ಬೆಂಗಳೂರು: 2023ನೇ ಸಾಲಿನ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾಸ್ಪರ್ಧೆ’ಯ (Bookbrahma awards) ಬಹುಮಾನಗಳು (Literature Award) ಘೋಷಣೆಯಾಗಿವೆ. 2023 ಆಗಸ್ಟ್ 15ರ, ಮಂಗಳವಾರದಂದು ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾಸ್ಪರ್ಧೆ’ ಮತ್ತು ‘ಕಾದಂಬರಿ ಪುರಸ್ಕಾರ’ (Book Brahma Story Competition) ಸಮಾರಂಭದಲ್ಲಿ ಬಹುಮಾನಗಳನ್ನು ಘೋಷಿಸಲಾಯ್ತು.
2023ನೇ ಸಾಲಿನ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ (kannada novel) ಪುರಸ್ಕಾರ ಎಂ.ಆರ್. ದತ್ತಾತ್ರಿ ಅವರ ಅಂಕಿತ ಪ್ರಕಾಶನದಿಂದ ಪ್ರಕಟವಾದ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿಗೆ ಲಭಿಸಿದೆ. ತಮಿಳು ಕಾದಂಬರಿಕಾರ ಚಾರು ನಿವೇದಿತಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾದಂಬರಿ ಪುರಸ್ಕಾರವು 1 ಲಕ್ಷ್ಮ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
‘ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆ’ಯ (kannada short story) ಪ್ರಥಮ ಬಹುಮಾನ ಕಥೆಗಾರ ಇಂದ್ರಕುಮಾರ್ ಎಚ್. ಬಿ ಅವರಿಗೆ ಲಭಿಸಿತು. ದ್ವಿತೀಯ ಬಹುಮಾನ ಅಕ್ಷಯ ಪಂಡಿತ್ ಅವರಿಗೆ ಹಾಗೂ ತೃತೀಯ ಬಹುಮಾನ ವಿಕಾಸ್ ನೇಗಿಲೋಣಿ ಅವರಿಗೆ ಲಭಿಸಿದೆ. ಪ್ರಥಮ ಬಹುಮಾನ 50,000 ನಗದು ಪ್ರಶಸ್ತಿ ಫಲಕವನ್ನೊಳಗೊಂಡಿದೆ, ದ್ವಿತೀಯ ಬಹುಮಾನ 25,000 ನಗದು ಹಾಗೂ ಪ್ರಶಸ್ತಿ ಫಲಕ, ಹಾಗೂ ತೃತೀಯ ಬಹುಮಾನ 15,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ.
ಕಾದಂಬರಿಯಲ್ಲಿ ಸಮಾಧಾನಕರ ಬಹುಮಾನಗಳಿಗೆ ಉಷಾ ನರಸಿಂಹನ್ ಅವರ ಅಂಕಿತ ಪ್ರಕಾಶನದ ‘ಕೆಂಡದ ರೊಟ್ಟಿ’, ಕಾ.ತ. ಚಿಕ್ಕಣ್ಣ ಅವರ ರಶ್ಮಿ ಪ್ರಕಾಶನದ ‘ಪುರಾಣ ಕನ್ಯೆ’, ಪೂರ್ಣಿಮಾ ಮಾಳಗಿಮನಿ ಅವರ ಸಪ್ನ ಬುಕ್ ಹೌಸ್ ಪ್ರಕಟಿಸಿದ ‘ಅಗಮ್ಯ’, ಹಾಗೂ ಎಚ್.