ಭರತದ ಮಧ್ಯಾಹ್ನ
ಆ ಬೇಸಿಗೆ ರಜೆಯಲ್ಲಿ ಕೇಶಪ್ಪಚ್ಚಿ ನಮಗೆಲ್ಲ ತುಂಬ ಬೇಕಾದ ಗೆಳೆಯನಾಗಿಬಿಟ್ಟ! ಅವನಿಗೆ ಹಿಂದುಗಡೆಯಿಂದ ಕೇಶಮಳ್ಳ ಎಂದು ಕರೆಯುತ್ತಿದ್ದರು. ಅಘನಾಶಿನಿಯ ನಮ್ಮ ಅಜ್ಜಿಮನೆಯಲ್ಲಿ ಈ ಸಲ ಅವನೊಬ್ಬ ಅನಿರೀಕ್ಷಿತ ಬಂಧು. ಬಂದವನನ್ನು ನಮ್ಮ ಅಜ್ಜ ಪ್ರೀತಿಯಿಂದಲೇ ಕೂರಿಸಿಕೊಂಡು ಮಾತನಾಡಿದರು. ಅವನು ಬಂದಾಗ ಮಧ್ಯಾಹ್ನ ಹನ್ನೆರಡರ ಹೊತ್ತು. ಸುಡುಬಿಸಿಲು. ಗೋಕರ್ಣದಿಂದ ತದಡಿವರೆಗೆ ಗುಡ್ಡದ ಹಾದಿಯಲ್ಲಿ ನಡೆದು ಬಂದವನು ತಾರಿ ದಾಟಲೂ ಹಣ ಕೊಡಲಿಲ್ಲವಂತೆ. ಅಂಬಿಗರ ಮಾಚ ನಿಗಿಂತಲೂ ಹೆಚ್ಚಾಗಿ ತಾನೇ ಹುಟ್ಟು ಹಿಡಿದು ದೋಣಿ ನಡೆಸುವ ಕೆಲಸಕ್ಕೆ ಮುಂದಾದ ಈ ಭಟ್ಟರನ್ನು ಸುಮ್ಮನೆ ಒಂದೆಡೆ ಕೂರಿಸಲು ಆತನಿಗೆ ಸಾಕುಬೇಕಾಯಿತಂತೆ. ಸಭಾಹಿತರ ಮನೆಗೆ ಹೋಗುವವನೆಂದು ಹೇಳಿದ್ದರಿಂದ ದೋಣಿಯವರು ಇವನ ಉಪದ್ವ್ಯಾಪಗಳನ್ನು ತಡೆದುಕೊಂಡರು. ಇವೆಲ್ಲ ನಮಗೆ ಸಂಜೆ ಹೊತ್ತಿಗೆ ಮಾಚನಿಂದ ತಿಳಿಯಿತು. ಈ ಒಟ್ಟೂ ಕೀಟಲೆಯಿಂದ ಕೇಶಪ್ಪಚ್ಚಿ ದೋಣಿ ದಾಟಲು ಕೊಡಬೇಕಾದ ಎಂಟಾಣೆ ಉಳಿಸಿದ್ದ. ಗೋಕರ್ಣದಿಂದ ಅಘನಾಶಿನಿಗೆ ಪುಕ್ಕಟೆ ಬಂದು ಮುಟ್ಟಿದ್ದನ್ನು ಅವನು ಮತ್ತೆ ಮತ್ತೆ ವರ್ಣಿಸಿ “ನಾನು ಎಷ್ಟು ಹುಶಾರಿ, ನೋಡಿದಿರಾ? ನಿಮಗೆ ಹೀಗೆ ಮಾಡಲು ಬರುತ್ತದೆಯೇ?” ಎಂದು ಕೆಣಕುತ್ತಿದ್ದ. ನನಗಂತೂ ಕೇಶಪ್ಪಚ್ಚಿ ತುಂಬ ಬುದ್ಧಿವಂತನೆಂದು ಮನವರಿಕೆಯಾಯಿತು. ಯಾವುದೇ ರೀತಿಯಲ್ಲಾಗಲಿ, ಅವನು ಎಂಟಾಣೆ ಉಳಿಸಿದ್ದು ನಿಜವೇ.
