:: ಅಮಿತಾ ಭಾಗವತ್
ಬೆಳದಿಂಗಳು ಚೆಲ್ಲಿದಂತಹ ಅಮೃತ ಶಿಲೆಯ ಬಿಳುಪು ಹಾಳಾಗಬಾರದು ಎಂದು ಯಾರಾದರೂ ಆಣತಿಯನ್ನು ಕೊಟ್ಟಿದ್ದಾರೇನೋ ಎನ್ನುವಂತೆ ವಾರ್ಡ್ ಬಾಯ್ ನೆಲ ತಿಕ್ಕುತ್ತಿದ್ದಾನೆ. ಕೋಲಿಗೆ ಕಟ್ಟಿದ ಬಟ್ಟೆಯನ್ನು ಆಗಾಗ ಬಕೆಟ್‍ನಲ್ಲಿ ಅದ್ದಿದಾಗ ಅದರಲ್ಲಿ ನೊರೆ ಕಟ್ಟುತ್ತದೆ. ಕಾಲಿಡಲು ಸರಯೂಗೆ ಅನುಮಾನ. ಅವಳು ಎಂದೂ ಇಂಜೆಕ್ಷನ್‍ಗೆ ಹೆದರಿದವಳಲ್ಲ. ಮೂಗು ಮುಚ್ಚಿಕೊಂಡು ಔಷಧಿ ನುಂಗುವುದಕ್ಕೂ ಹಿಂಜರಿದವಳಲ್ಲ. ಆದರೆ ಅವಳು ಹೆದರುವುದೆಂದರೆ ಹೊಟ್ಟೆ ಕಿವುಚಿ ಬರುವಂತಹ ಫಿನೈಲ್ ವಾಸನೆಗೆ. ಈಗೆಲ್ಲ ಆಸ್ಪತ್ರೆಗಳಲ್ಲೂ ಫಿನೈಲ್ ಬದಲಾಗಿ ಲೈಝೋಲ್ ಅಥವಾ ಅದರಂತಹುದೇ ಇನ್ನೇನೋ ಬಳಸುತ್ತಾರೆಂದು ಅವಳಿಗೆ ಗೊತ್ತು. ಆದರೂ ಆಸ್ಪತ್ರೆಯಲ್ಲಿ ಯಾರಾದರೂ ನೆಲ ಒರೆಸುತ್ತಿದ್ದರೆ ಅವಳಿಗೆ ಹೊಟ್ಟೆ ಕಿವುಚಿದಂತಾಗುತ್ತಿತ್ತು.
ಅವಳು ಎಣಿಸಿದಂತೆಯೇ ಫಿನೈಲ್ ವಾಸನೆ ಬರಲಿಲ್ಲ. ಬಿರಿದ ಮಲ್ಲಿಗೆಯ ಸುವಾಸನೆ ತೇಲಿ ಬಂತು. ಬಿರಿಯುತ್ತಿರುವ ಮಲ್ಲಿಗೆ ಬಿಳುಪು, ನುಣುಪಿಗೂ; ಕಾಲಡಿಯಲ್ಲಿರುವ ಅಮೃತಶಿಲೆಯ ನೆಲದ ಒನಪಿಗೂ ನಿಕಟವಾದ ಸಂಬಂಧವಿದೆ ಎಂದೆನಿಸಿ ಸರಯೂಳ ಮುಖದಲ್ಲಿ ಮುಗುಳ್ನಗೆ ಮೂಡಿತು.
ಇಪ್ಪತ್ನಾಲ್ಕನೆ ಅಂತಸ್ತಿನಲ್ಲಿ ಲಿಫ್ಟ್ ಬಾಗಿಲು ತೆರೆದು ಸರಯೂ ಎದುರಿಗೇ ತೆರೆದುಕೊಂಡಿದ್ದ ಲಾಬಿಯತ್ತ ದೃಷ್ಟಿ ಹಾಯಿಸಿದಳು. ಮೆತ್ತನೆಯ ಸೋಫಾಗಳ ನಡುವೆ ಗೋಲಾಕಾರದ ಟೀಪಾಯಿ. ಅದರ ಬಲಕ್ಕೆ ಅರ್ಧ ತೆರೆದ ಕಿಟಕಿಯಲ್ಲಿ ಹೊಳೆಯು ತ್ತಿರುವಂತೆ ಕಾಣುವ ಶ್ವೇತ ವಸ್ತ್ರಧಾರಿಣಿಗಳು. ರೂಮ್ ನಂ. 24 ಎಲ್ಲಿದೆ ಎಂದು ಅವರನ್ನೊಮ್ಮೆ ಕೇಳಲಾ ಅಂದುಕೊಂಡಳು. ಆಗ ಅವಳಿಗೆ ಇದ್ದಕ್ಕಿದ್ದಂತೆ ನೆನಪಾಯಿತು ವಿಮಾನ ನಿಲ್ದಾಣಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಬೋರ್ಡ್‍ಗಳು ಗೋಡೆಯ ಮೇಲಿರುತ್ತವೆ'. ಹಾಗೆಯೇ ಗೋಡೆಯ ಮೇಲ್ಭಾಗವನ್ನು ನೋಡಿದಾಗ
24′ ಎನ್ನುವ ನಂಬರ್‍ನ ಬಲಬದಿಗೆ ಬಾಣದ ಗುರುತಿತ್ತು. ಅವಳು ಬಲಕ್ಕೆ ತಿರುಗಿದಾಗ ಅವಳನ್ನು ತಾಯಿ ಕೃಷ್ಣಿ ಹಾಗೂ ತಂದೆ ಆನಂದು ತಾಂಡೇಲ ಹಿಂಬಾಲಿಸುತ್ತಿದ್ದರು.
