ಪಾಂಡವರು ಬರುವ ಮೊದಲೇ ಅವರಿಗಾಗಿ ಬೃಹತ್ತಾದ ಅರಮನೆಯ ಕಟ್ಟೋಣ ಪ್ರಾರಂಭವಾಗಿತ್ತು. ವಿಚಿತ್ರವೆಂದರೆ ಅದನ್ನು ಕಟ್ಟುವುದಕ್ಕೆ ವಾರಣಾವತದ ಕುಶಲ ಕೆಲಸಗಾರರನ್ನು ನಿಯೋಜಿಸಲೇ ಇಲ್ಲ. ಹಸ್ತಿನಾವತಿಯಿಂದ ಬಂದ ಪುರೋಚನ ಎಂಬವನ ನೇತೃತ್ವದಲ್ಲಿ ಅಲ್ಲಿಂದಲೇ ಕೆಲಸಗಾರರ ತಂಡವೂ ಬಂದಿತ್ತು. ವಾರಣಾವತದ ಪ್ರಜೆಗಳು ಅರಮನೆಯ ಗೋಡೆಗಳು ಮೇಲೇಳುವುದನ್ನು ದೂರದಿಂದಲೇ ನೋಡಿ ಸಂತೋಷಪಡುತ್ತಿದ್ದರು. ಯಾಕೆಂದರೆ ಅವರಿಗೆ ಸಮೀಪಕ್ಕೆ ಹೋಗುವ ಅವಕಾಶ ಇರಲಿಲ್ಲ. ವಿಶೇಷ ಅನುಮತಿಯಿಲ್ಲದವರನ್ನು ದೂರದಲ್ಲೇ ತಡೆದು ನಿಲ್ಲಿಸುವಂತೆ ರಕ್ಷಣಾಧಿಕಾರಿಯಾದ ನನಗೆ ಪ್ರತ್ಯೇಕ ಸೂಚನೆಯಿತ್ತು.
ಧರ್ಮಾಧಿಕಾರಿಗಳೇ ನನ್ನನ್ನು ಕರೆಯಿಸಿ, “ಮಿತ್ರ, ಪಾಂಡವರು ವಾರಣಾವತಕ್ಕೆ ಬರಲಿದ್ದಾರಂತೆ. ಅವರಿಗಾಗಿ ಒಂದು ಭವ್ಯಭವನದ ನಿರ್ಮಾಣ ನಡೆಯಲಿದೆ. ಈ ಭವನದ ಕಾರ್ಯಕ್ಕೆ ಹಾಗೂ ಹತ್ತಿರಕ್ಕೆ ಯಾರೂ ಸುಳಿಯದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ನೀನೇ ಮಾಡಬೇಕು. ಮಾತ್ರವಲ್ಲ, ಅದಕ್ಕಾಗಿ ನಿಯೋಜಿತರಾದ ರಾಜಭಟರೂ ಅವರ ಸ್ಥಳವನ್ನು ಬಿಟ್ಟು ಅರಮನೆಯತ್ತ ಸುಳಿಯಕೂಡದು. ಇದು ಹಸ್ತಿನಾವತಿಯಿಂದಲೇ ಬಂದ ರಾಜಾಜ್ಞೆಯೆಂದು ತಿಳಿ, ಭವನ ನಿರ್ಮಾಣದ ಪೂರ್ಣ ಹೊಣೆ ಪುರೋಚನನದು. ಜಾಗೃತನಾಗಿರು. ತಿಳಿಯಿತೆ?” ಎಂದು ಹೇಳಿದರು.
ರಾಜಕುಮಾರರಿಗಾಗಿ ಸುಭದ್ರವಾದ ಗೃಹವೊಂದನ್ನು ಕಟ್ಟುವಾಗ ಇಂತಹುದೆಲ್ಲ ಸಹಜವೆಂದು ನಾನು ಭಾವಿಸಿದೆ. ಕರ್ತವ್ಯದಲ್ಲಿ ಲೋಪವಾಗದಂತೆ ನೋಡಿಕೊಂಡೆ. ಅರಮನೆಯಾಯಿತು. ಪಕ್ಕದಲ್ಲೇ ಶಸ್ತ್ರಾಗಾರವೂ ಆಯಿತು. ಪಾಂಡವರೂ ಬಂದರು. ಎಲ್ಲ ವ್ಯವಸ್ಥಿತವಾಗಿದೆ ಎಂಬಾಗ ಈ ಅನಾಹುತ.
