ದೇಶ ವಿಭಜನೆಯ ಕತೆಗಾರ ಸಾದತ್ ಹಸನ್ ಮಂಟೋ ಅವರ ಕತೆಗಳು ಬಿ.ವಿ.ಭಾರತಿ ಅವರ ಅನುವಾದದಲ್ಲಿ ಕನ್ನಡಕ್ಕೆ ಬಂದಿವೆ. ಇವು ಹೊಸ ಪುಸ್ತಕ ದ ಕೆಲವು ಪುಟಗಳು…
ಮೂಲ : ಸಾದತ್ ಹಸನ್ ಮಂಟೋ
ಅನುವಾದ : ಬಿ.ವಿ. ಭಾರತಿ
ದಣಿವಿನ ದಿನವೊಂದು ಮುಗಿದ ನಂತರ ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಅವಳು ನಿದ್ರೆಗೆ ಜಾರಿದಳು. ಅವಳು ʼಬಾಸ್’ ಎಂಬ ಹೆಸರಿನಿಂದ ಕರೆಯುತ್ತಿದ್ದ ನೈರ್ಮಲ್ಯ ವಿಭಾಗದ ಅಧಿಕಾರಿಯೊಬ್ಬ ಆಗ ತಾನೇ ಅವಳೊಡನೆ ಸಂಭೋಗ ಮುಗಿಸಿ, ಕುಡಿದ ಅಮಲಿನಲ್ಲಿಯೇ ಮನೆಯ ಕಡೆಗೆ ಹೊರಟಿದ್ದ. ಅವನನ್ನು ತುಂಬಾ ಪ್ರೀತಿಸುವ ಅವನ ಕಾನೂನುಬದ್ಧ ಹೆಂಡತಿಯ ಪ್ರೇಮದ ಮೇಲಿನ ಅತೀವ ಕಾಳಜಿಯಿಂದ ತಾನು ಮನೆಗೆ ಹೊರಡಲೇಬೇಕೆಂದು ಹೊರಟಿದ್ದ. ಹಾಗಿಲ್ಲದಿದ್ದರೆ ಆ ರಾತ್ರಿ ಅವನು ಅಲ್ಲಿಯೇ ಉಳಿಯಲೂಬಹುದಿತ್ತು. ಆ ಅಧಿಕಾರಿಗೆ ದೇಹ ಸುಖ ಕೊಟ್ಟಿದ್ದರ ಲೆಕ್ಕ ಚುಕ್ತಾ ಮಾಡಲು ಅವನು ಕೊಟ್ಟಿದ್ದ ದುಡ್ಡು, ಎಂಜಲಿನಿಂದ ಒದ್ದೆಯಾಗಿದ್ದ ಅವಳ ಬಿಗಿಯಾದ ಬಾದಿಂದ ಹೊರ ಜಾರಲು ಹವಣಿಸುತ್ತಿತ್ತು. ಅವಳ ಉಸಿರಾಟದ ಲಯಕ್ಕನುಗುಣವಾಗಿ ಆ ನಾಣ್ಯಗಳು ಒಂದರೊಡನೊಂದು ಸೇರಿ ಮಾಡುವ ಸದ್ದು ಅವಳ ಹೃದಯದ ಅನಿಯಮಿತ ಬಡಿತದೊಡನೆ ವಿಲೀನವಾಗುತ್ತಿತ್ತು. ನಿಜಕ್ಕೂ ಹೇಳಬೇಕೆಂದರೆ ಆ ನಾಣ್ಯಗಳು ಕರಗಿ ಅವಳ ರಕ್ತದೊಡನೆ ಬೆರೆಯುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು! ಆ ಅಧಿಕಾರಿ ಬರುವಾಗ ತಂದಿದ್ದ ಬ್ರಾಂಡಿಯ ಸಣ್ಣ ಬಾಟಲ್ ಮತ್ತು ಸೋಡಾ ಖಾಲಿಯಾದ ನಂತರ ನೀರಿನ ಜೊತೆ ಕುಡಿದ ಬಿಯೋರಾ ಎರಡೂ ಸೇರಿ ಅವಳ ಎದೆಯ ತುಂಬಾ ಕಾವು ಹರಡುತ್ತಿತ್ತು.