ಆನಂದು ತಾಂಡೇಲ ಕಾರವಾರದಲ್ಲಿ ವಂಶಪಾರಂಪರ್ಯವಾಗಿ ಬಂದ ಮೀನುಗಾರಿಕೆಯಲ್ಲಿ ತನ್ನ ಚಿಕ್ಕವಯಸ್ಸಿನಿಂದಲೇ ತೊಡಗಿದ್ದ. ಕೆಲದಿನಗಳ ಹಿಂದೆ ಅವಳ ತಾಯಿ ಕೃಷ್ಣಿ ಫೆÇೀನ್ ಮಾಡಿ ಗಾಬರಿಯಿಂದ ಹೇಳಿದ್ದಳು. `ಸರಯೂ, ನಿನ್ನ ತಂದೆಗೆ ಪಿತ್ತಕೋಶದಲ್ಲಿ ಕಲ್ಲಾಗಿದೆಯಂತೆ, ಆದಷ್ಟು ಬೇಗ ಆಪರೇಶನ್ ಆಗಬೇಕಂತೆ’.
`ಅಲ್ಲಿ ಆಪರೇಶನ್ ಬೇಡ ಅಮ್ಮಾ.. ನೀವು ಕೂಡಲೇ ಮುಂಬಯಿಗೆ ಹೊರಟು ಬನ್ನಿ. ಇಲ್ಲಿ ತುಂಬಾ ಒಳ್ಳೆಯ ಆಸ್ಪತ್ರೆಗಳಿವೆ. ನುರಿತ ಡಾಕ್ಟರರಿದ್ದಾರೆ. ನೀವೇನೂ ಕಾಳಜಿ ಮಾಡಬೇಡಿ’.
ಸರಯೂಳ ಮಾತಿನಂತೆ ಆನಂದು ಮತ್ತು ಕೃಷ್ಣಿ ಮುಂಬಯಿಗೆ ಬಂದು, ಎಲ್ಲಾ ತಪಾಸಣೆಗಳು ನಡೆದು ಆನಂದುವಿನ ಪಿತ್ತಕೋಶವನ್ನೇ ತೆಗೆಯಬೇಕೆಂದು ನಿರ್ಧರಿಸಿದ್ದರು. ಮರುದಿನದ ಶಸ್ತ್ರಚಿಕಿತ್ಸೆಗೆಂದು ಆನಂದು ಮುಂಬಯಿಯ ಸುಪ್ರಸಿದ್ಧ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ. ಅವರಿಗೆಂದೇ ನಿಗದಿಯಾಗಿದ್ದ `ರೂಮ್ ನಂ. 24′ ಹೊಕ್ಕೊಡನೆ ಕೃಷ್ಣಿ ಮತ್ತು ಆನಂದು ಅವಾಕ್ಕಾಗಿ ನಿಂತುಬಿಟ್ಟರು. ಈ ತರಹದ ಸ್ವಚ್ಛ, ಸುಸಜ್ಜಿತ ಕೊಠಡಿಗಳು ಆಸ್ಪತ್ರೆಯಲ್ಲಿರಬಹುದು ಎಂದು ಊಹಿಸಲೂ ಅವರಿಗೆ ಅಸಾಧ್ಯವಾಗಿತ್ತು. ಅವರು ಪರಸ್ಪರ ಮುಖ ನೋಡಿಕೊಂಡರು.