ಇದನ್ನೆಲ್ಲ ಚಿಂತಿಸುತ್ತ ನಿಂತಿದ್ದೆ. ಸೂರ್ಯೋದಯವಾಗಿ ಬೆಳಕು ಪಸರಿಸುವ ವೇಳೆಗೆ ಉರಿಯುವುದಕ್ಕೆ ಏನೂ ಉಳಿಯದೆ ಅಗ್ನಿ ಅದರಷ್ಟಕ್ಕೆ ಶಮನಗೊಂಡಿತು. ನಾವು ಅಲ್ಲಿಯವರೆಗೆ ಅಸಹಾಯ ನೋಟ ಬೀರುತ್ತ ಅಲ್ಲಿ ಸಾಕ್ಷಿಗಳಾಗಿ ನಿಂತಿದ್ದೆವು. ಆಮೇಲೆ ಅಲ್ಲಿದ್ದು ಮಾಡುವುದಕ್ಕೇನೂ ಉಳಿದಿರಲಿಲ್ಲ. ಭಗ್ನಾವಶೇಷಗಳನ್ನು ಶೋಧಿಸಿ, ಪಾಂಡವರ ಮತ್ತು ಪುರೋಚನನ ಪಾರ್ಥಿವ ಶರೀರದ ಕುರುಹುಗಳು ಎಲ್ಲಿವೆ ಎಂದು ಹುಡುಕುವಂತೆ ನನ್ನ ಅನುಚರರಿಗೆ ತಿಳಿಸಿ ನನ್ನ ಮನೆಗೆ ಬಂದೆ. ಅವಸರದಲ್ಲಿ ಸ್ನಾನಾದಿಗಳನ್ನು ಮುಗಿಸಿ ಧರ್ಮಾಧಿಕಾರಿಗಳ ಭವನದತ್ತ ತೆರಳಿದೆ. ಧರ್ಮಾಧಿಕಾರಿಗಳು ನನ್ನ ನಿರೀಕ್ಷೆಯಲ್ಲೇ ಇದ್ದರು. ಅವರಿಗೆ ಈಗಾಗಲೇ ಅರಮನೆ ಬೆಂಕಿಗೆ ಆಹುತಿಯಾದ ಸುದ್ದಿ ವಿವರವಾಗಿ ತಲಪಿತ್ತು. ನಾನು ನೋಡಿದ್ದನ್ನು ಮತ್ತು ಶೋಧಕ್ಕೆ ಆದೇಶಿಸಿದುದನ್ನು ವಿವರಿಸಿದೆ. “ಸರಿ ಮಿತ್ರ, ನೀನು ಮಾಡಿದ್ದು ಸಮಂಜಸವಾಗಿದೆ. ನಾನು ಈ ಪ್ರಕರಣವನ್ನು ಸವಿವರವಾಗಿ ಹಸ್ತಿನಾವತಿಗೆ ಓಲೆಕಾರನ ಮುಖೇನ ತಿಳಿಸಬೇಕು. ಆದಷ್ಟು ಬೇಗನೇ ಪಾಂಡವರ ಕಳೇವರಗಳನ್ನು ಹುಡುಕಿಸು, ಮುಂದೇನು ಮಾಡಬೇಕೆಂದು ಹಸ್ತಿನಾವತಿಯ ಪ್ರಭುತ್ವಕ್ಕೆ ಬಿಟ್ಟದ್ದು. ವಿವರ ಒಪ್ಪಿಸುವುದಷ್ಟೇ ನಮ್ಮ ಕಾರ್ಯಭಾರ” ಎಂದರು.
