: ಪೂರ್ಣಿಮಾ ಹೆಗಡೆ
ಗುಣಗಳು ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ದುರ್ಗುಣ ನಮ್ಮನ್ನು ಪ್ರಪಾತಕ್ಕೂ ಬೀಳಿಸಬಹುದು, ಇಲ್ಲ ಒಂದು ಸದ್ಗುಣ ಎತ್ತರಕ್ಕೂ ಏರಿಸಬಲ್ಲದು. ದೈವೀಗುಣ ಅಥವಾ ಆಸುರೀಗುಣ ಎರಡೂ ಇರುತ್ತದೆ. ಎರಡೂ ನಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು.
ಯಾವುದನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟ ವಿಷಯ. ಪಾಪ ಕಾರ್ಯಗಳಲ್ಲಿ ತೊಡಗಿದ್ದ ಬೇಡನೊಬ್ಬ ಆಸುರೀ ಗುಣಗಳ ಅಥವಾ ಕೆಟ್ಟ ಕೆಲಸಗಳ ಪರಿಣಾಮ ಅರಿತು ರಾಮಾಯಣವನ್ನು ರಚಿಸುವ ಮಹಾಕವಿ ವಾಲ್ಮೀಕಿಯಾಗಿ ಪರಿವರ್ತನೆ ಆಗಲೂಬಹುದು. ರಾಕ್ಷಸನ ಮಗನಾಗಿ ಹುಟ್ಟಿ ರಾಕ್ಷಸೀ ಗುಣ ಹೊಂದದೆ ಹರಿ ಭಕ್ತನೆಂದು ಪ್ರಸಿದ್ಧನಾದ ಪ್ರಹ್ಲಾದನಾಗಿಯೂ ಇರಬಹುದು. ಇಲ್ಲವೇ ಶಿವನಿಂದ ಆತ್ಮಲಿಂಗ ಪಡೆದು ರಾಕ್ಷಸಗುಣಕ್ಕೆ ವಶನಾಗಿ ರಾವಣನಾಗಲೂಬಹುದು. ಎಲ್ಲ ನಮ್ಮ ವಿವೇಕಕ್ಕೆ ಬಿಟ್ಟ ವಿಷಯ.
ಹುಲು ಮಾನವರಾದ ನಮಗೆಲ್ಲ ಆಸೆ ಮೋಹ ಲೋಭ ಇತ್ಯಾದಿ ರಾಕ್ಷಸೀ ಗುಣಗಳು ಹಾಗೆಯೇ ದಯೆ, ಪ್ರೀತಿ, ಸಹನೆ ಇತ್ಯಾದಿ ದೈವೀ ಗುಣಗಳು ಇರುವುದು ಸಹಜ. ಅದರಲ್ಲಿ ನಮ್ಮ ಮಿತಿಗೆ ತಕ್ಕಂತೆ ಸಾತ್ವಿಕ ಗುಣಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಪರಿಶುದ್ಧ ಅಂತಃಕರಣ ಹೊಂದಿದವರಿಗೆ ಮಾತ್ರ ಪರಮಾತ್ಮ ಸಾಯುಜ್ಯ ಲಭ್ಯವಾಗುವುದು.
ದೈವಾಸುರಸಂಪದ್ ವಿಭಾಗಯೋಗ- ಸಂಕ್ಷಿಪ್ತವಾಗಿ ಅರ್ಜುನನಿಗೆ ಈ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮ ದೈವೀ ಸಂಪತ್ತು ಹಾಗೂ ಆಸುರೀ ಸಂಪತ್ತು ಎಂಬ ಎರಡು ವಿಭಾಗಗಳ ಬಗ್ಗೆ ತಿಳಿವಳಿಕೆ ನೀಡುತ್ತಾನೆ. ದೈವೀ
ಸಂಪತ್ತು ಹೊಂದಿದವರು ಮೋಕ್ಷದ ದಾರಿಯಲ್ಲಿ ನಡೆದರೆ ಆಸುರೀ ಸಂಪತ್ತು ಹೊಂದಿದವರು ವಿಕಾರಕ್ಕೊಳಗಾಗಿ ಪರರ ಶರೀರದೊಳಗಿರುವ ಅಂತರ್ಯಾಮಿ ಆದ ಪರಮಾತ್ಮನನ್ನೇ ದ್ವೇಷಿಸುತ್ತ ಸಂಸಾರ ಚಕ್ರದಲ್ಲಿ ಬಂಧಿ ಆಗುವರು.
ದೈವೀ ಸಂಪತ್ತು : ಅಹಿಂಸೆ, ಅಭಯ ಅಥವಾ ಧೈರ್ಯ, ಸತ್ಯ, ಅಕ್ರೋಧ – ಕೋಪ ಇಲ್ಲದಿರುವುದು, ಶಾಂತಿ, ದಯೆ, ಕೋಮಲತೆ, ಲಜ್ಜೆ, ದಾನ, ದಮ-ಇಂದ್ರಿಯಗಳ ದಮನ, ಯಜ್ಞ, ಸ್ವಾಧ್ಯಾಯ, ತಪಸ್ಸು, ಋಜುತ್ವ – ಸರಳತೆ, ಅಂತಃಕರಣದ ನಿರ್ಮಲತೆ, ಜ್ಞಾನಯೋಗದಲ್ಲಿ ಸ್ಥಿರತೆ, ತ್ಯಾಗ, ಚಾಡಿ ಹೇಳದಿರುವುದು, ಲೋಲುಪತೆ ಇಲ್ಲದಿರುವುದು, ಚಂಚಲತೆ ಇಲ್ಲದಿರುವುದು, ತೇಜಸ್ಸು, ಕ್ಷಮೆ, ಧೃತಿ, ಅತೀ ಅಭಿಮಾನ ಇಲ್ಲದಿರುವುದು,
ಶುಚಿ ಇವೆಲ್ಲಾ ದೈವೀ ಸಂಪತ್ತಿನ ಲಕ್ಷಣಗಳು. ದೈವೀ ಸಂಪತ್ತು ಜೀವಿಯನ್ನು ಮೋಕ್ಷಕ್ಕಾಗಿ ಪ್ರಯತ್ನಿಸಲು ಪ್ರೆರೇಪಿಸುತ್ತದೆ.
