Site icon Vistara News

Samata Ladies Association: ಭಾರತೀಯ ಶಿಲ್ಪಶಾಸ್ತ್ರದ ಪ್ರಕಾರ ಬಾಲ ರಾಮನ ವಿಗ್ರಹ ರೂಪಿಸಿರುವೆ: ಗಣೇಶ್‌ ಭಟ್‌

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹವನ್ನು ಭಾರತೀಯ ಶಿಲ್ಪಶಾಸ್ತ್ರದ ಪ್ರಕಾರ ನಿರ್ಮಿಸಿದ್ದೇನೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಗಣೇಶ್‌ ಭಟ್‌ ತಿಳಿಸಿದರು.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರದ ಸಮತಾ ಲೇಡಿಸ್‌ ಅಸೋಷಿಯೇಷನ್‌ (Samata Ladies Association) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಾಲ ರಾಮನ ವಿಗ್ರಹ ಕೆತ್ತುವ ಮೊದಲು ಸಾಕಷ್ಟು ಅಧ್ಯಯನ ನಡೆಸಿದ್ದೆ. ಕೇರಳದಿಂದ ಕಾಶ್ಮೀರದತನಕ ಹಲವು ದೇವಾಲಯಗಳ ಪುರಾತನ ವಿಗ್ರಹ ರಚನೆಯ ಶೈಲಿಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದೆ. ಜತೆಗೆ, ತ್ರೇತಾಯುಗದಲ್ಲಿನ ಅಯೋಧ್ಯೆಯ ಬಾಲ ರಾಮನ ಕುರಿತು ನನ್ನದೇ ಒಂದು ಕಲ್ಪನೆ ಇತ್ತು. ಅದರಂತೆ ನಾನು ಆ ಶಿಲ್ಪ ಕೆತ್ತಿದ್ದೇನೆ. ಭಾರತೀಯ ಶಿಲ್ಪಕಲೆಗೆ ಯಾವುದೇ ಸಣ್ಣ ಚ್ಯುತಿಯೂ ಬಾರದಂತೆ ಬಾಲರಾಮನ ವಿಗ್ರಹ ರೂಪಿಸಿದ್ದೇನೆ ಎಂದು ಗಣೇಶ್‌ ಭಟ್‌ ಅವರು ವಿವರಿಸಿದರು.

ನಾನು ಕೆತ್ತಿರುವ ಬಾಲರಾಮನ ವಿಗ್ರಹದಲ್ಲಿ ನೂರಾರು ಸೂಕ್ಷ್ಮ ಸಂಗತಿಗಳಿವೆ. ಬಾಣದಲ್ಲಿ ದಾರದ ಹಿಡಿಕೆ, ಮುಖ ಕಂಠದಲ್ಲಿ ತ್ರಿವಳಿ, ಕಿವಿಯಲ್ಲಿ ಮಕರ ಕುಂಡಳ ದಳ, ಹಣೆಯ ಮೇಲೆ ಗುಂಗುರು ಕೂದಲು, ಆಜಾನುಬಾಹು ದೇಹ, ಮುಕುಟದಲ್ಲಿ ಸಪ್ತ ಕಿರಣಗಳು, ಸೂರ್ಯ ವಂಶದಲ್ಲಿ ರಾಮ ಹುಟ್ಟಿದಾಗ ಸೂರ್ಯ ಕಿರಣಗಳು ಕುಸುಮೋಪಾದಿಯಾಗಿ ಬಂದು ತಲುಪಿದವು ಎಂಬ ಕಲ್ಪನೆ, ಕಿರೀಟದಲ್ಲಿ ದಶಾವತಾರ, ಸೊಂಟದ ಆಭರಣದಲ್ಲಿ ಗೆಜ್ಜೆ, ದೇವತೆಗಳ ಕೈಯಲ್ಲಿ ರೇಖೆಗಳಿರುವುದಿಲ್ಲ ಎಂಬ ಸಂಗತಿ ಅರಿತು ಅದರ ಬದಲು ಪದ್ಮರೇಖೆ ಹೀಗೆ ಹತ್ತು ಹಲವು ಸೂಕ್ಷ್ಮ ಕುಸುರಿ ಕಲೆಗಳನ್ನು ನೀವು ನಾನು ಕೆತ್ತಿರುವ ಬಾಲರಾಮನ ವಿಗ್ರಹದಲ್ಲಿ ಕಾಣಬಹುದು ಎಂದು ಗಣೇಶ್‌ ಭಟ್‌ ಅವರು ವಿಗ್ರಹ ಕೆತ್ತನೆಯ ವಿಡಿಯೊ ತೋರಿಸುವುದರ ಮೂಲಕ ವಿವರಿಸಿದರು.