ಎಸ್. ಅನುಪಮಾ ಅವರ ಲಡಾಯಿ ಪ್ರಕಾಶನದ ‘ಬೆಳಗಿನೊಳಗು ಮಹಾದೇವಿಯಕ್ಕ’ ಕೃತಿಗಳು ಆಯ್ಕೆಯಾಗಿದ್ದು, ಈ ನಾಲ್ಕು ಕೃತಿಗಳಿಗೆ 5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಯಿತು. ಕತೆಗಳಲ್ಲಿ ಶರತ್ ಭಟ್ ಸೇರಾಜೆ, ಪೂರ್ಣಿಮಾ ಭಟ್ಟ ಸಣ್ಣಕೇರಿ, ಜಯರಾಮಚಾರಿ, ದೀಪ್ತಿ ಭದ್ರಾವತಿ, ಹಾಗೂ ವಿಜಯಶ್ರೀ ಎಂ ಹಾಲಾಡಿ ಸೇರಿದಂತೆ ಐವರು ಕಥೆಗಾರರಿಗೆ ಸಮಾಧಾನಕರ ಬಹುಮಾನ ನೀಡಲಾಯ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಾಗೂ ಹಿರಿಯಾ ಒಡಿಯಾ ಕಥೆಗಾರ್ತಿ ಪರಮಿತ ಸತ್ಪತಿ ತ್ರಿಪಾಠಿ ಮಾತನಾಡಿ, “ಈ ಕಾರ್ಯಕ್ರಮವು ನನಗೆ ಬಹಳಷ್ಟು ಖುಷಿಯನ್ನು ನೀಡಿದೆ. ಕನ್ನಡ ಸಾಹಿತ್ಯಲೋಕದಲ್ಲಿ ಸೃಜನಶೀಲ ಬರವಣಿಗೆಗಳ ಸಂಖ್ಯೆ ಹೆಚ್ಚಿದೆ. ಇನ್ನು ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಯುವಜನರಿದ್ದಾರೆ. ಇದು ನನಗೆ ನಿಜವಾಗಿಯೂ ಆಶ್ಚರ್ಯವನ್ನು ಉಂಟುಮಾಡಿದೆ,” ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ ಸುರಕ್ಷತೆ ತಜ್ಞ ಹಾಗೂ ವಿಜ್ಞಾನ ಲೇಖಕರಾದ ಉದಯ ಶಂಕರ ಪುರಾಣಿಕ್ ಮಾತನಾಡಿ, “ಇಂಗ್ಲಿಷ್ ನಿಂದ ಭಾರತೀಯ ಭಾಷೆಗೆ ಸಾಹಿತ್ಯ ಅನುವಾದವಾಗುತ್ತಿದೆ. ಆದರೆ ಭಾರತೀಯ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಅನುವಾದವಾಗುವ ಸಾಹಿತ್ಯ ಬಹಳಷ್ಟು ವಿರಳ. ಇದು ಯಾಕೆ ಅಸಾಧ್ಯ ಎನ್ನುವುದು ನನಗೆ ಸದಾ ಕಾಡುತ್ತದೆ,” ಎಂದರು.
ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, “ಸಾಹಿತ್ಯಲೋಕದ ಕತೆ ಹಾಗೂ ಕಾದಂಬರಿಗಳು ನಮ್ಮನ್ನು ಇಲ್ಲಿ ಸೇರಿಸಿವೆ. ಯಾವುದೇ ಒಂದು ಕತೆಯನ್ನು ಓದಿದಾಗ ನಮ್ಮ ಮುಂದೆ ದೃಶ್ಯ ಬರುತ್ತದೆ. ಹಾಗೆಯೇ ಈ ಕಥೆಗಳನ್ನು ಓದಿದಾಗಲೂ ನನ್ನ ಕಣ್ಣ ಮುಂದೆ ದೃಶ್ಯಗಳು ಬಂದಿವೆ. ಈ ಹೊತ್ತಿನ ಎಲ್ಲಾ ಅಂಶಗಳನ್ನು ಈ ಕತೆಗಳು ಒಳಗೊಂಡಿದೆ. ಒಂದೊಂದು ಕತೆಯು ಒಂದೊಂದು ರೀತಿಯ ಸಂವೇದನೆಯನ್ನು ಒಳಗೊಂಡಿವೆ. ಕತೆ ಇರುವುದೇ ನಾವು ಹುಟ್ಟಿದ ನಾಡು, ಬೇರಿನಲ್ಲಿ. ನಮ್ಮ ಸಂವೇದನೆಗಳು ಇನ್ನೂ ನಗರಕೇಂದ್ರಿತವಾಗಿಲ್ಲ. ಇವತ್ತಿನ ಕತೆಗಳ ಛಾಯೆ ಇರಬೇಕಿತ್ತು ಅನ್ನಿಸಿತ್ತು. ಆಯ್ಕೆಯಾದ ಕತೆಗಳು ಇಂದಿನ ಕಥಾ ಸಾಹಿತ್ಯದ ಕುರಿತು ತಿಳಿಸುತ್ತವೆ. ಪ್ರತಿಯೊಂದು ಕತೆಯಲ್ಲೂ ಯಾವುದಾದರೂ ಒಂದು ಅಂಶ ಇರುತ್ತದೆ. ವಸ್ತು, ತಂತ್ರ, ನಿರೂಪಣೆ ಹೀಗೆ ಐದು ಅಂಶಗಳನ್ನು ಪರಿಗಣಿಸಿ ಕತೆಯ ಆಯ್ಕೆ ಆಗಿದೆ,” ಎಂದು ತಿಳಿಸಿದರು.
