: ಹರೀಶ್ ಕೇರ
ಈ ಜಗತ್ತು ಹಳೆಯದು, ಮತ್ತದು ಬಿಳುಚಿಕೊಂಡಿದೆ
ಜೀವನದ ಪಾಠಗಳು ಕಲಿಯಲಾಗುವುದಿಲ್ಲ ಒಂದು ದಿನದಲ್ಲಿ
ಸುಮ್ಮನೆ ನಿಂತು ನೋಡುತ್ತೇನೆ ಕೇಳುತ್ತೇನೆ ಕಾಯುತ್ತೇನೆ
ದೂರದ ಸುಂದರ ನೆಲದಿಂದ ತೇಲಿಬರುವ ಸಂಗೀತಕ್ಕಾಗಿ ಕಾಯುತ್ತೇನೆ
ಅದು ಸಂತೋಷದ ಕೊನೆಯ ವರ್ಷದ ಕೊನೆಯ ದಿನದ ಕೊನೆಯ ಗಂಟೆ
ಅಜ್ಞಾತ ಜಗವೊಂದು ಬಳಿ ಸಾರುತ್ತಿರುವುದು ಗೊತ್ತಾಗುತ್ತಿದೆ
ಹೆಮ್ಮೆ ಗತ್ತುಗಳು ಮರೆಯಾಗಲಿವೆ, ವೈಭವ ಕೊಳೆಯಲಿದೆ
ಆದರೆ ಮೌಲ್ಯಗಳನ್ನು ಎಂದೂ ಮರೆಯಲಾಗುವುದಿಲ್ಲ
ಎಂದೆಲ್ಲ ಬರೆಯುತ್ತಾನೆ ಬಾಬ್ ಡಿಲಾನ್ ಎಂಬ ಕವಿ. ಈತ ಅಮೆರಿಕದ ಕವಿ ಹಾಗೂ ಸಂಗೀತಕಾರ. ಅಮೆರಿಕದ ಯುವಜನತೆಗೆ ಇವನೆಂದರೆ ಹುಚ್ಚು ಪ್ರೇಮ. ಇವನ ಆರ್ಕೆಸ್ಟ್ರಾಗಳಿಗೆ ಸಿಹಿತಿಂಡಿಗೆ ಮುತ್ತುವ ಇರುವೆಗಳಂತೆ ಸೇರುತ್ತಾರೆ. ಬಾಬ್ ಡಿಲಾನ್ ಹಾಡು ಕಟ್ಟುತ್ತಾ ಹಾಡುತ್ತಾ ಮೈ ಮರೆಸುತ್ತಾನೆ. ಇಂಥ ಬಾಬ್‌ಗೆ 2016ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಬಂತು. ಆಗ ಗಂಭೀರ ಕಾವ್ಯಾಭ್ಯಾಸಿಗಳು, ವಿಮರ್ಶಕರು ತಕರಾರು ಎತ್ತಿದರು. ಇವನು ಯಾವ ಸೀಮೆಯ ಸಾಹಿತಿ? ಭಾರಿ ಭಾರಿ ಲೇಖಕರಿಗೆಲ್ಲಾ ಕೊಟ್ಟ ನೊಬೆಲ್‌ಸಾಹಿತ್ಯ ಪ್ರಶಸ್ತಿಯನ್ನು ಈ ಸರಳ ಹಾಡು ಕಟ್ಟುವವನಿಗೆ ಹೇಗೆ ಕೊಡಲಾಗುತ್ತದೆ ಎಂಬುದೇ ಆ ಪ್ರಶ್ನೆ.
