Site icon Vistara News

Drama review : ‘ದ್ವೀಪ’ದ ಕತ್ತಲೊಳಗೆ ಬೆಳಕು ಹುಡುಕುವ ಕೈದಿಗಳ ಬಿಂಬ

Drama Review

ಶಿವರಾಜ್‌ ಡಿ ಎನ್‌ ಎಸ್‌

ಸಪ್ತಸಾಗರದಾಚೆ ಎಲ್ಲೋ ಬಂಧಿಸಿಟ್ಟಿರುವ ಇಬ್ಬರು ರಾಜಕೀಯ ಕೈದಿಗಳ ನೋವು ನಲಿವುಗಳನ್ನು ರಂಗದ ಮೇಲೆ ತಂದು ನಗೆಯಲೆಯಲ್ಲಿ ತೇಲಿಸುತ್ತಲೇ ಅಂತರಂಗದ ನೋವನ್ನು ಜನಮನಕ್ಕೆ ಮುಟ್ಟಿಸುವಂತಹ ನಾಟಕವಿದು. ವ್ಯವಸ್ಥೆಯೊಂದು ನಿನ್ನನ್ನು ಪ್ರಜೆ ಎಂದು ಒಪ್ಪಿಕೊಳ್ಳುವಷ್ಟು ಸಲೀಸಾಗಿ ವ್ಯವಸ್ಥೆಯ ಹುಳುಕುಗಳನ್ನು ಹೇಳಿಕೊಂಡಾಗ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತದೆ ಇದರ ಕಥೆ. ಹಕ್ಕುಗಳ ಕುರಿತ ದನಿ ಪ್ರತಿಭಟನೆ ಹೋರಾಟಗಳಾಗುತ್ತವೆ. ಪ್ರತಿರೋಧಕ್ಕೆ ಮುಂದಾದ ಮುಂದಾಳುಗಳನ್ನು ಕಾನೂನು ಎನ್ನುವ ಬಲೆಯೊಳಗೆಳೆದು ಹಿಂಸೆಗೊಳಗಾಗುತ್ತಾರೆ. ಅಂತಹ ರಾಜಕೀಯ ಕೈದಿಗಳ ಕಥನವನ್ನು ಈ ‘ದ್ವೀಪ’ ನಾಟಕದ ಮೂಲಕ ಬೆಂಗಳೂರಿನ ‘ಆ್ಯಕ್ಟ್ ರಿಯಾಕ್ಟ್’ ಪ್ರಸ್ತತಪಡಿಸಿದೆ

ಪ್ರಭುತ್ವವನ್ನು ವಿರೋಧಿಸುವ, ವಿರೋಧಿಸಿರುವ ಅಥವಾ ವಿರೋಧಿಸುತ್ತಿರುವ ಇಬ್ಬರು ಹೋರಾಟಗಾರರಿಬ್ಬರು ಕೈದಿಗಳಾಗಿ ಅತೀ ಕ್ರೂರಿ ಜೈಲರ್ ಇರುವ ದ್ವೀಪದ ಜೈಲೊಂದನ್ನು ತಲುಪುತ್ತಾರೆ. ಅವರ ಹೋರಾಟ ಅಲ್ಲಿಗೆ ನಿಲ್ಲುವುದಿಲ್ಲ. ಹೊರಗಿನ ಹೋರಾಟದಂತೆಯೇ ಕೈದಿಗಳಾಗಿ ನಿತ್ಯ ಬದುಕಿನಲ್ಲಿಯೂ ಹೋರಾಡುತ್ತಲೇ ಬದುಕುತ್ತಾರೆ. ಆ ಸ್ಥಿತಿಯ ನಡುವೆ, ನಾಲ್ಕು ಗೋಡೆಗಳ ಮಧ್ಯೆ ಅಳುತ್ತ ನಗುತ್ತಾ ಇರುತ್ತಾರೆ. ಏತನ್ಮಧ್ಯೆ ವಿಶೇಷ ದಿನವೊಂದಕ್ಕೆ ಸಜ್ಜಾಗುತ್ತಿರುವ ಜೈಲಿನಲ್ಲಿ ತಾವು ನಾಟಕ ಪ್ರದರ್ಶನ ಮಾಡಲು ನಿರ್ಧರಿಸುತ್ತಾರೆ “ಅಂತಿಗೊನೆ” ಎಂಬ ನಾಟಕದ ಕೆಲವು ದೃಶ್ಯ ಕಟ್ಟುವ ಕಾರ್ಯದಲ್ಲಿ ತೊಡಗುತ್ತಾರೆ. ನಿತ್ಯ ರಾತ್ರಿ ತಾಲೀಮು ನಡೆಸುತ್ತಾರೆ. ಈ ವೇಳೆ ನಾಟಕದ ಪಾತ್ರಗಳ ಸರಿತಪ್ಪುಗಳ ಗೋಜಿಗೆ ಕೈ ಹಾಕಿ ತಮ್ಮನ್ನ ತಾವೇ ಬೈದುಕೊಳ್ಳುತ್ತಾರೆ. ತಮ್ಮ ಬದುಕನ್ನು ಕಲೆಯನ್ನು ಪ್ರೀತಿಸುತ್ತ, ಸಮಾಧಾನ, ಅಸಮಾಧಾನ ಮಾಡಿಕೊಳ್ಳುತ್ತಾರೆ, ಮನಸ್ತಾಪ ಸಿಟ್ಟು, ಪ್ರೀತಿ, ಎಲ್ಲವನ್ನೂ ಮೀರಿ ಶತಾಯ ಗತಾಯ ನಾಟಕ ಪ್ರದರ್ಶನವೂ ಕಾಣುತ್ತದೆ. ನಂತರ ಏನಾಗುತ್ತದೆ? ಅವರ ನಾಟಕದೊಳಗಿನ ನಾಟಕ, ಅವರ ಪೋಷಾಕು ಹೇಗಿರುತ್ತದೆ ಎನ್ನುವುದನ್ನು ರಂಗ ಮೇಲೆ ನೋಡುವುದೇ ಚಂದ.

