ಡಾ.ಇಂದಿರಾ ಹೆಗ್ಗಡೆ ಅವರ ಪ್ರವಾಸ ಕಥನ ʼಹಿಮಾಲಯ ಶಿಖರಗಳ ಸಾನಿಧ್ಯದಲ್ಲಿ ನಡೆದಾಟʼದಿಂದ ಆಯ್ದ ಭಾಗ ಇಲ್ಲಿದೆ. ಕಾಶ್ಮೀರ, ಲೇಹ ಲಡಾಕ್, ಮನಾಲಿ ಮುಂತಾದ ಹಿಮಾಲಯದ ಹಲವಾರು ತಾಣಗಳಲ್ಲಿ ತಾವು ಕಂಡ ಅಪರೂಪದ ಸಂಗತಿಗಳನ್ನು ಅವರು ಇದರಲ್ಲಿ ಬರೆದಿದ್ದಾರೆ.
ತುಳುನಾಡಿನ ಯಕ್ಷಗಾನ ಪಾತ್ರಗಳಲ್ಲಿ ರಾಕ್ಷಸ ಹಿಡಿಂಬನ ತಂಗಿಯಾಗಿ ವಿಕಾರ ರೂಪದಿಂದ ಹಿಡಿಂಬೆ ರಂಗ ಪ್ರವೇಶ ಮಾಡುತ್ತಾಳೆ. ಆದರೆ ಕುಲು ಮನಾಲಿಯ ಸ್ಥಳೀಯರಿಗೆ ಆಕೆ ರಾಕ್ಷಸಿಯಲ್ಲ. ಉಪಾಸನಾ ದೇವತೆ. ʼಶಕ್ತಿ ದೇವತೆ’ ಸ್ಥಳೀಯರ ಪ್ರಕಾರ ಆಕೆ ಹಿಡಿಂಬೆಯಲ್ಲ ʼಹಡಿಂಬಾ ದೇವಿ’ ಎಂದು. ಆದರೆ ಪುರಾತತ್ವ ಇಲಾಖೆಯವರ ಫಲಕದಲ್ಲಿ ಹಿಡಿಂಬೆ ಎಂದಿದೆ. ಸ್ಥಳೀಯರ ಹಡಿಂಬಾ ದೇವಿ ವೈದಿಕ ಮತ್ತು ಜನಪದದ ಎಲ್ಲಾ ದೇವಿಯ ಸ್ಥಾನ ದೇವತೆಗಳಿಗಿಂತಲೂ ಹಿರಿದು. ಆದ್ದರಿಂದ ನಮ್ಮ ಮನಾಲಿ ಪ್ರವಾಸ ಸಂದರ್ಭದಲ್ಲಿ ʼಹಡಿಂಬಾ ದೇವಿ’ ದೇವಿಯ ದರ್ಶನ (hidimba temple) ಮುಖ್ಯವಾಗಿತ್ತು.
ಪ್ರಕೃತಿಯ ಗಾಂಭೀರ್ಯ ನೋಡಬೇಕಾದರೆ ಹಿಮಾಚಲ ಪ್ರದೇಶಕ್ಕೆ ಹೋಗಬೇಕು. ಹಿಮಾಚಲ ಪ್ರದೇಶಗಳಲ್ಲಿ ಬೆಳೆಯುವ ಬಾನೆತ್ತರದ ದೇವದಾರು ವೃಕ್ಷಗಳ ಕಾನನವೇ ಒಂದು ವಿಸ್ಮಯ. ಇಂತಹ ಅನೇಕ ಬೆರಗುಗೊಳಿಸುವ ಪ್ರವಾಸಿ ತಾಣಗಳಲ್ಲಿ ʼಕುಲು ಮನಾಲಿ’ಯ ಹಡಿಂಬಾವನವೂ ಸೇರಿದೆ. ಮನಾಲಿಯಲ್ಲಿ ಹರಿಯುವ ಬಿಯಾಸ್ ನದಿ ಕಣಿವೆಯ ಬಲ ದಂಡೆಯ ಮೇಲೆ ಮನಾಲಿಯ ಪರ್ವತ ತಪ್ಪಲಲ್ಲಿ ಪೇಟೆಯಿಂದ ಮೂರು ಕಿಲೋಮೀಟರ್ ಎತ್ತರಕ್ಕೆ ದೇವದಾರು ವೃಕ್ಷಗಳ (cedar) ಮನಮೋಹಕ (ಈಗ ರಕ್ಷಿತ) ಕಾನನ ಇದೆ. ಇದನ್ನು
ʼದುಂಗ್ರಿ ವನ’ ಎಂದೂ ಕರೆಯುತ್ತಾರೆ. ಇಲ್ಲಿ ವನ ವಿಹಾರ ನಡೆಯುತ್ತದೆ. ಬೋಟ್ ರಾಪ್ಪಿಂಗ್ ವ್ಯವಸ್ಥೆಯೂ ಇಲ್ಲಿದೆ. ನಾವು ಇಲ್ಲಿಯ ದೇವದಾರು ವೃಕ್ಷಗಳ ರಕ್ಷಿತ ಕಾನನದಲ್ಲಿ ಸುತ್ತಾಡಿದೆವು.
