Site icon Vistara News

Sunday Read: ಹೊಸ ಪುಸ್ತಕ: ದಿಗಂಬರ: ಬೀಗ ಹಾಕಿದ ಕದ, ತೆರೆಯದ ಮನಗಳು

digambara book

: ಹರೀಶ್‌ ಕೇರ

ಹದಿನಾಲ್ಕು ವರ್ಷ ವಿದೇಶದಲ್ಲಿ ದುಡಿದು ಬಂದ ಗಂಡ. ಅವನು ಬರುವ ದಿನವೇ ಅಪಾರ್ಟ್‌ಮೆಂಟ್‌ನ ಬಾಗಿಲಿಗೆ ಬೀಗ ಹಾಕಿ ನಾಪತ್ತೆಯಾದ ಹೆಂಡತಿ. ಯಶವಂತ ಚಿತ್ತಾಲರ ಕಾದಂಬರಿಯೊಂದು ಅರಳಲು ಇದಕ್ಕಿಂತ ಪ್ರಶಸ್ತ ಸನ್ನಿವೇಶ ಬೇರೆ ಬೇಕೆ!

ಮುಚ್ಚಿದ ಕದ, ಬಿಗಿದ ಬೀಗ ಮತ್ತು ಅಪಾರ್ಟ್‌ಮೆಂಟ್‌ ಕಟ್ಟಡದ ನೂರೆಂಟು ಮನೆಗಳಲ್ಲಿ ಇದರ ಬಗ್ಗೆ ನೂರೆಂಟು ಕತೆಗಳು. ಇದೇ ಅವರ ಅಪೂರ್ಣ ಕಾದಂಬರಿ ʼದಿಗಂಬರʼದ ಕಥಾವಸ್ತು. ನರಸಿಂಹ ಕಾಕಾ ಮತ್ತು ರುಕ್ಮಿಣಿ ಕಾಕಿಯ ಸಂಸಾರದ ನಡುವೆ ಬಂದು ಬಿದ್ದಿರುವ ಈ ಬೀಗದ ಸುತ್ತಮುತ್ತ ಹಬ್ಬಿರುವ ಹತ್ತಾರು ನಿಗೂಢ ರಹಸ್ಯ ಸಂಗತಿಗಳು ಜ್ಯೋತಿ ಎಂಬ ಇದೀಗಷ್ಟೆ ಬಿಎ ಮುಗಿಸಿದ ಯುವತಿಯ ಪ್ರಜ್ಞೆಯಲ್ಲಿ ಅರಳುತ್ತ ಹೋಗುತ್ತವೆ. ಸತ್ಯಗಳು ಈರುಳ್ಳಿ ಸಿಪ್ಪೆ ಬಿಡಿಸಿದಂತೆ ಒಂದೊಂದಾಗಿ ತೆರೆಯುತ್ತಾ ಹೋಗುತ್ತವೆ.

ಆದರೆ ತೆರೆದದ್ದು ನಿಜಕ್ಕೂ ಸತ್ಯವೆ? ಅಥವಾ ಸತ್ಯದ ಭಾಸವೆ? ರಹಸ್ಯ ಎಂದುಕೊಂಡಿದ್ದೂ ಖುಲ್ಲಂಖುಲ್ಲಾ ಇರಬಹುದೇ ಅಥವಾ ಎಷ್ಟು ಬಿಡಿಸಿದರೂ ಮನದ ನಿಗೂಢಗಳು ಪೂರ್ಣ ತೆರೆಯದೇ ಹಾಗೆಯೇ ಇರಬಹುದೇ. ಊಹೆಗಳು ಸತ್ಯಕ್ಕೆ ದಾರಿಯೇ? ಅಥವಾ ಊಹೆಗಳೇ ಬದುಕನ್ನು ಇನ್ನೊಂದು ದಾರಿಯಲ್ಲಿ ಒಯ್ಯುತ್ತವೆಯೇ? ಕಡೆಗೂ ನಾವು ನಮ್ಮ ಪಕ್ಕದಲ್ಲಿರುವ ವ್ಯಕ್ತಿಯನ್ನು ಅರ್ಥ ಮಾಡಿಕೊಂಡೆವಾ? ಅರ್ಥವಾಯಿತು ಎಂದುಕೊಂಡದ್ದೂ ಭ್ರಮೆಯೇ ಇರಬಹುದಾ?