ಕೆಲವು ನಾಟಗಳು ಹಾಗೆ ಎತ್ತಲಿಂದೆತ್ತ ಹೊರಳಿದರೂ ವಾಸ್ತವಕ್ಕೆ ಕೈಗನ್ನಡಿ ಹಿಡಿಯುತ್ತವೆ. ಅಂತಹ ದೃಶ್ಯ ಮತ್ತು ಸಂಭಾಷಣೆಯನ್ನು ಈ ನಾಟಕಕ್ಕೆ ನಾಜೂಕಾಗಿ ರೂಪಾಂತಿಸಿದ್ದಾರೆ ಕೆ.ಪಿ ಲಕ್ಷ್ಮಣ್. ಕೈದಿಗಳಿಬ್ಬರೂ ಹೋರಾಟಗಾರರು. ಅದರಿಂದಾಗಿ ಅವರು ಜೈಲು ಪಾಲಾಗಿದ್ದಾರೆ ಎನ್ನುವುದನ್ನು ಮೊದಲನೇ ದೃಶ್ಯದಲ್ಲೆ ಕಲಾತ್ಮಕವಾಗಿ ಹೇಳಿರುವುದು ಸೃಜನಶೀಲತೆ ಎನಿಸಿಕೊಳ್ಳುತ್ತದೆ. ಅಭಿನಯದ ಕುರಿತು ಹೇಳಲು ಮುಂದಾದರೆ.. ಮೂರು ಮತ್ತೊಂದು ದೃಶ್ಯವಿರುವ ನೂರಕ್ಕೂ ಹೆಚ್ಚು ನಿಮಿಷದ ನಾಟಕದಲ್ಲಿ ಇಬ್ಬರೇ ಪಾತ್ರಧಾರಿಗಳು. ಈ ಇಬ್ಬರಲ್ಲಿ ಯಾರ ಹೆಸರು ಮೊದಲು ತೆಗೆದುಕೊಂಡರೆ ಸರಿ?. ಇಬ್ಬರು ಪಾತ್ರಧಾರಿಗಳಲ್ಲಿ ಯಾರು ಅತ್ಯುತ್ತಮರು ಎನ್ನುವುದೂ ಕಷ್ಟವೇ. ನಾವು ಕಂಡ ಸುಂದರ ನೋಟಕ್ಕೆ ಎಡಗಣ್ಣು ಕಾರಣವೇ, ಬಲಗಣ್ಣು ಕಾರಣವೇ ಎನ್ನುವ ಪ್ರಶ್ನೆಯಂತಾಗುತ್ತದೆ. ಬೆಳ್ಳಿ ತೆರೆಮೇಲೆ ತಮ್ಮ ಛಾಪು ಮೂಡಿಸಿರುವ ಬಾಸ್ಕರ್.ಆರ್ ಹಾಗೂ ನವೀನ್ ಸಾಣೆಹಳ್ಳಿ ಇಬ್ಬರೂ ಅತ್ಯುತ್ತಮ ಕಲಾವಿದರು. ಅವರಿಬ್ಬರೂ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಫೋರ್ತ್ ವಾಲ್ ಬ್ರೇಕ್ ಮಾಡಿ ನಕ್ಕು ನಗಿಸಿ ಮತ್ತದೇ ಭಾವಕ್ಕೆ ಮರಳಿ ಹೊಕ್ಕುವ ನಟನಾ ಚಾತುರ್ಯ ಅವರುಗಳ ಅನುಭವವನ್ನು ಅರ್ಥೈಸುತ್ತದೆ. ನಾಟಕದ ಬೆಳಕಿನ ವಿನ್ಯಾಸ ‘ವಾವ್’ ಎನ್ನಿಸಿಕೊಳ್ಳುತ್ತದೆ. ನಾಟಕದೊಳಗಿನ ನಾಟಕದಲ್ಲಿ ಸ್ತ್ರೀ ಪಾತ್ರ ನಾನ್ಯಾಕೆ ನೀನೆ ಮಾಡು ಎನ್ನುವ ನಿರಾಕಣೆಯ ದೃಶ್ಯ ಸುಂದರವಾಗಿದೆ. ಕತ್ತಲ ಕೋಣೆಯಲ್ಲಿ ಅನ್ಯೋನ್ಯ ಗೆಳೆಯರಾಗಿರುವ ಇಬ್ಬರಲ್ಲಿ ಒಬ್ಬ ಬೇಗ ಬಿಡುಗಡೆಗೊಳ್ಳುತ್ತಾನೆ ಎನ್ನುವಾಗ ಇಬ್ಬರಲ್ಲೂ ಆಗುವ ತಳಮಳ, ಆ ಕರಾಳ ದಿನಗಳಲ್ಲೂ ಖುಷಿ ಕಂಡುಕೊಳ್ಳಲೆತ್ನಿಸುವ ಅವರ ಪ್ರಯೋಗ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಇದನ್ನೂ ಓದಿ : Prithviraj Sukumaran: ಪೃಥ್ವಿರಾಜ್‌ ಜನ್ಮದಿನ ಹೊಸ ಪೋಸ್ಟರ್‌ ಹಂಚಿಕೊಂಡ ಹೊಂಬಾಳೆ!

