ಸಿದ್ದವನಹಳ್ಳಿ ಕೃಷ್ಣಶರ್ಮ ಅವರದು ಕನ್ನಡ ಪತ್ರಕೋದ್ಯಮದಲ್ಲಿ ಅಜರಾಮರ ಹೆಸರು. ದಿಟ್ಟ ಸ್ವಾತಂತ್ರ್ಯ ಹೋರಾಟಗಾರರಾಗಿ, ಮಹಾತ್ಮ ಗಾಂಧಿ ಅವರ ಆತ್ಮಕತೆಯನ್ನು ಕನ್ನಡಕ್ಕೆ ತಂದವರಾಗಿ ಪ್ರಸಿದ್ಧರು. ವಿನೋಬಾ ಬಾವೆ ಅವರ ʻಗೀತಾಪ್ರವಚನʼವನ್ನೂ ಕನ್ನಡಕ್ಕೆ ತಂದಿದ್ದಾರೆ. ಪರ್ಣಕುಟಿ, ವರ್ಧಾಯಾತ್ರೆ ಮುಂತಾದ ಕೃತಿಗಳ ಮೂಲಕ ದೇಶಪ್ರೇಮ, ಗಾಂಧಿಚಿಂತನೆ, ಕಾಯಕನಿಷ್ಠೆಗಳನ್ನು ಬೆಳಗಿದರು. ಕನ್ನಡದ ಪತ್ರಿಕೋದ್ಯಮವನ್ನೂ ಸಾಹಿತ್ಯವನ್ನೂ ಸಮೃದ್ಧವಾಗಿ ಬೆಳೆಸಿರುವ ಸಿದ್ದವನಹಳ್ಳಿಯವರ ಬದುಕು- ಬರಹ- ಚಿಂತನೆಗಳ ಕುರಿತು ಅವರ ಪುತ್ರಿ ರಾಧಾ ಟೇಕಲ್ ಅವರು ʻಕನ್ನಡದ ಕಿಡಿʼ ಎಂಬ ಪುಸ್ತಕ ರಚಿಸಿದ್ದಾರೆ. ಈ ಕೃತಿಯಿಂದ ಆಯ್ದ ಭಾಗ ಇಲ್ಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಪತ್ರಿಕೆಯಲ್ಲಿ ಲೇಖನ ಮಾಲೆಯನ್ನು ʻಕನ್ನಡದ ನುಡಿ’ಯಲ್ಲಿ ಪ್ರಕಟಿಸಿದರು. ಅದು ಪುಸ್ತಕವಾಗಿಯೂ ಬಂತು, ಸಾಕಷ್ಟು ಬರೆದರು. ಅದೇನು ಅಂತಿಂಥಾದ್ದಲ್ಲ. ಸಾಕಷ್ಟು ಉಗ್ರ ಹರಿತ, ಬಿಎಂಶ್ರೀ ಅಭಿಮಾನದಿಂದ ಚರ್ಚೆಗೆ, ವಾದಕ್ಕೆ ಈಡಾಯಿತು. ಆದರೆ ಅಣ್ಣ ಜಗ್ಗಲಿಲ್ಲವಂತೆ. ತಮಗೆ ಸತ್ಯ ಎನಿಸಿದ್ದನ್ನು ಸ್ಪಷ್ಟವಾಗಿ ಬರೆದರು. ಇಂಗ್ಲಿಷ್ ವ್ಯಾಮೋಹವನ್ನು ಟೀಕಿಸಿದರು. ಕನ್ನಡ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಬೇಡವೇ? ಮಾತಾಡುವವರಿಗೆ, ಓದುವವರಿಗೆ ಅರ್ಥವಾಗದ ಈ ಜಾಹಿರಾತುಗಳೇಕೆ? ಹೀಗೆಲ್ಲಾ ಹೇಳಿದಾಗ ʻಕನ್ನಡದ ಕಣ್ವ’ ಎಂದೇ ಪ್ರಖ್ಯಾತರಾದ ಬಿಎಂಶ್ರೀ ಅವರನ್ನೂ ಬಿಡಲಿಲ್ಲ. ಅವರ ಮನೆಯ ಮುಂದಿದ್ದ ನಾಮಫಲಕ ಇಂಗ್ಲಿಷಿನಲ್ಲಿತ್ತು. ʻʻಕನ್ನಡದ ಕಣ್ವರಾಗಿ, ಹಗಲಿರುಳೂ ಕನ್ನಡದ ಚಿಂತೆಯಲ್ಲೇ ಇರುವ ಬಿಎಂಶ್ರೀ ಅವರಿಗೂ ಇಂಗ್ಲಿಷ್ ಬೋರ್ಡ್‌ನ ಹುಚ್ಚೇ?’ʼ ಬಿ.ಎಂ.ಶ್ರೀ ಅವರನ್ನು ಬೆಚ್ಚಿಸಿತು.
