:: ಡಾ. ಆರ್. ಜಿ. ಹೆಗಡೆ
ದೇವರಾಣೆಯಾಗಿಯೂ, ಮಗು ಹೇಗೆ ಹುಟ್ಟುತ್ತದೆ ಎನ್ನುವ ನಿಗೂಢತೆ ಆಗ ನಮಗೆ ಅರಿವಿಗೆ ಇರಲಿಲ್ಲ. ಅದೇನೋ ಕ್ರೋಮೋಜೋಮ್ ಜೊತೆಗೂಡಿ ಒಂದು ಮೂಹೂರ್ತದಲ್ಲಿ ಜೀವವಾಗಿ ಬೆಳೆಯುತ್ತದೆ, ಇದೆಲ್ಲಾ ಪ್ರಕೃತಿಯ ಅದ್ಭುತ ವರ್ಣನಾತೀತ ಕ್ರಿಯೆ ಇತ್ಯಾದಿ ಗೊತ್ತಿರಲಿಲ್ಲ. ಒಂಭತ್ತನೆಯ ಇಯತ್ತೆಯ ಪುಸ್ತಕದಲ್ಲಿ ಆ ಕುರಿತಾದ ಪಾಠಗಳು ಬಂದಾಗ ಅದರಲ್ಲಿ ಇರುವ ವೈಜ್ಞಾನಿಕ ವಿವರಗಳೆಲ್ಲ ನಮಗೆ ಕಟ್ಟು ಕಥೆಗಳಾಗಿ, ಹಾಸ್ಯಾಸ್ಪದವಾಗಿ ಕಾಣಿಸುತ್ತಿದ್ದವು. ಯಾಕೆಂದರೆ ಅಂದಿನ ಜೀವನ ಹಾಗೆ ಇರಲೇ ಇಲ್ಲ. ಹುಟ್ಟಿಗೆ ಪೂರಕವಾದ ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧಗಳ ಕುರಿತು ಆಗ ದೊಡ್ಡವರು ಯಾರೂ ಬಾಯಿ ಬಿಚ್ಚುತ್ತಿರಲಿಲ್ಲ. ನಮಗೆ ಸಿಕ್ಕುತ್ತಿದ್ದ ಮಾಹಿತಿಗಳೆಲ್ಲ ಅರೆ ಬರೆ ಕಲ್ಪನೆಗಳು. ಆದರೆ ನಮಗೆ ಗೋಚರವಾಗದ ದೊಡ್ಡವರ ಒಳಜಗತ್ತು ಒಂದಿದೆ ಎನ್ನುವ ಅಂದಾಜು ನಮಗೆ ಇತ್ತು. ವಿವಾಹೋತ್ತರ ಗಂಡು ಹೆಣ್ಣಿನ ಸಂಬಂಧದ ಕುರಿತು ಹಲವು ಸಂಜ್ಞೆಗಳು, ಸಂಕೇತಗಳು ಪ್ರಚಲಿತವಿದ್ದವು. ಈ ಕುರಿತು ಇರುವ ಕೈಸನ್ನೆಗಳು ಏನು ಎನ್ನುವುದನ್ನು ಭಟ್ಟ ಹೇಳಿಕೊಟ್ಟಿದ್ದ.