ಈ ಪ್ರಶ್ನೆಗೆ ಬಾಬ್ ಡಿಲಾನ್ ಹೇಗೆ ಉತ್ತರಿಸಿದನೋ ನೆನಪಿಲ್ಲ. ಆದರೆ ಅಂಥದೊಂದು ಚರ್ಚೆಗೆ ಅವನ ಮನ್ನಣೆ ಕಾರಣವಾಯಿತು ಎಂಬುದು ನಿಜ. ಈ ಚರ್ಚೆ ಇಂದು ಬೇರೆ ಬೇರೆ ನೆಲೆಯಲ್ಲಿ ಜಾರಿಯಲ್ಲಿದೆ. ಸರಳವಾಗಿ, ಅರ್ಥವಾಗುವಂತೆ, ಹಾಡುವಂತೆ ಬರೆಯುವ ಕವಿಯನ್ನು ಯಾಕೆ ವಿಮರ್ಶಕರು ದೂರವಿಡುತ್ತಾರೆ? ಗಹನವಾಗಿ ಬರೆಯುವ ಕವಿಗಳನ್ನು ಯಾಕೆ ಹೆಚ್ಚು ಇಷ್ಟಪಡುತ್ತಾರೆ? ಆದರೆ ಜನಸಾಮಾನ್ಯರು ಸರಳವಾಗಿ ಬರೆಯುವ ಕವಿಗಳನ್ನು ಮೆಚ್ಚುತ್ತಾರೆ. ಇದಕ್ಕೆ ಉತ್ತರವಾಗಿ ವಿಮರ್ಶಕರು ಕಾವ್ಯದ ವಸ್ತುವೆಂದರೆ ಅದರ ಶೈಲಿಯೂ ಹೌದು, ಶೈಲಿಯೆಂದರೆ ವಸ್ತುವೂ ಹೌದು- ಅವುಗಳನ್ನು ಭಿನ್ನವಾಗಿ ನೋಡಲಾಗುವುದಿಲ್ಲ ಎಂಬ ಉತ್ತರವನ್ನು ಕೊಡುತ್ತ ಬಂದಿದ್ದಾರೆ.
ಈ ಚರ್ಚೆಗಳೆಲ್ಲ ನೆನಪುಗೆ ಬಂದುದು ಅನಂತ ಕುಣಿಗಲ್ ಅವರ ಕವಿತೆಗಳನ್ನು ನೋಡುವಾಗ. ಅವರ ಕಾವ್ಯದ ಶಕ್ತಿಯೆಂದರೆ ಅದರ ಸರಳತೆ ಹಾಗೂ ಅದರಿಂದಲೇ ಹೊಮ್ಮಿಸುವ ಮೌಲ್ಯಗಳಾಗಿವೆ. ʼʼಕಸೂತಿ ಹಾಕುವಾಗ ಹಾಡೊಂದು ಉಕ್ಕಿದರೆ ಸುಮ್ಮನೆ ಹಾಡಿಬಿಡುʼʼ ಎನ್ನುತ್ತಾರೆ ಕವಿಯೊಬ್ಬರು. ಅಲ್ಲಿ ಕಸೂತಿ ಮುಖ್ಯವೇ ಹೊರತು ಹಾಡಲ್ಲ. ಕಸೂತಿಯನ್ನು ಮುಂದಕ್ಕೊಯ್ಯಲು ಹಾಡು ಅಯಾಚಿತವಾಗಿ, ಅಯೋಚಿತವಾಗಿ ಬಂದಿದೆ. ಅನಂತ್‌ಅವರ ಕವಿತೆಗಳು ಹೀಗೆ ಅಯೋಚಿತವಾಗಿ ಹುಟ್ಟಿಕೊಂಡಂತಿವೆ. ಇಲ್ಲಿ ಬಾಳು ಮುಖ್ಯ, ಬದುಕು ಮುಖ್ಯ, ಅದು ಒಡ್ಡುವ ನಾನಾ ಸವಾಲುಗಳೂ ಸನ್ನಿವೇಶಗಳೂ ಪರಿಸ್ಥಿತಿಗಳೂ ಮುಖ್ಯ, ಇದನ್ನೆಲ್ಲ ಕಾಣಲು ಕನ್ನಡಕದಂತೆ ಕಾವ್ಯ ಇದೆಯೇ ಹೊರತು, ಕಾವ್ಯವನ್ನು ಇಲ್ಲಿ ಒಂದು ಜಗಮಗಿಸುವ ಪ್ರತಿಮೆಯಂತೆ ನೀವು ನೋಡಲು ಸಾಧ್ಯವಿಲ್ಲ. ಅಂದರೆ ಇಲ್ಲಿ ಕಾವ್ಯವೇ ತನ್ನ ಸೌಂದರ್ಯದಿಂದ ಎದ್ದು ಕಾಣುವುದಿಲ್ಲ. ಬದಲಾಗಿ ತಾನು ತೋರಿಸಬೇಕಾದುದನ್ನು ಸರಳವಾಗಿ ಬೆರಳೆತ್ತಿ ತೋರಿಸಿ ತಾನು ವಿರಮಿಸುತ್ತದೆ.
