Site icon Vistara News

ಕನ್ನಡ ಸಾರಸ್ವತ ಲೋಕದ ರಾಜ ರತ್ನ, ರತ್ನನ ಪದಗಳ ರಾಜರತ್ನಂ

G. P. Rajarathnam

ರಾಮಚಂದ್ರ ಡಿ.ಸಿ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಸಾಹಿತಿ ಜಿ.ಪಿ. ರಾಜರತ್ನಂ. ಅವರು ಕನ್ನಡ ಸಾಹಿತ್ಯದ ಪರಿಚಾರಿಕರಾಗಿಯೂ ಹೆಸರು ಮಾಡಿದ್ದವರು. ಮಕ್ಕಳ ಸಾಹಿತಿಯಾಗಿಯೂ ಅನೇಕ ಕೃತಿಗಳನ್ನು ಬರೆದಿರುವ ಅವರು, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ.

ಜಿ. ಪಿ. ರಾಜರತ್ನಂ ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತಗುಂಡ್ಲು ಪಂಡಿತ ವಂಶದಲ್ಲಿ ಡಿಸೆಂಬರ್ ೦೫, ೧೯೦೯ರಂದು ರಾಮನಗರದಲ್ಲಿ ಜನಿಸಿದರು.

ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್‌ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ಇವರ ತಂದೆ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದರು. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ಅವರ ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್ ಶಿಕ್ಷಕರಾಗಿದ್ದರು.

ರಾಜರತ್ನಂ

ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ, ಕನ್ನಡ ವಿದ್ಯಾಭ್ಯಾಸ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ`ತುತ್ತೂರಿ ‘ಶಿಶುಗೀತೆ ಸಂಕಲನ’. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಚೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ರಾಜರತ್ನಂ ಅವರಿಗೆ ‘ಸಾಹಿತ್ಯ ಸೇವೆ’ ಮುಂದುವರಿಸಲು ಉಪದೇಶಿಸಿದರು. ಅದರ ಫಲವೇ ಮುಂದೆ ‘ರಾಜರತ್ನಂ’ ಅವರಿಂದ ಉತ್ತಮ ಸಾಹಿತ್ಯ ಹೊರ ಬರಲು ಕಾರಣವಾಯಿತು. ಕವಿ, ನಾಟಕಕಾರ, ಮಕ್ಕಳ ಸಾಹಿತ್ಯ ರಚನೆಕಾರರಾಗಿ ಅವರು ದೊಡ್ಡ ಹೆಸರು ಮಾಡಿದರು.

ಮಡದಿಯ ಸಾವಿನಿಂದ ಧೃತಿಗೆಟ್ಟಿದ್ದರು
ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ಅವರು ಚಿಕ್ಕ ವಯಸ್ಸಿನಲ್ಲಿಯೇ ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ ‘ಬಾಳನಂದಾದೀಪ’ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ ‘ಕನ್ನಡ ಪಂಡಿತ ಹುದ್ದೆ’, ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. “ಭ್ರಮರ”ಎಂಬುದು ರಾಜರತ್ನಂ ಅವರ ಕಾವ್ಯನಾಮವಾಗಿತ್ತು.

ಅರಸಿ ಬಂದ ಪ್ರಶಸ್ತಿಗಳು
ವಿದ್ಯಾರ್ಥಿಗಳ ಲೇಖನಗಳ ಸಂಕಲನ “ವಿದ್ಯಾರ್ಥಿ ವಿಚಾರ ವಿಲಾಸʼʼ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ. ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ೧೯೭೬ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಅವರು, ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿಯಾದರೆ, ಎರಡನೇಯದು ಸಾಹಿತ್ಯ ಪರಿಚಾರಿಕೆ.

ಜನಪ್ರಿಯ ಕೃತಿಗಳ ಲೇಖಕ
ರಾಜರತ್ನಂ ಅವರ ಅನೇಕ ಕೃತಿಗಳು ಜನಪ್ರಿಯವಾಗಿವೆ. ಅವುಗಳಲ್ಲಿ “ತುತ್ತೂರಿʼʼ, “ರತ್ನನ ಪದಗಳುʼʼ, “ಎಂಡಕುಡುಕ ರತ್ನʼʼ, “ನಾಗನ ಪದಗಳುʼʼ, “ಬುದ್ಧನ ಜಾತಕಗಳುʼʼ, “ಧರ್ಮದಾನಿ ಬುದ್ಧʼʼ, “ಭಗವಾನ್ ಮಹಾವೀರʼʼ, “ಮಹಾವೀರನ ಮಾತುಕತೆʼʼ, “ಕಡಲೆಪುರಿʼʼ, “ಗುಲಗಂಜಿʼʼ, “ಕಂದನಕಾವ್ಯ ಮಾಲೆʼʼ ಪ್ರಮುಖವಾದವು.

ರಾಜರತ್ನಂ ಅವರು ತಮ್ಮನ್ನು ತಾವೇ ‘ಸಾಹಿತ್ಯ ಪರಿಚಾರಕ’ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು. ಭಾಷಣ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ ‘ಜಿ.ಪಿ.ರಾಜರತ್ನಂ,’ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಕಪಿನಪ್ಪನ ಮನೆಯಲ್ಲಿ ಜೋಹಾನ್‌ ಗ್ರೆಗರ್‌ ಮೆಂಡಲ್

Exit mobile version