Site icon Vistara News

Sunday Read: ಹೊಸ ಪುಸ್ತಕ: ಶ್ರೀಧರ ಬಳಗಾರರ ಕಾದಂಬರಿ ʼವಿಸರ್ಗʼ

visarga novel

ಸರ್ಗ-1

ಕಬ್ಬಳ್ಳಿ ಬೆಟ್ಟದ ಹಾದಿಯನ್ನು ಹಾದು ಬರುತ್ತಿದ್ದ ಭಟ್ಟಣ್ಣ ಮತ್ತು ಮಾವಯ್ಯ ಇಬ್ಬರಿಗೂ ಹಠಾತ್ ಸಂಜೆಯಾದಂತನಿಸಿತು. ಚಪ್ಪರದ ಛಾವಣಿಯಂತೆ ದಟ್ಟ ಚಾಚಿದ ಮರಗಳು ಆಕಾಶ ಮುಚ್ಚಿ ಮಬ್ಬು ತಬ್ಬಿಕೊಂಡಿದ್ದವು; ಕೊಡೆ ಹಿಡಿದಂತೆ ಮೋಡ ಕವಿದು ಮಸುಕಾಗಿತ್ತು; ಸಾಲದ್ದಕ್ಕೆ ಜೀರುಂಡೆಗಳು ಗಡಿಬಿಡಿಯಲ್ಲಿ ಕಿರುಚುತ್ತ ಮುಸ್ಸಂಜೆ ಯನ್ನು ಗಳಿಗೆ ಮುಂಚೆ ಬರುವಂತೆ ಒತ್ತಾಯಿಸುತ್ತಿದ್ದವು; ಒಂದು ಫರ್ಲಾಂಗ ದೂರ ಒಂದೇ ಸಮ ಘಟ್ಟ; ಎಡ ಪಕ್ಕ ಜೀಡಿನ ಇಳಿಜಾರು; ಏರುತ್ತಿದ್ದಂತೆಯೇ ಇಬ್ಬರಿಗೂ ಉಬ್ಬಸ ಆರಂಭವಾಗಿ ಮಾತು ನಿಂತುಹೋಯಿತು; ಭಟ್ಟಣ್ಣ ಕೈ ಸನ್ನೆಯಲ್ಲೆ ಆಯಾಸವನ್ನು ವಿವರಿಸಲು ಯತ್ನಿಸುತ್ತಿದ್ದರು. ನಿತ್ಯ ನಡೆದು ಅಭ್ಯಾಸವಿರುವ ಮಾವಯ್ಯ ಉಸುರಿಗೆ ಕೊಸರಾಡದೆ ಬಗಲಲ್ಲಿ ತೂಗುತ್ತಿದ್ದ ಸಂಚಿಯೊಳಗೆ ಬೆರಳಾಡಿಸಿ ಕವಳ ಹಾಕುತ್ತ, “ಜೀವಕ್ಕೆ ತ್ರಾಸಾದ್ರೆ ಅಲ್ಲೆ ಕಲ್ಲ ಮ್ಯಾಲೆ ಮಾತ್ರ ಕೂತ್ಕಾ” ಎಂದ. ನಿಂತು ತಿರುಗಿ ಭಟ್ಟಣ್ಣ, “ತೊಡೆ ವರ್ಷಾತನೊ ಮುದುಕಾದ್ನೊ” ಎನ್ನುತ್ತ ಸಾವರಿಸಿಕೊಳ್ಳಲು ಪೇಚಾಡಿದರು; ತೆರೆದ ಕಣ್ಣು ರೆಪ್ಪೆ, ಉಬ್ಬಿದ ಮೂಗಿನ ಹೊರಳೆ, ನಡಗುವ ದನಿ, ಸೊಂಟದ ಮೇಲೂರಿದ ನರಗಳ ಸಪೂರ ಕೈಗಳು ಅವರ ಮಾತನ್ನು ಬೆಂಬಲಿಸುತ್ತಿದ್ದವು.

