Site icon Vistara News

Sunday Read: ಹೊಸ ಪುಸ್ತಕ: ತುಷಾರ ಹಾರ

tushara hara

: ಶ್ಯಾಮಲಾ ಮಾಧವ

ಶ್ಯಾಮಲಾ ಮಾಧವ

ಕಿಮೋ ಚಿಕಿತ್ಸೆ ಸಾಗಿದ್ದಂತೆ ನನ್ನ ಕಂದ, “ಅಮ್ಮಾ, ನಾನೇನೂ ಮನೆಯೊಳಗೇ ಕುಳಿತುಕೊಳ್ಳುವವನಲ್ಲ; ನನ್ನ ಟ್ರೆಕ್ಕಿಂಗ್, ಫುಟ್‌ಬಾಲ್, ನನ್ನ ಕೆಲಸ ಎಲ್ಲದರಲ್ಲೂ ತೊಡಗಿಸಿಕೊಳ್ಳಲಿರುವೆ” ಎಂದಾಗ ಹೃದಯ ಕಲಕಿದಂತಾದರೂ ನಾನಂದೆ, “ಸರಿ, ಅಬ್ಬಣು, ಟ್ರೆಕ್ಕಿಂಗ್ ಹೋಗುವಾಗ ನನ್ನನ್ನೂ ಕರೆದುಕೊಂಡು ಹೋಗು. ನನಗೂ ನಿನ್ನೊಡನೆ ಎಲ್ಲವನ್ನೂ ನೋಡಲಿದೆ. ಈ ಸಲ ನನ್ನನ್ನು ಬಿಟ್ಟು ಹೋಗಬೇಡ. ಎಲ್ಲಿ ಹೋಗುವುದಿದ್ದರೂ ನನ್ನನ್ನು ಕರೆದುಕೊಂಡು ಹೋಗು.”

ಹಿಮಾಚಲ, ಅರುಣಾಚಲ, ಉತ್ತರಾಖಂಡ, ಮೇಘಾಲಯ, ಲಡಾಖ್, ಕರ್ನಾಟಕ, ಕೊಂಕಣದಲ್ಲೆಲ್ಲ ಏಕಾಂಗಿಯಾಗಿಯೂ, ಗೆಳೆಯರೊಡನೆಯೂ ಸುತ್ತಾಡಿ ಬಂದ ನನ್ನ ಕಂದ! ತಿಂಗಳ ಪ್ರವಾಸಕ್ಕೆ ಬೇಕಾದ ಬಟ್ಟೆ, ಬೆಚ್ಚಗಿನ ಉಡುಪುಗಳು, ಕ್ಯಾಮೆರಾ ಎಲ್ಲವನ್ನೂ ಒಳಗೊಂಡ, ನನಗೆ ಕದಲಿಸಲೂ ಆಗದ ಆ ಹೊರೆಯನ್ನು ಬೆನ್ನಲ್ಲಿ ಹೊತ್ತು ಧಾವಿಸುತ್ತಿದ್ದ! ಪೂನಾದಲ್ಲಿ ರಜಾದಿನಗಳಲ್ಲಿ ಗೆಳೆಯರೊಡನೆ ಫುಟ್‌ಬಾಲ್; ಸಹೋದ್ಯೋಗಿ ಗೆಳೆಯ, ಗೆಳತಿಯರೊಡನೆ ಆಗಾಗ ಲಾಂಗ್ ವಾಕ್, ಮುಂಬಯಿಯ ಪ್ರತಿ ಸಂಜೆಯೂ ಲೋಕಲ್ ರೈಲಿನಲ್ಲಿ ತನ್ನ ರೂಯಿಯಾ ಕಾಲೇಜ್ ನಾಕಾದ ಹರಟೆಕಟ್ಟೆಗೆ; ಇಲ್ಲವೇ ಹಳೆ ಮುಂಬಯಿಯ ಅವನ ಉದ್ದೇಶಿತ ತಾಣಗಳಿಗೆ; ಪತ್ರಕರ್ತ, ಫೋಟೋಗ್ರಾಫರ್ ಗೆಳೆಯರೊಡನೆ ಹಳೆ ಮುಂಬಯಿ ಇರಾನಿ ಹೋಟೆಲ್‌ಗಳಿಗೆ; ಫೀಲ್ಡ್ ಫೆಸ್ಟಿವಲ್‌ಗಳಿಗೆ, ಆರ್ಟ್ ಎಕ್ಸಿಬಿಶನ್‌ಗಳಿಗೆ, ಪುಸ್ತಕ ಮಳಿಗೆಗಳಿಗೆ ಮತ್ತು ಊರಿಗೆ ಹೋದಾಗಲೆಲ್ಲ ಪ್ರತಿ ಸಂಜೆ ಕ್ಯಾಮೆರಾದೊಡನೆ ಸೋಮೇಶ್ವರ ಸಮುದ್ರ ತೀರಕ್ಕೆ