ಒಳ ಹೊಕ್ಕೊಡನೆ ಒಂದು ಪುಟ್ಟ ಕೋಣೆ. ಅಲ್ಲಿ ಸುಂದರವಾದ ಸೋಫಾ. ಅದರ ಪಕ್ಕಕ್ಕೆ ಎರಡು ಕುರ್ಚಿಗಳು. ಮಧ್ಯದಲ್ಲಿರುವ ಗೋಲಾಕಾರದ ಟೀಪಾಯಿಯ ಮೇಲೆ ವರ್ತಮಾನ ಪತ್ರಿಕೆ, ವಾರಪತ್ರಿಕೆಗಳು. ಕೃಷ್ಣಿ ಆ ಪತ್ರಿಕೆಯನ್ನು ಎತ್ತಿಕೊಂಡು `ಇಂಗ್ಲಿಷ್‍ನಲ್ಲಿದೆ’ ಎನ್ನುತ್ತ ಕೆಳಗಿಟ್ಟಳು.
ಆ ಪುಟ್ಟ ಕೋಣೆಗೆ ಅಂಟಿಕೊಂಡಿರುವ ವಿಶಾಲವಾದ ಕೋಣೆ, ವಾಶ್‍ರೂಮ್‍ಗಳು ಕೂಡ ಥಳ ಥಳ ಹೊಳೆಯುತ್ತಿದ್ದವು. ಅಷ್ಟೇ, ರೋಗಿ ಮಲಗಿಕೊಳ್ಳುವ ಮಂಚಕ್ಕೆ ವಿಶೇಷವಾದ ಸೌಲಭ್ಯಗಳಿದ್ದು, ಇದು ಆಸ್ಪತ್ರೆ ಎಂದು ಜ್ಞಾಪಿಸುವಂತಿತ್ತು.
`ಎಂತಹ ಆಸ್ಪತ್ರೆಯೇ ಇದು. ಪಂಚತಾರಾ ಹೊಟೇಲ್‍ನಂತೆ ಕಾಣುತ್ತದೆ. ಇಷ್ಟೆಲ್ಲಾ ಥಳುಕು ನಮಗೇನೂ ಅವಶ್ಯಕತೆಯಿರಲಿಲ್ಲ, ಸುಮ್ಮನೆ ಹಣ ಖರ್ಚು’ ಎಂದ ಆನಂದುವಿನ ಮಾತಿಗೆ ಸರಯೂ ಉತ್ತರಿಸಿದಳು.
`ಆ ಚಿಂತೆ ನಿಮಗೇಕೆ ಅಪ್ಪಾ. ಅಷ್ಟಕ್ಕೂ ನಾವು ಖರ್ಚು ಮಾಡಿದ ಹಣವು ನಮಗೆ ಮೆಡಿಕ್ಲೇಮ್ ಮೂಲಕ ತಿರುಗಿ ದೊರೆಯುತ್ತದೆ.’
`ಅಂದರೆ ನೀನು ನಮ್ಮ ಸಲುವಾಗಿ ಇನ್ಸೂರೆನ್ಸ್ ಕಂತನ್ನು ತುಂಬುತ್ತೀಯಾ?’
`ಹೌದು ಅಪ್ಪಾ’
ಆನಂದುವಿನ ಮನಸ್ಸು ತುಂಬಿ ಬಂದಿತು. ಇವಳು ಗಂಡು ಹುಡುಗನಂತೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾಳಲ್ಲ! ಅದನ್ನು ಆಡಿಯೂ ತೋರಿಸಿದ. ಅದಕ್ಕೆ ಸರಯೂ ಉತ್ತರಿಸಿದಳು.
`ನಾನೂ ಹುಡುಗರಂತೆ ಕೆಲಸ ಮಾಡುತ್ತೇನಪ್ಪಾ..
ಅನಘಾ ಎಂಟರಪ್ರೈಸ್’, ಅನಘಾ ಇಂಡಸ್ಟ್ರೀಸ್’ ಮತ್ತೆ
ಸ್ನೇಹಲ್ ಬೂಟಿಕ್’ ಇವೆಲ್ಲಾ ನಮ್ಮ ಕಂಪನಿಯ ಹೆಸರುಗಳು. ಆದರೆ ಅವುಗಳನ್ನು ಮುನ್ನಡೆಸುವ ಚುಕ್ಕಾಣಿಗಳಲ್ಲಿ ದೊಡ್ಡ ಚುಕ್ಕಾಣಿ ನನ್ನ ಕೈಯಲ್ಲೇ ಇದೆ’’.
ಆನಂದು ತನ್ನ ಮಗಳ ಮುಖವನ್ನೇ ನಿರುಕಿಸಿದ. ಅವಳ ಮುಖದಲ್ಲಿ ಖೇದವೇನೂ ಕಂಡು ಬರಲಿಲ್ಲ.
