ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (Akhila Bharatiya sahitya Parishad) 2022-2023ನೇ ಸಾಲಿನ ಆದಿಕವಿ ಪುರಸ್ಕಾರ (Adikavi puraskara) ಮತ್ತು ವಾಗ್ದೇವಿ ಪ್ರಶಸ್ತಿ (Vagdevi prashasti) ಗಳನ್ನು ಘೋಷಿಸಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಂಗಮೇಶ ಸವದತ್ತಿಮಠ (Dr Sangamesha Savadattimata) ಅವರನ್ನು ಆದಿಕವಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದರೆ, ವಾಗ್ದೇವಿ ಪ್ರಶಸ್ತಿಯನ್ನು ಸ್ವತಂತ್ರ ಸಂಶೋಧಕ ಮತ್ತು ಲೇಖಕ ಸತ್ಯನಾರಾಯಣ ಕಾರ್ತಿಕ್ (Sathyanaraya Kartik) ಅವರಿಗೆ ನೀಡಲಾಗುತ್ತಿದೆ. ಅಕ್ಟೋಬರ್ 28ರಂದು ಬೆಂಗಳೂರಿನ ಗಿರಿನಗರದಲ್ಲಿರುವ ಅಕ್ಷರಂ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ (Sahithya Awards) ಸಮಾರಂಭ ನಡೆಯಲಿದೆ ಎಂದು ಅಭಾಸಾಪ ಕರ್ನಾಟಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನರೂರು ಅವರು ತಿಳಿಸಿದ್ದಾರೆ.
1966ರಲ್ಲಿ ಹುಟ್ಟಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ 2015ರಲ್ಲಿ ಕರ್ನಾಟಕದಲ್ಲಿ ತನ್ನ ಕಾರ್ಯ ವಿಸ್ತರಣೆ ಮಾಡಿದೆ. ರಾಜ್ಯ ಅಧಿವೇಶನ, ದಕ್ಷಿಣ ಭಾರತ ಮಟ್ಟದ ಬಹುಭಾಷಾ ಕವಿಗೋಷ್ಠಿ, ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮರ ಜನ್ಮಶತಮಾನೋತ್ಸವ ಸೇರಿದಂತೆ ಸಂಘಟನೆ ಹಲವು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದಿದೆ.
ಅಭಾಸಾಪ ಸಂಘಟನೆ ಕಳೆದ ಐದು ವರ್ಷಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಸಾಹಿತಿ/ಸಂಶೋಧಕರನ್ನು ಗೌರವಿಸಲು ಆದಿಕವಿ ಪುರಸ್ಕಾರವನ್ನು, ಭರವಸೆ ಮೂಡಿಸಿದ ಕಿರಿಯ ಸಾಹಿತ್ಯ ಸಾಧಕರಿಗೆ ವಾಗ್ದೇವಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಆದಿಕವಿ ಪುರಸ್ಕಾರ ಪಡೆಯಲಿದ್ದಾರೆ ಡಾ. ಸಂಗಮೇಶ ಸವದತ್ತಿಮಠ
ವಾಲ್ಮೀಕಿ ಮಹರ್ಷಿಗಳು ಭಾರತಕ್ಕಷ್ಟೇ ಅಲ್ಲ, ಜಗತ್ತಿಗೇ ಆದಿಕವಿ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅವರ ನೆನಪಿನಲ್ಲಿ ಪ್ರತಿವರ್ಷ ಆದಿಕವಿ ಪುರಸ್ಕಾರವನ್ನು ನೀಡುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಹಿರಿಯ ಸಾಹಿತಿಗಳು / ಸಾಹಿತ್ಯ ಸಂಶೋಧಕರಿಗೆ ಆದಿಕವಿ ಪುರಸ್ಕಾರವನ್ನು ನೀಡಲಾಗುತ್ತದೆ. ಆದಿಕವಿ ಪ್ರಶಸ್ತಿಯು ಒಂದು ಫಲಕ, ನೆನಪಿನ ಕಾಣಿಕೆ ಮತ್ತು ಒಂದು ಲಕ್ಷ ರೂಪಾಯಿ ನಗದು ಹಣವನ್ನು ಹೊಂದಿದೆ.
ಈ ಸಾಲಿನ ಆದಿಕವಿ ಪುರಸ್ಕಾರವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಂಗಮೇಶ ಸವದತ್ತಿಮಠ ಅವರಿಗೆ ನೀಡಲಾಗುತ್ತಿದೆ. ಸಂಗಮೇಶ ಸವದತ್ತಿಮಠ ಅವರು ಕನ್ನಡ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸಮಾಜ ಭಾಷಾ ವಿಜ್ಞಾನದ ಸರ್ಟಿಫಿಕೇಟ್, ಸಿಐಐಎಲ್ಎಲ್ ಮೈಸೂರು, ಐಐಟಿ ಕಾನ್ಪುರ್ನಿಂದ ಇಂಟೆನ್ಸಿವ್ ಕೋರ್ಸ್ ಇನ್ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಮಾಡಿದ್ದಾರೆ.