ನಮಗೆ ಒಂಭತ್ತನೆ ಇಯತ್ತಿಗೆ ಜೀವಶಾಸ್ತ್ರ ಕಲಿಸಲು ಹೊಸ ಅಕ್ಕೋರು ಬಂದಿದ್ದರು. ಇನ್ನೂ ವಿವಾಹವಾಗದವರು ಅವರು. ನಾನು ಭಟ್ಟ ಬೆಂಚುಮೇಟು. ನಾವು ಒಬ್ಬರನೊಬ್ಬರು ದೂಡಾಡಿ ನಾನು ಅವನನ್ನು ಬೆಂಚಿನ ಕೆಳಗಡೆ ನೆಲದ ಮೇಲೆ ನೂಕಿದ್ದೆ. ನಮ್ಮ ಹೊಡೆದಾಟಕ್ಕೆ ಸಿಟ್ಟುಗೊಂಡ ಅಕ್ಕೋರು ಅವನನ್ನು ನನ್ನಿಂದ ದೂರ ಮಾಡಿ ಮೂಲೆಯಲ್ಲಿದ್ದ ಮೂರು ಕಾಲಿನ ಕಪ್ಪು ಬೋರ್ಡ ಕೆಳಗೆ ಕೂರಿಸಿದ್ದರು. ಅಲ್ಲಿಗೆ ವರ್ಗವಾದ ನಂತರವೂ ಅವನು ಸುಮ್ಮನಿರಲಿಲ್ಲ. ಗಂಡು ಹೆಣ್ಣಿನ ಸಂಬಂಧದ ಕುರಿತಾಗಿದ್ದ ಸಂಜ್ಞೆಯೊಂದನ್ನು ನನ್ನ ಕಡೆ ತೋರಿಸಿದ್ದ. ಅದನ್ನು ಅಕಸ್ಮಾತ್ತಾಗಿ ನೋಡಿದ ಅಕ್ಕೋರು ದಂಗಾಗಿ ಹೋಗಿದ್ದರು. ನಮಗೆ ಆ ವಿಷಯ ಹೇಳಿ ಬಯ್ಯುವ ಹಾಗಿಲ್ಲ, ಏಕೆಂದರೆ ನಮಗೆ ಏಕೆ ಬಯ್ಯುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳುವ ಹಾಗಿಲ್ಲ. ಸುಮ್ಮನಿರುವ ಹಾಗೂ ಇಲ್ಲ. ಕೊನೆಗೆ ಅವನನ್ನು ತೆಗೆದುಕೊಂಡು ಹೋಗಿ ಹಿಂದಿನ ಬೆಂಚಿನಲ್ಲಿ ಕೂಡ್ರಿಸಿ ಕೈ ತೊಳೆದುಕೊಂಡಿದ್ದರು. ತಾನು ಎಂತಹ ಅಪಾಯಕಾರಿ ವಾತಾವರಣದಲ್ಲಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಿ ಹೋಗಿತ್ತು. ಅನಂತರ ಅವರು ಜೀವಶಾಸ್ತ್ರದ ಪಾಠಗಳನ್ನು ಕೇವಲ ಅಮೀಬಾ ಕುರಿತಾದದ್ದನ್ನು ಕಲಿಸಿ ಉಳಿದೆಲ್ಲವನ್ನು ಹಾರಿಸಿಬಿಟ್ಟಿದ್ದರು. ಕಲಿಸಲೇ ಇಲ್ಲ. ಅವರು ಕಲಿಸದಿದ್ದರೂ ಆ ಪುಸ್ತಕದಲ್ಲಿ ನಮಗೆ ಬೇಕಾದ ‘ಭಾಗ’ಗಳನ್ನು ನಾವೇ ಓದಿ ‘ಗಂಭೀರವಾಗಿ’ ಚರ್ಚಿಸಿದ್ದೆವು. ಆದರೆ ನಮ್ಮ ಅಪಾರ ಅನುಭವ’ದ ಹಿನ್ನೆಲೆಯಲ್ಲಿ ನಮಗೆ ನಿಜ ಜಗತ್ತಿನ ಮುಂದೆ ಆ ಪುಸ್ತಕ ಸುಳ್ಳು ಎಂದೇ ಅನಿಸುತ್ತಿತ್ತು.