“ದೇವದಾರು ವೃಕ್ಷಗಳ ತುದಿಗಳು ಮುರಿದು ಬೀಳಲು, ಅದರ ಹಾಲಿನಿಂದ ಹೊಮ್ಮುವ ಸುವಾಸನೆಯಿಂದ ಈ ಭಾಗದ ಗಾಳಿಯೂ ಸುವಾಸನೆಯುಕ್ತವಾಗಿದೆ” ಎನ್ನುತ್ತಾನೆ ಕಾಳಿದಾಸನ ಗಂಧರ್ವ. ನಾನು ದೇವದಾರು ಮರದಿಂದ ಉದುರಿರುವ ಒಣ ಹೂಗಳನ್ನು ಆರಿಸಿಕೊಂಡೆ. ಬಿಯಾಸ್ ನದಿಗೆ ಇಳಿದು ಸ್ಪಟಿಕ ನಿರ್ಮಲ ನೀರನ್ನು ಕುಡಿದು ಕೈಕಾಲು ಮುಖ ತೊಳೆದುಕೊಂಡೆ. ಮಧುಚಂದ್ರಕ್ಕೆ ಬಂದಿರುವ ಕೆಲವು ತರುಣ ತರುಣಿಯರೂ ನೀರಿನಲ್ಲಿ ಕಾಲಾಡಿಸುತ್ತಿದ್ದರು. ಉಳಿದವರು ನದಿಗೆ ಇಳಿಯಲು ಒಪ್ಪಲಿಲ್ಲ. ನನಗೆ ಮಾತ್ರ ನದಿಯ ಸನಿಹ ಆನಂದ ತಂದಿತ್ತು. ಅದರ ನೀರಿನ ಸ್ಪರ್ಶ ಸುಖವೂ ಆನಂದ. ಇಷ್ಟು ದೂರ ಹೋಗಿ ಬಿಯಾಸ್ ನದಿಯಲ್ಲಿ ಕಾಲಾದರೂ ಆಡಿಸಬೇಡವೆ? ಆದರೆ ಹೆಗ್ಗಡೆಯವರಿಗೆ ಆತಂಕ, ಈ ಮುದಿ ವಯಸ್ಸಲ್ಲಿ ಹೆಂಡತಿ ಕಳೆದು ಹೋದರೆ ಹೊಸ ಹೆಂಡತಿಯೂ ಸಿಗಲಾರಳಲ್ಲವೆ?
ಈ ವನದಲ್ಲಿ ಹಿಮಪ್ರದೇಶದ ಉದ್ದ ಕೂದಲಿನ ಮೊಲವನ್ನು ಹಿಡಿದು ಇಬ್ಬರು ಪಹಾಡಿ ಮಹಿಳೆಯರು ನಿಂತಿದ್ದರು. ಅದನ್ನು ಹಿಡಿದು ಪ್ರವಾಸಿಗರು ಫೋಟೋ ತೆಗೆಸಿಕೊಂಡರೆ ತನ್ನ ಸಂಪಾದನೆ ಆಗುತ್ತದೆ ಎಂಬ ಆಶಯ ಅವರದ್ದು. ಪಹಾಡಿ ಉಡುಗೆಯನ್ನು ನವ ಜೋಡಿಗೆ
ತೊಡಿಸಿ ಫೋಟೋ ತೆಗೆಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಾಯಕದ ಪಹಾಡಿ ಜನರೂ ಇದ್ದರು.