ಮೊದಲೇ ಎಚ್ಚರಿಸುತ್ತಿದ್ದೇನೆ
ನನ್ನನ್ನು ಓದಬೇಡಿ!!
ಯಾಕೆಂದರೆ ನಾನು ಸರಿ ಇಲ್ಲ
ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತೇನೆ
ಅದಕ್ಕೆ ನನ್ನನ್ನು ಕವಿತೆ ಎಂಬರು
ಎಂಬಂಥ ಸಾಲುಗಳನ್ನು ಈ ಗುಣವನ್ನು ಕಾಣಬಹುದು. ಇಲ್ಲಿಯ ಗುಣವೆಂದರೆ ನೇರ ಹೇಳುವಿಕೆ ಮತ್ತು ಅದನ್ನು ಕ್ಲುಪ್ತ ಸಾಲುಗಳಲ್ಲಿ ಹೆಚ್ಚಿನ ವೈಭವವಿಲ್ಲದೆ ಹೇಳಿಬಿಡುವ ಸರಳತೆ. ಹಾಗೆಯೇ ʼಎಂಬರುʼ ಎಂಬಂಥ, ನಾವೀಗ ಹೆಚ್ಚಾಗಿ ಬಳಸಲು ಇಷ್ಟಪಡದ ಹಳೆಯ ಪದಗಳನ್ನು ಬಳಸಿಬಿಡುವ ಅನಂತ್‌ಇಷ್ಟವಾಗುತ್ತಾರೆ.
ನಾನು ನಾನೇ!
ನಿಮ್ಮಂತೆ ಏಕಾಗಬೇಕು?
ಆಗ ಸಿಗುವ ಬೆಲೆಯಾದರೂ ಏನು?
ಗುರುತಾದರೂ ಏನು?
ತಿಳಿದದ್ದನ್ನು ತಿಳಿಸಲು ಬಿಡಿ
ತಪ್ಪಿದ್ದರೆ ತಿದ್ದಿ ಬಿಡಿ
ಅಳಿಸದಿರಿ ನೈತಿಕತೆಯ
ಕೊಲ್ಲದಿರಿ ತಾತ್ವಿಕತೆಯ
ಹೀಗೆಂಬ ಸಾಲುಗಳಲ್ಲಿ ಅನಂತ್ ಕುಣಿಗಲ್ ಅವರ ಕಾವ್ಯದ ಮ್ಯಾನಿಫೆಸ್ಟೋ ಸ್ಪಷ್ಟವಾಗಿದೆ. ಅವರು ಯಾರನ್ನೂ ಮೆಚ್ಚಿಸಲು ಬರೆಯುವುದಿಲ್ಲ. ಯಾವುದೇ ಇಸಂಗೆ ಕಟ್ಟುಬೀಳುವುದಿಲ್ಲ. ಮನುಷ್ಯನ ಅಂತರಂಗವನ್ನು ಸದಾಕಾಲ ಮೀಟುತ್ತಿರುವ ಮೂಲಭೂತ ಸಂಕಟಗಳೇ ಅವರ ಕಾವ್ಯದ ವಸ್ತು. ನೈತಿಕತೆ ಹಾಗೂ ಹಾಗೂ ತಾತ್ವಿಕತೆ ಅವರಿಗೆ ಬೇರೆ ಬೇರೆಯಲ್ಲ ಎಂಬುದು ಖಚಿತವಾಗಿದೆ. ಯಾವುದರಲ್ಲಿ ನೈತಿಕತೆಯಿಲ್ಲವೋ ಅದು ಕವಿಯ ತಾತ್ವಿಕತೆಯಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಿದೆ. ಹಾಗೆಯೇ ತಾನು ಇನ್ನೊಬ್ಬರಂತೆ ಆಗುವುದಿಲ್ಲ ಎಂಬಲ್ಲಿ ಸಾರುವ ಸ್ವಂತಿಕೆಗೂ ತಾತ್ವಿಕತೆಗೂ ಸಂಬಂಧವಿದೆ, ಈ ಮಧುರ ಸಂಬಂಧದಲ್ಲಿ ಅನಂತ್‌ಅವರ ಕಾವ್ಯ ಅರಳುತ್ತದೆ.