ವಿಶ್ವ ವಿದ್ಯಾಲಯದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ . ಡೀನ್ ಆಗಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾಗಿ, ಕಾರ್ಯದರ್ಶಿ, ಅಧ್ಯಕ್ಷ, ಕಾರ್ಯನಿರ್ವಾಹಕರಾಗಿ ವಿಶ್ವವಿದ್ಯಾಲಯದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅನೇಕ ವಿಶೇಷ ಜವಾಬ್ದಾರಿಗಳ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಹಲವು ವಿಶೇಷ ಹೊಣೆಗಾರಿಕೆ ನಿಭಾಯಿಸಿದ್ದಾರೆಇ.
ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದು ಸಾಂಸ್ಕೃತಿಕ ಸಂಘಟನೆಗಳನ್ನು ಸಂಸ್ಥಾಪಿಸಿ ಅನೇಕ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಲ್ಲಿಯವರೆಗೆ ಇವರ ಸರಿಸುಮಾರು 136 ಗ್ರಂಥಗಳು ಪ್ರಕಟವಾಗಿವೆ. 500 ಉಪನ್ಯಾಸಗಳನ್ನು ನೀಡಿದ್ದಾರೆ.
ರೂಪರಶ್ಮಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಅನೇಕ ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಅನೇಕ ಸಾಹಿತ್ಯಕ ಸಮಾರಂಭಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ.
ದೇಶವಿದೇಶಗಳಲ್ಲಿ ರಾಮಾಯಣ ಮಹಾಭಾರತ ವಿಷಯಗಳ ಬಗೆಗೆ ಪ್ರಬಂಧ ಮಂಡಿಸಿದ್ದಾರೆ. ವಚನ ಸಾಹಿತ್ಯ, ಯಕ್ಷಗಾನ ಭಾಷಾ ವಿಜ್ಞಾನದ ಕುರಿತು ಅನೇಕ ವಿವಿಧ ವಿಷಯಗಳನ್ನೊಳಗೊಂಡ ಪ್ರಬಂಧಗಳನ್ನು, ಉಪನ್ಯಾಸಗಳನ್ನು ಮಂಡಿಸಿದ್ದಾರೆ.
13 ಪಿಎಚ್ ಡಿ ಮತ್ತು 15 ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸರಿ ಸುಮಾರು 37-38 ಪ್ರಶಸ್ತಿಗಳನ್ನು ಪಡೆದಿರುವ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಜನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಹಿಂದೆ ಆದಿ ಕವಿ ಪುರಸ್ಕಾರ ಪಡೆದವರು: ಡಾ. ಕೆ. ಎಸ್. ನಾರಾಯಣಾಚಾರ್ಯ, ಶ್ರೀ ಶ್ರೀ ಸಿರಿಗೆರೆ ಶಿವಾಚಾರ್ಯ ಸ್ವಾಮೀಜಿಗಳು, ಡಾ. ಬಾಬು ಕೃಷ್ಣಮೂರ್ತಿ ಮತ್ತು ಶ್ರೀ ಪುಟ್ಟು ಪರಶುರಾಮ ಕುಲಕರ್ಣಿಯವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪೋಷಕರು: ಸಾಹಿತ್ಯಾಸಕ್ತರೂ, ಸಮಾಜ ಸೇವಕರೂ, ಉದ್ಯಮಿಗಳೂ, ಸಜ್ಜನರೂ ಆದ ವೀಣಾ ಮತ್ತು ಜಯರಾಮ್ ದಂಪತಿಗಳು ಈ ಪುರಸ್ಕಾರದ ಪ್ರಾಯೋಜಕರು.
ವಾಗ್ದೇವಿ ಪ್ರಶಸ್ತಿ ಪಡೆದಿರುವ ಸಾಧಕರು ಸತ್ಯನಾರಾಯಣ ಕಾರ್ತಿಕ್
ತಮ್ಮ ಬರವಣಿಗೆಯಿಂದ ಭರವಸೆ ಮೂಡಿಸುತ್ತ ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವ ಕಿರಿಯ ಸಾಹಿತ್ಯ ಸಾಧಕರಿಗೆ ವಾಗ್ದೇವಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಸಾಲಿನ ವಾಗ್ದೇವಿ ಪ್ರಶಸ್ತಿಗೆ ಸತ್ಯನಾರಾಯಣ ಕಾರ್ತಿಕ್ ಅವರು ಭಾಜನರಾಗಲಿದ್ದಾರೆ.
ಎಂ.ಎ ಪದವೀಧರರಾದ ಸತ್ಯನಾರಾಯಣ ಕಾರ್ತಿಕ್ ಅವರು ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಸ್ವತಂತ್ರವಾಗಿ ಸಂಶೋಧನೆ ಮಾಡುತ್ತಿರುವ ಇವರು 4 ಸ್ವತಂತ್ರ ಪುಸ್ತಕಗಳನ್ನು ಹಾಗೂ 3 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಲೇಖನಗಳನ್ನು ಅನೇಕ ನಿಯತಕಾಲಿಕಗಳು ಮತ್ತು ಅಭಿನಂದನಾ ಗ್ರಂಥಗಳಿಗೆ ಬರೆದಿದ್ದಾರೆ.
ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2016ನೇ ಸಾಲಿನ ಅರಳು ಪ್ರಶಸ್ತಿ ಹಾಗೂ ಭಾರತ ಸರ್ಕಾರದ ರಾಷ್ಟ್ರಪತಿ ಪ್ರಶಸ್ತಿ, ಮಹರ್ಷಿ ಬಾದಾರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಮತ್ತು ಭಾರತದ ಪುರಾತತ್ವ ಇಲಾಖೆ, ಶಾಸನ ಇಲಾಖೆ, ಇತಿಹಾಸ ಇಲಾಖೆ, ಗುಲಬರ್ಗಾ ವಿಶ್ವ ವಿದ್ಯಾಲಯ, ಮಿಥಿಕ್ ಸೊಸೈಟಿ, ಬಿಎಂಶ್ರೀ ಪ್ರತಿಷ್ಠಾನ, ಗೋಖಲೆ ಇನ್ಸ್ಟಿಟ್ಯೂಟ್, ಮುಂಬೈ ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಳನ್ನು ಪ್ರಬಂಧ ಮಂಡನೆಯನ್ನು ಮಾಡಿದ್ದಾರೆ. ಪುರಾತತ್ವ ಇಲಾಖೆಯ ಉತ್ಖನನಗಳಲ್ಲಿ ಕೂಡ ಭಾಗವಹಿಸಿದವರಗಿದ್ದಾರೆ.
ಈ ಹಿಂದೆ ಪ್ರಶಸ್ತಿ ಭೂಷಿತರು: ಡಾ. ರೋಹಿಣಾಕ್ಷ ಶಿರ್ಲಾಲು, ಡಾ. ಶಂಕರ ರಾಜರಾಮನ್, ಡಾ. ವಿಶ್ವನಾಥ ಸುಂಕಸಾಳ ಮತ್ತು ರೋಹಿತ್ ಚಕ್ರತೀರ್ಥ ಅವರನ್ನು ವಾಗ್ದೇವಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಾಗ್ದೇವಿ ಪ್ರಶಸ್ತಿಯ ಪೋಷಕರು : ಇಸ್ರೋದ. ಮಾಜಿ ವಿಜ್ಞಾನಿಗಳೂ ವಾಗ್ದೇವಿ ಸಮೂಹ ಶಿಕ್ಷಣಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರೂ ಆದ ಡಾ. ಕೆ. ಹರೀಶ್ ಅವರು ವಾಗ್ದೇವಿ ಪ್ರಶಸ್ತಿಯ ಪೋಷಕರು. ಈ ಪ್ರಶಸ್ತಿಯು ಒಂದು ಫಲಕ, ನೆನಪಿನ ಕಾಣಿಕೆ ಮತ್ತು ಒಂದು ಲಕ್ಷ ರೂ. ನಗದು ಹೊಂದಿದೆ.
ಅಕ್ಟೋಬರ್ 28ರಂದು ಪ್ರಶಸ್ತಿ ಪ್ರದಾನ ಸಮಾರಂಭ
2022-2023ನೇ ಸಾಲಿನ ಆದಿಕವಿ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಾಲ್ಮೀಕಿ ಮಹರ್ಷಿ ಜಯಂತಿಯ ದಿನವಾದ ಅಕ್ಟೋಬರ್ 28ರಂದು ಶನಿವಾರ ಬೆಂಗಳೂರಿನ ಗಿರಿನಗರದಲ್ಲಿರುವ ಅಕ್ಷರಂ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ಆಯೋಜಿಸಲಾಗಿದೆ.
ಇದನ್ನೂ ಓದಿ: Datti Awards: ಕನ್ನಡ ಸಾಹಿತ್ಯ ಪರಿಷತ್ತಿನ ʻಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿʼ ಪ್ರಶಸ್ತಿ ಪ್ರಕಟ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಗೌರವಾಧ್ಯಕ್ಷರು ಹಾಗೂ ಖ್ಯಾತ ಲೇಖಕರಾದ ಪ್ರೊ. ಪ್ರೇಮಶೇಖರ್ ವಹಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಕುಮಾರ್ ಉಪಸ್ಥಿತರಿರುತ್ತಾರೆ. ವಿಸ್ತಾರ ಮೀಡಿಯಾದ ಸಿಇಒ ಮತ್ತು ಪ್ರಧಾನ ಸಂಪಾದಕರು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಜಿಕೆ ಗ್ರೂಪ್ಸ್ ಮಾಲೀಕರಾದ ಜಯರಾಮ್ ಹಾಗೂ ವಾಗ್ದೇವಿ ಶಿಕ್ಷಣಸಂಸ್ಥೆಗಳ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಕೆ, ಹರೀಶ್ ಕಾರ್ಯಕ್ರಮದ ಭಾಗವಾಗಿರುತ್ತಾರೆ ಎಂದು ಅಭಾಸಾಪ ಕರ್ನಾಟಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ನರೂರು ತಿಳಿಸಿದ್ದಾರೆ.