ಅವಳು ತನ್ನ ವಿಶಾಲವಾದ ತೇಗದ ಮರದ ಮಂಚದಲ್ಲಿ ಮುಖ ದಿಂಬಿಗಾನಿಸಿ ಮಲಗಿದ್ದಳು. ತೋಳುಗಳವರೆಗೂ ಬಟ್ಟೆಯಿಲ್ಲದೇ ಬೆತ್ತಲಾಗಿದ್ದ ಅವಳ ಕೈಗಳು, ಗಾಳಿಪಟದ ಬಿದಿರು ಕಮಾನಿನಂತೆ ಹರಡಿದ್ದವು. ಅವಳ ಸುಕ್ಕುಗಟ್ಟಿದ ಬಲ ಕಂಕುಳು ಪದೇ ಪದೇ ಶೇವ್ ಮಾಡುವುದರಿಂದ ನೀಲಿಗಟ್ಟಿತ್ತು. ಅದು ರೆಕ್ಕೆಪುಕ್ಕ ತರಿದ ಕೋಳಿಯ ಚರ್ಮವನ್ನು ಅವಳಿಗೆ ಕಸಿ ಮಾಡಿದ್ದಾರೇನೋ ಎನ್ನಿಸುವ ಹಾಗೆ ಕಾಣುತ್ತಿತ್ತು. ಅವಳ ಸಣ್ಣ, ಅಸ್ತವ್ಯಸ್ತಗೊಂಡ ರೂಮಿನ ತುಂಬಾ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಡಿದ್ದವು. ಅವಳ ಹಾಸಿಗೆಯ ಕೆಳಗೆ ಅವಳ ಕಜ್ಜಿನಾಯಿಯು ಮೂರ್ನಾಲ್ಕು ಜೊತೆ ಹಳೆಯ ಚಪ್ಪಲಿಗಳ ಮೇಲೆ ತಲೆ ಆನಿಸಿಕೊಂಡು ಮಲಗಿತ್ತು. ನಿದ್ರೆಯಲ್ಲಿಯೂ ಅದು ಯಾವುದೋ ವಸ್ತುವನ್ನು ಕಂಡು ಹಲ್ಲು ಮಸೆಯುತ್ತಿತ್ತು. ಆ ನಾಯಿಯ ಚರ್ಮ ಎಷ್ಟು ಕಲೆಗಳಿಂದ ಕೂಡಿತ್ತೆಂದರೆ, ದೂರದಿಂದ ನೋಡಿದರೆ ಅದೊಂದು ನೆಲ ಒರೆಸುವ ಮಡಿಕೆಗಳ ಗೋಣಿಚೀಲದ ತುಂಡಿನಂತೆ ಕಾಣುತ್ತಿತ್ತು.
ಅವಳ ಮೇಕಪ್ ಸಾಮಗ್ರಿಗಳು: ರೋಜು, ಲಿಪ್ಟಿಕ್, ಪೌಡರ್, ಒಂದು ಬಾಚಣಿಕೆ, ಕೂದಲಿನ ಗಂಟಿಗೆ ಹಾಕುವ ಹೇರ್ ಪಿನ್ನುಗಳು ಗೋಡೆಯಲ್ಲಿದ್ದ ಒಂದು ಪುಟ್ಟ ಗೂಡಿನ ತುಂಬಾ ಹರಡಿದ್ದವು. ಅಲ್ಲೇ ತೂಗುಬಿಟ್ಟಿದ್ದ ಒಂದು ಪಂಜರದಲ್ಲಿ ಹಸಿರು ಗಿಣಿಯೊಂದು ತನ್ನ ರೆಕ್ಕೆಗಳಲ್ಲಿ ಮುಖ ಹುದುಗಿಸಿ ಮಲಗಿತ್ತು. ಪಂಜರದ ತುಂಬಾ ಒಣಕಲು ಸೀಬೆಹಣ್ಣಿನ ತುಂಡುಗಳು, ಕೊಳೆತ ಕಿತ್ತಳೆ ತುಂಡುಗಳು ಚೆಲ್ಲಾಡಿದ್ದವು ಮತ್ತು ಆ ದುರ್ಗಂಧ ಸೂಸುತ್ತಿದ್ದ ಹಣ್ಣುಗಳ ಮೇಲೆಲ್ಲ ನೊಣ ಮತ್ತು ನುಸಿಗಳು ಹಾರಾಡುತ್ತಿದ್ದವು.