ಇದನ್ನೂ ಓದಿ | Ram Mandir: ಮತ್ತೊಬ್ಬ ಕನ್ನಡಿಗ ಶಿಲ್ಪಿ ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ಹೀಗಿದೆ ನೋಡಿ…

ಸರಳವಾಗಿ ಬದುಕಿ, ಆನಂದವಾಗಿ ಬದುಕಿ

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಮನೋವೈದ್ಯ ಡಾ. ಸಿ.ಆರ್‌. ಚಂದ್ರಶೇಖರ್‌ ಅವರು ಮಾತನಾಡಿ, ಸಮತಾ ಲೇಡಿಸ್‌ ಅಸೋಸಿಯೇಷನ್‌ ಕಾರ್ಯವನ್ನು ಶ್ಲಾಘಿಸಿದರು. ಸರಳವಾಗಿ ಬದುಕಿ, ಆನಂದವಾಗಿ ಬದುಕಿ. ಆಸೆ ಕಡಿಮೆ ಮಾಡಿ, ಜನರನ್ನು ಪ್ರೀತಿ ಮಾಡಿ ಎಂದು ಬುದ್ಧ ಹೇಳಿದ್ದ ಮಾತುಗಳನ್ನು ಡಾ. ಚಂದ್ರಶೇಖರ್‌ ಇಲ್ಲಿ ನೆನಪಿಸಿದರು. ಆತ್ಮೀಯತೆ, ಪ್ರೀತಿಯೇ ಅಮೃತ ಸಮಾನ. ತೃಪ್ತಿಯ ಜೀವನ ಮುಖ್ಯ. ಬೇರೆಯವರ ಜತೆ ಖುಷಿಯಿಂದ, ಸ್ನೇಹಭಾವದಿಂದ ಇದ್ದರೆ ಮನಸ್ಸು ನೆಮ್ಮದಿಯಿಂದ ಇರುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದರೆ ದೇಹ ಆರೋಗ್ಯದಿಂದ ಇರುತ್ತದೆ ಎಂದವರು ಕಿವಿಮಾತು ಹೇಳಿದರು.

ಡಾ. ಸಿ.ಆರ್‌. ಚಂದ್ರಶೇಖರ್‌ ಅವರು 1.5 ಲಕ್ಷ ಜನರಿಗೆ ಉಚಿತವಾಗಿ ಮಾನಸಿಕ ಚಿಕಿತ್ಸೆ ನೀಡಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ 280ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು ಇಂಗ್ಲಿಷ್‌, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. 20 ಸಾವಿರ ಆಪ್ತ ಸಮಾಲೋಚಕರನ್ನು ತರಬೇತುಗೊಳಿಸಿದ್ದಾರೆ. 30 ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. 1 ಕೋಟಿ 14 ಲಕ್ಷ ರೂ.ಗಳನ್ನು ಇವರು ನಿಮ್ಹಾನ್ಸ್‌ ಸಂಸ್ಥೆಗೆ ದಾನವಾಗಿ ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಿ.ಸಿ. ರಾಯ್‌ ಪ್ರಶಸ್ತಿ, ಮಹಾತ್ಮ ಗಾಂಧಿ ಸೇವಾ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ | Rama Mandir : ರಾಮ ಮಂದಿರ ಆಯಿತು, ಇನ್ನು ಹಿಂದೂ ರಾಷ್ಟ್ರ; RSS ಸಹಕಾರ್ಯವಾಹ ನಾ ತಿಪ್ಪೇಸ್ವಾಮಿ

ಈ ಸಂದರ್ಭದಲ್ಲಿ ಶಿಲ್ಪಿ ಗಣೇಶ್‌ ಭಟ್‌, ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌ ಮತ್ತು ಖ್ಯಾತ ದಂತ ವೈದ್ಯ ಡಾ. ರಘುನಾಥ್‌ ಅವರನ್ನು ಸನ್ಮಾನಿಸಲಾಯಿತು. ಸಮತಾ ಲೇಡಿಸ್‌ ಅಸೋಷಿಯೇಷನ್‌ ಅಧ್ಯಕ್ಷೆ ಸುವರ್ಣಾ ಅಮರನಾಥ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ಅಸೋಷಿಯೇಷನ್‌ ಸದಸ್ಯೆ ಆಗಿರುವ ವೀಣಾ ಪ್ರಕಾಶ್‌ ಅವರು ರಾಮ ಮಂದಿರ ಚಳವಳಿ ಕುರಿತ ಚಿತ್ರಣ ಇರುವ ʼಮಂದಿರವಲ್ಲೇ ಕಟ್ಟಿದೆವು!ʼ ಕೃತಿಯನ್ನು ಅತಿಥಿಗಳಿಗೆ ನೀಡಿದರು.

Exit mobile version