೇಕರಿಗಳಲ್ಲಿ ಬನ್‌ಗಳನ್ನು ತಯಾರಿಸಲು ಬಳಸುವ ವಿನೇಗಾರಿನಲ್ಲಿ ಇರುವ ಅಸಿಟಿಕ್ ಆಸಿಡಿಗೆ ಹಸುವಿನ ಹೊಟ್ಟೆಯಲ್ಲಿ ಅಮೋನಿಯಾದ ದುಷ್ಪರಿಣಾಮಗಳನ್ನು ತಿಳಿಗೊಳಿಸುವ ಶಕ್ತಿ ಇದೆ. ಯೂರಿಯಾವನ್ನು ಶೇ. 2ರ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಒಣ ಮೇವಿಗೆ ಮಿತವಾಗಿ ಸಿಂಪಡಿಸಿದರೆ ಮೇವಿನ ಪೌಷ್ಟಿಕಾಂಶವನ್ನು ಹೆಚ್ಚಿಸಬಲ್ಲದು. ವಿಸ್ಮಯದ ಸಂಗತಿ! ಯೂರಿಯಾಕ್ಕೆ ಆಹಾರವಾಗಿಯೂ ಚೈತನ್ಯ ನೀಡುವ ಶಕ್ತಿಯಿದೆ, ವಿಷವಾಗಿ ಕೊಲ್ಲುವ ಶಕ್ತಿಯೂ ಇದೆ! ಯೂರಿಯಾದ ಒಳಿತುಕೆಡಕುಗಳು ಬಳಸುವವರ ವಿವೇಚನೆ ವಿವೇಕವನ್ನು ಅವಲಂಬಿಸಿವೆ.

ಹಸು ಆಶ್ಚರ್ಯಕರ ರೀತಿಯಲ್ಲಿ ಮತ್ತಷ್ಟು ಚೇತರಿಸಿಕೊಂಡಿತು. ಒಂದೆರಡು ನಿಮಿಷಗಳಲ್ಲಿ ತೂರಾಡುತ್ತಾ ಎದ್ದು ನಿಂತಿತು. ಇಷ್ಟಾಗಿಯೂ ಎರಡು ರಾಸುಗಳು ಸತ್ತು ಹೋಗಿದ್ದಕ್ಕೆ ಆಕೆ ಇನ್ನೂ ದುಃಖದಲ್ಲಿದ್ದಳು. ಆದದ್ದು ಆಗಿಹೋಯ್ತು ಡಾಕ್ಟ್ರು ಇದನ್ನಾದ್ರೂ ಬದುಕಿಸಿದಲ್ಲ ಎಂದು
ಆಕೆಗೆ ಅಕ್ಕಪಕ್ಕದ ಜನ ಸಮಾಧಾನ ಹೇಳತೊಡಗಿದರು.

ಆ ಎರಡು ರಾಸುಗಳನ್ನು ಉಳಿಸಲು ವಿಫಲನಾಗಿದ್ದಕ್ಕೆ ನನಗೂ ತೀವ್ರ ದುಃಖವಾಗಿತ್ತು. ಆದರೆ ಯಾರ ಮುಂದೆ ಹೇಳಿಕೊಳ್ಳಲಿ. ನಿನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೀಯಾ, ಮರುಗದಿರು ಎಂದು ನನ್ನ ಅಂತರಾತ್ಮ ಸಂತೈಸುತ್ತಿತ್ತು.

ಆ ವಿಲಕ್ಷಣ ಸನ್ನಿವೇಶದಿಂದ ದೈಹಿಕವಾಗಿ ಹೊರಬಂದರೂ ಮಾನಸಿಕವಾಗಿ ಆಗಾಗ ಕಾಡುತ್ತದೆ. ಅಂದು ನಾನು ನಿಜಕ್ಕೂ ಗೆದ್ದೆನೇ ಅಥವಾ 1-2 ಅಂತರದಲ್ಲಿ ಸೋತೆನೇ ಎಂದು ಜಿಜ್ಞಾಸೆಯಲ್ಲಿ ಮುಳುಗುತ್ತೇನೆ. ಅದಕ್ಕೇ ನಾನು ಹೇಳಿದ್ದು, ಪಶುವೈದ್ಯರು ನಿರಂತರವಾಗಿ ಅನಿವಾರ್ಯವಾಗಿ ಸಿಲುಕಿಕೊಳ್ಳುವ ಹತ್ತು ಹಲವು ಕರುಣಾಜನಕ ಪರಿಸ್ಥಿತಿಗಳು ಮತ್ಯಾರ ಬದುಕಿನಲ್ಲಿಯೂ ಬಾರದಿರಲೆಂದು.

ಇದನ್ನೂ ಓದಿ: Booker award: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಕಾದಂಬರಿಗೆ ಮನ್ನಣೆ

Exit mobile version