ಹಾಸಿಗೆಯ ಪಕ್ಕದಲ್ಲಿ ಮಣಕುಗಟ್ಟಿದ ಒರಗು ಬೆತ್ತದ ಕುರ್ಚಿಯೊಂದಿತ್ತು ಮತ್ತು ಆ ಕುರ್ಚಿಯ ಬಲಭಾಗದಲ್ಲಿದ್ದ ಸುಂದರ ಸ್ಕೂಲಿನ ಮೇಲೆ HMV ಕಂಪನಿಯವರು ತಯಾರಿಸಿದ portable ಗ್ರಾಮಾಫೋನ್
ಇತ್ತು. ಗ್ರಾಮಫೋನಿಗೆ ಜಾಳುಜಾಳಾದ ಕರಿಯ ಬಟ್ಟೆಯೊಂದನ್ನು ಹೊದಿಸಲಾಗಿತ್ತು. ಸ್ಟೂಲಿನ ಮೇಲೆ ಮತ್ತು ರೂಮಿನ ಎಲ್ಲ ಕಡೆಯೂ ತುಕ್ಕು ಹಿಡಿದ ಸೂಜಿಗಳು ಬಿದ್ದಿದ್ದವು. ಸ್ಕೂಲಿನ ಹಿಂಭಾಗದ ಗೋಡೆಯ ಮೇಲೆ ನಾಲ್ಕು ಫೋಟೋ ಪ್ರೇಮುಗಳನ್ನು ನೇತುಹಾಕಲಾಗಿತ್ತು ಮತ್ತು ನಾಲ್ಕು ಗಂಡಸರ ಫೋಟೋಗಳು ಆ ಪ್ರೇಮಿನೊಳಗೆ ಬಂಧಿಸಲ್ಪಟ್ಟಿದ್ದವು.
ಆ ಫೋಟೋಗಳಿಂದ ಅನತಿ ದೂರದಲ್ಲಿ, ಅಂದರೆ ರೂಮಿನೊಳಗೆ ಕಾಲಿಟ್ಟರೆ ಎಡಬದಿಯ ಮೂಲೆಯಲ್ಲಿ ಒಂದು ಗಾಢವರ್ಣದ ಗಣೇಶನ ಚಿತ್ರ, ಬಹುಶಃ ಬಟ್ಟೆಯನ್ನು ಸುತ್ತುವ ರಟ್ಟಿನ ಕೊಳವೆಯಿಂದ ಕತ್ತರಿಸಿ ಪ್ರೇಮ್ ಹಾಕಿದ್ದು, ನೇತು ಹಾಕಲ್ಪಟ್ಟಿತ್ತು. ಅದರ ಮೇಲೆ ಜೀರ್ಣವಾದ ಹಾಗೂ ನಳನಳಿಸುತ್ತಿದ್ದ ಎರಡೂ ಬಗೆಯ ಹೂಗಳಿದ್ದವು. ಅಲ್ಲಿ ಎಣ್ಣೆ ಮಣಕುಗಟ್ಟಿದ ಗೂಡಿನಲ್ಲಿ ಎಣ್ಣೆಯ ಬಟ್ಟಲೊಂದಿತ್ತು, ಪಕ್ಕದಲ್ಲೇ ದೀಪವೊಂದು ಉರಿಯುತ್ತಿತ್ತು. ರೂಮಿನಲ್ಲಿ ಹೆಚ್ಚು ಗಾಳಿಯಾಡದ ಕಾರಣಕ್ಕಾಗಿ ಆ ದೀಪವು ಭಕ್ತನ ಹಣೆಯ ಮೇಲಿನ ನಾಮದಂತೆ ನಿಶ್ಚಲವಾಗಿ, ನೆಟ್ಟಗೆ ಉರಿಯುತ್ತಿತ್ತು. ಉರಿದು ನಂದಿದ ಗಂಧದಕಡ್ಡಿಯ ಹುಡಿ ಆ ಗೂಡನ್ನು ಮತ್ತಿಷ್ಟು ಗಲೀಜಾಗಿಸಿತ್ತು. ದಿನದ ಮೊದಲ ಗಳಿಕೆಯನ್ನು ಅವಳು ಕೈಯಲ್ಲಿ ಹಿಡಿದು ಗಣೇಶನ ವಿಗ್ರಹಕ್ಕೆ ತಾಕಿಸಿ, ನಂತರ ಹಣೆಗೊಮ್ಮೆ ಸೋಕಿಸಿ, ಆ ನಂತರ ಬ್ರಾ ಒಳಕ್ಕೆ ತುರುಕಿಕೊಂಡಳು. ಅವಳ ಮೊಲೆಗಳು ದೊಡ್ಡ