ಆದರೆ ಈ ತರುಣನ ಮಾತನ್ನು, ಕೆಚ್ಚನ್ನು, ಅರ್ಥ ಮಾಡಿಕೊಂಡ ಅವರು, “ನನ್ನಲ್ಲಿಗೆ ಅನೇಕ ಕನ್ನಡೇತರ ಮಿತ್ರರು ಬರುತ್ತಾರೆ. ಅವರಿಗಾಗಿ ಇಂಗ್ಲಿಷ್ ಬೋರ್ಡ್” ಎಂದು ಉತ್ತರ ಕೊಟ್ಟರು. “ಹಾಗಾದರೆ, ಕನ್ನಡ, ಇಂಗ್ಲಿಷ್ ಎರಡರಲ್ಲೂ ಇರಲಿ” ಎಂದು ಬರೆದರು. ಬಿಎಂಶ್ರೀ ಅವರು ಅಣ್ಣನ ಮಾತಿಗೆ ಮನ್ನಣೆ ಕೊಟ್ಟರು.
ಅನೇಕರ ಮನಸ್ಸಿನಲ್ಲಿದ್ದ ದ್ವಂದ್ವ, “ಬಿಎಂಶ್ರೀ ಅಂಥಾ ಮಹನೀಯರನ್ನು ಎದುರಿಸುವ ಶಕ್ತಿ ಇದೆಯಾ” ಎಂಬ ಸಣ್ಣ ಟೀಕಾಯುಕ್ತ ಹೇಳನೆಯ ಮಾತು ಸ್ತಬ್ಧವಾಯಿತು. ʻಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ’ ಇದು ಅಣ್ಣ ಬಯಸಿದ್ದು.
ವರ್ಧಾಯಾತ್ರೆ
(ನವೆಂಬರ್ 24, 1938ರಿಂದ ಅಕ್ಟೋಬರ್ 15, 1939)
ಅಣ್ಣ ತಿರುಮಲೆ ತಾತಾಚಾರ್ಯರ ಮನೆಯಲ್ಲಿದ್ದಾಗಲೇ, ನಮ್ಮ ದೊಡ್ಡಪ್ಪ ಅಂದರೆ ಕಾಮಲಾಪುರದ ಜಾಗೀರದಾರರಾದ ಶ್ರೀ ಶ್ರೀನಿವಾಸ ತೋಳಪ್ಪಾಚಾರ್ ಅವರು ತಮ್ಮಲ್ಲಿಗೆ ಬರಲು ಒತ್ತಾಯಿಸಿದರು. ಅಣ್ಣ ಕಾಮಲಾಪುರಕ್ಕೆ ಹೋದರು. ಅಲ್ಲಿರುವಾಗ ಗಾಂಧೀಜಿಯವರಿಗೆ, ಹೈದರಾಬಾದಿನ ಸ್ಥಿತಿಗಳ ಬಗ್ಗೆ ವಿವರಣೆ ನೀಡಿದರು.