ನಿಜವಾಗಿಯೂ ನಾವು ಮೊದಲು ತಿಳಿದಿದ್ದೆಂದರೆ ಮದುವೆಯಾದರೆ ಮಾತ್ರ ಮಕ್ಕಳಾಗುತ್ತಾರೆ ಎಂದು. ಆದರೆ ಕ್ಲಾಸಮೇಟು ಆಚಾರಿ ತಂದ ಸುದ್ದಿಯೆಂದರೆ ಬೊಗರಿ ಬೈಲಿನಲ್ಲಿ ಎಲ್ಲಿಯೋ ಒಂದು ಕಡೆ ಮದುವೆ ಆಗದ ಹುಡುಗಿ ಬಸುರಿಯಾಗಿ ಬಿಟ್ಟಿದ್ದಳು. ಅದು ನಮ್ಮ ನಂಬಿಕೆಯ ಬುಡವನ್ನೇ ಅಲ್ಲಾಡಿಸಿಬಿಟ್ಟಿತ್ತು. ಈಗ ನಮಗೆ ವಿಷಯ ಹೊಳೆದುಬಿಟ್ಟಿತ್ತು. ಸಾಧಾರಣವಾಗಿ ಊರಲ್ಲಿ ಮದುವೆಯಾದ ನಂತರ ಅಲ್ಲೆಲ್ಲ ಸುತ್ತ ಮುತ್ತ ನಮ್ಮ ಗೂಢಚಾರರು ಇರುತ್ತಿದ್ದರು. ‘ಯಾರಾದರೂ ಒಬ್ಬರು ಅವಳು ಬಸರಿಯಂತೆ’ ಎಂದು ಸುದ್ದಿ ತರುತ್ತಿದ್ದರು. ಇನ್ನು ಕೆಲವರು ತುಸು ಅಸಹ್ಯವಾಗಿ ಮಾತನಾಡುತ್ತಿದ್ದರು.
ಬೇರೆಯವರ ಕುರಿತು ಹೇಗೆ ಭಾವನೆಯಿದ್ದರೂ ನಮ್ಮದೇ ಅಕ್ಕಂದಿರು ಮತ್ತು ನೂರಾ ಎಂಟು ಅತ್ತಿಗೆಯರ ಬಗ್ಗೆ ಅವರು ಗರ್ಭಿಣಿಯಾದರೆ ತುಂಬ ಪ್ರೀತಿ ಉಕ್ಕಿ ಬರುತ್ತಿತ್ತು. ಬೇರೆಯವರ ಕುರಿತು ಮಾತನಾಡಿದಾಗ ಬರುವ ಭಾವನೆ ಇಲ್ಲಿ ಬರುತ್ತಿರಲಿಲ್ಲ. ಪದ್ದಕ್ಕನ ಹೊಟ್ಟೆ ಮುಟ್ಟಿ ಕಿವಿಕೊಟ್ಟು ಕೇಳುತ್ತಿದ್ದವು. “ನೋಡ, ಇಲ್ಲಿ ಬಾರ, ಹೇಂಗೆ ಮಗು ಉಸಿರಾಡೋದು ಕೇಳು ನೋಡ’ ಎಂದು ಪದ್ದಕ್ಕ ಹೇಳುತ್ತಿದ್ದಳು. ನಮಗೆ ನಾಚಿಕೆ. “ಅಯ್ಯೋ ಅವ ನಾಚಿಕೊಳ್ಳೋದು ನೋಡು, ಹುಡಗೀರ ಹಾಗೆ” ಎಂದು ಪದ್ದಕ್ಕ ಹೇಳುತ್ತಿದ್ದಳು. ತುಂಬು ಬಸುರಿ ಪದ್ದಕ್ಕ ಮಫ್ಲರ್ ಸುತ್ತಿಕೊಂಡು ಸೈಟರ್ ಹೊದೆದುಕೊಂಡು ಕಟ್ಟಿಗೆ ಒಲೆಗೆ ಕಾಲು ಹಚ್ಚಿ ಮುಂದೆ ಕುಳಿತು ಅವಳ ಕಿಂಕಿಣಿಯಂತಹ ಸ್ವರದಲ್ಲಿ ಮಾತಾನಾಡುತ್ತಿದ್ದರೆ ಅದರಲ್ಲಿ ಒಂದು ರೀತಿಯ ದಿವ್ಯತೆ ಇರುತ್ತಿತ್ತು. ‘ಹೂ! ಅಕ್ಕಂದಿರು ಕೆಟ್ಟವರಲ್ಲ, ಮಗು ಹೊಟ್ಟೆಯೊಳಗೆ ಬರುವುದು ಭಟ್ಟ ಹೇಳಿದ ಆ ಭಟ್ಟ ಮಾತನಾಡುವುದೆಲ್ಲ ಹೊಲಸು. ಇಷ್ಟು ಚಂದದ ದೇವತೆಯಂತಹ ರೀತಿ ಅಲ್ಲವೇ ಅಲ್ಲ. ಪುಸ್ತಕದಲ್ಲಿದ್ದ ದರಿದ್ರ ರೀತಿಯೂ ಅಲ್ಲ’ ಅನಿಸುತ್ತಿತ್ತು. ಮೊದಲು ಮಗು ಹೊರಗೆ ಹೇಗೆ ಬರುತ್ತದೆ ಎನ್ನವುದರ ಬಗ್ಗೆಯೂ ತುಂಬ ಅನುಮಾನವಿತ್ತು. ಕೊನೆಗೆ ಈ ವಿಷಯ ಗೊತ್ತಾದಾಗ ನಗು ತಡೆಯಲಾಗಲಿಲ್ಲ. ಛೇ! ಎಂತಹ ಮುದ್ದು ಮಗು, ದೇವರೇ, ಆದರೆ ಎಂತಹ ಹಿನ್ನೆಲೆ? ನಗು ತಡೆಯಲಾಗುತ್ತಿರಲಿಲ್ಲ.