ಗಾತ್ರವಿರುವುದರಿಂದ ಹೊರಗೆ ಬೀಳುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಮಾಧೋ ಪುಣೆಯಿಂದ ರಜೆಗೆಂದು ಬಂದಾಗ ಮಾತ್ರ ಹಾಸಿಗೆಯಲ್ಲಿ ಕಾಲಿಟ್ಟುಕೊಳ್ಳುವ ಜಾಗದ ಕೆಳಗೆ ಆ ಕಾರಣಕ್ಕೆಂದೇ ಗುಳಿ ಮಾಡಿಸಿದ ಸಣ್ಣ ಕಿಂಡಿಯಲ್ಲಿ ಸ್ವಲ್ಪ ಹಣ ಬಚ್ಚಿಡುತ್ತಾಳೆ.
ಗಿರಾಕಿಗಳನ್ನೊದಗಿಸುವ ದಲ್ಲಾಳಿ ರಾಮ್ ಲಾಲ್ ಮಾಧೋನಿಗೆ ಹಣ ಸಿಗದಂತೆ ಬಚ್ಚಿಡಲು ಹೇಳಿಕೊಟ್ಟಿದ್ದ. ಮಾಧೋ ಅವಳೊಡನೆ ಮಲಗಲು ಪುಣೆಯಿಂದ ಬರುತ್ತಾನೆ ಅನ್ನುವ ವಿಷಯ ತಿಳಿದಾಗ ಅವನು ಹೇಳಿದ್ದ, “ಯಾವಾಗಿನಿಂದ ಆ ಸೂಳೆಮಗನ ಜೊತೆ ಇದೆಲ್ಲ ವ್ಯವಹಾರ ಶುರುವಾಗಿದ್ದು? ಎಂಥ ವಿಚಿತ್ರ ಪ್ರೇಮ ನಿಮ್ಮದು! ಆ ಹಲ್ಕ ಸೂಳೆಮಗೆ ಒಂದು ಪೈಸೆ ಖರ್ಚು ಮಾಡದೇ ನಿನ್ನ ಜೊತೆ ಮಲಗುವುದಲ್ಲದೇ, ಹೋಗುವಾಗ ನಿನ್ನ ಹಣವನ್ನೇ ಕಬಳಿಸುತ್ತಾನೆ. ಈ ವಿಷಯದಲ್ಲಿ ಏನೋ ಸರಿಯಿಲ್ಲವೆನ್ನಿಸುತ್ತದೆ ನನಗೆ. ನಿನಗೆ ಅವನೆಂದರೆ ಯಾವುದೋ ಕಾರಣಕ್ಕೆ ಬಹಳ ಇಷ್ಟವಿರಬೇಕು. ಕಳೆದ ಏಳು ವರ್ಷಗಳಿಂದ ನಾನು ತಲೆಹಿಡುಕನ ಕೆಲಸ ಮಾಡ್ತಿದ್ದೇನಲ್ಲ, ಹಾಗಾಗಿ ಹುಡುಗಿಯರ ದೌರ್ಬಲ್ಯಗಳೆಲ್ಲ ನನಗೆ ಚೆನ್ನಾಗಿ ಗೊತ್ತು.”
ಇದನ್ನೂ ಓದಿ: Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?