“ನಾವಿಬ್ರೂ ಒಂದೇ ವಯಸಿನವರು ಅಂದ್ಕಂಡಿನಪ್ಪ…” ಮಾವಯ್ಯನ ಕಾಲಿನಂಗುಷ್ಟ ಕಲ್ಲಿಗೆ ಜಪ್ಪಿ ಮಾತು ತುಂಡಾಯಿತು. ಚಪ್ಪಲಿನ ಬಾರು ಜಳ್ಳೆಯಾಯಿತು; ಬೆರಳ ತುದಿಯ ಸುಣ್ಣದ ಚಿಟಕೆಯನ್ನು ರಕ್ತ ಜಿನುಗಿದ ಅಂಗುಷ್ಟದ ಜಾಗಕ್ಕೆ ಸವರಿ ಶುಶ್ರೂಷೆ ಮಾಡಿಕೊಂಡದ್ದÀನ್ನು ಭಟ್ಟಣ್ಣ ಗಮನಿಸಲಿಲ್ಲ.

“ನಾನು ವಿಕಾರಿ ಸಂವತ್ಸರದ ಪಾದದಲ್ಲಿ ಹುಟ್ಟಿದ್ದೆ; ನೀನು ಕೊನೆಯಲ್ಲಿ; ಇಬ್ಬರೂ ಅರವತ್ತಕ್ಕೆ ಕಾಲಿಟ್ಟಾಗದೆ; ಆದ್ರೆ ನಿನಗಿಂತ ನಾನು ಆರೇಳು ತಿಂಗಳಕ್ಕೆ ಹಿರಿಯ; ನಿಂದು ಕೆಲಸ ಮಾಡಿದ ಗಟ್ಟಿ ಘಟವೊ; ಹಾಳಾದ ಆಮಶಂಕೆಗೆ ನನ್ನ ಜೀವಾ ಹಣ್ಣಾತು” ಭಟ್ಟಣ್ಣ ಅಲವತ್ತುಕೊಂಡರು.