ಹೊಸದಾಗಿ ಕನ್ನಡ ಕವಿತೆ ಬರೆಯಲು, ಓದಲು ಮುಂದಾಗಿರುವವರಿಗೆ ಕಾವ್ಯದಲ್ಲಿ ಏನು ಬೇಕು? ಈ ಪ್ರಶ್ನೆಯನ್ನು ಉತ್ತರಿಸಲು ಕಷ್ಟವಾದರೂ, ಉತ್ತರಿಸದೆ ಗತ್ಯಂತರವಿಲ್ಲ. ಇದಕ್ಕೆ ನೂರಾರು ಕವಿಗಳು ನೂರು ಬಗೆಯ ಉತ್ತರ ನೀಡಬಹುದು. ಇದೆಲ್ಲವೂ ಕಡೆಗೂ ವೈವಿಧ್ಯದ ಕಡೆಗೇ ಬೆಟ್ಟು ಮಾಡುತ್ತವೆ. ಈ ವೈವಿಧ್ಯದಲ್ಲಿ ಇಂದಿನ ಕನ್ನಡ ಕಾವ್ಯದ ಅಂತಸ್ಸತ್ವ ಅಡಗಿದೆ. ಅನಂತ್ ಕುಣಿಗಲ್ ಅವರು ಈ ಕಾವ್ಯದ ತೇರನ್ನು ಎಳೆಯುತ್ತಿರುವ ಅಂಥ ಒಬ್ಬ ವೀರಾಭಿಮಾನಿ. ಮೊದಲು ತುಳಿದ ಸೈಕಲ್‌ನಿಂದ ಮಿಡಲ್ ಕ್ಲಾಸ್ ಫ್ಯಾಮಿಲಿಯವರೆಗೆ, ಕಲ್ಪತರು ನಾಡಿನಿಂದ ಏರೋಪ್ಲೇನ್ ಚಿಟ್ಟೆಯವರೆಗೆ, ಆಯುಧ ಪೂಜೆಯಿಂದ ಹೆಲ್ಪ್‌ಲೈನ್‌ವರೆಗೆ ಅನಂತ್ ಅವರ ಕಾವ್ಯ ಒಳಗೊಳ್ಳದ ವಿಷಯಗಳೇ ಇಲ್ಲ. ಹೀಗೆ ಏನನ್ನು ಬೇಕಿದ್ದರೂ ಕಾವ್ಯವಾಗಿಸುತ್ತೇನೆ ಎಂಬ ಛಲ ಮತ್ತು ವಿಸ್ತಾರ ಹೊಂದಿದ್ದವರು ಅನ್ಯರೂ ತುಳಿಯಬಹುದಾದ ಸ್ವಂತ ದಾರಿಯೊಂದನ್ನು ಬಲು ಬೇಗನೆ ಕಟೆದುಕೊಳ್ಳುತ್ತಾರೆ. ಅನಂತ್ ಅವರ ಕಾವ್ಯದ ಹೆಜ್ಜೆಗುರುತು ಅಂಥದೊಂದು ದಾರಿಯಲ್ಲಿದೆ.
ಕೃತಿ: ಎದೆಯ ದನಿ ಕೇಳಿರೋ (ಕವನ ಸಂಕಲನ)
ಕವಿ: ಅನಂತ ಕುಣಿಗಲ್
ಪ್ರಕಾಶನ: ಅವ್ವ ಪುಸ್ತಕಾಲಯ
ಬೆಲೆ: 210 ರೂ.