ಇದು ಹನಿಮೂನ್ ಸ್ಥಳ, ಈ ಕಾನನ ಯುವ ಜೋಡಿಗಳಿಗಾಗಿ ಮಾಡಿಸಿದಂತಿದೆ. ಅಂತಹ ಯುವ ಜೋಡಿಗಳ ನಡುವೆ 60-65ರ ವಯಸ್ಸಿನ ಜೋಡಿಯಾಗಿ ನಾನು ಮತ್ತು ಹೆಗ್ಗಡೆಯವರು, 50-55ರ ಜೋಡಿಯಾಗಿ ಜೀವನ್ ಶೆಟ್ಟಿ ಮತ್ತು ಸುಯೋಜ ಶೆಟ್ಟಿ ಬೆರಕೆಯಾಗಿದ್ದೆವು. ನಮಗೆ ಯುವ ಜೋಡಿಗಳ ಪರಿವೆ ಇದೆಯೇ ಹೊರತು ಅವರು ನಮ್ಮ ಅಸ್ತಿತ್ವವನ್ನೇ ಗಮನಿಸುತ್ತಿರಲಿಲ್ಲ. ನಾವು ಸಿಮ್ಲಾ – ಮನಾಲಿಗೆ ಪ್ರವಾಸ ಹೊರಡುವಾಗ ನಮ್ಮ ಅನೇಕ ಮಿತ್ರರು ಕೇಳಿದ್ದರು. “ಅದೇನು ಈ ವಯಸ್ಸಲ್ಲಿ ಹನಿಮೂನ್ ಸ್ಥಳಕ್ಕೆ ಹೋಗುವುದು?” ಎಂದು. “ಹೋಗಬೇಕಾದ ವಯಸ್ಸಿನಲ್ಲಿ ಹೋಗಲಾಗಲಿಲ್ಲ. ಅದಕ್ಕೆ” ಎಂದು ನಾನೂ ಮುಲಾಜಿಲ್ಲದೆ ಉತ್ತರಿಸಿದ್ದೆ.
ಇದನ್ನೂ ಓದಿ: Book Exerpt: ಅವನ ನೋಟ ಕಲೆಗೆ ಮೆಚ್ಚುಗೆಯೋ, ನನ್ನ ಮೇಲಿನ ಪ್ರೀತಿಯೋ?
ಆದರೆ ಇಲ್ಲಿ ಯುವ ಜೋಡಿಗಳ ದಂಡೇ ಇದೆ. ಇಂತಹ ಸುಂದರ ಪರಿಸರದಲ್ಲಿ ಹಿಡಿಂಬೆ ಭೀಮನನ್ನು ಅಥವಾ ಭೀಮ ಹಿಡಿಂಬಾಳನ್ನು ನೋಡಿ ಮೋಹಗೊಂಡು ಘಟೋದ್ಗಜನ ಜನನಕ್ಕೆ ಕಾರಣರಾಗಿದ್ದರೆ ಮನಾಲಿಯ ಪ್ರಕೃತಿಯ ಪ್ರಭಾವದಿಂದ ಎನ್ನುವುದು ಖಚಿತ! ಮಹಾಭಾರತದ ಪಾತ್ರಗಳಲ್ಲಿ ಅತಿಥಿ ಪಾತ್ರಗಳಂತೆ ಬರುವ ಪಾತ್ರಗಳು ಹಿಡಿಂಬ, ಹಿಡಿಂಬಿಯರದ್ದು. ಮಹಾಭಾರತದ ಪ್ರಕಾರ ಇವರು ರಾಕ್ಷಸ ಕುಲದವರು. (ಮಹಾಭಾರತದ ಪ್ರಕಾರ ಶ್ರೀಲಂಕೆಯವರೂ ರಾಕ್ಷಸ ಕುಲ, ದಕ್ಷಿಣ ಭಾರತದವರು ವಾನರ ಕುಲ) ಆದರೆ ಸ್ಥಳೀಯ ಸಂಸ್ಕೃತಿಯವರಿಗೆ ಆಕೆ ಶಕ್ತಿ ದೇವತೆ. ದುರ್ಗೆಗಿಂತಲೂ ಮಿಗಿಲು, ಮಹಾಭಾರತದ ಆಧಾರದಿಂದ ನಾವೆಲ್ಲಾ ಆಕೆಯನ್ನು ಹಿಡಿಂಬಾ ಎನ್ನುತ್ತೇವೆ.