ಅಜ್ಜ ಕೇಶಪ್ಪಚ್ಚಿಯ ಕುರಿತು ಕಾಳಜಿ ವಹಿಸಿ ಪ್ರಶ್ನೆ ಕೇಳುತ್ತಿದ್ದರೋ ಅಥವಾ ಏನೂ ತಿಳಿಯದವನೆಂಬ ಭಾವನೆಯಿಂದ ಅವನನ್ನು ಎಚ್ಚರಿಸಲು ಮಾತನಾಡುತ್ತಿದ್ದರೋ – ತಿಳಿಯದು. ಅವನನ್ನು ಹಿಂದಿನಿಂದ ಅವರು ಯಾವತ್ತೂ ಕೇಶಮಳ್ಳ ಎಂದೇ ಹೇಳುತ್ತಿದ್ದರು – ಅದೇ ಅವನ ಹೆಸರು ಎಂಬಂತೆ. ಮುಂದಿನಿಂದ ಮಾತ್ರ “ಕೇಶಾ, ಸ್ನಾನವಾಯಿತೆ?”, “ಕೇಶಾ, ಸಂಧ್ಯಾವಂದನೆ ಮಾಡಿದೆಯಾ?’’, “ಊರಲ್ಲಿ ದಿನಾಲೂ ಪೂಜೆಗೆ ಹೋಗುತ್ತೀಯೋ, ಇಲ್ಲವೋ?” “ನಿನ್ನ ಅತ್ತಿಗೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ?’’- ಹೀಗೆಲ್ಲ ಏನೋ ಒಂದು ಕೇಳುತ್ತಲೇ ಇರುವರು. ಆ ಮಧ್ಯಾಹ್ನ ಅವನು “ರಸ್ತೆಮೈಲಿಗೆ ಆಗಿಬಿಟ್ಟಿದೆ, ಇನ್ನೊಮ್ಮೆ ಮೀಯಬೇಕು’’ ಎಂದು ನಮ್ಮನ್ನು ಕೇಳಿ ಪಂಜಿ ತೆಗೆದುಕೊಂಡು ಸ್ನಾನ ಮಾಡಿದ. ಬಳಿಕ ಅಜ್ಜಿಮನೆ ದೇವಸ್ಥಾನದೊಳಕ್ಕೆ ಹೋಗಿ “ಶಿವಾ, ನಾಳೆ ನಿನ್ನ ಪೂಜೆ ಮಾಡ್ತೇನೆ, ಇವತ್ತು ನಿನ್ನ ಅಣ್ಣ ಮಹಾಬಲೇಶ್ವರನ ಪೂಜೆ ಮಾಡ್ಕಂಡು ಬಂಜೆ” ಎಂದು ಜೋರಾಗಿ ಗಂಟೆ ಬಾರಿಸಿದ. “ಗಣಪತಿ, ಆರಾಮನೋ?”, “ಸದಾಶಿವಮ್ಮ, ಆರಾಮಿದ್ಯ?” ಎಂದು ಅವನು ಕೇಳಿದ್ದು ಅಲ್ಲಿರುವ ಗಣಪತಿ, ದೇವಿ ವಿಗ್ರಹಗಳಿಗೆ. ಇದೆಲ್ಲ ಮುಗಿಸಿ ಊಟಕ್ಕೆ ಬಂದು ಕುಳಿತವ “ಪಾತಕ್ಕ, ರಾಶಿ ಹಸಿವು, ಅನ್ನ ಸಾಕಕ್ಕ?” ಅಂದ. “ನೀನು ಹೊಟ್ಟೆ ತುಂಬಾ ಊಟ ಮಾಡು. ಸಾಕಾಗದೇ ಹೋದ್ರೆ ಅನ್ನ ಮಾಡಲು ಎಷ್ಟು ಹೊತ್ತು?” ಎಂದಳು ಅಜ್ಜಮ್ಮ. ಚರಿಗೆ ಅನ್ನ ನಿರಾಯಾಸವಾಗಿ ಅವನು ಖಾಲಿ ಮಾಡಿದ್ದನ್ನು ಕಂಡು ನಾವು ಬೆಕ್ಕಸ ಬೆರಗಾದೆವು. ಹಾಗೆ ನಗಬಾರದೆಂದು ನಮ್ಮ ಅಜ್ಜ ಕಣ್ಣಿನಿಂದಲೇ ಕಡಿವಾಣ ಹಾಕುತ್ತಿದ್ದರು. ಊಟ ಮುಗಿಸಿ ಒಂದು ಚಾಪೆ ಕೇಳಿ ಪಡೆದು ಒಳ್ಳೇ ಗಾಳಿ ಬರುವತ್ತ ಅಂಗಳದಲ್ಲಿ ಹಾಸಿಕೊಂಡು ಮಲಗಿದ ಕೇಶಮಳ್ಳ ಎದ್ದಾಗ ಸೂರ್ಯ ಮುಳುಗಿದ್ದ, ಸಂಜೆಯ ಬಿಸಿಲಲ್ಲಿ ನಂಜಟ್ಲೆ ಗಿಡ ಹೊಳೆಯುತ್ತಿತ್ತು. ಇಷ್ಟರಲ್ಲಿ ಕೇಶಪ್ಪಚ್ಚಿಯ (ಕೇಶಮಳ್ಳ) ಕುರಿತು ಅಜ್ಜಮ್ಮ ಸ್ವಲ್ಪ ಪರಿಚಯ ಹೇಳಿದ್ದಳು. ಅದರಲ್ಲಿ ನಮಗೆ ಅರ್ಥವಾಗಿದ್ದು ಕಡಿಮೆ. “ನೊಂದವನು ಅವನು. ಕೀಟಲೆ ಮಾಡಿ ನೋಯಿಸಬೇಡಿ” ಎಂಬುದಷ್ಟೇ ನಮಗೆ ಅರ್ಥವಾಗಿದ್ದು.
ನಮಗಂತೂ ಅವನು ನೊಂದವನಂತೆ ಕಾಣಿಸಲಿಲ್ಲ. ಅವನ ಬಾಯಿಂದ ಬರುತ್ತಿದ್ದ ಗಾದೆ ಮಾತುಗಳನ್ನು ಕೇಳಿ ನಾವು ಬಿದ್ದು ಬಿದ್ದು ನಗತೊಡಗಿದೆವು. ಮೀಸೆ ಹಣ್ಣಾದ ಹಿರಿಯನಾಗಿದ್ದರೂ ಅವನ ಹೆಚ್ಚಿನ ವ್ಯವಹಾರ ನಮ್ಮ ಜೊತೆಗೇ. ಆದರೆ ಹಿರಿಯರ ಜಗತ್ತಿನಲ್ಲೂ ಅವನು ಲೀಲಾಜಾಲವಾಗಿ ಪ್ರವೇಶಿಸಿ ಗಾಂಭೀರ್ಯದಿಂದ ಎಲ್ಲ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದ. ಆಗ ನಾವು ಅವನೊಡನೆ ಮಾತಾಡುವಂತಿರಲಿಲ್ಲ. ಹಿರಿಯರ ಗೋಷ್ಠಿಯಲ್ಲಿ ಇವನನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ. ಅಲ್ಲಿಯ ಮಾತು ಕೇಳಿ ಸಾಕಾದ ಮೇಲೆ ಮತ್ತೆ ನಮ್ಮ ಜೊತೆ ಸೇರುತ್ತಿದ್ದ. ಈಗ ಅವನು ನಮ್ಮ ಕೂಟದ ಹಿರಿಯ ಗೆಳೆಯ. ಅವನ ಮಾರ್ಗದರ್ಶನದಲ್ಲಿ ಚಿತ್ರ ವಿಚಿತ್ರವಾಗಿ ನಾವು ಏನೇನೋ ಮಾಡಿಬಿಡುತ್ತಿದ್ದೆವು. ಹಾಗೆ ನಾವು ಬೈಸಿಕೊಳ್ಳಬೇಕಾಗಿ ಬಂದಾಗ “ಇರಲಿ ಬಿಡು ಪಾತಕ್ಕಾ, ಮಕ್ಕಳಲ್ಲವೇ? ಅವರಿಗೇನು ತಿಳಿಯುತ್ತದೆ?” ಎಂದು ನಮ್ಮ ಪರ ವಹಿಸಿ ಮಾತಾಡುತ್ತಿದ್ದ. ನಮ್ಮ ಪರವಾಗಿ ಹೀಗೆ ಮಾತನಾಡುವ ವಿಶ್ವಾಸಾರ್ಹ ನಾಯಕನ ಅವಶ್ಯಕತೆ ನಮಗೆ ತುಂಬಾ ಇತ್ತು. ನಮ್ಮ ಕೀಟಲೆಗಳೇ ಹಾಗಿದ್ದವು. ನಾವೆಲ್ಲರೂ ಅವನನ್ನು ಕೇಶಪ್ಪಚ್ಚಿ ಎಂದು ಎದುರುಗಡೆಯಿಂದ ಕರೆದರೂ ಅದರ ಬೇರು ಕೇಶಮಳ್ಳ ಎಂಬ ಮೂಲಪದದಲ್ಲೇ ಅಡಗಿತ್ತು. ಜನರು ತನ್ನನ್ನು ಹಾಗೇ ಕರೆಯುವುದು ಎಂದು ಅವನಿಗೂ ಗೊತ್ತಿತ್ತು.
