ಬೆಂಗಳೂರು: ಲೇಖಕಿ ಹಾಗೂ ಅನುವಾದಕಿ ಮಾಯಾ ಬಿ.ನಾಯರ್ ಅವರ ಮೂರು ಪುಸ್ತಕಗಳು (Book Release) ಶನಿವಾರ (ಜ.20) ಸಂಜೆ 6 ಗಂಟೆಗೆ ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಲೋಕಾರ್ಪಣೆಯಾಗುತ್ತಿವೆ. ಈಗಾಗಲೇ ಎರಡು ಕೃತಿಗಳನ್ನು ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಮೂಲಕ ಕನ್ನಡದ ಓದುಗರಿಗೆ ಪರಿಚಿತವಾಗಿರುವ ಮಾಯಾ ನಾಯರ್ ಅವರ ಮೊದಲೆರಡು ಕೃತಿಗಳನ್ನು ಪ್ರಕಟಿಸಿದ್ದ ಸ್ನೇಹ ಬುಕ್ ಹೌಸ್ ಇದೀಗ ಅವರ ಚೊಚ್ಚಲ ಕಥಾ ಸಂಕಲನ “ಅಂಕುರ” ವನ್ನು ಪ್ರಕಟಿಸಿದೆ.
ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಹಾಗೂ ಸಂಸತ್ ಸದಸ್ಯರಾಗಿದ್ದ ಇನ್ನಸೆಂಟ್ರವರ ಕ್ಯಾನ್ಸರ್ ಬಗೆಗಿನ ಜನಪ್ರಿಯ ಕೃತಿ ಮಲೆಯಾಳಂನಲ್ಲಿ ಮನೆಮಾತಾಗಿತ್ತು. ಈ ಕೃತಿಯನ್ನು ಕನ್ನಡಕ್ಕೆ “ಸಾವಿನ ಮನೆಯ ಕದವ ತಟ್ಟಿ” ಎನ್ನುವ ಹೆಸರಿನಲ್ಲಿ ಮಾಯಾ ನಾಯರ್ ಅವರು ಅನುವಾದಿಸಿದ್ದು ಮೂರು ಮುದ್ರಣ ಕಂಡಿದ್ದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: Ram Lalla: ನೀವು ನೋಡಿದ ಮಂದಸ್ಮಿತ ರಾಮಲಲ್ಲಾನ ಫೋಟೊ ನಕಲಿ; ಅರ್ಚಕ ಹೇಳಿದ್ದೇನು?
ಇಂದು ಲೋಕಾರ್ಪಣೆಯಾಗುತ್ತಿರುವ ಅನುವಾದ ಕೃತಿಗಳಾದ “ಪುಟ್ಟಾಚಾರಿಯ ಪತ್ನಿಯರು ” (ಮೂಲ ಲೇಖಕರು- ಎಂ.ಮುಕುಂದನ್) ಮತ್ತು ಸ್ವೇದ ಸುಗಂಧ ( ಮೂಲ ಲೇಖಕರು – ವಿಷ್ಣುಮಂಗಲಂ ಕುಮಾರ್) ಪುಸ್ತಕಗಳನ್ನು ಕಣ್ವ ಪ್ರಕಾಶನ ಪ್ರಕಟಿಸಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್.ರಘುನಂದನ್ ನೆರವೇರಿಸಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಹಾಗೂ ಬೆಂಗಳೂರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಹಿರಿಯ ಲೇಖಕ ಹಾಗೂ ಸೆಲ್ಕೋ ಸಂಸ್ಥೆಯ ಸಿಇಒ ಮೋಹನ ಭಾಸ್ಕರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕರಾದ ಕಂನಾಡಿಗಾ ನಾರಾಯಣ ಮತ್ತು ಸಖಿ ಗೀತಾ ಮಾಸಪತ್ರಿಕೆಯ ಸಂಪಾದಕಿ ಹಾಗೂ ಲೇಖಕಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರು ಭಾಗವಹಿಸಲಿದ್ದಾರೆ. ಮಲಯಾಳಂ ಲೇಖಕ ವಿಷ್ಣು ಮಂಗಲಂ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುತ್ತಾರೆ. ಕಾರ್ಯಕ್ರಮ ನಿರೂಪಣೆಯನ್ನು ನಟ ನಿರ್ದೇಶಕ ಡಾ.ಗುಣವಂತ ಮಂಜು ಅವರು ಮಾಡಲಿದ್ದಾರೆ ಎಂದು ಸ್ನೇಹ ಬುಕ್ ಹೌಸ್ ನ ಕೆ.ಬಿ. ಪರಶಿವಪ್ಪ ತಿಳಿಸಿದ್ದಾರೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