ಉಬ್ಬಸ ಮತ್ತು ಅಂಗುಷ್ಟದ ಉರಿಯ ಅವರನ್ನು ಹಾಸುಗಲ್ಲು ಕರೆಯಿತು. ಮಾವಯ್ಯನ ರೈತಾಪಿ ಕಣ್ಣು, ಬುಟ್ಟಿ ಹೆಣಿಗೆಯ ಬೆತ್ತ, ಏಣಿಯ ಬಿದಿರು, ಕುಟಾರೆ ಕಾವಿನ ದುಂಡುಗಳ, ಕೊಟ್ಟಿಗೆ ಕಂಬಕ್ಕೆ ಸಾಗವಾನಿ ತುಂಡು, ಜೇನು…ಹುಡುಕುತ್ತಲಿತ್ತು; ಭಟ್ಟಣ್ಣನ ತಲೆಯಲ್ಲಿ ಉಪ್ಪರಿಗೆ ಮಾಸ್ತರ ಪಾಳು ಸುರಿಯುತ್ತಿರುವ ಮನೆಯನ್ನು ಮಾವಯ್ಯನಿಗೆ ಕಾಣಿಸಿ ತನ್ನ ಯೋಜನೆಯ ಗುಟ್ಟನ್ನು ಬಿಡಿಸಿ ಹೇಳುವ ಯೋಚನೆ ತುಂಬಿತ್ತು. ಮಾವಯ್ಯ ಸಂಚಿ ಬಿಚ್ಚಿದ; ತಾಮ್ರದ ಹಳೆಯ ಕನ್ನುಬಿಲ್ಲಿ ನಾಣ್ಯವನ್ನು ತುದಿಗೆ ಕಟ್ಟಿದ ದಾರದ ಸುತ್ತನ್ನು ಸರ್ರನೆ ಎಳೆದು ಖಾನೆಗಳ ಸಂಚಿಯನ್ನು ತೆರೆದ; ಖಾಕಿ ಬಟ್ಟೆಯ ಹಸುರು ದಡಿಯ ಐದು ಕಿಸೆಗಳ ಸಂಚಿಯಲ್ಲಿ ತೆಳ್ಳಗೆ ಕತ್ತರಿಸಿಟ್ಟ ಕೆಂಪಡಕೆಯ ಸುರಳಿ ಚಕ್ರಗಳು, ಗಿಳಿ ಸುಂಡಿಯ ಅಡಕತ್ರಿ, ಸುಣ್ಣ-ತಂಬಾಕು ತುಂಬಿಟ್ಟ ಹಿತ್ತಾಳೆಯ ಡಬ್ಬಿ, ಹದವಾಗಿ ಬೆಳೆದ ನೀರ ಹನಿಗಳ ತಾಜಾ ಅಂಬಾಡಿ ಎಲೆಗಳು, ಏಲಕ್ಕಿ-ಲವಂಗ-ಕೊಬ್ಬರಿ ಚೂರಿಟ್ಟ ಕರಡಿಗೆ ಮತ್ತು ಅವುಗಳ ಪರಿಮಳ. ಮಾವಯ್ಯ ನೀಡಿದ ಸುಳಿ ಚಕ್ರ ಅಡಿಕೆ ಚೂರುಗಳನ್ನು ಭಟ್ಟಣ್ಣ ಹೆಕ್ಕಿದರು; ಜೋಡು ಸುಳಿ ಎಲೆಗಳೊಂದಿಗೆ ಸುಣ್ಣದ ಡಬ್ಬಿಯನ್ನು ಕೊಟ್ಟ. ಭಟ್ಟಣ್ಣ ಎಲೆಗಳ ಬೆನ್ನು ಸೆರೆಗಳನ್ನು ಎತ್ತಿ, ಕೆಂಪು ಜಾಗದ ಮೇಲೆ ಸುಣ್ಣ ಸವರಿ, ಕುಡಿಯನ್ನು ಚಿವುಟಿ, ಚೌಕು ಮಡಚಿ ನುಗ್ಗಾದ ಅಡಿಕೆ ಗಾಣದ ಬಾಯೊಳಗಿಟ್ಟರು. ತುಸು ನುಗ್ಗಾದ ನಂತರ ಉಗುರಿನಿಂದ ತುಂಡರಿಸಿದ ತಂಬಾಕಿನ ಚೂರನ್ನು ಮುದ್ದೆಗಟ್ಟಿ ಪರಿಮಳದ ಪಾಕದ ಬಾಯೊಳಗೆ ಚಿಟಕಿ ಹಾರಿಸಿದರು. ಮಾವಯ್ಯ ಸಂಚಿಯನ್ನು ಅಚ್ಚುಕಟ್ಟಾಗಿ ಜೋಪಾನ ಮಾಡುವ, ಅಷ್ಟೇ ಸೊಗಸಾಗಿ ತಾಂಬೂಲವನ್ನು ನೀಡಿ ಉಪಚರಿಸುವ ರೀತಿ, ಭಟ್ಟಣ್ಣ ರುಚಿಗಟ್ಟಾಗಿ ಸವಿಯುವ ವೈಖರಿಯಲ್ಲೆ ಜನ ಅದ್ಭುತ ಕಲಾ ಸೌಂದರ್ಯವನ್ನು