ಈಗ ಅನಿಸುತ್ತದೆ, ಹಾಗೆ ಮಳ್ಳ ಹೇಳಿಸಿಕೊಂಡಿದ್ದರಿಂದ ಅವನಿಗೆ ಅನೇಕ ಲಾಭಗಳಿದ್ದವು. ಅವನು ಏನು ಬೇಕಾದರೂ ಮಾಡಬಹುದಿತ್ತು, ಜನರು ನಕ್ಕು ಸುಮ್ಮನಾಗುತ್ತಿದ್ದರು. ಹಾಗೆಂದು ಅವನು ಏನು ಬೇಕಾದರೂ ಮಾಡುತ್ತಿದ್ದನೇ? ಇಲ್ಲ ಅಂತಲೇ ಅನಿಸುತ್ತದೆ. ಆದರೆ ಒಂದು ಮಾತು, ಜೀವನಕ್ಕಾಗಿ ಅವನು ದುಡಿಯ ಬೇಕಾಗಿರಲಿಲ್ಲ. ಯಾರೋ ಅವನಿಗೆ ಹೊಟ್ಟೆ ತುಂಬ ಬಡಿಸುತ್ತಿದ್ದರು, ಹಾಗೆಂದು ಎಲ್ಲೆಲ್ಲಿಗೋ ಹೋಗಿ ಬೇಡಿ ತಿನ್ನುತ್ತಿದ್ದನೆಂದು ಅರ್ಥವಲ್ಲ. ಸಂಬಂಧಿಕರ ಮನೆಗಳಲ್ಲೇ ಅವನು ಉಣ್ಣುತ್ತಿದ್ದುದು. ಯಾರೂ ಅವನಿಗೆ `ಯಾಕೆ ಬಂದೆ?’ ಅನ್ನುತ್ತಿರಲಿಲ್ಲ. ಮಾದೇವಕ್ಕ, ಲಕ್ಷ್ಮಕ್ಕ, ವಿದ್ಯಕ್ಕ, ವೆಂಟುಮಾವ, ಕೃಷ್ಣಣ್ಣ ಹೀಗೆ ಊರ ತುಂಬಾ ಅವನಿಗೆ ಅಣ್ಣ, ಅಕ್ಕಂದಿರು. ದೇವಸ್ಥಾನಕ್ಕೆ ಹೊರಟವರ ಕೈಲಿ ಭಾರವಾದ ಹರಿವಾಣವಿದ್ದರೆ ಇವನೇ ಅದನ್ನು ಅವರಿಂದ ಕಸಿದುಕೊಂಡು ಹೊತ್ತು ಓಡಿ ದೇವಸ್ಥಾನದ ಬಾಗಿಲಲ್ಲಿ ನಿಂತಿರುತ್ತಿದ್ದ. ಅವರು ಬಂದ ಮೇಲೆ “ಆಯಿತು, ಪೂಜೆ ಮಾಡಿಕೊಳ್ಳಿ, ಏನು ಕೇಶ ಹೀಗೆ ಮಾಡಿದ ಅಂದುಕೊಳ್ಳಬೇಡಿ, ನಾನೂ ಮಿಂದು ಮಡಿಯಾದವನೇ. ನೀವು ನಡೆಯುತ್ತಿದ್ದ ಲೆಕ್ಕದಲ್ಲಿ ಇದನ್ನು ಹೊತ್ತು ಇಲ್ಲಿ ಬರುವುದು ಮಧ್ಯಾಹ್ನವಾಗುತ್ತಿತ್ತು” ಎಂದು ಅವರಿಗೆ ಹೇಳಿ ಮತ್ತಿನ್ನಾವುದೋ ಲೋಕ ಕಲ್ಯಾಣದ ಕಾರ್ಯಕ್ಕೆ ನುಗ್ಗುತ್ತಿದ್ದ. ಅಂಥ ಕಾರ್ಯಗಳಿಗೆ ಹೀಗೇ ಅಂತ ವೇಳಾಪಟ್ಟಿ ಇಲ್ಲ. ಇವತ್ತು ಸಹಾಯ ಮಾಡಿದ ಅಂತ ನಾಳೆ ಅವನನ್ನು ನೆಚ್ಚುವಂತೆಯೂ ಇಲ್ಲ.