ಆದರೆ ಸ್ಥಳೀಯರು ಆಕೆಯನ್ನು “ಹಡಿಂಬಾ ದೇವಿ” ಎಂದು ಕರೆಯುತ್ತಾರೆ. ಹಿಮ ಪರ್ವತಗಳಿಂದ ಚಿಮ್ಮಿ ಬಂದ ನೀರಿನೊಂದಿಗೆ ಬಿಯಾಸ್ (ನದಿ) ಇಲ್ಲಿ ರಭಸದಿಂದ ಮುನ್ನುಗ್ಗುತ್ತಾಳೆ. ಬಿಯಾಸ್ ನದಿಯ ಎಡ ದಂಡೆಯ ವಿಹಾರ ಕಾನನದಲ್ಲಿ ದಕ್ಷಿಣ ಕನ್ನಡದ ಗುಡ್ಡೆಯ ಭೂತದ ಸ್ಥಾನ(ಗುಡಿ)ಗಳನ್ನು ಹೋಲುವ ಸುಮಾರು 24 ಮೀಟರ್ ಎತ್ತರ ಹಾಗೂ 3 ಚದರ ಮೀಟರ್ ಅಗಲದ ಚೌಕ ಮಂಟಪ ರೀತಿಯ ಗುಡಿ ಇದೆ. ಪಗೋಡಾ ಮಾದರಿಯ ಸುಂದರವಾದ ಗುಡಿ ಇದು. ಶಿಖರ ಸೇರಿ 4 ನೆಲೆಗಳಲ್ಲಿ ಇರುವ ಗುಡಿಯ ಮಾಡು ಇಳಿಜಾರಾಗಿದ್ದು ತುದಿಯ ಶಿಖರ ಅರ್ಧ ತೆರೆದ ಕೆಳಮುಖವಾಗಿ ಹಿಡಿದ ಛತ್ರಿಯಂತೆ ಇದೆ. ಮಾಡಿನ ಮೂರು ನೆಲೆಗಳನ್ನು ಮರದ ಹೆಂಚುಗಳಿಂದ ಜೋಡಿಸಲಾಗಿದೆ. ನಾಲ್ಕು ನೆಲೆಗಳ ಮಧ್ಯೆ ಮೂರು ಮರದ ಗವಾಕ್ಷಗಳಿವೆ. ಇದು ತುಳುನಾಡಿನ ಹಳೆಯ ಕಾಲದ ಭೂತಗಳ ಗುಡಿಗಳ ಮತ್ತು
ಕೇರಳದಲ್ಲಿ ಇರುವ ದೇವಸ್ಥಾನ ತೈವಂ ಸ್ಥಾನಗಳ ಮಾದರಿಯಲ್ಲಿದೆ.
ಹೊರ ಚಾಚಿರುವ ಈ ಮರದ ಗವಾಕ್ಷ ಗುಡಿಯ ಸುತ್ತಲೂ ಇವೆ. ಇದರ ಮೇಲಿನ ನೆಲೆ ಕೋನದ ಆಕಾರದಲ್ಲಿ ಇದೆ. ಹಿಮಪಾತವಾದಾಗ ಹಿಮ ಇಳಿದು ಹೋಗಲು ಇಂತಹ ಮಾಡನ್ನು ರಚಿಸುತ್ತಾರೆ. ತುತ್ತ ತುದಿಯಲ್ಲಿ ಒಂದರ ಮೇಲೊಂದರಂತೆ ಕಲಶಗಳಿವೆ. ಇದರ ಗೋಡೆಗಳು ಮಣ್ಣಿನಿಂದ ರಚನೆಯಾಗಿವೆ. ಗೋಡೆಗಳಿಗೆ ಸುಣ್ಣ ಲೇಪಿಸಿದ್ದಾರೆ. ಅದರ ಮೇಲೆ ಮರದ ರೀಪುಗಳನ್ನು ಅಡ್ಡಕ್ಕೆ ಮತ್ತು ಉದ್ದಕ್ಕೆ ಅಲ್ಲಲ್ಲಿ ಜೋಡಿಸಿದ್ದಾರೆ. ಬಾಗಿಲು ಮತ್ತು ಮುಂಭಾಗದ ಗೋಡೆಗೆ ಮರದ ಸುಂದರ ಕೆತ್ತನೆಯ ಅಲಂಕಾರ ಇದೆ. ಎಡ ದಿಕ್ಕಿನ ಗೋಡೆಗೆ ಒಂದು ಮರದ ಕಿಟಕಿ ಇದೆ. ಈ ಗುಡಿಯ ಸುತ್ತಲೂ ಸುಮಾರು 4 ಅಡಿ ಅಗಲದ ಜಗಲಿ ಇದೆ. ಆದರೆ ಇದು ಪ್ರದಕ್ಷಿಣಾ ಪಥ ಅಲ್ಲ. ಪ್ರದಕ್ಷಿಣೆಯ ಪದ್ಧತಿ ಇಲ್ಲಿ ಇಲ್ಲ. (ತುಳುನಾಡಿನಲ್ಲಿ ಭೂತದ ಗುಡಿಗಳಿಗೂ ಪ್ರದಕ್ಷಿಣಾ ಪಥ ಇಲ್ಲ. ಜನಪದದಲ್ಲಿ ಪ್ರದಕ್ಷಿಣೆಯ ಪದ್ಧತಿ ಇಲ್ಲ).
ಇದನ್ನೂ ಓದಿ: Book Excerpt : ಯಕ್…!
ಜಗಲಿಯ ಮೇಲೆ ಅಲ್ಲಲ್ಲಿ ಇರುವ ಮರದ ಕಂಬಗಳು ಮಾಡಿನ ಇಳಿಜಾರಿಗೆ ಆಧಾರ ಒದಗಿಸಿವೆ. ಕೋಣೆಯ ಒಳಗೂ ಹೊರಗೂ ಗೋಡೆಗಳ ಮೇಲೆ ಕಾಡುಮೃಗಗಳ ವಿಭಿನ್ನ ಕೊಂಬುಗಳನ್ನು ಅಲಂಕರಿಸಿದ್ದಾರೆ. ವಿಶಿಷ್ಟ ವಾಸ್ತು ರಚನೆಯ ನೆಲದ ಪರಂಪರೆಯ ಈ ‘ಹಡಿಂಬಾ’ ಗುಡಿಯನ್ನು ಕ್ರಿ. ಶ. 1553ರಲ್ಲಿ ಕುಲು ಮನಾಲಿಯ ಅರಸ, ಮಹಾರಾಜ ಬಹದ್ದೂರ್ ಸಿಂಗ್ ನಿರ್ಮಿಸಿದ್ದ. ಅದರ ಮೊದಲು ಗುಡಿ ಇದ್ದಿರಲಾರದು. ಉಪಾಸನೆ ಇದ್ದಿರಬಹುದು. ಘಟೋದ್ಗಜನಂತೆ ಕ್ಷೇತ್ರ ಮಾತ್ರ ಇದ್ದಿರಬಹುದು.
ಪುಟ್ಟ ಕೋಣೆಯ ಒಳಗೆ ಬಾಗಿಲ ಬಳಿ ಒಂದಿಬ್ಬರು ನಿಂತುಕೊಳ್ಳುವಷ್ಟು ಮಾತ್ರ ಜಾಗ ಇದೆ. ಅಲ್ಲೇ 5 ಅಡಿ ಉದ್ದ 3 ಅಡಿ ಅಗಲದ ಶಿಲಾ ತೊಟ್ಟಿಲು, ಒಂದುವರೆ ಅಡಿ ಆಳಕ್ಕೆ ಭೂಮಿಯೊಳಗೆ ಹುದುಗಿದೆ. ಒಬ್ಬ ಮನುಷ್ಯ ಮಲಗಬಹುದಾದ, ಶಿಲೆಯನ್ನು ಕೊರೆದು ಮಾಡಿದ ತೊಟ್ಟಿಲಿನಂತೆ ಇದೆ. ಪ್ರಕೃತಿ ಸಹಜ ಶಿಲಾ ತೊಟ್ಟಿಲು. ಇದಕ್ಕೆ ಶಿಲೆಯದೇ ಮುಚ್ಚಳವೂ ಇದೆ. ತೊಟ್ಟಿಲ ಮಧ್ಯದಲ್ಲಿ ಜೋಡಿ ಶಿಲಾ ಪಾದಗಳಿವೆ. ಇದನ್ನು ಹಡಿಂಬಾ ದೇವಿಯ ಪಾದ ಎನ್ನುತ್ತಾರೆ. ಹಲವಾರು ಮೆಟ್ಟಿಲುಗಳ ಎತ್ತರದ ಅಧಿಷ್ಠಾನದ ಮೇಲಿರುವ ಹಡಿಂಬಾ ದೇವಾಲಯುದ ಮುಂದೆ ರಕ್ತದ ಕೋಡಿ ಹರಿದ ಕಲೆಗಳಿದ್ದವು. ವಿಚಾರಿಸಿದಾಗ ರಾತ್ರಿ ಇಡೀ ಪ್ರಾಣಿಬಲಿ ನಡೆದ ವಿಚಾರ ತಿಳಿಯಿತು.