ನಾನು ನಿಯೋಜಿಸಿದ ಭಟರು ಮತ್ತು ಕೆಲವು ಮಂದಿ ಉತ್ಸಾಹೀ ಪೌರರು ಇನ್ನೂ ಅವರನ್ನು ಬೀಳ್ಕೊಂಡು ಸುಟ್ಟುಹೋದ ಅರಮನೆಯತ್ತ ತೆರಳಿದೆ. ಅಲ್ಲಿ ಹೊಗೆಯಾಡುತ್ತಿದ್ದ ಅವಶೇಷಗಳ ನಡುವೆ ಮರಣಿಸಿದವರ ಕಳೇವರಗಳಿಗಾಗಿ ಹುಡುಕುತ್ತಿದ್ದರು. ಅವರನ್ನು ಗಮನಿಸುತ್ತಾ ನಿಂತ ನನಗೆ ಏನೋ ಸಂಶಯ ಉಂಟಾಯಿತು. ಯಾಕೆಂದರೆ ಸುಟ್ಟುಹೋದ ಭವನದ ಸುತ್ತ ಏನೋ ಒಂದು ಪರಿಮಳ ಪಸರಿಸಿತ್ತು. ಅದು ಯಜ್ಞಶಾಲೆಯಲ್ಲಿ ಬರುವ ಪರಿಮಳ, ಆಜ್ಯಾಹುತಿಯಾಗುವಾಗ ಬರುವುದಲ್ಲ! ಅಂತಹುದು. ಮರವೋ, ಬಟ್ಟೆಯೋ, ಮಾನವರೋ, ಆಯುಧಾಗಾರದಲ್ಲಿರುವ ವಿಶಿಷ್ಟ ಶಸ್ತ್ರಗಳೋ ದಹಿಸಿದಾಗಿನ ವಾಸನೆ ಸಹಜ. ಆದರೆ ಅವುಗಳ ಜತೆ ಮಿಳಿತವಾದ ಈ ಕಂಪು ಯಾವುದರದ್ದು?
ಅಲ್ಲದೆ ಮನೆಗೆ ಬಿದ್ದ ಬೆಂಕಿ ಹೀಗೆ ಎಲ್ಲವನ್ನೂ ಸುಡಲಾರದು. ಯಾವುದೋ ಒಂದು ಭಾಗದಲ್ಲಿ ಹೆಚ್ಚು ಇನ್ನೊಂದೆಡೆ ಅಲ್ಪಪ್ರಮಾಣದ ಸುಡುವಿಕೆ ಸಹಜ ಇಲ್ಲಿ ಹಾಗೆ ನಡೆದಿಲ್ಲ. ಅರಮನೆ ಹಾಗೂ ಶಸ್ತ್ರಾಗಾರಕ್ಕೆ ಏಕಕಾಲದಲ್ಲಿ ಬೆಂಕಿ ಬಿದ್ದಿದೆ ಅನಿಸುತ್ತಿತ್ತು. ಅರಮನೆಯ ಕಟ್ಟಡವೇ ಒಂದು ಮುದ್ದೆಯಾದಂತೆ ಉರಿದು ನಾಶವಾಗಿತ್ತು. ಒಂದಿಷ್ಟಾದರೂ ಉರಿಯದಿದ್ದ ಸ್ಥಳವೇ ಇರಲಿಲ್ಲ. ಹೇಗೋ ಒಟ್ಟಿಗೇ ಸುಟ್ಟುಹೋಗಿದೆ ಎಂದು ಭಾವಿಸಿದರೂ ಶಸ್ತ್ರಾಗಾರ ಮತ್ತು ಅರಮನೆ ಒಟ್ಟಿಗೇ ಉರಿಯುವುದು ಹೇಗೆ ಸಾಧ್ಯ? ನನಗೆ ತಿಳಿಯಬೇಕಾದ ವಿಚಾರಗಳಿವೆ ಅನಿಸಿತು.