ಅಜ್ಜಿಮನೆಯಲ್ಲಿ ಅವನು ಇದ್ದಾಗ ಒಬ್ಬರು ಹಿರಿಯರು ಬಂದರು. ಅವರು ತಾನೆಷ್ಟು ದೊಡ್ಡ ದಾನಿ ಎಂದು ನಮಗೆ ಮನವರಿಕೆ ಮಾಡಿಕೊಡಲು ತುಂಬ ಪ್ರಯತ್ನ ಮಾಡಿದರು. ಅವರು ಹಾಗೆ ಹೇಳತೊಡಗಿದಷ್ಟೂ ಅವರ ದಾನ ಮುಂತಾದ ದೊಡ್ಡ ಮಾತುಗಳು ನಮಗೆ ಅಪಹಾಸ್ಯದಂತೆಯೇ ಕೇಳತೊಡಗಿದವು. ಅವರು ಹೋದ ಮೇಲೆ ನಾವು ಮಕ್ಕಳು, ನಮ್ಮ ನಮ್ಮಲ್ಲೇ ಅವರ ಮಾತುಗಳನ್ನು ಅಣಕಿಸಿ ಹೇಳುತ್ತಿದ್ದಾಗ ಕೇಶಪ್ಪಚ್ಚಿಯೂ ಆ ಮಾತುಗಳನ್ನು ನಗೆಯಾಡುತ್ತಾ ಕೇಳಿದ. ಬಳಿಕ ಒಂದು ಗಾದೆ ಮಾತು ಹೇಳಿದ: “ಇರುವೆ ಕಣ್ಣಿಗೆ ಉಚ್ಚಿ ಪ್ರಳಯ’’.
ನಾವೆಲ್ಲರೂ ಹೋ ಎಂದು ನಗತೊಡಗಿದೆವು. ಇದಾವ ಇರುವೆ ಮಾರಾಯ? ಅದಕ್ಕೆ ಉಚ್ಚಿ ಕಂಡಿದ್ದೆಲ್ಲಿ? ಹೊಯ್ದವರು ಯಾರು?- ಏನೇನೋ ಹೇಳಿ ಮತ್ತೆ ಮತ್ತೆ ಆ ಗಾದೆಮಾತನ್ನು ನೆನೆಸಿಕೊಂಡು ನಕ್ಕೆವು. “ಊರಿಗೆಲ್ಲಾ ಆಚಾರ ಹೇಳಿ ಮನೆಒಲೆಲಿ ಉಚ್ಚಿ ಹೊಯ್ದ” ಇದು ಅವನು ನಮಗೆ ಹೇಳಿಕೊಟ್ಟ ಇನ್ನೊಂದು ಗಾದೆ. ಇಂಥ ಗಾದೆ ಮಾತುಗಳನ್ನು ಅದೆಷ್ಟು ಸಮರ್ಪಕವಾಗಿ ಅವನು ಉಪಯೋಗಿಸುತ್ತಿದ್ದ ಎಂದರೆ, ಅದರ ಅರ್ಥವೂ ಆಗಲೇ ನಮಗೆ ಮನದಟ್ಟಾಗಿಬಿಡುತ್ತಿತ್ತು. ಹಿರಿಯರ ಎದುರು ಆ ಗಾದೆ ಮಾತುಗಳನ್ನು ಹೇಳಲು ಹೋಗಿ ಬೈಸಿಕೊಂಡೆವು. “ಕೇಶಾ, ಸಣ್ಣ ಮಕ್ಕಳಿಗೆ ಇಂಥ ಗಲೀಜು ಗಾದೆ ಹೇಳಿಕೊಡುವುದಾ ನೀನು?” ಎಂದು ಕೇಶಣ್ಣನಿಗೂ ಪೂಜೆಯಾಗುತ್ತಿತ್ತು. ಅಂಥ ಸಂದರ್ಭಗಳನ್ನು ಅವನು ನಿರ್ವಹಿಸುತ್ತಿದ್ದ ರೀತಿಯೇ ತುಂಬ ವಿಶಿಷ್ಟ. “ಹೆ – ಹೆ – ಹೆ- ಅದೆ – ಕೋಡ (ಮಂಗ)- ಹೋ -ಹೋ -ಹೋ’’ ಎಂದು ಹಿತ್ತಿಲಿಗೆ ಕಲ್ಲು ಹಿಡಿದು ಓಡಿಬಿಡುತ್ತಿದ್ದ. ಇನ್ನು ಅವನನ್ನು ಹಿಡಿಯು ವವರು ಯಾರು?
ಒಂದು ಮಧ್ಯಾಹ್ನವಂತೂ ಅಜ್ಜಿಮನೆಯ ದೇವಾಲಯದಲ್ಲಿ ಕೋಲಾಹಲ ಎಬ್ಬಿಸಿಬಿಟ್ಟ. ಬಾವಿಯಿಂದ ನೀರು ತಂದು ಸದಾಶಿವಲಿಂಗಕ್ಕೆ ನೀರು ಹೊಯ್ದಿದ್ದೇ ಹೊಯ್ದಿದ್ದು. ಅಜ್ಜನಿಗೆ ಪೂಜೆ ಮಾಡಲು ಬಿಡಲೇ ಇಲ್ಲ. “ಅಭಿಷೇಕಪ್ರಿಯ ಅಲ್ಲವೋ ಅವನು? ಅವನಿಗಿವತ್ತು ಸಾಕು ಬೇಕು ಮಾಡಿಬಿಡುತ್ತೇನೆ.’’ ಎಂದು ಹತ್ತು ಹದಿನೈದು ಕೊಡ ನೀರು ತಂದು ಲಿಂಗಕ್ಕೆ ಸುರುವುತ್ತಲೇ ಇದ್ದ. ನಡುನಡುವೆ ಒಮ್ಮೊಮ್ಮೆ “ಇವತ್ತು ಈಶ್ವರನಿಗೆ ಥಂಡಿ ಆಗಿಬಿಡಬೇಕು. ಹಾ, ಹಾಗೆ ಅವನಿಗೆ ಜಳಕ ಮಾಡಿಸ್ತೆ” ಎಂದು ಘೋಷಿಸುತ್ತಾ ಬಾವಿಯಿಂದ ನೀರೆತ್ತಿದ. ಈಶ್ವರ ಮಾತಾಡಲಿಲ್ಲ. ಅಜ್ಜ ಹೇಳಿದ್ದು ಕೇಶಪ್ಪಚ್ಚಿ ಕೇಳಲಿಲ್ಲ. ಅಜ್ಜಮ್ಮ ಈ ನಡುವೆ ಒಂದು ಜಾಣತನ ಮಾಡಿದಳು. ಅವಳು ಹೇಳಿಕೊಟ್ಟಂತೆ ಬಾವಿಯ ಹಗ್ಗ ಕಳಚಿ ಮೆತ್ತಿ ಮೇಲೆ ಸಾಗಿಸಿಬಿಟ್ಟೆವು. ಈ ಸಂದರ್ಭದಲ್ಲಿ ನಾವು ಅಜ್ಜಮ್ಮನ ಪಕ್ಷ ವಹಿಸಿದರೂ ಕೇಶಪ್ಪಚ್ಚಿಯ ಮುಂದಿನ ನಡೆ ಏನೆಂದು ಕುತೂಹಲದಿಂದ ಗಮನಿಸುತ್ತಲೇ ಇದ್ದೆವು. ಪುಣ್ಯಾತ್ಮ, ನಾವು ನೋಡುತ್ತಿದ್ದಂತೆ ಕೊಡದೊಂದಿಗೆ ಬಾವಿಗೆ ಹಾರಿಯೇ ಬಿಟ್ಟ. ಬೇಸಿಗೆ ದಿನವಾದ್ದರಿಂದ ನೀರು ಅಷ್ಟೊಂದಿರ ಲಿಲ್ಲ. ಕೊಡದಿಂದ ನೀರೆತ್ತಿ ತನ್ನ ತಲೆಗೇ ಬಾವಿಯೊಳಗೇ ಸುರುವಿಕೊಳ್ಳತೊಡಗಿದ. “ನೋಡು ಕೇಶಾ, ನೀನು ಹೀಗೇ ಮಾಡುತ್ತಿದ್ದರೆ, ನಿನ್ನ ಅಣ್ಣ ಅತ್ತಿಗೆಗೆ ಹೇಳಬೇಕಾಗುತ್ತದೆ. ಇಲ್ಲಿ ಬಂದು ನಿನಗೇನಾದರೂ ಹೆಚ್ಚು ಕಡಿಮೆ ಆದರೆ ಏನು ಗತಿ?’’ ಎಂದು ಪೂಜೆ ಮುಗಿಸಿಬಂದ ಅಜ್ಜ ಕಣ್ಣರಳಿಸಿ ಹೇಳಿದಾಗ ಒಮ್ಮೆಲೇ ಕೇಶಪ್ಪಚ್ಚಿಯ ಚಟುವಟಿಕೆ ಸ್ತಬ್ಧ ವಾಯಿತು. ಬಾಲ ಮುದುರಿಕೊಂಡು ಬರುವ ಪ್ರಾಣಿಯಂತೆ, ಬಾವಿಯಿಂದ ಎದ್ದು ಬಂದ. ಸ್ನಾನ ಮುಗಿಸಿ, ದೇವಸ್ಥಾನಕ್ಕೆ ಹೋಗಿ ಸಂಧ್ಯಾವಂದನೆ ಪೂರೈಸಿ, ಏನೂ ಮಾತನಾಡದೆ ಊಟ ಮುಗಿಸಿದ. ಊಟವಾದ ಮೇಲೆ ಅಜ್ಜ ಮಂಚದ ಮೇಲೆ ಸ್ವಲ್ಪ ಹೊತ್ತು ಮಲಗುವುದು ರೂಢಿ. ನಾವೆಲ್ಲ ಮಲಗಿದ್ದೇವೆಂದು ಅವನು ತಿಳಿದಿರಬೇಕು. ಅಜ್ಜನ ಬಳಿ ಹೋಗಿ ಕೈ ಮುಗಿದು “ದಯಮಾಡಿ ಅಣ್ಣ, ಅತ್ತಿಗೆಗೆ ಏನೂ ಹೇಳಬೇಡಿ.” ಎಂದು ದೈನ್ಯದಿಂದ ಅಂಗಲಾಚಿದ.. “ಛೇ, ಛೇ, ಹಾಗೇನೂ ಇಲ್ಲ. ನೀನು ಬಾವಿಗೆ ಹಾರಿ ಅವಾಂತರ ಮಾಡಿದ್ದಕ್ಕೆ ಹಾಗೆ ಹೇಳಿದೆ ಅಷ್ಟೆ, ಯಾರಿಗೂ ಹೇಳುವುದಿಲ್ಲ, ಹೋಗು, ಮಲಗಿಕೋ” ಎಂದು ಅಜ್ಜ ಸಮಾಧಾನ ಮಾಡಿದರು.
ಕೃತಿ: ಭರತದ ಮಧ್ಯಾಹ್ನ (ಕಥಾ ಸಂಕಲನ)
ಲೇಖಕ: ಚಿಂತಾಮಣಿ ಕೊಡ್ಲೆಕೆರೆ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 170 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಶ್ರೀಧರ ಬಳಗಾರರ ಕಾದಂಬರಿ ʼವಿಸರ್ಗʼ