Site icon Vistara News

Self -Discipline : ಕಠಿಣ ಹಾದಿಯಲ್ಲಿ ನಡೆದರಷ್ಟೇ ಸುಗಮ ಈ ಜೀವನದ ಪಯಣ

ಕಠಿಣವಾದ ಹಾದಿಯಲ್ಲಿ ನಡೆದರೆ ಮಾತ್ರ ಜೀವನದ ಪಯಣ ಸುಗಮವಾಗುವುದು. ನೀವು ಅದನ್ನು ಸುಲಭವಾಗಿರಬೇಕು ( Self -Discipline ) ಎಂದು ಬಯಸಿದರೆ ಅದು ಕಠಿಣವಾಗುತ್ತಾ ಹೋಗುತ್ತದೆ. ಇಲ್ಲಿ ಕಠಿಣವಾದ ಹಾದಿ ಎಂದರೆ ಸ್ವಯಂ-ಶಿಸ್ತು. (self -discipline) ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾನ ಅತ್ಯಂತ ಸುಂದರ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರ ಸಂದರ್ಶನವನ್ನು ಮಾಧ್ಯಮಗಳಲ್ಲಿ ನೀವು ನೋಡಿರಬಹುದು. ರಾಮ ಲಲ್ಲಾನ ಭವ್ಯ ವಿಗ್ರಹವನ್ನು ನಿರ್ಮಿಸುವ ಸಲುವಾಗಿ ಹಲವಾರು ತಿಂಗಳುಗಳ ಕಾಲ ಹೊರ ಜಗತ್ತಿನ ಸಂಪರ್ಕವನ್ನೇ ಬಹುತೇಕ ಕಡಿದುಕೊಂಡಿದ್ದರು. ಹಗಲಿರುಳೆನ್ನದೆ ತಪಸ್ಸಿನಂತೆ ಶಿಲ್ಪದಿಂದ ವಿಗ್ರಹದ ರಚನೆಯಲ್ಲಿ ತಲ್ಲೀನರಾಗಿದ್ದರು. ಅಂಥ ಏಕಾಗ್ರತೆಯ ಫಲಶ್ರುತಿಯನ್ನೂ ನಾವೀಗ ಕಾಣಬಹುದು. ಇಡೀ ಭಾರತ ಈಗ ಅರುಣ್‌ ಯೋಗಿರಾಜ್‌ ಅವರನ್ನು ಕೊಂಡಾಡುತ್ತಿದೆ. ಆದರೆ ಈ ಶ್ರೇಯಸ್ಸು, ಹಿರಿಮೆಯ ಹಿಂದೆ ಅವರ ಶ್ರದ್ಧೆ, ಭಕ್ತಿ, ಪ್ರತಿಭೆ, ಪರಿಶ್ರಮದ ತಪಸ್ಸೂ ಇದೆ. ಇದನ್ನೇ ಸ್ವಯಂ ಶಿಸ್ತು ಎನ್ನುತ್ತಾರೆ.

ಜೀವನದಲ್ಲೂ ಹಾಗೆಯೇ. ಸುಧಾರಣೆ ಮತ್ತು ಹಸನಾದ ಬದುಕಿನ ಭವಿಷ್ಯ ಬೇಕಿದ್ದರೆ, ಅದಕ್ಕೆ ಬೆಲೆ ತೆರಬೇಕು. ಅಶಿಸ್ತಿನಿಂದ ದಿನ ದೂಡುವುದು, ಎಲ್ಲವನ್ನೂ ಲಘುವಾಗಿ ಪರಿಗಣಿಸುವುದು, ಕಡೆಗಣಿಸುವುದು ಸುಲಭ. ಆದರೆ ಭವಿಷ್ಯದಲ್ಲಿ ಅದರ ಪರಿಣಾಮ ಬರ್ಬರವಾಗುತ್ತದೆ.

ಜೀವನದಲ್ಲಿ ಎಲ್ಲವೂ ಕಂಫರ್ಟಬಲ್‌ ಆಗಿರಬೇಕು ಎಂದು ಬಯಸುವವರು, ಕೊನೆಗೊಮ್ಮೆ ಬಿಕ್ಕಟ್ಟಿಗೇ ಸಿಲುಕುವುದು ಖಚಿತ. ಆದರೆ ಬದುಕನ್ನು ಸಾಹಸಿಯಾಗಿ ಎದುರಿಸುವವರ ಕತೆ ಕೇಳಿ. ಅವರು ಸವಾಲುಗಳನ್ನು ಆಹ್ವಾನಿಸುತ್ತಾರೆ. ಅವುಗಳಿಗೆ ಹೆದರದೆಯೇ, ಅವಕಾಶಗಳಾಗಿ ಪರಿವರ್ತಿಸುತ್ತಾರೆ. ಸ್ವಯಂ ಶಿಸ್ತು ಅವರನ್ನು ಸವಾಲುಗಳನ್ನು ಎದುರಿಸಲು ಸಶಕ್ತಗೊಳಿಸುತ್ತದೆ. ದಿನದಿಂದ ದಿನಕ್ಕೆ ಅವರು ಸಮಸ್ಯೆಗಳೆದುರು ಇಮ್ಯುನಿಟಿ ಗಳಿಸುತ್ತಾರೆ. ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಅದನ್ನು ಎದುರಿಸುತ್ತಾರೆ. ಏಕೆಂದರೆ ಅಂಥದ್ದಕ್ಕೆಲ್ಲ ಅವರು ಸದಾ ರೆಡಿಯಾಗಿರುತ್ತಾರೆ.