ರಾತ್ರಿ ಮೂರೂವರೆ-ನಾಲ್ಕರ ಹೊತ್ತಿಗೆ ಕೆಳಗೆ ರಸ್ತೆಯಲ್ಲಿ ಬಂದು ನಿಲ್ಲುವ ರಿಕ್ಷಾದ ಸದ್ದಿಗಾಗಿ ನಾನು ಕಾದಿರುತ್ತಿದ್ದೆ. ವಾರಾಂತ್ಯ ಪೂನಾದಿಂದ ನನ್ನ ತುಷಾರ್ ಬಂದು ತಲುಪುವ ಹೊತ್ತು. ರಿಕ್ಷಾ ಬಂದು ನಿಂತ ಸದ್ದಿಗೆ, ನಾಲ್ಕು ಮಾಳಿಗೆ ಮೆಟ್ಟಿಲು ಹತ್ತಿ ಬರುವ ಅವನ ಹೆಜ್ಜೆ ಸಪ್ಪಳಕ್ಕೆ ಕಾದಿದ್ದು, ಅವನು ಕರೆಗಂಟೆ ಒತ್ತುವ ಮೊದಲೇ ಬಾಗಿಲು ತೆರೆಯುತ್ತಿದ್ದೆ. “ಮಲಗಿಲ್ವಾಮ್ಮಾ?” ಎನ್ನುತ್ತಿದ್ದ ಮಗು, ಅಲ್ಲಿಂದ ಹೊರಡುವಾಗಲೇ, “ಅಮ್ಮಾ, ಹೊರಡ್ತಿದ್ದೇನೆ; ಕಾದಿರಬೇಡಿ; ಮಲಗಿ” ಎಂದು ಹೇಳಿರುತ್ತಿದ್ದ. ಕೆಳಗೆ ರಸ್ತೆಯಲ್ಲಿ ಈಗಲೂ ಆ ಹೊತ್ತಿಗೆ ರಿಕ್ಷಾಗಳು ಹಾದು ಹೋಗುತ್ತಿರುತ್ತವೆ. ಆದರೆ, ಯಾವುದೂ ಇಲ್ಲಿ ನಿಲ್ಲುವಂತಿಲ್ಲ; ನನ್ನ ಕಂದನನ್ನು ಮರಳಿ ನನ್ನ ಬಳಿಗೆ ಕರೆತರುವಂತಿಲ್ಲ…

ಯಾವುದೇ ದುರ್ಗುಣ, ದುರಾಚಾರ, ದುರ್ವ್ಯಸನಗಳಿರದ, ಎಂತಹವರ ಬಗೆಗೂ ಒಂದು ಕೆಡುನುಡಿಯನ್ನೂ ಆಡದ, ಸದಾ ಸ್ವಚ್ಛ ಮನದ, ನಿರ್ಮಲ ನಗುವಿನ, ಸಾದಾ ಸರಳಜೀವ! ಗೆಳೆತನವೇ ಅವನ ಆಸ್ತಿ; ಸ್ವಾತಂತ್ರ್ಯವೇ ಅವನ ಧರ್ಮ; ಜ್ಞಾನಾರ್ಜನೆಯೇ ಅವನ ಕಾಯಕ! ಹೊಸ ಬಟ್ಟೆಗಳನ್ನೆಂದೂ ತೊಡದ ಅವನ ಹೊಸ ಶರ್ಟುಗಳು, ಕೆಲಸದ ಮೇಲೆ ವಿದೇಶಕ್ಕೆ ಹೋಗುವಾಗ ಮೀಟಿಂಗ್‌ಗಳಿಗೆಂದು ಮಾತ್ರ ಒಯ್ಯುತ್ತಿದ್ದ ಫಾರ್ಮಲ್ ಉಡುಪುಗಳು ಎಲ್ಲವೂ ನನ್ನ, ಅವನ ಪುಟ್ಟ ಮರದ ಚೆಸ್ಟ್ ನೊಳಗೆ ಇದ್ದಂತೇ ಅಟ್ಟಿಯಾಗಿ ಕುಳಿತಿವೆ. ಸದಾ ತನ್ನ ಹಳೆಯ ಗುಲಾಬಿ, ನೀಲಿ, ಪಾಮಾಜಿ ಹಸಿರು ಟೀ ಶರ್ಟುಗಳನ್ನು ಮಾತ್ರ ತೊಡುತ್ತಿದ್ದ ತುಷಾರ್‌ನ ಐಡೆಂಟಿಟಿಯೇ ಈ ಹಳೆ ಟೀ ಶರ್ಟುಗಳಾಗಿದ್ದವು.