ಪ್ರತಿ ವರುಷ ಮೇ ತಿಂಗಳ ಸುಮಾರಿಗೆ ಕುಲು ಮನಾಲಿಯ ಜಾತ್ರೆ ನಡೆಯುತ್ತದೆ. ಮೂರ್ತಿಗಳು ಒಂದೇ ಸ್ಥಳದಲ್ಲಿ ಸೇರುತ್ತವೆ. ಇವುಗಳಲ್ಲಿ ವೈದಿಕ ಮತ್ತು ಜನಪದ ದೇವಿ ದೇವರುಗಳು ಸೇರುತ್ತಾರೆ. ಅವುಗಳಿಗೆಲ್ಲ ಅಧಿದೇವತೆಯಾಗಿ ಹಡಿಂಬಾ ದೇವಿ ಅಗ್ರ ಪೂಜೆ ಪಡೆಯುತ್ತಾಳೆ.
ಹಿಂದೂ ಧರ್ಮದ ವೈದಿಕ ಪದ್ಧತಿಯ ಪರಿಚಯ ಭಾರತದ ಅನೇಕ ಜನರಿಗೆ ಇವತ್ತಿಗೂ ಇಲ್ಲ. ಪರಿಚಯ ಆದವರೂ ಹೆಚ್ಚಿನ ಕಡೆ ಪರಂಪರೆಯ ಆಚರಣೆಗಳನ್ನು ತೊರೆಯಲು ಸಿದ್ಧರಿಲ್ಲ. ಭಾರತೀಯರು ಪರಂಪರೆಯಿಂದ ಆಚರಿಸಿಕೊಂಡು ಬಂದಂತಹ ವೈವಿಧ್ಯಪೂರ್ಣ ಜನಪದ ಧರ್ಮದಲ್ಲಿ ಜನತೆ ಈಗಲೂ ನಂಬಿಕೆ ಇಟ್ಟುಕೊಂಡಿದ್ದಾರೆ. ಜನಪದ ಧರ್ಮದ ವಾರ್ಷಿಕ ಜಾತ್ರೆಗಳು ಮತ ಧರ್ಮವನ್ನು ಹೊರಗಿಟ್ಟು, ಮತರಹಿತ ಸಮಾಜದ, (ಇವು ಮತ ಪ್ರವರ್ತಕ ಪ್ರವಾದಿಗಳು ಹುಟ್ಟುವ ಮೊದಲೇ ಇದ್ದ ಆದಿ ಸಂಸ್ಕೃತಿ) ಆದ್ದರಿಂದ ಒಟ್ಟು ಜನತೆಯ ಸೌಖ್ಯ, ನೆಮ್ಮದಿಯನ್ನು ಗಮನದಲ್ಲಿ ಇರಿಸಿಕೊಂಡು ಆಚರಣೆಗೆ ಬಂದಿವೆ. ಅದಕ್ಕೆ ಹೇಳುವುದು ಹಿಂದೂ ಧರ್ಮ ಎನ್ನುವುದು “ನೆಲದ ಸಂಸ್ಕೃತಿ’ ಎಂದು. ಇಂತಹ ಜನಪದ ಪರಂಪರೆಗಳು ವೇದಗಳ ಆಧಾರದ ಮೇಲೆ ನಿರ್ಭರವಾಗಿಲ್ಲ. ಅಂತಹ ಒಂದು ಸಂಸ್ಕೃತಿ ಹಡಿಂಬಾ ದೇವತೆಯ ಆರಾಧಕರದ್ದು. ಇದು ಮನಾಲಿಯ ನೆಲದ ಸಂಸ್ಕೃತಿ. ತುಳುನಾಡಿನ ಭೂತಾರಾಧನೆಯೂ ಇಂತಹುದೇ ಒಂದು ನೆಲದ ಸಂಸ್ಕೃತಿ.