ಗಾಂಧೀಜಿಗೆ ಆ ಪತ್ರ ತಲುಪಿದ ಕೂಡಲೇ, “ನೀನು ವರ್ಧಾಗೆ ಬಾ” ಎಂದು ಕಾಗದ ಬರೆದರು. ಅಣ್ಣ ವರ್ಧಾಗೆ ಹೊರಟರು. ಮುಂಬೈನ ದಾದರ್ ಸ್ಟೇಷನ್ನಲ್ಲಿ ಅದೆಷ್ಟು ಸಂತೋಷವೋ, ತಮಗಿಂತ ಮೊದಲೇ ಹೈದರಾಬಾದಿನಿಂದ ಗಡೀಪಾರಾಗಿದ್ದ ದಾಮೋದರ್‌ಮುಂದಡಾ ಅವರನ್ನು ಭೇಟಿಯಾದಾಗ! ಗಡೀಪಾರಾದ ಹದಿನೈದು ದಿನ ಇಪ್ಪತ್ತು ದಿನಗಳಲ್ಲಿ ಇಷ್ಟೆಲ್ಲಾ ನಡೆದವು.
ಅಣ್ಣಾ ವರ್ಧಾಗೆ ಹೋಗಿದ್ದು, ಅಲ್ಲಿ ಆಶ್ರಮದಲ್ಲಿ ʻಬಾಪೂ’ ಮಾತ್ರವಲ್ಲ, ಉಳಿದವರನ್ನೂ ಕಂಡದ್ದು ಬಹಳ ಆಪ್ತವಾಗಿ ಮನದಾಳದಲ್ಲಿ ಚಿತ್ರ ನಿಂತಿತು. ಗಾಂಧೀಜಿಯನ್ನು ನೋಡಿದ್ದರು ಈ ಮೊದಲೆ, ಕಾಲೇಜು ಯುವಕನಾಗಿದ್ದಾಗ ಬೆಂಗಳೂರಿನಲ್ಲಿ; ಅನಂತರ ಬೆಳಗಾವಿ ಕಾಂಗ್ರೆಸ್ಸಿನಲ್ಲಿ, ಈಗ, ತಾವೊಬ್ಬರೇ, ಹತ್ತಿರದಿಂದ
ನೋಡಿದರು. ಇಲ್ಲಿ, ಸೇವಾಗ್ರಾಮದ ಆಶ್ರಮದ ಯಜಮಾನನಾಗಿ, ಕಸ್ತೂರಿಬಾರೊಂದಿಗೆ ಆದರ್ಶ ದಾಂಪತ್ಯದ ಒಡನಾಡಿಯಾಗಿ, ಸದಾ ನಗುತ ನಗಿಸುತ್ತಾ ಪುಟ್ಟ ಮಕ್ಕಳ ಮುದ್ದಿನ ತಾತನಾಗಿ, ಆಶ್ರಮದಲ್ಲಿದ್ದ ರೋಗಿಗಳ ಶುಶ್ರೂಷೆಯ ಸೇವಾಸಕ್ತರಾಗಿ, ಲೇಖಕರಾಗಿ, ನಿರಂತರ ಕಾರ್ಯಾಸಕ್ತರಾಗಿ, ಧ್ಯಾನದಲ್ಲಿ ಯೋಗಿಯಾಗಿ, ವಿಚಾರಪರ ದಿಟ್ಟ ವ್ಯಕ್ತಿಯಾಗಿದ್ದ ಗಾಂಧೀಜಿಯನ್ನು ಕಂಡರು.