ಅಂದಿನ ದಿನಗಳಲ್ಲಿ ನಮ್ಮೂರಲ್ಲಿ ಸೂಲಗಿತ್ತಿ ಲಿಂಗಜ್ಜಿಯೇ ಡಾಕ್ಟರ್. ಇಂದಿನ ದಿನಗಳ ಹಾಗೆ ಮೊದಲಿನಿಂದಲೇ ಭೆಟ್ಟಿ, ಗುಳಿಗೆ, ಬೆಡ್‌ರೆಸ್ಟು ಇರಲಿಲ್ಲ. ಬಸುರಿಯರಿಗೆ ಬಯಕೆ ಇರುತ್ತದೆ ಎಂದು ತಿಳಿದಿತ್ತು. ಅವರು ಮಾವಿನ ಮಿಡಿ, ಹುಳ್ಳೇ ಬೆಟ್ಟೆ ಅಂತಹ ಹುಳಿ ತಿನ್ನುತ್ತಿದ್ದರು. ಬಡವರ ಮನೆಯಲ್ಲಿ ಅಷ್ಟಕ್ಕೆ ಮುಕ್ತಾಯ. ಆದರೂ ತಾಯಂದಿರು ಏನೇನೋ ಹೆಣಗಾಡಿ ಬಸುರಿಯಾಗಿರುವ ತಮ್ಮ ಮುದ್ದು ಮಗಳಿಗೆ ಬೆಲ್ಲದ ಹಲವೆ, ಮುಂಡಕ್ಕಿ ಇತ್ಯಾದಿ ತರುತ್ತಿದ್ದರು. ಆದರೆ ಅದು ಕೇವಲ ಅವರಿಗೆ ಮಾತ್ರ. ಮನೆಯ ಬೇರೆಯವರಿಗೆ ಅದರಲ್ಲಿ ಪಾಲಿಲ್ಲ. ಏಕೆಂದರೆ ಅಷ್ಟೆಲ್ಲಾ ಸಾಮಾನು ಇಲ್ಲ. ಒಟ್ಟು ಕುಟುಂಬದಲ್ಲಿ ಅಣ್ಣ ತಮ್ಮನ ಹೆಂಡಂದಿರು ಬಸುರಾದರೆ ಇದರಿಂದ ತುಸು ಕಸಿವಿಸಿಯ ಘಟನೆಗಳೂ ಜರುಗುತ್ತಿದ್ದವು.
ಕೃತಿ: ಮೊದಲ ಮಳೆಯ ಪರಿಮಳ
ಲೇಖಕ: ಡಾ.ಆರ್.ಜಿ ಹೆಗಡೆ
ಪ್ರಕಾಶನ: ಸಾಧನ ಪಬ್ಲಿಕೇಶನ್ಸ್
ಬೆಲೆ: 250 ರೂ.
ಇದನ್ನೂ ಓದಿ: Sunday Read: ಎಚ್‌ಎಸ್‌ವಿ ಹೊಸ ಪುಸ್ತಕ: ನೆನಪಿನ ಒರತೆ: ಭೂತ-ಪ್ರೇತಗಳ ನಿಗೂಢ ಜಗತ್ತು