ಅತೋಲ್ ಫುಗಾರ್ಡ್ ಅವರ ‘ದಿ ಐಲ್ಯಾಂಡ್’ ನಾಟಕದ ರೂಪಾಂತರವಾಗಿರುವ ಈ ‘ದ್ವೀಪ’ ನಾಟಕ 15-10-2023 ರಂದು ರಂಗಶಂಕರದಲ್ಲಿ ಒಂದೇ ದಿನ ಎರಡು ಯಶಸ್ವಿ ಪ್ರಯೋಗ ಕಂಡಿತು. ಲಕ್ಷಣ್ ಕೆ.ಪಿ ರೂಪಾಂತರ ಮಾಡಿ ನಿರ್ದೇಶಿಸಿದ ಈ ನಾಟಕಕ್ಕೆ ಬಿಂದು ರಕ್ಷಿದಿ ಸಹಾಯಕ ನಿರ್ದೇಶಕಿ ಹಾಗೂ ಸಂಗೀತ ನಿರ್ವಹಣೆ ಕಾರ್ಯ ನಿರ್ವಹಿಸಿದರು, ಚಂದ್ರಶೇಖರ.ಕೆ ಅವರ ಬೆಳಕಿನ ವಿನ್ಯಾಸ, ರಮಿಕ ಚೈತ್ರ ರಂಗ ನಿರ್ವಹಣೆಯಿತ್ತು. ನಾಟಕ ಅಚ್ಚುಕಟ್ಟಾಗಿತ್ತು. ಮುಂದಿನ ದಿಗಳಲ್ಲಿ ಪ್ರದರ್ಶನಗೊಂಡಾಗ ರಂಗಾಸಕ್ತರು ಕಲಾಭಿಮಾನಿಗಳು ಗಮನಿಸಿ. ಅನುಭವಕ್ಕೆ ಭಾಗಿಯಾಗಬಹುದು.

Exit mobile version