ಆ ಸೇವಾಗ್ರಾಮದ ಆಶ್ರಮದ ಪಕ್ಕದಲ್ಲಿ ಬಜಾಜ್‌ವಾಡಿ ಮಗನ್‌ವಾಡಿಗಳು (ಗುಜರಾತಿ ಭಾಷೆಯಲ್ಲಿ ವಾಡಿ ಎಂದರೆ ಪ್ರಾಕಾರ ಎಂದು), ಅಲ್ಲೇ ಚರ್ಮಾಲಯ, ಎಣ್ಣೆಯ ಗಾಣ, ನೂಲು ನೇಯುವ ಕನ್ನಡದ ಕಿರಿ ತಕಲಿಗಳು. ಕೃಷಿಯೊಂದು ಕಡೆ, ಗೋಶಾಲೆ ಇನ್ನೊಂದೆಡೆ, ಗಾಂಧೀ ಮಠದ ಮಹಂತ ಜಮನ್‌ಲಾಲ್ ಬಜಾಜ್. ಬೇವಿನ ಸೊಪ್ಪನ್ನೇ ಆಹಾರವಾಗಿ ತಿನ್ನುವ ಭನ್ಸಾಲಿ ಭಾ, ತಪೋನಿಷ್ಠ ವಿನೋಬಾ, ಉಕ್ಕಿನ ಮನುಷ್ಯ ವಲ್ಲಭಭಾಯಿ. ರಾಜಗೋಪಾಲಾಚಾರಿ, ಗಾಂಧೀ ಸಿದ್ಧಾಂತದ ಘನಪಾಟಿ ಕಿಶೋರಿಲಾಲ್ ಮಶಾಲಾ, ಬಾಬು ರಾಜೇಂದ್ರ ಪ್ರಸಾದ್, ಧೀರೋದಾತ್ತ ಜವಾಹರ್ಲಾಲ್ ನೆಹರು. ಅಜಾತಶತ್ರು ಆದಿವಾಸಿಗಳ ಮಿತ್ರ ಎಲ್ವಿನ್, ಮೌಲಾನಾ ಆಜಾದ್, ಪಟ್ಟಾಭಿ ಸೀತಾರಾಮರು ಎಲ್ಲರದೂ ದರ್ಶನ, ಸಂಪರ್ಕ ಸಿಕ್ಕಿತು.
ಇದನ್ನೂ ಓದಿ | ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ?
ಎಲ್ಲಕ್ಕಿಂತ ಪ್ರಶಾಂತ, ರಮಣೀಯ ಆಶ್ರಮದ ಜೀವನಾನುಭವ ಸಬರಮತಿ ಆಶ್ರಮದಲ್ಲಿ. ಮಹದೇವ್ ದೇಸಾಯಿ, ರಾಜಕುಮಾರಿ ಅಮೃತಾ ಕೌರ್‌ಎಲ್ಲರ ಭೇಟಿಯಾಯಿತು. ಹೈದರಾಬಾದಿನ ಪರಿಸ್ಥಿತಿಯ ಪೂರ್ತಿ ಚಿತ್ರಣವನ್ನು ಅವರೆಲ್ಲರ ಮುಂದಿಟ್ಟರು. ʻನಿಜಾಮ ಒಳ್ಳೆಯವನೇ. ಆದರೆ, ರಜಾಕಾರರ ಪ್ರಾಬಲ್ಯ ತಡೆಯುವ ಸಾಮರ್ಥ್ಯ ಇಲ್ಲ. ಅವರನ್ನು ಇದಿರು ಹಾಕಿಕೊಂಡರೆ, ಮುಸಲ್ಮಾನ್ ರಾಷ್ಟ್ರವನ್ನಾಗಿ ಮಾಡಲು ಮುರಿದು ಬೀಳುತ್ತದೆ ಎಂದು ಅವರ ಕೈ ಗೊಂಬೆಯಾಗಿ ಜನಹಿತ ದೃಷ್ಟಿ ಮರೆತಿದ್ದಾನೆ’ ಎಂದೆಲ್ಲಾ ವಿವರವಾಗಿ ಬಣ್ಣಿಸಿದರು. ಹೇಗಾದರೂ ಮಾಡಿ ಎಲ್ಲಾ ರಾಜ್ಯಗಳೂ ಒಂದು ದೇಶವಾಗಬೇಕೆಂಬ ಕನಸು ಗಾಂಧೀಜಿಯದು. ಎಲ್ಲರಿಗೂ ಅಣ್ಣ ಹೇಳುತ್ತಿರುವ ಗಂಭೀರ ಆಲೋಚನೆಗಳು ಹಿಡಿಸಿದವು. ಬಜಾಜರಂತೂ, “ನೀನು ನಮ್ಮಲ್ಲಿಯೇ ಇದ್ದು ಬಿಡು” ಎಂದು ಬಹಳ ಒತ್ತಾಯ ಮಾಡಿದರಂತೆ. ಆಶ್ರಮದಲ್ಲೇ ಅವರೊಂದಿಗೇ ಇದ್ದು ಬಿಡುವಂಥ ಸೆಳೆತ!