“ನಿನ್ನೆ ಅರಮನೆಯ ಹೊರಾವರಣದಲ್ಲಿ ಕಾವಲಿದ್ದವರು ಯಾರು?” ಎಂದು ಒಬ್ಬ ಭಟನನ್ನು ಪ್ರಶ್ನಿಸಿದೆ. ಅವನು ಮಿಕ್ಕುಳಿದವರನ್ನು ವಿಚಾರಿಸಿದ. ಒಟ್ಟು ನಾಲ್ವರು ಆವರಣದ ಹೊರಗೆ ಹೆಬ್ಬಾಗಿಲ ಬಳಿ ಮತ್ತು ಹಿಂಬದಿಯಲ್ಲಿ ಕಾವಲಿದ್ದರು. ಅವರೆಲ್ಲರೂ ಅಲ್ಲಿ ಸುಟ್ಟುಹೋದ ಅರಮನೆಯಲ್ಲಿ ಶವಗಳಿಗಾಗಿ ಹುಡುಕುತ್ತಿದ್ದರು. ನಾನು
ಕರೆಯುತ್ತಿದ್ದೇನೆ ಎಂದೊಡನೆ ನನ್ನೆದುರು ಬಂದು ನಿಂತರು. ಅವರ ಮುಖ ನೋಡಿದೆ. ಕರ್ತವ್ಯನಿಷ್ಠ ಭಟರು. ನನ್ನ ಕರೆಯ ನಿರೀಕ್ಷೆಯಲ್ಲಿ ಇದ್ದಿರಬೇಕು. ತಲೆಬಾಗಿ ಕೈಕಟ್ಟಿ ನಿಂತಿದ್ದರು.
ಇದನ್ನೂ ಓದಿ: ಅವನ ನೋಟ ಕಲೆಗೆ ಮೆಚ್ಚುಗೆಯೋ, ನನ್ನ ಮೇಲಿನ ಪ್ರೀತಿಯೋ?
“ನೀವೇನು ನಿನ್ನೆ ರಾತ್ರಿಯ ಪಹರೆಯಲ್ಲಿದ್ದವರು?”
“ಹೌದು ಮಹಾಸ್ವಾಮಿ, ನಾವು ನಾಲ್ವರು ಪ್ರಾಕಾರದ ಹೊರಗೆ ಸಾಯುಧರಾಗಿ ಕಾವಲಿದ್ದೆವು.”
“ಪ್ರಾಕಾರದ ಹೊರಗೆ? ಪಾಂಡುಪುತ್ರರ ರಕ್ಷಣೆಯ ಹೊಣೆ ನಿಮಗೆ ತಾನೇ? ಅದೇನು ಹೊರಗೆ ನಿಂತಿರಿ?” ನನ್ನ ಧ್ವನಿ ಅಗತ್ಯಕ್ಕಿಂತ ಕೊಂಚ ಗಡುಸಾಗಿ ಕೇಳಿಸಿತು.
“ಮಹಾಸ್ವಾಮಿ, ನಮಗೆ ಪ್ರಾಕಾರದ ಒಳಗೆ ಪ್ರವೇಶಿಸುವುದಕ್ಕೆ ಅನುಮತಿಯಿರಲಿಲ್ಲ. ʼಒಳಗಿನ ರಕ್ಷಣೆಯ ಕಾರ್ಯವನ್ನು ತಮ್ಮ ಕಡೆಯ ಜನರೇ ನೋಡಿಕೊಳ್ಳುತ್ತಾರೆ. ನಿಮಗೆ ಪ್ರಾಕಾರದ ಹೊರಗೆ ನಿಲ್ಲುವುದಕ್ಕೆ ಮಾತ್ರ ಅನುಮತಿಯಿದೆ’ ಎಂದು ಪುರೋಚನನ ಆದೇಶವಿತ್ತು. ಅವನಿಗೆ ವಿಧೇಯರಾಗಿ ಇರತಕ್ಕದ್ದು ಅಂತ ತಾವೇ ಹೇಳಿದ್ದೀರಿ. ಹಾಗಾಗಿ ನಾವು ಪ್ರಾಕಾರದ ಹೊರಗೇ ಇರಬೇಕಿತ್ತು.” ನಯವಾಗಿ ಒಬ್ಬ ಭಟ ನುಡಿದ. ನಯವಾದರೂ ದೃಢವಾದ ಧ್ವನಿ.
ಕೃತಿ: ಪರಕಾಯ ಪ್ರವೇಶ- 2
ಲೇಖಕ: ರಾಧಾಕೃಷ್ಣ ಕಲ್ಚಾರ್
ಪ್ರಕಾಶಕರು: ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು- 01
ಪುಟ- 158, ಬೆಲೆ- 150