ಕಾಣುತ್ತಿದ್ದರು. ಸಂಚಿ ಎಷ್ಟು ಸ್ವಚ್ಛವಾಗಿರುತ್ತಿತ್ತೆಂದರೆ ಬರಿ ಬೆರಳಿಂದ ಸುಣ್ಣವನ್ನು ಕೆದರುವ ಅಥವಾ ಕವಳದ ಪರಿಕರಗಳನ್ನು ಬೇಕಾಬಿಟ್ಟಿ ಖಾನೆಗಳಲ್ಲಿ ತುರುಕುವ ದುರಭ್ಯಾಸವನ್ನು ಮಾವಯ್ಯನ ವಿಷಯದಲ್ಲಿ ತಾಂಬೂಲ ರಸಿಕರು ತ್ಯಜಿಸಿದ್ದರು. ಸಂಚಿ ಗಂಟು ಹಾಕಿದ ನಂಟಿಗೆ ದೊಡ್ಡ ಇತಿಹಾಸವಿದೆ; ಸಂಚಿಯೊಳಗಿರುವ ಗಿಳಿಮೂತಿ ಅಡಕೊತ್ತು ಮತ್ತು ಸುಣ್ಣದ ಡಬ್ಬಿ ಮಾವಯ್ಯನ ಅಜ್ಜ, ಮುತ್ತಜ್ಜನ ಕಾಲದ್ದು; ಮಾವಯ್ಯನ ಸಂಚಿ ಭಟ್ಟಣ್ಣನವರಿಂದ ಹಸ್ತಾಂತರಗೊಂಡು ಅವರ ಕೇರಿಗೆ ಬಿಜಂಗೈದ ರಾಜಕಾರಣಿಗಳ, ಯಕ್ಷಗಾನ ಕಲಾವಿದರ, ಸರಕಾರಿ ಅಧಿಕಾರಿಗಳ ಜಿಹ್ವಾ ಚಪಲವನ್ನು ತಣಿಸಿದೆ. ಅದೊಂದು ವ್ಯಸನವೆನಿಸದೆ ಗೌರವದ ಸಂಕೇತವಾಗಿತ್ತು. ಎಲ್ಲ ಜಾತಿ-ವರ್ಗದ ಮುದುಕರ, ಯುವಕರ, ಮಕ್ಕಳ, ಹೆಂಗಸರ ಸರ್ವ ಸಮಾನತೆಯ ಕೂಟವಾಗಿತ್ತು; ಮಾವಯ್ಯನ ನಾಜೂಕಿನ ಸಜ್ಜನಿಕೆÉ ಸಂಚಿಯಿಂದಲೇ ಶುರುವಾಗುತ್ತಿತ್ತು; ಹೊಸಬರ ಪರಿಚಯಕ್ಕೆ ಸಂಚಿಯ ಮಹಿಮಾ ಪಾತ್ರ ಅಪಾರವಾಗಿತ್ತು. ಸಂಚಿಯ ಚಟದಿಂದ ಆರಂಭವಾಗುವ ಸಹವಾಸ ಅಡಿಕೆಯ ಔಷಧೀಯ ಗುಣ, ಕಾಮವರ್ಧಕವೂ ವಿವಾಹಿತರ ಅಂತಃಪುರದ ಶೃಂಗಾರಕಾರಕವೂ ಆಗಿರುವ ರತಿರಸ ವಿಶೇಷತೆ, ಅದಕ್ಕಿರುವ ಅಂತರಾಷ್ಟ್ರೀಯ ಬೆಲೆ, ಮಾರುಕಟ್ಟೆಯ ಮಾಫಿಯಾ, ಎಲೆ, ಏಲಕ್ಕಿ ಮತ್ತು ತಂಬಾಕಿನ ಮೀಮಾಂಸೆ ಎಂದು ವಿಶ್ವಜಾಲವಾಗಿ ಬಿಡುತ್ತಿತ್ತು. ದುರಹಂಕಾರದ ಅನೇಕರು ತಮ್ಮ ಸ್ವಪ್ರತಿಷ್ಟೆಯನ್ನು ಬಿಟ್ಟು ಮಾವಯ್ಯನ ಸಂಚಿಗೆ ಗುಲಾಮರಾದ ಉದಾಹರಣೆಗಳಿವೆ. “ಮಾವಯ್ಯ ಹೆಂಡ್ತೀನಾದ್ರೂ ಬಿಡಬೌದು ಆದ್ರೆ ನಿನ್ನ ಸಂಚಿ ಬಿಡೋದಕ್ಕೆ ಆಗೋದಿಲ್ಲ” ಭಟ್ಟಣ್ಣ ಹಾಸ್ಯ ಮಾಡಿದ್ದುಂಟು. ಭಟ್ಟಣ್ಣ ಮತ್ತು ಮಾವಯ್ಯನ ನಡುವಿನ ಜನ್ಮಾಂತರ ಬ್ರಹ್ಮಗಂಟಿಗೆ ಸಂಚಿಯೇ ಕಾರಣ. ಅವರ ನಡುವಿನ ಮಾತಿಲ್ಲದ ಮೌನವನ್ನು ಅದು ನೇಯುತ್ತಿತ್ತು.

ಬೆಟ್ಟದ ಏರು ಮುಗಿದು ಇಳಕಲು ಶುರುವಾಗುವ ಜಾಗದಲ್ಲಿ ದಣಿವಾರಿಸಲು ಕುಳಿತ ಭಟ್ಟಣ್ಣ ಹಸುರಾಚ್ಛಾದಿತ ಉಪ್ಪರಿಗೆ ಮಾಸ್ತರ ಗದ್ದೆಯ ಪಟ್ಟಿ ಮತ್ತು ತೋಟದ ಸಾಲನ್ನು ಬೀಸುವ ಗಾಳಿಗನುಗುಣವಾಗಿ ಮರಗಳ ಕವಲೊಡೆದ ಟೊಂಗೆಗಳು ಕಿಟಕಿಯಷ್ಟು ಚೌಕು ಜಾಗ ತೆರೆಯುತ್ತ ಮರುಕ್ಷಣ ಮುಚ್ಚುತ್ತ ಕಣ್ಣುಮುಚ್ಚಾಲೆಗೆ ತೊಡಗಿದ್ದನ್ನು ಮಾವಯ್ಯನಿಗೆ ತೋರಿಸಲು ಇಣುಕಿದರು; ಹೊಗೆ ಹಸುರಿನ ಕಣಿವೆಯಲ್ಲಿ ಮಾಸ್ತರ ಜಮೀನು ತೇಪೆ ಹಚ್ಚಿದಂತೆ ಭಾಸವಾಗುತ್ತಿತ್ತು. ಭಟ್ಟಣ್ಣ ಎದ್ದು ನಿಂತು,“ಓ ಅಲ್ಲಿ ಕೆಳಗೆ ಕಾಣೋದೆ ನರಿಸರ” ಎಂದು ಮುಂದಕ್ಕೆ ಕೈ ಚಾಚಿದರು; ಅವರ ತೋರು ಬೆರಳ ತುದಿಗೆ ಗುರಿಯಿಟ್ಟ ಮಾವಯ್ಯನ ನೋಟಕ್ಕೆ ಆಳದಲ್ಲಿ ಭೋರ್ಗರೆಯುವ ನುಣ್ಣನೆಯ ಬೆಟ್ಟ, ಗಿರಿ ಶ್ರೇಣಿಗಳು ದಿಗಂತಕ್ಕೆ ಎಳೆದ ವಕ್ರರೇಖೆ ಮತ್ತು ಬೆಳ್ಳಿ ಅಂಚಿನ ಮೋಡದ ಹಿಂಡು ಬಿಟ್ಟರೆ ಬೇರೆ ಏನೂ ಗೋಚರಿಸಲಿಲ್ಲ. ಹರಿಯುತ್ತಿರುವ ದೊಡ್ಡ ಹಳ್ಳದ ಸದ್ದು ಮಾತ್ರ ಆಳದಲ್ಲಿ ಕೇಳುತ್ತಿತ್ತು. “ಅಲ್ಲಿಗೆ ಹೊರಟಿದ್ದೇವಲ್ಲ” ಮಾವಯ್ಯ ಘಟ್ಟ ಇಳಿಸುವ ತಿರುವು ಮುರುವು ಡೊಂಕು ಕಾಲ್ದಾರಿ ಗುಂಟ ಹೆಜ್ಜೆ ಇಡತೊಡಗಿದ ಭಟ್ಟಣ್ಣರನ್ನು ಅನುಸರಿಸಿದ.