ನಿಮ್ಮ ಆಯ್ಕೆಗಳೇ ಈ ಕ್ಷಣಗಳನ್ನು ಸೃಷ್ಟಿಸುತ್ತವೆ. ಆದರೆ ಅದರ ಪರಿಣಾಮಗಳು ಜೀವನದುದ್ದಕ್ಕೂ ಇರುತ್ತವೆ. ನೀವು ಹೈ-ಕ್ಯಾಲೊರಿಯ ಬರ್ಗರನ್ನೇ ಪದೇಪದೆ ಸೇವಿಸುತ್ತೀರಾ, ಅಥವಾ ಆರೋಗ್ಯಕರವಾದ ಸಲಾಡನ್ನೇ ಬಯಸುತ್ತೀರಾ. ಬೆಳಗ್ಗೆ 5 ಗಂಟೆಗೆ ಏಳುತ್ತೀರಾ, ದಿನದ ನಿಮ್ಮ ಕೆಲಸದ ಪೂರ್ವ ತಯಾರಿ ಮಾಡುತ್ತೀರಾ? ತಪ್ಪು ಆಯ್ಕೆಯನ್ನು ಮಾಡಲು ಕೆಲವೇ ಸೆಕೆಂಡ್‌ಗಳು ಸಾಕು. ಆದರೆ ಅದರ ಪರಿಣಾಮ ದೀರ್ಘಕಾಲ ಇರುತ್ತದೆ. ಒಂದೇ ತಪ್ಪನ್ನು ಹಲವು ಸರ್ತಿ ಮಾಡಿದರೆ ಅದು ನಿಮ್ಮ ಚಾಳಿಯಾಗುತ್ತದೆ. ಆದ್ದರಿಂದ ಆಯ್ಕೆ ಬಗ್ಗೆ ಎಚ್ಚರದಿಂದಿರಿ.

ಒಂದು ಬರ್ಗರ್‌ ತಿಂದರೆ ನಿಮ್ಮ ತೂಕ ಇಳಿಸುವ ಪ್ರಯತ್ನದ ಮೇಲೆ ಏನೂ ಪರಿಣಾಮ ಬೀರಲಿಕ್ಕಿಲ್ಲ. ಆದರೆ ಪದೇಪದೆ ಸೇವಿಸಿದರೆ, ಜೀವನದಲ್ಲೆಂದಿಗೂ ತೂಕ ಇಳಿಸಲಾಗದು. ಆದ್ದರಿಂದ ಪ್ರತಿ ಸಲ ಸ್ವಯಂ ಶಿಸ್ತನ್ನು ತಪ್ಪಿಸಲು ನಿರ್ಧರಿಸಿದಲ್ಲಿ, ತಕ್ಷಣ ಮನಸ್ಸಿಗೆ ಕೇಳಿಕೊಳ್ಳಿ- ಇದರ ಪರಿಣಾಮ ಈ ಕ್ಷಣಕ್ಕೆ ಮಾತ್ರವಲ್ಲ, ಮುಂದಿನ ಬದುಕಿನ ಹತ್ತಾರು ವರ್ಷಗಳಿಗೂ ಕಾಣಬಹುದು.

ಇದನ್ನೂ ಓದಿ: Money Guide : ಬೇಡಿಕೆ ಗಳಿಸಿರುವ ಬಿಎಲ್‌ಎಸ್-ಸರ್ವೀಸ್‌ ಐಪಿಒ, ಈ ಕಂಪನಿಯ ವಿಶೇಷತೆ ಏನು?

ಹಾಗಾದರೆ ಸ್ವಯಂ ಶಿಸ್ತಿನ ಅನುಷ್ಠಾನ ಹೇಗೆ ಸಾಧ್ಯ? ಮನುಷ್ಯನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವೇ ಇಚ್ಛಾ ಶಕ್ತಿ. ಎಲ್ಲ ಪ್ರಲೋಭನೆ, ಪರಚೋದನೆಗಳಿಗೆ ಒಳಗಾಗದಂತೆ ನಿಗ್ರಹಿಸಿಕೊಳ್ಳುವ ಇಚ್ಛಾ ಶಕ್ತಿಯೇ ಮನುಷ್ಯನನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತದೆ. ಮನುಷ್ಯನಿಗೆ ಉತ್ತಮ ಭವಿಷ್ಯಕ್ಕಾಗಿ ಯಾವುದು ಒಳ್ಳೆಯದು-ಕೆಟ್ಟದ್ದು, ಯಾವುದನ್ನು ಈಗ ಮಾಡಬೇಕು ಮತ್ತು ಮಾಡಬಾರದು ಎಂದು ಯೋಚಿಸಬಲ್ಲ ಹಾಗೂ ಕ್ಷಣಿಕ ಸುಖವನ್ನು ತ್ಯಜಿಸುವ ಸಾಮರ್ಥ್ಯ ಇದೆ. ಆದರೆ ದುರದೃಷ್ಟವಶಾತ್‌ ಹಲವರು ” ಇದು ಚೆನ್ನಾಗಿದ್ದರೆ ಮಾಡು, ಇಲ್ಲದಿದ್ದರೆ ಮಾಡಬೇಡʼ ಎಂಬ ತತ್ತ್ವವನ್ನು ನಂಬಿ ಕೆಟ್ಟಿದ್ದಾರೆ. ಆದರೆ ಕ್ಷಣಿಕ ಸುಖಗಳು, ಪ್ರಲೋಭನೆಗಳು ತಾತ್ಕಾಲಿಕ ಕಂಫರ್ಟ್‌ ನೀಡಬಹುದು. ಆದರೆ ಸ್ವಯಂ ಶಿಸ್ತಿನ ಕಠಿಣ ಹಾದಿ ಒಳ್ಳೆಯದಿತ್ತು ಎಂಬುದು ಬಳಿಕ ಗೊತ್ತಾಗುತ್ತದೆ.

Exit mobile version