ಶೀಘ್ರವಾಗಿ ಸರಯೂ ಪಕ್ಕದಲ್ಲಿರುವ ಗ್ಲಾಸ್ ವಿಂಡೋದತ್ತ ಚಲಿಸಿದಾಗ, ಕೃಷ್ಣಿಗೆ ಅವಳಿನ್ನೂ ಪುಟ್ಟ ಹುಡುಗಿಯಂತೆ ಭಾಸವಾಗಿ ಇನ್ನೇನು ಬಿದ್ದೇ ಹೋಗುತ್ತಾಳೆ ಎನ್ನುವ ಭಯದಿಂದ ಸರಯೂ' ಎಂದು ಕೂಗಿಕೊಂಡಳು.
ಅಮ್ಮಾ, ಇಲ್ಲಿ ಗ್ಲಾಸ್ ತುಂಬಾ ಭದ್ರವಾಗಿದೆ. ನೀನೇನೂ ಕಾಳಜಿ ಮಾಡಬೇಡ’ ಸರಯೂ ನಕ್ಕಳು. ಆನಂದು ಕೂಡ ಅವಳ ಬದಿಗೆ ನಿಂತು ನುಡಿದ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಮೊದಲ ಮಳೆಯ ಪರಿಮಳ: ಹುಟ್ಟು
`ಇಷ್ಟು ಮೇಲಿಂದ ನೋಡಿದ್ರೆ ಸಮುದ್ರ ಕೂಡ ಸರೋವರದ ಹಾಗೆ ಕಾಣುತ್ತದೆಯಲ್ಲ. ಅಥವಾ ಎತ್ತರದ ಕಟ್ಟಡಗಳ ನಡುವೆ ಯಾರೋ ಬಲು ದೊಡ್ಡ ಜಲಾಶಯವನ್ನು ನಿರ್ಮಿಸಿದ್ದಾರೇನೋ ಎಂದೆನಿಸುತ್ತಿದೆ. ಸರಯೂ, ಇಂತಹ ದೃಶ್ಯವನ್ನು ನಾನು ಕಂಡೇ ಇರಲಿಲ್ಲ.’
ತನ್ನ ಹೊಟ್ಟೆನೋವು, ಪಿತ್ತಕೋಶದ ಕಲ್ಲು, ನಾಳೆಯ ತನ್ನ ಶಸ್ತ್ರಚಿಕಿತ್ಸೆ ಇವುಗಳನ್ನೆಲ್ಲಾ ಮರೆಸುವ ಯಾವುದೋ ಸೋಜಿಗವನ್ನು ಕಂಡಂತೆ ಆನಂದು ಬೆಕ್ಕಸ ಬೆರಗಾಗಿದ್ದ. ಸರಯೂ ಕೂಡ ಸಮುದ್ರವನ್ನು ಅಪ್ಪನ ಕಣ್ಣಿನಿಂದ ನೋಡುತ್ತಿದ್ದಳು. ತನ್ನ ಅಲೆಗಳ ರಭಸದಿಂದ ಎಂತಹ ಈಜುಪಟುವಿಗಾದರೂ ಕಾಲು ತಪ್ಪಿಸುವ, ತನ್ನ ಮೇಲೆ ಹರಿದಾಡುವ ದೋಣಿ ಲಾಂಚುಗಳನ್ನೆಲ್ಲಾ ಮಕ್ಕಳ ಆಟಿಕೆಯಾಗಿಸುವ, ದಂಡೆಯ ಮೇಲೆ ನಿಂತು ನೋಡಿದರೆ ತನ್ನ ಅಗಾಧತೆಯಿಂದ ವಿಸ್ಮಯವನ್ನು ಹುಟ್ಟಿಸುವ ಸಮುದ್ರ ಎತ್ತರದಿಂದ ನೋಡಿದರೆ ಸರೋವರವಾಗಿ ಬಿಡುತ್ತದೆಯೇ?
ಹಾಗೆಯೇ ಪ್ರತಿಯೊಂದು ವಿಷಯವೂ ನಾವು ಎಲ್ಲಿ ನಿಂತು ನೋಡುತ್ತೇವೆ ಎನ್ನುವುದರ ಮೇಲೆಯೇ ನಿರ್ಧಾರವಾಗಿರುತ್ತದೆಯೇ?
ಇದನ್ನೂ ಓದಿ: Sunday Read: ಎಚ್‌ಎಸ್‌ವಿ ಹೊಸ ಪುಸ್ತಕ: ನೆನಪಿನ ಒರತೆ: ಭೂತ-ಪ್ರೇತಗಳ ನಿಗೂಢ ಜಗತ್ತು
ಕೃತಿ: ನೀಲಿ ನಕ್ಷೆ (ಕಾದಂಬರಿ)
ಲೇಖಕ: ಅಮಿತಾ ಭಾಗವತ್
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 350 ರೂ.