ಹತ್ತು ಹೆಜ್ಜೆ ಎತ್ತಿಡುವಷ್ಟರಲ್ಲಿ ಯಾರೊ ತುಸು ಗಡುಸಾಗಿ ರಾಗಮಾಲಿಕೆಯನ್ನು ಝೇಂಕರಿಸಿ ಊದುತ್ತಿರುವಂತೆ ಕೇಳಿ ಮಾವಯ್ಯ ಆಶ್ಚರ್ಯಪಟ್ಟು ನಿಂತ. ತಾಳ ತಪ್ಪದ ಸ್ವರ ಕಂಪನ ಒಂದರ ಬೆನ್ನಿಗೆ ಇನ್ನೊಂದು ಮರುಕಳಿಸಿ ಭಟ್ಟಣ್ಣನವರ ದೃಷ್ಟಿ ಆಕಾಶ ಬಯಲತ್ತ ನೆಟ್ಟಿತು. ಎರಡು ಬೃಹತ್ ಗರುಡ ಪಕ್ಷಿಗಳು ಕಬ್ಬಳ್ಳಿಯ ಆಚೆ ಬೆಟ್ಟ ಮತ್ತು ಈಚೆ ಬೆಟ್ಟದ ನಡುವಿನ ನೀಲಿಯನ್ನು ಕತ್ತರಿಸಿ ಹಾರುತ್ತಿದ್ದವು. “ಅಲ್ನೋಡು ಗರುಡ!” ಎಂದು ತೋರಿದ ಭಟ್ಟಣ್ಣನವರ ಕೈಗಳು ಭಕ್ತಿಯಿಂದ ಮುಗಿದವು. ಇಬ್ಬರ ಪಾದಗಳು ಮೆಟ್ಟನ್ನು ಕಳಚಿಕೊಂಡವು. ಬಿಸಿಲಿಗೆ ಚಿನ್ನದಂತೆ ಮಿನುಗುವ ಹೊಟ್ಟೆಯ ಭಾಗ, ಕೆಂಪು ರೆಕ್ಕೆಗಳು ಮತ್ತು ಬೆಳ್ಳನೆಯ ಮುಖ ಸಾಕ್ಷಾತ್ ವಿಷ್ಣು ವಾಹನ ದರ್ಶನವಾಗಿ ಅವರ ನಂಬಿಕೆಯೊಳಗೆ ನುಗ್ಗಿ ಭಕ್ತಿ ಚಿಮ್ಮಿತು. ರೆಕ್ಕೆಯ ಪ್ರತಿ ಮಸೆತಕ್ಕೊಮ್ಮೆ ಹೊರ ಸೂಸುವ ಸುಂಯಿ…ಸುಂಯಿ…ನಾದ, ಮೋಹಕವಾಗಿ ಹಾರುತ್ತಿರುವ ಅವುಗಳ ಘನ ಗಂಭೀರ ಯಾನ ಸ್ವರ್ಗದಿಂದ ಧರೆಗಿಳಿದಂತಿತ್ತು. ಆಕಾಶದ ರಾಜ-ರಾಣಿಯಂತೆ ಸದಾ ಜತೆಯಲ್ಲಿರುವ, ಮೂರ್ನಾಲ್ಕು ಗಜದಂತರದಲ್ಲಿ ಒಂದರ ಹಿಂದೆ ಇನ್ನೊಂದು ಹಾಡುತ್ತ, ಹಾರುವ ಜೋಡಿ ಜೀವಗಳು ಬೆಟ್ಟದ ಎತ್ತರದ ಮರ ತಲುಪಿ, ತಂಗುವವರೆಗೆ ಅವರು ನೋಡುತ್ತಲೇ ಇದ್ದರು. ಬೆಳಗಿನ ನಾಲ್ಕಕ್ಕೆ ಮೊದಲ ಯುಗಳ ಗೀತೆಯನ್ನು ಹಾಡುವ ಈ ಜೋಡಿ ದಿನಕ್ಕೆ ಮೂರು ಸಲ ಹಾಡುವುದನ್ನು ಅವರು ಕೇಳಿದ್ದಾರೆ. ಹೀಗೆ ಅವುಗಳ ದರ್ಶನವಾಗುವುದೇ ಅಪರೂಪ. ಇಬ್ಬರೂ ಕ್ಷಣಕಾಲ ಪರವಶತೆಯಲ್ಲಿ ಕಣ್ಮುಚ್ಚಿ ನಿಂತರು.

ಕೃತಿ: ವಿಸರ್ಗ (ಕಾದಂಬರಿ)
ಲೇಖಕ: ಶ್ರೀಧರ ಬಳಗಾರ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 250 ರೂ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಜಾರ್ಜ್‌ ಆರ್ವೆಲ್‌ನ ʼ1984′

Exit mobile version