ಐಟಿ ಜಗತ್ತಿನಲ್ಲಿ ನನ್ನ ತುಷಾರ್ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಿರುವುದು ಅವನ ಈ ನಿರ್ಭಾಗ್ಯ ಅಮ್ಮನಿಗೆ ತಿಳಿದುದು ಅವನು ಇಲ್ಲವಾದ ಮೇಲೆಯೇ! ಸಂದರ್ಶಿಸಿದಲ್ಲೆಲ್ಲ ಅವನು ಕ್ಲಿಕ್ಕಿಸಿದ ಅಸಂಖ್ಯ ಅದ್ಭುತ ಫೋಟೋಗಳು ಅವನ ಲ್ಯಾಪ್‌ಟಾಪ್‌ನಲ್ಲಿ ಬಂದಿಯಾಗಿ ಕುಳಿತಿವೆ. ಕೆಲವನ್ನಾದರೂ ಪ್ರದರ್ಶಿಸಲೆಂಬ ನನ್ನಾಸೆ ಈಡೇರಲೇ ಇಲ್ಲ. ಯಾವುದೇ ಪ್ರದರ್ಶನವನ್ನು ಒಲ್ಲದ ಜೀವವದು!

ಎಂಟೂವರೆ ತಿಂಗಳು ಅಹರ್ನಿಶಿ ಬೇಡಿಕೊಂಡೆ: ನನ್ನ ಕಂದನನ್ನು ಉಳಿಸಿಕೊಡು; ನನ್ನೆಲ್ಲ ಆರೋಗ್ಯ, ಆಯುಷ್ಯವನ್ನು ಅವನಿಗಿತ್ತು ಅವನನ್ನು ಕಾಪಾಡು, ಎಂದು. ಆದರೆ, ಆ ʼಅವನು’ ಕೇಳಿಸಿಕೊಳ್ಳಲೇ ಇಲ್ಲ…


2020 – ಮಾರಕ ಕೊರೊನಾ ಜಗತ್ತಿಗೆ ಕಾಲಿರಿಸಿದ ಮರೆಯಲಾಗದ ವರ್ಷ!
2019 – ನಮ್ಮ ಹಿರಿಯರು ಸ್ಥಾಪಿಸಿದ ನನ್ನೂರ ಶಾಲಾ ಕಟ್ಟಡವನ್ನು ಉಳಿಸಿಕೊಳ್ಳುವ ನನ್ನ ಹಂಬಲ ನೆರವೇರಿ, ಅದ್ಧೂರಿಯಿಂದ ಶಾಲಾ ಶತಮಾನೋತ್ಸವವೂ ನಡೆದು, ಮಂಗಳೂರಿನ ನನ್ನ ಬೆಸೆಂಟ್ ಶಾಲಾ ಶತಮಾನೋತ್ಸವವನ್ನೂ ಕಂಡು, ಸಾರ್ಥಕತೆಯ ಅನುಭವದ ಸಂತಸದ ತುತ್ತ ತುದಿಯಲ್ಲಿ ವಿಹರಿಸುತ್ತಾ, ಹೀಗೆ ಹೆಚ್ಚು ಸಂತೋಷ ಅನುಭವಿಸಿದಾಗಲೆಲ್ಲ ಬೆನ್ನಿಗೇ ಕಾಡುವ ದುಃಖದ ಪೂರ್ವಾನುಭವಗಳ ಭಯ, ಅಳುಕು ಕಾಡುತ್ತಿದ್ದಂತೇ ಜಗತ್ತಿನ ಮೇಲೆ ಬಂದೆರಗಿತ್ತು, ಮಾರಕ ಕೊರೊನಾ.