ಆಸುರೀ ಸಂಪತ್ತು : ಜಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ, ಅಜ್ಞಾನ ಇವೆಲ್ಲಾ ಆಸುರೀ ಸಂಪತ್ತಿನ ಲಕ್ಷಣಗಳು, ಬಂಧನಕ್ಕೆ ಗುರಿಯಾಗಿಸುತ್ತವೆ. ಆಸುರೀ ಜನರು ಪ್ರವೃತ್ತಿ ಹಾಗೂ ನಿವೃತ್ತಿಯ ಮಾರ್ಗವನ್ನು ಅರಿಯರು. ಅವರಲ್ಲಿ ಅಂತಃಕರಣ ಶುದ್ಧಿಯಾಗಲಿ ಬಾಹ್ಯ ಶುದ್ಧಿಯಾಗಲಿ ಇರುವುದಿಲ್ಲ. ಈ ಜಗತ್ತು ಆಧಾರರಹಿತವಾದದ್ದು. ಕಾಮವೇ ಈ ಜಗತ್ತಿನ ಸೃಷ್ಟಿಗೆ ಕಾರಣ ಎಂದು ಆಸುರೀ ಜನರು ತಿಳಿಯುವರು. ಇಂತವರು ಜಗತ್ತಿನ ನಾಶಕ್ಕೆ ಕಾರಣವಾಗುವರು. ಕಾಮ, ಕ್ರೋಧ, ಲೋಭಗಳಲ್ಲಿ ತೊಡಗುವರು. ತಾವೇ ಶ್ರೇಷ್ಠರೆಂದು ತಿಳಿದುಕೊಂಡು ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ ಇವುಗಳನ್ನು ಅವಲಂಬಿಸಿದವರಾಗಿ ಹೊಟ್ಟೆಕಿಚ್ಚನ್ನು ಕಾರುವ ಇವರು ತಮ್ಮ ಶರೀರದೊಳಗೆ ಹಾಗೂ ಪರರ ಶರೀರದೊಳಗೆ ಇರುವ ಪರಮಾತ್ಮನನ್ನು ದ್ವೇಷಿಸುತ್ತಾರೆ. ಅಂಥವರು ಮತ್ತೆ ಮತ್ತೆ ಸಂಸಾರ ಚಕ್ರದಲ್ಲಿ ಸಿಲುಕುತ್ತಾರೆ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ದಿಗಂಬರ: ಬೀಗ ಹಾಕಿದ ಕದ, ತೆರೆಯದ ಮನಗಳು
ಕಾಮ, ಕ್ರೋಧ, ಲೋಭ ಇವು ಮೂರು ಆತ್ಮನನ್ನು ನಾಶಪಡಿಸುವಂತಹವು. ಆದ್ದರಿಂದ ಈ ಮೂರನ್ನು ತ್ಯಜಿಸತಕ್ಕದ್ದು.
ತ್ರಿವಿಧಂ ನರಕದಂ ದ್ವಾರಂ ನಾಶನಮಾತ್ಮನಃ | ಕಾಮಃ ಕ್ರೋಧಸ್ತಥಾ
ಲೋಭಸ್ತಸ್ಮಾದೇತತ್ ತ್ರಯಂ ತ್ಯಜೇತ್ ||
ಶಾಸ್ತ್ರ ವಿಧಿಯನ್ನು ಅನುಸರಿಸದೆ ಯಾರು ತನ್ನಿಷ್ಟದಂತೆ ನಡೆಯುತ್ತಾನೋ ಆತನು ಪರಮಗತಿಯನ್ನು ಹೊಂದುವುದಿಲ್ಲ. ಮಾಡಬೇಕಾದ್ದು ಯಾವುದು, ಮಾಡಬಾರದ್ದು ಯಾವುದು ಎಂಬುದನ್ನು ತಿಳಿದುಕೊಳ್ಳುವ ವಿಷಯದಲ್ಲಿ ಶಾಸ್ತ್ರವೇ ಪ್ರಮಾಣ. ಅದರ ಅನ್ವಯ ಕರ್ಮ ಮಾಡತಕ್ಕದ್ದು.
ತಸ್ಸಾಚ್ಚಾಸ್ಲಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತ್ | ಜಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಚಾಂಡಾಳನೊಬ್ಬನ ಆತ್ಮವಿಮರ್ಶೆ
ಕೃತಿ: ಅಂತರ್ವೀಕ್ಷಣೆ
ಲೇಖಕಿ: ಪೂರ್ಣಿಮಾ ಹೆಗಡೆ
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ: 135 ರೂ.