ರಾಮ್ ಲಾಲ್ ಇಡೀ ಬಾಂಬೆಯ ಉದ್ದಗಲಕ್ಕೂ ಹತ್ತು ರೂಪಾಯಿಯಿಂದ ನೂರು ರೂಪಾಯಿ ಚಾರ್ಜ್ ಮಾಡುವ ಸುಮಾರು 120 ಸೂಳೆಯರಿಗೆ ಗಿರಾಕಿ ಒದಗಿಸುತ್ತಾನೆ. ಅವನು ಸೌಗಂಧಿಗೆ ಹೇಳುತ್ತಾನೆ, “ನಾಯಿ, ಹಣವನ್ನು ಹಾಗೆ ದುಂದು ವೆಚ್ಚ ಮಾಡಬೇಡ, ನಿನಗೇ ಗೊತ್ತಿಲ್ಲದ ಹಾಗೆ ನಿನ್ನಲ್ಲಿರುವ ಬಟ್ಟೆಯೂ ಉಳಿಯದಂತೆ ಬೆತ್ತಲೆ ಮಾಡುತ್ತಾನೆ ಆ ತಾಯ್ಗಂಡ ಸೂಳೆಮಗ! ನಿನ್ನ ಹಾಸಿಗೆಯ ಕೆಳಗೆ ಒಂದು ಕಿಂಡಿ ಕೊರೆದು ನಿನ್ನ ಹಣವನ್ನೆಲ್ಲ ಅಲ್ಲಿ ಮುಚ್ಚಿಡು. ಅವನು ಬಂದಾಗ ಹೇಳು, “ನಿನ್ನಾಣೆಗೂ ಮಾಧೋ, ಇಡೀ ದಿನ ಒಂದೇ ಒಂದು ಪೈಸಾನೂ ಕಂಡಿಲ್ಲ! ಕೆಳಗಿನ ಅಂಗಡಿಯಿಂದ ನನಗಾಗಿ ಒಂದು ಕಪ್ ಚಹಾ, ಬಿಸ್ಕಟ್ ತರಿಸು,
ಹೊಟ್ಟೆ ಹಸಿವಿನಿಂದ ಘರ್ಜಿಸುತ್ತಿದೆ,’ʼ ಎಂದು, ತಿಳಿಯಿತಾ? ಸದ್ಯದ ಪರಿಸ್ಥಿತಿ ಸರಿಯಿಲ್ಲ. ಕಾಂಗ್ರೆಸ್ ಪಾರ್ಟಿಯ ಸೂಳೆಮಕ್ಕಳು ಮದ್ಯಸಾರವನ್ನೂ ನಿಷೇಧಿಸಿದ್ದಾರೆ. ವ್ಯಾಪಾರ ತುಂಬಾ ಕಡಿಮೆಯಾಗಿಹೋಗಿದೆ. ಮದ್ಯವನ್ನೇನೋ ಹೇಗಾದರೂ ಮಾಡಿ ಹೊಂಚಬಹುದು. ದೇವರಾಣೆಗೂ ಹೇಳುತ್ತೇನೆ, ಖಾಲಿಯಾಗಿರುವ ಶೀಶೆಗಳನ್ನೆತ್ತಿ ಅದರಲ್ಲಿ ಉಳಿದಿರುವ ವೈನನ್ನು ಮೂಸಿ ನೋಡುವಾಗ ಮುಂದಿನ ಜನ್ಮದಲ್ಲಿಯೂ ಸೂಳೆಯಾಗಿಯೇ ಹುಟ್ಟಬೇಕು ಎಂದು ಪ್ರಾರ್ಥಿಸುವಂತಾಗುತ್ತದೆ.”
ಸೌಗಂಧಿ ತನ್ನ ದೇಹದ ಎಲ್ಲ ಅಂಗಾಂಗಕ್ಕಿಂತ ತನ್ನ ತೋರ ಮೊಲೆಗಳನ್ನು ತುಂಬಾ ಇಷ್ಟ ಪಡುತ್ತಾಳೆ. ಅವಳ ಗೆಳತಿ ಜಮುನಾ, ʼನಿನ್ನ ಸಿಡಿಮದ್ದಿನಂಥ ಮೊಲೆಗಳಿಗೆ ಸರಿಯಾದ ಬ್ರಾದ ಒತ್ತಾಸೆ ಒದಗಿಸಿದರೆ ಅವು ಯಾವತ್ತೂ ತಮ್ಮ ಪೆಡಸುತನವನ್ನು ಕಳೆದುಕೊಳ್ಳುವುದಿಲ್ಲ’ ಎಂದು ಹುರಿದುಂಬಿಸುತ್ತಾಳೆ.
ಇದನ್ನೂ ಓದಿ: Book Excerpt: ಬಿದ್ದ ಮೊದಲ ಮಳೆ