ಇಲ್ಲ, ಹಾಗಾಗಗೊಡಲಿಲ್ಲ. ಹನ್ನೊಂದು ತಿಂಗಳು ಅಲ್ಲಿದ್ದು, ಕೆಲಸ ಆದೊಡನೆ ಮತ್ತೆ ಕಾಮಲಾಪುರಕ್ಕೆ ಹಿಂತಿರುಗಿದರು. ಅಲ್ಲಿ ಜೆ.ಬಿ. ಕೃಪಲಾನಿ, ಸುಚೇತ ಕೃಪಲಾನಿ, ಸರ್ದಾರ್ ಪಟೇಲ್, ಇವರೆಲ್ಲರ ಜೊತೆ ಕಾಲ ಕಳೆದ ಅನುಭವವೇ, ಅಲ್ಲಿಂದ ಬಂದ ಮೇಲೆ ಬರೆದ “ವರ್ಧಾಯಾತ್ರೆ.” ಕೇವಲ ಎರಡೇ ತಿಂಗಳಲ್ಲಿ ಬರೆದು, ಮುದ್ರಣವಾಗಿ, ಪುಸ್ತಕ ಬಿಡುಗಡೆ ಆಯಿತಂತೆ.
ವರ್ಧಾದಲ್ಲಿ ತಮ್ಮ ಕಣ್ಣುಗಳು ಕಂಡದ್ದನ್ನು, ಕಿವಿಯಾರೆ ಕೇಳಿಸಿಕೊಂಡದ್ದನ್ನು, ತಮ್ಮ ಮನಸ್ಸು ಗ್ರಹಿಸಿದ್ದನ್ನು, ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ. ಮೂವಿಂಗ್ ಆಫೀಸ್ – ಜೆ.ಸಿ. ಕುಮಾರಪ್ಪ, ಆತನ ಭ್ರಾತೃ ಭರತ, ಭರತನ ಕೈಹಿಡಿದ ವಿದ್ಯಾವತಿ ಸೀತಾದೇವಿ, ಗಾಂಧೀ ಮಠದ ಮಹಂತ ವಾದಿಲಾಲ್ ಸೇಠ, ಜಮ್ನಾಲಾಲ್ ಬಜಾಜ್, ಬೇಸಾಯ ವಿಭಾಗದ ನೇಗಿಲಯೋಗಿ ಆರ್ಯನಾಯಗಂ, ವಿನೋಬಾ ಭಾವೆ, ಗಾಂಧೀತತ್ವ ಪ್ರಚಾರಕ ಕಾಕಾ ಕಾಲೇಲ್ಕರ್, ಬಲಗೈನಂತಿದ್ದ ಮಹದೇವ ದೇಸಾಯಿ- ಹೀಗೇ ಲೆಕ್ಕವಿಲ್ಲದಷ್ಟು ಮಂದಿಯ ಪರಿಚಯವನ್ನು ವರ್ಧಯಾತ್ರೆಯಲ್ಲಿ ಮೂಡಿಸಿದ್ದಾರೆ. ಹಲವಾರು ತಿಂಗಳು ಅಲ್ಲೇ ಇದ್ದ ಕಾರಣದಿಂದ ಗಾಂಧೀ ವಿಚಾರದಲ್ಲಿ ಸ್ಥಿರತೆ, ಗಾಂಧೀ ತತ್ತ್ವದಲ್ಲಿ ಮನಸ್ಸು ನೆಲೆಗೊಂಡಿತು. ಇಲ್ಲಿಯ ವಿಚಾರಗಳ ಹಾಗೂ ವ್ಯಕ್ತಿಗಳೊಂದಿಗೆ ಮಾತುಕತೆಯ ಅನುಭವ, “ವರ್ಧಾಯಾತ್ರೆ” ಬರೆಯಲು ಪ್ರಚೋದಿಸಿತು. ಆ ಕಾಲಕ್ಕೆ ಕನ್ನಡ ಸಾಹಿತ್ಯದಲ್ಲೇ ಅಪರೂಪ ಎನ್ನಿಸಿದ ಪುಸ್ತಕ, ಹೊಸ ಶೈಲಿ, ಹೊಸ ದೃಷ್ಟಿ ತುಂಬಿದ ಪುಸ್ತಕ.