ಪೂನಾದಲ್ಲಿ ಮುಂಬಯಿಗಿಂತಲೂ ಹೆಚ್ಚು ಕೇಸ್‌ಗಳು ವರದಿಯಾಗಿವೆಯೆಂದು, ಮುಂಬಯಿಗೆ ನಮ್ಮ ಬಳಿಗೆ ಬರುವುದು ಯೋಗ್ಯವಲ್ಲವೆಂದು ತುಷಾರ್ ಬರದೇ ಉಳಿದಿದ್ದ. ಫೆಬ್ರವರಿ ಹದಿನೇಳು, ಅವನ ಹುಟ್ಟು ಹಬ್ಬದಂದು ಅವನು ಹುಟ್ಟಿದ ದಿನದ ನೆನಪಿನೊಂದಿಗೆ ಕಳೆದ ನಾನು, ಅವನ ಹುಟ್ಟಿನ ವಿವರವನ್ನೂ, ಎಳೆ ಮಗುವಾಗಿದ್ದಾಗಿನ ಫೋಟೋಗಳನ್ನೂ ಅವನಿಗೆ ವಾತ್ಸಾಪಿನಲ್ಲಿ ಕಳುಹಿಸಿದೆ. ತುಷಾರ್‌ಗೆ ಸಂತೋಷವೇ ಆಗಿತ್ತು. ಇಂಥ ಯಾವುದೇ ಪರ್ಸನಲ್ ವಿಷಯಗಳ ಮಾತುಕತೆಗೆ ಅದುವರೆಗೆ ನಮಗೆ ಸಮಯವೇ ಸಿಕ್ಕಿರಲಿಲ್ಲ.

ಹದಿನೈದು ಫೆಬ್ರವರಿ, ಸಾವಿರದ ಒಂಬೈನೂರ ಎಪ್ಪತ್ತೊಂದರ ರಾತ್ರಿ ಒಂಬತ್ತು ತಿಂಗಳು ತುಂಬಲಿತ್ತು. ಅಜ್ಜಿಮನೆ ಗುಡ್ಡೆಮನೆಯಲ್ಲಿ ಶಾರದತ್ತೆಯೊಡನೆ ಹೊರಗೆ ಅಂಗಳಕ್ಕೆ ಬಂದವಳು, ಚಂದ್ರನ ಬೆಳಕಲ್ಲಿ, ಮಾಗಿಯ ಚಳಿಯಲ್ಲಿ ನಸು ನಡುಗುವುದನ್ನು ಕಂಡು ಶಾರದತ್ತೆ ಬೆದರಿ, ತಾಯ್ತಂದೆಯರನ್ನೆಬ್ಬಿಸಿ, ಕೂಡಲೇ ಟ್ಯಾಕ್ಸಿ ತರಿಸಿ, ನರ್ಸಿಂಗ್ ಹೋಮ್ ತಲುಪಿದ್ದೆವು. ನಮ್ಮ ತಂದೆಯ ಇನ್ನೋರ್ವ ಸೋದರಿ ಲಕ್ಷ್ಮಿ, ಪ್ರಥಮ ಹೆರಿಗೆಯಲ್ಲಿ ಫಿಟ್ ಬಂದು ತೀರಿಕೊಂಡ ನೆನಪು ಅವರನ್ನು ಕಾಡುತ್ತಿತ್ತು, ಡಾ. ಸಲ್ದಾನಾ, ಸಹಜ ಹೆರಿಗೆಯಾಗಲೆಂದು ಅನುನಯಿಸುತ್ತಾ ಕಾದರು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎದೆಯ ದನಿ ಕೇಳಿರೋ

ಸತತ ಬರುತ್ತಿದ್ದ ನೋವಿನೊಡನೆ ವಾಂತಿಯಾಗಿ ಮಗು ಮೇಲಕ್ಕೆ ಹೋಗುತ್ತಿತ್ತು. ಡಾ. ಸಲ್ದಾನಾ ಬಳಿ ನಿಂತು ಅನುನಯಿಸುತ್ತಿದ್ದರು: ಫೋರ್ಸೆಪ್ ಪ್ರಯೋಗಿಸಬಹುದು; ಆದರೆ, ಸುಮ್ಮನೆ ನನಗೆ ಅರವತ್ತು ರೂಪಾಯಿ ತೆರಲೇಕೆ? ಅದರಲ್ಲಿ ನೀನೊಂದು ಸೀರೆ ಕೊಂಡು ಉಡಬಹುದು. ಸ್ವಲ್ಪ ಯತ್ನಿಸು, ಎನ್ನುತ್ತಿದ್ದರು. ಈಗ ಲಕ್ಷ ರೂಪಾಯಿ ತಲುಪುವ ಸಹಜ ಹೆರಿಗೆಯ ಬಿಲ್‌ಗಳ ಎದುರು, ಎಂಥಾ ಕಾಲವದು! ಎಂತಹ ಸಹೃದಯಿ, ಡಾಕ್ಟರ್ ಸಲ್ದಾನಾ! ಕೊನೆಗೂ ಮೂರನೇ ದಿನ ಫೆಬ್ರವರಿ ಹದಿನೇಳರ ಸಂಜೆ ಆರು ಇಪ್ಪತ್ತಕ್ಕೆ ಫೋರ್ಸೆಪ್ ಪ್ರಯೋಗದಿಂದ ನನ್ನ ಕಂದ ಬುವಿಗಿಳಿದಾಗ ನಾನು ಅರಿವಳಿಕೆಯಿಂದ ಅಪ್ರಜ್ಞಾವಸ್ಥೆಯಲ್ಲಿದ್ದೆ. ಎಚ್ಚರವಾಗಿ ಕಣ್ಣೆರೆದಾಗ, ಬಳಿ ನಿಂತಿದ್ದ ನನ್ನಚ್ಚನ ಕಣ್ಣಳಲ್ಲಿ ನೀರಿತ್ತು! ಪಕ್ಕದ ಮೇಜಿನ ಮೇಲೆ ತನ್ನ ಮಾಮನ ಪಿಂಕ್ ಟವೆಲ್‌ನಲ್ಲಿ ಸುತ್ತಲ್ಪಟ್ಟು ಪವಡಿಸಿದ್ದ ಮಗು ಕಣ್ಣೆರೆದು ಅತ್ತಿತ್ತ ನೋಡುತ್ತಿತ್ತು. ತಲೆಯ ಮೇಲೆ ತೆಳ್ಳಗೆ ಕುರುಳುಗಳಿದ್ದುವು. ಬಳಿಯಲ್ಲೇ ನಿಂತಿದ್ದ ಅಮ್ಮ ಮತ್ತು ಭಾಮಾಂಟಿಯ ಮುಖ ಪ್ರೀತಿ, ಸಂಭ್ರಮದಿಂದ ಬೆಳಗಿತ್ತು.