ಇಂಥ ಹತ್ತಾರು ಮುಖ್ಯ ಪ್ರಶ್ನೆಗಳನ್ನು ಎತ್ತುತ್ತ ಹೋಗುವ ಈ ಕಾದಂಬರಿಯ ಗರ್ಭದಲ್ಲಿ ಮನುಷ್ಯ ಪ್ರಜ್ಞೆ ಕೆಲಸ ಮಾಡುವ ವೈಖರಿಯ ದರ್ಶನವಾಗುತ್ತದೆ. ಮನುಷ್ಯ ತನ್ನೊಳಗೇ ಇಟ್ಟುಕೊಂಡಿರುವ ಪಾತಾಳಗಳು ಹಾಗೂ ದಿವ್ಯಗಳನ್ನು ಚಿತ್ತಾಲರು ಒಂದೊಂದಾಗಿ ತೆರೆದಿಡುತ್ತಾರೆ.

ತೆರೆಯದ ಬಾಗಿಲು, ಮುಚ್ಚಿದ ಲಕೋಟೆಗಳು, ಬಾಗಿಲ ಹಿಂದೆ ಕಾಯುತ್ತಿರುವ ಯಾರೋ, ಮೆಟ್ಟಿಲುಗಳಲ್ಲಿ ಹೆಜ್ಜೆಯ ಸದ್ದು, ಇದೀಗ ಕದದ ಮೇಲೆ ಬಡಿಯಲಿರುವ ಕೈಗಳ ಸದ್ದಿಗಾಗಿ ಢವಢವಿಸುವ ಎದೆಯೊಂದಿಗೆ ಕಾಯುತ್ತಿರುವವರು, ಬ್ಯಾಂಡ್‌ ಸ್ಟಾಂಡಿನಾಚೆ ಕುದಿದು ಮರಳುತ್ತಿರುವ ಸಮುದ್ರ, ಅದನ್ನು ನೋಡುತ್ತಾ ನಾಲಿಗೆ ಸುಡುತ್ತಿರುವ ಚಹ ಮತ್ತು ಭಜಿ, ಧಾರಾವಿ ದಾಟಿ ಬರುವ ರೈಲು, ಹೇಳದೇ ಉಳಿಸಿದ ಮಾತು, ಅರ್ಧಕ್ಕೇ ನಿಂತುಹೋದ ಫೋನ್‌ ಕರೆ, ಬಾಗಿಲಿಗೆ ಬಂದು ಗುರುತುಳಿಸದೇ ಹೋದ ಅಪರಿಚಿತ- ಚಿತ್ತಾಲರ ಎಲ್ಲ ಕಾದಂಬರಿಗಳಲ್ಲಿ ಇರುವಂತೆ ಇಲ್ಲೂ ಇದ್ದಾರೆ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಹಸ್ತಿನಾವತಿ: ಕನಸು ವಾಸ್ತವಗಳ ನಡುವಿನ ತೂಗುಯ್ಯಾಲೆ

ಕಾದಂಬರಿ ಅಪೂರ್ಣವೆಂದು ಹಳಹಳಿಸುವಂತಾಗುವುದಿಲ್ಲ. ಹಾಗೆ ನೋಡಿದರೆ ಯಾವ ಕಥೆ, ಕಾದಂಬರಿ ತಾನೆ ಪೂರ್ಣ? ಎಲ್ಲದರ ಕೊನೆಯಲ್ಲೂ ಇನ್ನೊಂದು ಆರಂಭ ತೆರೆದೇ ಇರುತ್ತದಲ್ಲವೆ? ಹಾಗೆ ಇದು ಓದುಗನಿಗೆ ತನ್ನನ್ನು ಮುಗಿಸು ಬಾ ಎಂದು ಸವಾಲು ಹಾಕುವ ಕಾದಂಬರಿಯೂ ಹೌದು.

ಚಿತ್ತಾಲರ ಕೊನೆಯ ಕಾದಂಬರಿ. ಚಿತ್ತಾಲರ ಓದನ್ನು ಹೊಸದಾಗಿ ಆರಂಭಿಸಲು ಮುನ್ನುಡಿಯೂ ಆಗಬಹುದು.

ಕೃತಿ: ದಿಗಂಬರ (ಕಾದಂಬರಿ)
ಲೇಖಕ: ಯಶವಂತ ಚಿತ್ತಾಲ
ಪ್ರಕಾಶನ: ಬಹುವಚನ ಪ್ರಕಾಶನ
ಬೆಲೆ: 300 ರೂ.

Exit mobile version