ಇದಾದ ನಂತರ ಅವರ ಮನದಲ್ಲಿ ಅಚ್ಚೊತ್ತಿದ ಕೆಲವು ಮುಖಂಡರ, ತಮಗೆ ಬಹಳ ಪ್ರೀತಿಯಾದ ಕೆಲವರ ಪರಿಚಯ, ವ್ಯಕ್ತಿಚಿತ್ರಗಳಾಗಿ ಮೂಡಿ ಬಂದವು. ಅವು, ʻದೀಪಮಾಲೆ’, ʻಕುಲದೀಪಕರು’. ಹೀಗೆ ಒಂದು ಸಲ ಧಾರೆ ಹರಿಯ ತೊಡಗಿದಾಗ, ಗಾಂಧೀಜಿಯೇ ಮನದ ತುಂಬ ಹರಡಿಕೊಂಡಾಗ, ʻಪರ್ಣಕುಟಿ’ ಮೂಡಿ ಬಂತು. ಅಲ್ಲಿ ನೋಡಿದ್ದನ್ನು ಮನಸ್ಸಿಗೆ ತುಂಬಿಕೊಂಡು, ಕಾಗದದ ಮೇಲೆ ಎಳೆಎಳೆಯಾಗಿ ಬಿಡಿಸಿಟ್ಟ ಚಿತ್ರವೇ ವರ್ಧಾಯಾತ್ರೆ, ಅದನ್ನಿನ್ನಿಷ್ಟು ಹಿಗ್ಗಿಸಿದ್ದೇ ʻಪರ್ಣಕುಟಿ’ಯಾಯಿತು. ಅದರ ಸವಿ ಓದಿದವರಿಗೇ ಗೊತ್ತು! ʻಪರ್ಣಕುಟಿ’. ಇದೇನು ಕತೆಯಲ್ಲ, ಕಾದಂಬರಿಯಲ್ಲ. ಸ್ವತಃ ಅಣ್ಣ ಹೇಳಿದಂತೆ, 1922ರ ಐತಿಹಾಸಿಕ ಸಂದರ್ಭದಲ್ಲಿ, ಗಾಂಧೀಜಿಯ ಚಿತ್ರವೊಂದು ಮನಸ್ಸಿನಲ್ಲಿ ಮೂಡುತ್ತಾ ಬಂತು. ಬೆಳಗಾವಿಯ ಕಾಂಗ್ರೆಸ್, ಅದಕ್ಕೆ ಅಲ್ಲೊಂದು, ಇಲ್ಲೊಂದು ಬಣ್ಣ ಕೊಟ್ಟಿತು. ಆ ಬೆಳಕಿನಲ್ಲಿ ಗಾಂಧೀಜಿ ಸಾಹಿತ್ಯವನ್ನು ಓದುವ ಆಸೆ ಆಯಿತು. ಇದೆಲ್ಲದರ ಪರಿಣಾಮವೇ ಪರ್ಣಕುಟಿ”.
ಪುಸ್ತಕ: ಕನ್ನಡದ ಕಿಡಿ (ಸಿದ್ದವನಹಳ್ಳಿ ಕೃಷ್ಣಶರ್ಮ ಬದುಕು ಬರಹ)
ಲೇಖಕ: ರಾಧಾ ಟೇಕಲ್
ಪುಟ ೨೫೬, ಬೆಲೆ ೨೫೦ ರೂ.
ಪ್ರಕಾಶನ: ಸಂಸ್ಕೃತಿ ಬುಕ್ ಏಜನ್ಸೀಸ್ , ಮೈಸೂರು
ಇದನ್ನೂ ಓದಿ | ಹೊಸ ಪುಸ್ತಕ: ಮನುಷ್ಯನನ್ನು ಓಡಿಸಿದ ಬಳಿಕ…