ಸದಾ ಮುದ್ದು ಕೃಷ್ಣನಿಗಾಗಿ ಹಂಬಲಿಸಿದ್ದ ನಾನು, ಆ ಆರಾಮದಾಯಕ ಗ್ಲೆನ್ ವ್ಯೂ ನರ್ಸಿಂಗ್ ಹೋಮ್‌ನ ಬೆಡ್ ಪಕ್ಕದ ಗೋಡೆಯಲ್ಲಿ ಕೈಯಿಂದಲೇ ಮಗುವಿನ ಹೆಸರು ಕೃಷ್ಣರಾಜ ಎಂದು ಬರೆದಿದ್ದೆ. ಆದರೆ, ಸ್ವಾತಿ ಕೊನೆಯ ಪಾದ, ವಿಶಾಖಾ ಮೊದಲ ಪಾದದಲ್ಲಿ ಜನಿಸಿದ ಮಗುವಿನ ಹೆಸರು ಮೊದಲಕ್ಷರ ‘ತ’ದಿಂದ ಆರಂಭವಾಗಲೆಂದಾಗ, ಮುಂಬಯಿನಿಂದ ದೊಡ್ಡ ಚಿಕ್ಕಪ್ಪ `ತುಷಾರ’ ಎಂದು ಹೆಸರು ಸೂಚಿಸಿದ್ದರು. ಹುಟ್ಟು ಹಬ್ಬದಂದು ದೂರವಿದ್ದ ಮಗುವಿಗೆ ಈ ಎಲ್ಲ ವಿವರವೇ ಹುಟ್ಟು ಹಬ್ಬದ ನನ್ನ ಕೊಡುಗೆಯಾಗಿತ್ತು.

ಕೃತಿ: ತುಷಾರ ಹಾರ (ಇದು ಒಡಲ ನೋವಿನ ಕಥನ)
ಲೇಖಕಿ: ಶ್ಯಾಮಲಾ ಮಾಧವ
ಪ್ರಕಾಶನ: ಬಹುರೂಪಿ
ಬೆಲೆ: 175/-

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಯೋಗತಾರಾವಳಿ- ಒಂದು ಅವಲೋಕನ

ಇಲ್ಲಿ ನಿಮ್ಮ ಪುಸ್ತಕಗಳನ್ನು ಪರಿಚಯಿಸಬೇಕಿದ್ದರೆ ಪುಸ್ತಕದ ಎರಡು ಪ್ರತಿಗಳನ್ನು ಈ ವಿಳಾಸಕ್ಕೆ ಕಳುಹಿಸಿ: ವಿಸ್ತಾರ ಪುಸ್ತಕ ಪರಿಚಯ ವಿಭಾಗ, ವಿಸ್ತಾರ ನ್ಯೂಸ್‌ ಕಚೇರಿ, 4ನೇ ಮಹಡಿ, 2ನೇ ಬ್ಲಾಕ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ ಕಟ್ಟಡ, ಕ್ವೀನ್ಸ್‌ ರಸ್ತೆ, ಬೆಂಗಳೂರು- 560001

Exit mobile version