ತಮಿಳು ಕಾದಂಬರಿಕಾರ ಚಾರು ನಿವೇದಿತಾ ಮಾತನಾಡಿ, “ಅನುವಾದ ಸಾಹಿತ್ಯವು ಪ್ರಸ್ತುತ ಕಾಲಘಟ್ಟದಲ್ಲಿ ಬಹು ಮುಖ್ಯವಾದ ಸಾಹಿತ್ಯವಾಗಿದೆ. ತಮಿಳುನಾಡಿನಲ್ಲಿ ಸಿನಿಮಾವೇ ದೇವರಾಗಿದೆ. ಆದರೆ ಲೇಖಕರು ಅಸ್ತಿತ್ವದಲ್ಲಿಲ್ಲ. ಸಿನಿಮಾ ಬರಹಗಾರರು ತಮ್ಮನ್ನೇ ಲೇಖಕರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಸೃಜನಶೀಲ ಬರಹಗಾರರ ಕೊರತೆಯಿದೆ. ಅಂತರಾಷ್ಟ್ರೀಯ ಮಟ್ಟದ ಕಾದಂಬರಿಗಳನ್ನು ಅನುವಾದಿಸುವ ಪರಂಪರೆ ಬದಲಾಗಿ ನಮ್ಮದೇ ಸುತ್ತಮುತ್ತಲಿನ ಬೇರೆ ಭಾಷೆಯ ಸಾಹಿತ್ಯದ ಅನುವಾದವು ಹೆಚ್ಚಳವಾಗಬೇಕು,” ಎಂದು ತಿಳಿಸಿದರು.
ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, “ಕಾದಂಬರಿ ಪುರಸ್ಕಾರಕ್ಕೆ ಬಂದಂತಹ ಕಾದಂಬರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವೊಂದು ವಿಚಾರಗಳನ್ನು ನಾವು ಗಣನೀಯವಾಗಿ ಪರಿಗಣಿಸಿದ್ದೆವು. ವಸ್ತು ವಿಷಯ, ಪುರಾಣದ ಕುರಿತ ವಸ್ತು ವೈವಿಧ್ಯ, ಭಾಷೆಯ ಸೊಗಡು ಹೀಗೆ ಎಲ್ಲಾ ಕೇಂದ್ರಿತ ಅಂಶಗಳನ್ನು ಹಿಡಿದು ಕಾದಂಬರಿಯನ್ನು ಆಯ್ಕೆ ಮಾಡಲಾಯಿತು. ಕಾದಂಬರಿ ಅನ್ನುವಂತಹದ್ದು ಓದುಗನಿಗೆ ಮೊದಲು ಖುಷಿಯನ್ನು ಕೊಡಬೇಕುʼʼ ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ‘ಬುಕ್ ಬ್ರಹ್ಮ’ ಸಂಪಾದಕ ದೇವು ಪತ್ತಾರ, “ಹೊಸ ನೀರನ್ನು, ಹೊಸ ಕತೆಗಾರರನ್ನು ಹಾಗೂ ಲೇಖಕರನ್ನು ಸಾಹಿತ್ಯ ಲೋಕಕ್ಕೆ ತರುವುದು ನಮ್ಮ ಮೂಲ ಉದ್ದೇಶ. ಪ್ರಸ್ತುತ ಸಾಲಿನಲ್ಲಿ 468 ಕತೆಗಳು ಹಾಗೂ 84 ಕಾದಂಬರಿಗಳು ಬಂದಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಬಹಳಷ್ಟು ಕತೆಗಳು ಕಾಡಿದವು,” ಎಂದರು.
ಅತಿಥಿಯಾಗಿ ಆಗಮಿಸಿದ್ದ ಪ್ರೊ. ರಾಜೇಶ್ ಶೆಣೈ ಮಾತನಾಡಿ, “ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅದ್ಭುತವಾಗಿ ಮೂಡಿದೆ ಬಂದಿದೆ. ಇಂತಹ ಸಮಾರಂಭಗಳು ಇನ್ನು ಹೆಚ್ಚಾಗಿ ನಡೆಯಬೇಕು,” ಎಂದರು. ಕಾರ್ಯಕ್ರಮದಲ್ಲಿ ಆಯ್ಕೆ ಸಮಿತಿಯಲ್ಲಿದ್ದ ತಾರಿಣಿ ಶುಭದಾಯಿನಿ, ತಮಿಳು ಕಾದಂಬರಿಕಾರ ಚಾರು ನಿವೇದಿತಾ, ರಾಜೇಶ್ ಶೆಣೈ, ದೇವು ಪತ್ತಾರ ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: Literature Award: ಜೋಗಿ, ರಘುನಾಥ ಚ.ಹ.ಗೆ ನರಹಳ್ಳಿ ಪುರಸ್ಕಾರ